ಸೊಡ್ಡಳ ಬಾಚರಸನ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ಸೊಡ್ಡಳ ಬಾಚರಸ, Soddala Bacharasa

ಹೆಸರು : ಸೊಡ್ಡಳ ಬಾಚರಸ
ಕಾಲ : ಕ್ರಿ.ಶ. 12ನೆಯ ಶತಮಾನ
ಕಸುಬು : ಕಲ್ಯಾಣ ನಗರದ ಬಿಜ್ಜಳನ ಅರಮನೆಯ ಕಣಜದಿಂದ ದಾನ್ಯವನ್ನು ಅಳೆದುಕೊಡುವ ಮತ್ತು ಕೊಟ್ಟುದ್ದರ ಲೆಕ್ಕವನ್ನು ಬರೆಯುವ ಕರಣಿಕ
ದೊರೆತಿರುವ ವಚನಗಳು : 108
ಅಂಕಿತನಾಮ : ದೇವರಾಯ ಸೊಡ್ಡಳ / ಮಹಾದಾನಿ ಸೊಡ್ಡಳ (ಸೊಡ್ಡಳ ಎಂಬ ಪದಕ್ಕೆ ‘ ಶಿವ/ಈಶ್ವರ ‘ ಎಂಬ ತಿರುಳು ಇರಬಹುದೆಂದು ತಿಳಿಯಲಾಗಿದೆ.)

ವಚನದ ರಚನೆಯ ನುಡಿವ
ಬರುಬಾಯ ಭುಂಜಕರೆಲ್ಲ
ಭಕ್ತರಪ್ಪರೆ ಅಯ್ಯಾ. (810/1705)

ವಚನ=ಶಿವಶರಣಶರಣೆಯರು ಆಡಿರುವ ಸೂಳ್ನುಡಿ; ರಚನೆ=ಪದ ಮತ್ತು ತಿರುಳಿನಿಂದ ಕೂಡಿದ ಬರಹ; ವಚನದ ರಚನೆ=ವಚನದಲ್ಲಿ ಕಂಡುಬರುವ ಸಂಗತಿ/ವಿಚಾರ;ನುಡಿ=ಹೇಳು/ವಿವರಿಸು ; ಬರು=ಬರಿದು/ಏನೂ ಇಲ್ಲದಿರುವುದು/ಪೊಳ್ಳು; ಬಾಯಿ=1. ಉಣಿಸು ತಿನಸುಗಳನ್ನು ಸೇವಿಸಲು ಮತ್ತು ಮಾತನ್ನಾಡಲು ಬಳಕೆಯಾಗುವ ದೇಹದ ಒಂದು ಅಂಗ   2. ಮಾತು/ನುಡಿ;

ಬರುಬಾಯ್=ಕೆಲಸಕ್ಕೆ ಬಾರದ ಮಾತು/ಪೊಳ್ಳು ಮಾತು/ಕಾಡು ಹರಟೆ;ಭುಂಜಕ=ತಿನ್ನುವವನು/ಉಣ್ಣುವವನು/ಕಬಳಿಸುವವನು;

ಬರುಬಾಯ ಭುಂಜಕರು=ಜೀವನದಲ್ಲಿ ಒಂದಾದರೂ ಒಳ್ಳೆಯ ಕೆಲಸವನ್ನು ಮಾಡದೆ , ಕೇವಲ ಮಾತಿನ ಮೋಡಿಯಿಂದಲೇ ಜನರನ್ನು ವಂಚಿಸಿ, ಹೊಟ್ಟೆಯನ್ನು ಹೊರೆದುಕೊಳ್ಳುವವರು;

ಭಕ್ತರ್+ಅಪ್ಪರೆ; ಭಕ್ತ=ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ನಂಬಿಕೊಂಡು ಬಾಳುವವನು; ಅಪ್ಪರೆ=ಆಗುತ್ತಾರೆಯೆ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಶಿವಶರಣಶರಣೆಯರು ವಚನದಲ್ಲಿ ಹೇಳಿರುವ ಒಳ್ಳೆಯ ನಡೆನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳದೆ, ಮಾತಿನ ಚಪಲಕ್ಕಾಗಿಯೋ ಇಲ್ಲವೇ ಹೊಟ್ಟೆಯ ಪಾಡಿಗಾಗಿಯೋ ವಚನದ ಸಂಗತಿಗಳನ್ನು ಇತರರ ಮುಂದೆ ಹಾಡಿ ಹೊಗಳುವ ವ್ಯಕ್ತಿಗಳು ಎಂದಿಗೂ ಶಿವನ ಒಲವಿಗೆ ಪಾತ್ರರಾಗಲಾರರು.

ಕಳುವ ಕಳ್ಳಂಗೆ ಕತ್ತಲೆಯಲ್ಲದೆ ಬೆಳಗು
ಸಮನಿಸುವುದೆ. (833/1708)

ಕಳ್=ಅಪಹರಿಸು/ಎತ್ತಿಹಾಕು/ಮೋಸ/ಸುಳ್ಳು; ಕಳುವ=ಕಳ್ಳತನ ಮಾಡುವ; ಕಳ್ಳಂಗೆ=ಕಳ್ಳನಿಗೆ; ಕಳ್ಳ=ಇತರರ ಒಡವೆ ವಸ್ತುಗಳನ್ನು, ಆಸ್ತಿಪಾಸ್ತಿಗಳನ್ನು ಕದಿಯುವ ವ್ಯಕ್ತಿ; ಕತ್ತಲೆ+ಅಲ್ಲದೆ; ಕತ್ತಲೆ=ಬೆಳಕಿಲ್ಲದಿರುವುದು/ತಿಮಿರ; ಕತ್ತಲೆಯಲ್ಲದೆ=ಕತ್ತಲೆಯನ್ನು ಬಿಟ್ಟು; ಬೆಳಗು=ಬೆಳಕು ತುಂಬಿರುವುದು/ಹಗಲಿನ ಸಮಯ;

ಸಮನಿಸು=ಒಪ್ಪು/ಸೇರು/ಹೊಂದಿಕೆಯಾಗು/ಕೂಡು; ಸಮನಿಸುವುದೆ=ಒಪ್ಪುವುದೆ/ಸೇರುವುದೆ/ಹೊಂದಿಕೆಯಾಗುವುದೆ;

ಕಳ್ಳತನವನ್ನೇ ತನ್ನ ಕಸುಬನ್ನಾಗಿ ಮಾಡಿಕೊಂಡಿರುವ ಕಳ್ಳನಿಗೆ ಕತ್ತಲೆಯು ಮೆಚ್ಚುಗೆಯಾಗುತ್ತದೆಯೇ ಹೊರತು ಬೆಳಕಲ್ಲ. ಏಕೆಂದರೆ ಯಾರ ಕಣ್ಣಿಗೂ ಬೀಳದಂತೆ ಕಳ್ಳತನ ಮಾಡಲು ಕತ್ತಲೆಯು ನೆರವಾದರೆ, ಬೆಳಕು ಅಡ್ಡಿಯಾಗುತ್ತದೆ . ಕಳ್ಳನ ವ್ಯಕ್ತಿತ್ವವನ್ನು ಸೂಚಿಸುವ ಈ ನುಡಿಯು ಒಂದು ರೂಪಕವಾಗಿ ಬಳಕೆಯಾಗಿದೆ.

ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯು ತನ್ನಂತೆಯೇ ಕೆಟ್ಟತನವುಳ್ಳ ವ್ಯಕ್ತಿಯನ್ನು ಒಪ್ಪಿಕೊಳ್ಳುತ್ತಾನೆಯೇ ಹೊರತು ಒಳ್ಳೆಯತನವುಳ್ಳ ವ್ಯಕ್ತಿಯನ್ನು ಒಪ್ಪುವುದಿಲ್ಲ. ಏಕೆಂದರೆ ಕೆಟ್ಟಕೆಲಸವನ್ನು ತಡೆಯುವ ವ್ಯಕ್ತಿಯು ಕೆಟ್ಟ ನಡತೆಯುಳ್ಳವನ ಕಣ್ಣಿಗೆ ಹಗೆಯಂತೆ ಕಂಡುಬರುತ್ತಾನೆ.

( ಚಿತ್ರಸೆಲೆ : lingayatkranti.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.