ವಿಶ್ವದ ಅತಿ ಎತ್ತರದ ಮಹಿಳೆಯ ಪ್ರತಿಮೆ
ರಶ್ಯಾದ ಯುದ್ದ ಇತಿಹಾಸದಲ್ಲಿ ‘ಬ್ಯಾಟೆಲ್ ಆಪ್ ಸ್ಟಾಲಿಂಗ್ರಾಡ್‘ ಅತಿ ಹೆಚ್ಚು ರಕ್ತಪಾತಕ್ಕೆ ಹೆಸರಾಗಿದೆ. ಇದರ ಸ್ಮರಣಾರ್ತ, ವೊಲ್ಗೊಗ್ರಾಡ್ ನಗರಕ್ಕೆ ಕಾಣುವಂತೆ, ಮಾಮಾಯೇವ್ ಕುರ್ಗಾನ್ ಬೆಟ್ಟದ ಮೇಲೆ ನಿರ್ಮಿಸಿರುವ ದ ಮದರ್ ಲ್ಯಾಂಡ್ ಕಾಲ್ಸ್ ಸ್ಮಾರಕ ವಿಶ್ವದಲ್ಲೇ ಅತಿ ಎತ್ತರದ ಮಹಿಳೆಯ ಪ್ರತಿಮೆ. ಈ ಪ್ರತಿಮೆಯ ಬಲಗೈಯಲ್ಲಿರುವ ಕಡ್ಗ ಅತ್ಯಂತ ಎತ್ತರದ ಕಡ್ಗ ಎಂದು ಗುರುತಿಸಲ್ಪಡುತ್ತದೆ. ಕತ್ತಿಯ ತೂಕಕ್ಕೆ ದೈತ್ಯ ಪ್ರತಿಮೆಯೇ ಉರುಳಿ ಬೀಳುತ್ತದೇನೋ ಎನ್ನುವಶ್ಟರ ಮಟ್ಟಿಗೆ ಅದು ದೊಡ್ಡದಿದೆ. ಇಲ್ಲಿಯ ವಿಶಾಲವಾದ ಸ್ಮಾರಕ ಸಂಕೀರ್ಣದಲ್ಲಿನ ಕೇಂದ್ರ ಬಿಂದು ಈ ಪ್ರತಿಮೆ.
ಮೇ 1959ರಲ್ಲಿ ಈ ಬ್ರುಹತ್ ಸ್ಮಾರಕದ ನಿರ್ಮಾಣ ಕಾರ್ಯ ಆರಂಬವಾಯಿತು. ಎಂಟು ವರ್ಶಗಳ ನಂತರ ಅಂದರೆ ಅಕ್ಟೋಬರ್ 1967ರಲ್ಲಿ ಇದು ಪೂರ್ಣಗೊಂಡಿತು. ಅಂದಿಗೆ ಇದು ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ತದನಂತರ ಹೊರಹೊಮ್ಮಿದ ಇನ್ನೂ ಅನೇಕ ದೊಡ್ಡ ದೊಡ್ಡ ಪ್ರತಿಮೆಗಳ ಕಾರಣ ಇದು ತನ್ನ ಪ್ರಾಶಸ್ತ್ಯವನ್ನು ಕಳೆದುಕೊಂಡಿತಾದರೂ, ಈಗಲೂ ಇದು ಯೂರೋಪಿನಲ್ಲಿ ಅತ್ಯಂತ ಎತ್ತರದ ಹಾಗೂ ವಿಶ್ವದಲ್ಲಿ ಮಹಿಳೆಯೊಬ್ಬಳ ಅತ್ಯಂತ ಎತ್ತರದ ಪ್ರತಿಮೆ ಎಂಬ ದಾಕಲೆಯನ್ನು ಇನ್ನೂ ತನ್ನಲ್ಲೇ ಉಳಿಸಿಕೊಂಡಿದೆ. ಮಹಿಳೆಯೆಂದರೆ ಸಾಮಾನ್ಯವಾಗಿ ಸೌಮ್ಯ ಸ್ವಬಾವ ಎಂದು ಜನಜನಿತವಾಗಿದೆ. ಆದರೆ ಈ ಮಹಿಳೆ ತನ್ನ ಬಲಗೈಯಲ್ಲಿ ವಿಶ್ವದ ಅತಿದೊಡ್ಡ ಕಡ್ಗವನ್ನು ಹಿಡಿದಿರುವುದು, ಮಹಿಳೆ ದೇಶರಕ್ಶಣೆಗೂ ಸೈ ಎಂದು ತೋರಿಸುವಂತಿದೆ.
ಅನೇಕ ದಾಕಲೆಗಳನ್ನು ತನ್ನದಾಗಿಸಿಕೊಂಡ ದ ಮದರ್ ಲ್ಯಾಂಡ್ ಕಾಲ್ಸ್ ಅತ್ಯಂತ ಗಮನಾರ್ಹ ಪ್ರತಿಮೆಯಾಗಿದೆ. ಎಡಗೈಯನ್ನು ಪೂರ್ಣ ಪ್ರಮಾಣದಲ್ಲಿ ನೆಲಕ್ಕೆ ಸಮಾನಾಂತವಾಗಿ ಚಾಚಿ, ಬಲಗೈಯಲ್ಲಿ ಕಡ್ಗವನ್ನು ಎತ್ತರಕ್ಕೆ ಹಿಡಿದು ದ್ರುಡ ಹೆಜ್ಜೆ ಹಾಕುತ್ತಿರುವಂತೆ ಇರುವ ಈ ಪ್ರತಿಮೆಯ ಶಕ್ತಿಯ ದ್ಯೋತಕವಾಗಿದೆ. ಎಲ್ಲಾ ಶತ್ರುಗಳನ್ನು ಸೋಲಿಸುವವರೆಗೂ, ಅವರನ್ನು ನಾಶಪಡಿಸುವವರೆಗೂ ತಾಯ್ನಾಡನ್ನು ಶರಣಾಗಲು ಬಿಟ್ಟುಕೊಡಬಾರದೆಂಬ ದ್ರುಡತೆ ಪ್ರತಿಮೆ ಮುಕದಲ್ಲಿ ಎದ್ದು ಕಾಣುತ್ತದೆ. ಜನತೆಗೆ ಇದೇ ಆ ಮಹಿಳೆಯ ಕರೆ. ಇದಕ್ಕಾಗಿಯೇ ಈ ಬ್ರುಹತ್ ಪ್ರತಿಮೆಗೆ ದ ಮದರ್ಲ್ಯಾಂಡ್ ಕಾಲ್ಸ್ ಎಂದು ನಾಮಕರಣ ಮಾಡಿರುವುದು.
ಈ ಪ್ರತಿಮೆಯನ್ನು ತಾಂತ್ರಿಕ ದ್ರುಶ್ಟಿಕೋನದಲ್ಲಿ ಗಮನಿಸಿದರೆ, ನಿಜವಾದ ಮಹತ್ವಾಕಾಂಕ್ಶೆಯ ಯೋಜನೆ ಎನಿಸದಿರುವುದಿಲ್ಲ. ಇದು ನಿಂತಿರುವ ಬಂಗಿ ಸರಳವಲ್ಲ. ಒಂದು ಕೈಯನ್ನು ಪೂರ್ಣವಾಗಿ ಚಾಚಿದ್ದು ಮತ್ತೊಂದರಲ್ಲಿ ಅತಿ ಬಾರವಾದ ಕಡ್ಗವನ್ನು ಎತ್ತಿ ಹಿಡಿದಿರುವಂತಹ ನಿಲುವು, ತಾಂತ್ರಿಕವಾಗಿ ಸವಾಲಿನದ್ದು. ಇದರ ಸಮತೋಲನ ಸಾದಿಸುವುದು ಸುಲಬದ ಕೆಲಸವಲ್ಲ. ನೈಪುಣ್ಯತೆ ಬೇಕು. ಸಮತೋಲನ ಕಾಪಾಡುವ ಸಲುವಾಗಿ ಮೂಲ ಪ್ರತಿಮೆಯ ತೂಕ ಹೆಚ್ಚಿರಬೇಕಾದ್ದು ಅನಿವಾರ್ಯ. ಅದಕ್ಕಾಗಿ ಇದರ ಹೊರ ಬಾಗವನ್ನು ಹನ್ನೆರೆಡು ಇಂಚು ದಪ್ಪದ ಕಾಂಕ್ರೀಟ್ನಿಂದ ಹಾಗೂ ಒಳಾಂಗಣವನ್ನು ಪ್ರತ್ಯೇಕ ಸಣ್ಣ ಸಣ್ಣ ಸರಣಿ ಕೋಣೆಗಳನ್ನಾಗಿ ನಿರ್ಮಿಸಲಾಗಿದೆ. ಈ ಬ್ರುಹತ್ ಪ್ರತಿಮೆಯ ಪೀಟದಿಂದ ಕಡ್ಗದ ತುದಿಯವರೆಗಿನ ಎತ್ತರ ಒಟ್ಟಾರೆ 279 ಅಡಿ ಇದೆ. ಇದರಲ್ಲಿ ಮಹಿಳೆಯ ಆಕ್ರುತಿಯ ಎತ್ತರ 170 ಅಡಿ ಇದ್ದರೆ ಕಡ್ಗ, 108 ಅಡಿ ಉದ್ದವಿದೆ.
ಕಳೆದ ಅರ್ದ ಶತಮಾನದಲ್ಲಿ ದ ಮದರ್ ಲ್ಯಾಂಡ್ ಕಾಲ್ಸ್ ಪ್ರತಿಮೆಯು, ಅದರ ದೈತ್ಯ ಆಕ್ರುತಿಯಿಂದಾಗಿ, ಹಲವಾರು ಗಂಬೀರ ಸಮಸ್ಯೆಗಳನ್ನು ನಿಬಾಯಿಸಬೇಕಾಯಿತು. ಇದರಲ್ಲಿ ಕಂಡು ಬಂದ ಸಮಸ್ಯೆ ಮಹಿಳೆ ಹಿಡಿದಿರುವ ಕಡ್ಗದ್ದಾಗಿತ್ತು. ಮೂಲತಹ ಟೈಟಾನಿಯಮ್ ಹಾಳೆಗಳಿಂದ ಮಾಡಲ್ಪಟ್ಟಿತ್ತು. ನೂರು ಅಡಿಗೂ ಹೆಚ್ಚು ಉದ್ದವಿದ್ದ ಕಾರಣ ಈ ಕಡ್ಗ ಗಾಳಿಯಲ್ಲಿ ತೊನೆದಾಡುತ್ತಿತ್ತು. ಈ ತೂಗಾಟ ಪ್ರತಿಮೆಯ ಬಲಗೈ ಮೇಲೆ ಅಗಾದವಾದ ಒತ್ತಡವನ್ನು ಹಾಗೂ ಕೆಟ್ಟ, ಕರ್ಕಶ ಶಬ್ದ ಉಂಟುಮಾಡುತ್ತಿತ್ತು. 1972ರಲ್ಲಿ ಮೂಲ ಟೈಟಾನಿಯಮ್ಯುಕ್ತ ಕಡ್ಗವನ್ನು ತೆಗೆದು ಟೈಟಾನಿಯಮ್ ಇಲ್ಲದ ಸ್ಟೈನ್ಲೆಸ್ ಸ್ಟೀಲ್ ಬಳಸಿ ತಯಾರಿಸಿದ ಹೊಸ ಕಡ್ಗಕ್ಕೆ ಬದಲಿಸಲಾಯಿತು. ಇದರ ಮೇಲೆ ಅಪ್ಪಳಿಸುವ ಗಾಳಿಯ ಒತ್ತಡವನ್ನು ಕಡಿಮೆ ಮಾಡಲು ಕಡ್ಗದ ತುದಿಯಲ್ಲಿ ರಂದ್ರಗಳನ್ನು ಕೊರೆದು ಗಾಳಿ ಸರಾಗವಾಗಿ, ತಡೆಯಿಲ್ಲದೆ ಹೋಗುವಂತೆ ವ್ಯವಸ್ತೆ ಮಾಡಲಾಯಿತು.
ಈ ಎಂಟು ಸಾವಿರ ಟನ್ ಗಳ ದೈತ್ಯ ಪ್ರತಿಮೆಯಲ್ಲಿ ಹೊಸ ಸಮಸ್ಯೆ ತೀರಾ ಇತ್ತೀಚೆಗೆ ಕಂಡುಬಂದಿತು. ಈ ಬ್ರುಹತ್ ಪ್ರತಿಮೆ ವಾಸ್ತವವಾಗಿ ಅದರ ಅಡಿಪಾಯದೊಂದಿಗೆ ಸರಿಯಾಗಿ ಬೆಸೆದುಕೊಂಡಿಲ್ಲ ಎಂಬುದು. ಅದು ಇಲ್ಲಿಯವರಗೆ ಅದೇ ಸ್ತಳದಲ್ಲಿ ನೇರವಾಗಿ ನಿಲ್ಲಲು ತನ್ನದೇ ಆದ ಬಾರಿ ತೂಕದಿಂದ ಸಾದ್ಯವಾಗಿತ್ತಶ್ಟೆ. ಈ ಬ್ರುಹತ್ ಪ್ರತಿಮೆ ನಿಂತಿರುವ ಗುಡ್ಡದ ಬುಡದಲ್ಲಿ ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ, ಈ ದೈತ್ಯ ಪ್ರತಿಮೆ ಕುಸಿಯುತ್ತಿದೆ, ಬಿಬಿಸಿಗೆ ವಿಶಯ ತಿಳಿಸಿದ ಅದಿಕಾರಿ ಈಗಾಗಲೇ ಎಂಟು ಇಂಚಿನಶ್ಟು ಕುಸಿದಿದೆ ಎಂದು ಹೇಳಿದ್ದಾರೆ ಎಂಬ ಮಾಹಿತಿಯಿದೆ. ಈ ಕುಸಿತ ಇನ್ನೂ ಹೆಚ್ಚಾದರೆ ಈ ದೈತ್ಯ, ಬ್ರುಹತ್ ಪ್ರತಿಮೆ ಪೂರ್ಣವಾಗಿ ಕುಸಿದು ನೆಲ ಕಚ್ಚಬಹುದು ಎಂಬ ಆತಂಕ ವ್ಯಕ್ತ ಪಡಿಸಿದ್ದಾರೆ.
ದ ಮದರ್ ಲ್ಯಾಂಡ್ ಕಾಲ್ಸ್, ಮಾಮಯೆವ್ ಕುರ್ಗಾನ್ ಗುಡ್ಡದಲ್ಲಿದ್ದು, ವೊಲ್ಗೊಗ್ರಾಡ್ನ ಲೆನಿನಾ ಅವೆನ್ಯೂ ಮುಕಾಂತರ ಅಲ್ಲಿಗೆ ತಲುಪಬಹುದು. ಸ್ಮಾರಕ ಸಂಕೀರ್ಣ ಮುಟ್ಟಿದ ಮೇಲೆ ಸುಮಾರು ಇನ್ನೂರು ಮೆಟ್ಟಲುಗಳನ್ನು ಹತ್ತಿದರೆ, ಪ್ರತಿಮೆಯ ಬುಡ ಮುಟ್ಟಲು ಸಾದ್ಯ. ಸ್ಟಾಲಿನ್ಗ್ರಾಡ್ ಯುದ್ದ ನಡೆದ ಇನ್ನೂರು ದಿನಗಳನ್ನು ಇಲ್ಲಿನ ಇನ್ನೂರು ಮೆಟ್ಟಿಲುಗಳು ಪ್ರತಿನಿದಿಸುತ್ತವೆ. ಅಲ್ಲಿಗೆ ಹೋಗುವ ಮುನ್ನ ಯಾರಾದರೂ ತಿಳಿದಿರಬೇಕಾದ ಸಣ್ಣ ಮಾಹಿತಿ ಇದು.
(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, rbth.com, alluringworld.com)
ಇತ್ತೀಚಿನ ಅನಿಸಿಕೆಗಳು