ಕವಿತೆ: ಕಪ್ಪು ಕಂಗಳು
ಕಪ್ಪು ಕಂಗಳಲ್ಲಿ ಅದ್ಯಾವ
ಪ್ರೇಮದ ಸಾರ ಅಡಗಿದೆ?
ಬಾವನೆಯೊಂದು ಹುಟ್ಟುವುದು ಅಲ್ಲೇ
ಕೊನೆಯುಸಿರೆಳೆವುದು ಅಲ್ಲೇ
ನಡುನಡುವೆ ಮಾತ್ರ ಮಡುಗಟ್ಟಿದ
ಮೌನ ಕೈಹಿಡಿದು ನಡೆಸುತ್ತದೆ
ಹರಾಜಿಗಿಟ್ಟ ಹ್ರುದಯದ
ಹಾಡೊಂದು ನಾಲಿಗೆಯ ಹಂಗಿಲ್ಲದೆ
ಹೊರಹೊಮ್ಮುತ್ತದೆ
ಕಂಗಳು ಕಾಲಿಯಾಗುವುದು
ತುಂಬಿಕೊಳ್ಳುವುದು ಹಳೆಯದೇನಲ್ಲ
ಪ್ರೀತಿ ಚಿಮ್ಮುವುದು, ಒಣಗಿ
ಇಂಗುವುದು ಹೊಸದೇನಲ್ಲ
ಆದರೂ ಮರಳಿ ಮರಳಿ
ಆ ಕಣ್ಗಳಲ್ಲೇ ಬಿದ್ದು ಹೊರಳಾಡುತ್ತದೆ
ಬಡಜೀವ
ಬೇಕಾದ ಹಿಡಿ ಪ್ರೀತಿ
ಬೇಡದ ಕಡು ಮೌನ
ಒಟ್ಟಿಗೆ ಸೇರಿಕೊಂಡು
ನಿತ್ಯವೂ ಕದನ ನಡೆಸುತ್ತಾ
ಅಲ್ಲೇ ಆ ಕಂಗಳಲ್ಲೇ
ವಾಸವಾಗಿವೆ
ಅಂದು ಕಂಗಳಿಂದ ಪರಿಚಿತಳಾದವಳು
ಇಂದು ಅದೇ ಕಂಗಳಿಗೆ
ಚಿರಪರಿಚಿತ; ಅಪರಿಚಿತಳಾಗಿ
ಕಂಡದ್ದು ಮಾತ್ರ ಕತಾನಕವೇ ಸರಿ
ಹಗಲಲ್ಲು, ಇರುಳಲ್ಲು
ನಡುವೆ ಎದೆಯ ಸುಂಕದ
ದಾರಿಯಲ್ಲೂ ಒಂಟಿ ಕಣ್ಣಲ್ಲೇ ಸಂದಿಸಿದೆ
ಅದೇ ದಾರಿಯಲ್ಲಿ ಒಂಟಿಯಾಗಿ ನಿಲ್ಲಿಸಿದೆ
ಅದೇ ಹಳೆಯ ಸಾಲುಗಳಿಗೆ
ಕಣ್ಣಂಚಲ್ಲೆ ಹೊಸ ಅರ‍್ತ ನೀಡಿ
ನಿಗಂಟಿನೊಳಗೆ ಸೇರಿಕೊಂಡು
ಸನ್ನೆಯಾಗಿರುವೆ
ಒಮ್ಮೊಮ್ಮೆಯಂತೂ ತಿರಸ್ಕಾರದ
ನೋಟವೆಸೆದರೆ, ಅಮಲು
ಪ್ರೀತಿಗೆ ಆಮಂತ್ರಿಸಿದಂತಾಗಿ
ಲೋಕ ತಲೆಕೆಳಕಾಗಿ, ತಲೆ
ಲೋಕವನ್ನೇ ಮರೆಯುತ್ತದೆ
(ಚಿತ್ರ ಸೆಲೆ: playbuzz.com)
ತುಂಬಾ ಚೆನಾಗಿದೆ, ಅಭಿನಂದನೆಗಳು ಬರಹಗಾರರಿಗೆ