ಹಡಪದ ಅಪ್ಪಣ್ಣನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಅರಿವೆಂಬುದೆ ಆಚಾರ
ಆಚಾರವೆಂಬುದೆ ಅರಿವು. (873/1713)

ಅರಿವು+ಎಂಬುದೆ; ಅರಿವು=ತಿಳುವಳಿಕೆ; ಎಂಬುದು=ಎಂದು ಹೇಳುವುದು/ಎನ್ನುವುದು; ಎಂಬುದೆ=ಎನ್ನುವುದೆ; ಆಚಾರ=ಒಳ್ಳೆಯ ನಡೆನುಡಿ; ಆಚಾರ+ಎಂಬುದೆ;

ಜೀವನದಲ್ಲಿ “ ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ದಿಟ-ಯಾವುದು ಸಟೆ; ತನ್ನನ್ನು ಒಳಗೊಂಡಂತೆ ಎಲ್ಲರ ಒಳಿತಿಗಾಗಿ ಯಾವ ಬಗೆಯ ಕೆಲಸವನ್ನು ಮಾಡಬೇಕು-ಯಾವುದನ್ನು ಮಾಡಬಾರದು “ ಎಂಬುದನ್ನು ವ್ಯಕ್ತಿಯು ಮನದಟ್ಟು ಮಾಡಿಕೊಂಡು, ತನ್ನ ನಡೆನುಡಿಗಳನ್ನು ಎಚ್ಚರದಿಂದ ರೂಪಿಸಿಕೊಂಡು ಬಾಳಲು ಒಳ್ಳೆಯ ಅರಿವನ್ನು ಮತ್ತು ಒಳ್ಳೆಯ ಆಚಾರವನ್ನು ಹೊಂದಿರಬೇಕು.

ಮನವನರಿದಂಗೆ ಮತದ ಹಂಗೇಕೊ
ನಿತ್ಯವನರಿದಂಗೆ ತೀರ್ಥದ ಹಂಗೇಕೊ. (1009/1730)

ಮನ+ಅನ್+ಅರಿದಂಗೆ; ಮನ=ಮನಸ್ಸು/ಚಿತ್ತ; ಅನ್=ಅನ್ನು; ಅರಿ=ತಿಳಿ; ಅರಿದಂಗೆ=ಅರಿದವನಿಗೆ/ತಿಳಿದ ವ್ಯಕ್ತಿಗೆ/ಬಲ್ಲವನಿಗೆ; ಮನವನರಿದಂಗೆ=ಮನಸ್ಸನ್ನು ತಿಳಿದವನಿಗೆ;

ಮನವನ್ನು ಅರಿತವನು=ತನ್ನ ಮನದಲ್ಲಿ ಸದಾಕಾಲ ಮೂಡಿಬರುತ್ತಿರುವ ಒಳಿತು ಕೆಡುಕಿನ ಮಿಡಿತಗಳನ್ನು ಒರೆಹಚ್ಚಿ ನೋಡಿ, ಕೆಡುಕನ್ನು ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳಬೇಕೆಂಬುದನ್ನು ಅರಿತವನು;

ಮತ=ಜನ ಸಮುದಾಯದಲ್ಲಿ ಬಳಕೆಯಲ್ಲಿರುವ ಬಹುಬಗೆಯ ಸಂಪ್ರದಾಯ ಮತ್ತು ಆಚರಣೆಗಳು;  ಹಂಗು+ಏಕೊ; ಹಂಗು=ರುಣ/ಅಗತ್ಯ/ಅವಲಂಬನೆ; ಮತದ ಹಂಗು=ಹಿಂದಿನಿಂದಲೂ ನಡೆದುಬಂದಿರುವ ಸಂಪ್ರದಾಯ ಮತ್ತು ಆಚರಣೆಗಳಲ್ಲಿ ತೊಡಗುವುದು; ಏಕೆ=ಯಾವುದಕ್ಕಾಗಿ; ಹಂಗೇಕೊ=ಅವಲಂಬಿಸಬೇಕಾದ ಅಗತ್ಯವೇನು?

ನಿತ್ಯ+ಅನ್+ಅರಿದಂಗೆ; ನಿತ್ಯ=ಸತ್ಯ/ದಿಟ/ವಾಸ್ತವ; ನಿತ್ಯವನರಿದಂಗೆ=ನಿತ್ಯವನ್ನು ಅರಿತವನಿಗೆ; ನಿತ್ಯವನ್ನು ಅರಿತವನು=ತನ್ನನ್ನು ಒಳಗೊಂಡಂತೆ ಎಲ್ಲ ವ್ಯಕ್ತಿಗಳ ಬದುಕಿನ ಏಳುಬೀಳುಗಳಿಗೆ ನಿಸರ‍್ಗದಲ್ಲಿ ಉಂಟಾಗುವ ಸಂಗತಿಗಳು ಮತ್ತು ಸಮಾಜದ ಕಟ್ಟುಪಾಡುಗಳು ಕಾರಣವಾಗಿವೆ ಎಂಬ ವಾಸ್ತವನ್ನು ತಿಳಿದವನು;

ತೀರ್ಥ=ದೇವಾಲಯಗಳಲ್ಲಿ ದೇವರ ಪೂಜೆಯ ನಂತರ ನೀಡುವ ನೀರು. ಇದನ್ನು ದೇವರಲ್ಲಿ ಒಲವುಳ್ಳ ವ್ಯಕ್ತಿಗಳು ಪವಿತ್ರವೆಂದು ತಿಳಿದು, ಇದನ್ನು ಕುಡಿಯುವುದರಿಂದ ತಮ್ಮ ಬದುಕಿನಲ್ಲಿ ಒಳ್ಳೆಯದಾಗುತ್ತೆಂದು ನಂಬಿದ್ದಾರೆ;

ತೀರ್ಥದ ಹಂಗು= ಬೆಟ್ಟಗುಡ್ಡಗಳಲ್ಲಿ ಇಲ್ಲವೇ ನದಿ ತೊರೆಗಳ ದಡದಲ್ಲಿ ಕಟ್ಟಿರುವ ದೇಗುಲಗಳಿಗೆ ಯಾತ್ರೆ ಹೋಗಿ, ಅಲ್ಲಿರುವ ದೇವತೆಗಳನ್ನು ಬಹುಬಗೆಯ ಆಚರಣೆಗಳಿಂದ ಪೂಜಿಸುತ್ತ, ತಮ್ಮ ಬದುಕಿನ ಸಂಕಟಗಳ ನಿವಾರಣೆಗೆ ದೇವರನ್ನು ಅವಲಂಬಿಸುವುದು;

ಜೀವನದಲ್ಲಿ ಒಲವು ನಲಿವು ನೆಮ್ಮದಿಯು ದೊರೆಯುವಂತಾಗಲು ಒಳ್ಳೆಯ ನಡೆನುಡಿಗಳು ಅಗತ್ಯವೆಂಬುದನ್ನು ಅರಿತು ಬಾಳುವ ವ್ಯಕ್ತಿಗೆ ಯಾವುದೇ ಮತದ ಆಚರಣೆಯ ಹಂಗಿಲ್ಲ ಮತ್ತು ದೇವರ ಅನುಗ್ರಹದ ಅಗತ್ಯವಿಲ್ಲ.

ಬರಿಯ ನುಡಿಯ ನುಡಿವವರ ಕಂಡರೆ ಛೀ ಎಂಬೆನು. (1056/1736)

ಬರಿ=ಬರಿದು/ಏನೂ ಇಲ್ಲದಿರುವುದು/ಪೊಳ್ಳು; ಬರಿಯ=ಪೊಳ್ಳಾದ/ಬರಿದಾದ; ನುಡಿ=ಮಾತು/ಸೊಲ್ಲು; ಬರಿಯ ನುಡಿ=ಕೆಲಸಕ್ಕೆ ಬಾರದ ಮಾತು/ನಡೆಯಲ್ಲಿ ಕಂಡು ಬರದ ನುಡಿ; ನುಡಿವವರ=ಮಾತನಾಡುವವರನ್ನು;

ಕಾಣ್=ನೋಡು; ಕಂಡರೆ=ನೋಡಿದರೆ; ಛೀ=ಇತರರ ನಡೆನುಡಿಗಳಲ್ಲಿ ಕೆಟ್ಟದ್ದು ಕಂಡುಬಂದಾಗ, ಅವರ ಬಗ್ಗೆ ತಿರಸ್ಕಾರವನ್ನು, ಜುಗುಪ್ಸೆಯನ್ನು ಮತ್ತು ನಿಂದನೆಯನ್ನು ವ್ಯಕ್ತಪಡಿಸಲೆಂದು ಬಳಸುವ ಪದ; ಎಂಬೆನು=ಎನ್ನುತ್ತೇನೆ/ಎಂದು ಹೇಳುತ್ತೇನೆ;

ಮಾನವ ಸಮುದಾಯ ಉಳಿದು ಬೆಳೆದು ಬಾಳುವುದಕ್ಕೆ ಅಗತ್ಯವಾದ ‘ ಅನ್ನ-ಬಟ್ಟೆ-ವಸತಿ-ವಿದ್ಯೆ-ಆರೋಗ್ಯ’ ವನ್ನು ನೀಡುವ ಕಸುಬುಗಳಲ್ಲಿ ಯಾವುದೇ ಒಂದು ಕಾಯಕವನ್ನು ಮಾಡದೆ, ಸತ್ಯ, ನೀತಿ, ನ್ಯಾಯ ಮತ್ತು ದೇವರ ಹೆಸರಿನಲ್ಲಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೊರೆಯಾಗಿ ಬಾಳುತ್ತಿರುವ ಹೊಣೆಗೇಡಿಗಳನ್ನು ವಚನಕಾರರು ತಿರಸ್ಕರಿಸಿದ್ದರು.

( ಚಿತ್ರ ಸೆಲೆ : lingayatreligion.com ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks