ಒಳ್ಳೆಯ ಆರೋಗ್ಯಕ್ಕೆ ಕಡಲೇಕಾಯಿ

– ಸಂಜೀವ್ ಹೆಚ್. ಎಸ್.

ಕಡಲೇಕಾಯಿ, ಶೇಂಗಾ, groundnuts

ಮಳೆಗಾಲದ ಚುಮುಚುಮು ಚಳಿಗೆ ಹುರಿದ ಬಿಸಿಬಿಸಿ ಕಡಲೇಕಾಯಿಯನ್ನು ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಒಂದು ಸಲ ನಾಲಿಗೆಗೆ ರುಚಿ ಹತ್ತಿದರೆ ಸಾಕು, ಕೈಗೂ ಬಾಯಿಗೂ ಬಿಡುವೇ ಇಲ್ಲದಂತೆ ತಿಂದು ಮುಗಿಸಿಬಿಡುತ್ತೇವೆ. ಎದುರಿಗಿರುವ ಕಡ್ಲೆಕಾಯಿ ಕಾಲಿಯಾಗುವವರೆಗೂ ಮುಂದಿನ ಕೆಲಸ ಮಾಡಲಾಗದು, ಕೈಗೂ ಬಾಯಿಗೂ ನಡುವಣ ಜಗಳವಿದ್ದಂತೆ ಇದು. ಮನೆಮಂದಿ ಅತವಾ ಸ್ನೇಹಿತರೊಡನೆ ಹರಟೆ ಹೊಡೆಯುತ್ತಾ ಸಮಯ ಕಳೆಯುವುದಕ್ಕೆ ಇದಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ. ಅದಕ್ಕಾಗಿಯೇ ಟೈಂಪಾಸ್ ಕಳ್ಳೆಕಾಯಿ(ಕಡಲೇಕಾಯಿ/ಶೇಂಗಾ)‌ ಎಂದು ಕರೆಯುವುದು. ಕೇವಲ ಉಳ್ಳವರಿಗೆ ಅಶ್ಟೇ ಅಲ್ಲ ಬಡ ಜನರಿಗೆ ಕೈಗೆಟುಕುವ ದರದಲ್ಲಿ ಸಿಗುವಂತಹ ಚಮತ್ಕಾರಿ ಕಾಯಿ, ಅದಕ್ಕಾಗಿಯೇ ಹಿರಿಯರು “ಬಡವರ ಬಾದಾಮಿ” ಎಂದು ಕರೆದಿದ್ದಾರೆ.

ಕಡಲೇಕಾಯಿ ಹಲವು ಪೌಶ್ಟಿಕಾಂಶಗಳ ಕಣಜ. ಸ್ತಳೀಯವಾಗಿ ಸಿಗುವ ಅತ್ಯುತ್ತಮ ಆಹಾರ ಮತ್ತು ಸುಲಬವಾಗಿ ಕಲಬೆರಕೆ ಮಾಡಲಾಗದ ಆಹಾರ ಪದಾರ‍್ತವಿದು. ತೂಕ ಹೆಚ್ಚು ಮಾಡಲು ಕಡಲೇಕಾಯಿ ಸಿಪ್ಪೆ ಸಮೇತ ಇರುವಾಗ ಕಲಬೆರಕೆ ಸ್ವಲ್ಪಮಟ್ಟಿಗೆ ಮಾಡಬಹುದು. ಕಡಲೇಕಾಯಿಯನ್ನು ಹಸಿಯಾಗಿ, ಹುರಿದು ಅಲ್ಲದೇ ಬೇಯಿಸಿ ಕೂಡ ತಿನ್ನಬಹುದು, ಕಡಲೇಕಾಯಿ ಜೊತೆಗೆ ಬೆಲ್ಲವಿದ್ದರಂತೂ ಅದರ ಮಜವೇ ಬೇರೆ. ಕಡಲೆ ಕಾಯಿಯಲ್ಲಿ ಪ್ರೋಟೀನ್, ಕೊಬ್ಬಿನಾಂಶ, ಪೈಬರ್ ಮತ್ತು ಕಾರ‍್ಬೋಹೈಡ್ರೇಟ್ಸ್ ಪೋಶಕಾಂಶಗಳು ಹೆಚ್ಚಾಗಿವೆ. ಕಡಲೇಕಾಯಿ ಆರೋಗ್ಯ ವ್ರುದ್ದಿಸುವ ಮತ್ತು ಕಾಪಾಡಿಕೊಳ್ಳುವ ಪೌಶ್ಟಿಕ ಗುಣಗಳನ್ನು ಹೊಂದಿದೆ. ಕಡಲೇಕಾಯಿ ಸೇವನೆಯಿಂದ ತೂಕ ಹೆಚ್ಚುತ್ತದೆ. ಅದರಲ್ಲಿ ಕೊಲೆಸ್ಟ್ರಾಲ್ ಇದೆ ಮತ್ತು ಬಿಪಿ ಬರುತ್ತದೆ ಎಂದು ಮೂಗು ಮುರಿಯುವವರೇ ಹೆಚ್ಚು ಆದರೆ ಸತ್ಯಾಂಶವೇ ಬೇರೆ.

ಸತ್ಯ ಏನೆಂದರೆ ಬೊಜ್ಜು ಕಡಿಮೆ ಮಾಡುವಲ್ಲಿ ಕಡಲೇಕಾಯಿ ಸೇವನೆ ಪ್ರಮುಕ ಪಾತ್ರವನ್ನು ವಹಿಸುತ್ತದೆ. ದೇಹದ ರಕ್ತನಾಳಗಳಲ್ಲಿರುವ ಕೆಟ್ಟ ಕೊಬ್ಬಿನಾಂಶವನ್ನು ಕಡಿಮೆಗೊಳಿಸಿ ಮತ್ತು ಹ್ರುದಯ ಸಂಬಂದಿ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ವಾಸ್ತವವಾಗಿ, ಕಡಲೇಕಾಯಿಯನ್ನು ಎಣ್ಣೆಕಾಳುಗಳು ಎಂದು ವರ‍್ಗೀಕರಿಸಲಾಗಿದೆ. ಕಡಲೇಕಾಯಿಯನ್ನು ಹೆಚ್ಚಾಗಿ ಕಡಲೇಕಾಯಿ ಎಣ್ಣೆ ತಯಾರಿಸಲು ಬಳಸಲಾಗುತ್ತದೆ. ಕಡಲೆಕಾಯಿಯಲ್ಲಿ ಕೊಬ್ಬಿನಂಶವು 44–56% ರವರೆಗೆ ಇರುತ್ತದೆ ಮತ್ತು ಮುಕ್ಯವಾಗಿ ಮೊನೊ ಮತ್ತು ಪಾಲಿ ಅನ್‌ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇವುಗಳಲ್ಲಿ ಹೆಚ್ಚಿನವು ಒಲೀಕ್ ಮತ್ತು ಲಿನೋಲಿಕ್ ಆಮ್ಲಗಳಿಂದ ಕೂಡಿದೆ. ಇವುಗಳು ದೇಹಕ್ಕೆ ಅತ್ಯಂತ ಅವಶ್ಯಕವಾಗಿರುವ ಒಳ್ಳೆಯ ಕೊಬ್ಬಿನಾಂಶಗಳು.

ಕಡಲೇಕಾಯಿ ಸಸ್ಯ ಆದಾರಿತ ಪ್ರೋಟೀನ್‌ನ ಉತ್ತಮ ಮೂಲ, ಪ್ರೋಟೀನ್ ಅಂಶವು ಅದರ ಒಟ್ಟು ಕ್ಯಾಲೊರಿಗಳಲ್ಲಿ 22-30% ವರೆಗೆ ಇರುತ್ತದೆ.‌ ಬಾರತೀಯರಲ್ಲಿ ಸರಾಸರಿ ಪ್ರೋಟೀನ್ ಸೇವನೆ ತುಂಬಾ ಕಡಿಮೆ, ಹಾಗಾಗಿ ಕಡಲೇಕಾಯಿ ಉತ್ತಮ ಆಯ್ಕೆಯಾಗಿದೆ. ವಾಸ್ತವವಾಗಿ ಕಡಲೇಕಾಯಿ ಯಲ್ಲಿ ಕಾರ‍್ಬೋಹೈಡ್ರೇಟ್ಸ್ ಅಂಶ ತುಸುಮಟ್ಟಿಗೆ ಕಡಿಮೆ, ಕೇವಲ 13 – 16% ಮಾತ್ರ.  ಕಡಲೇಕಾಯಿಯಲ್ಲಿ ನಾರಿನಂಶ ಹೆಚ್ಚಾಗಿರುವ ಕಾರಣ ಜೀರ‍್ಣಕ್ರಿಯೆ ಮತ್ತು ಮಲಬದ್ದತೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ತೂಕ ನಿರ‍್ವಹಣೆಗೆ ಸಂಬಂದಿಸಿದಂತೆ ಕಡಲೇಕಾಯಿಯನ್ನು ವ್ಯಾಪಕವಾಗಿ ಅದ್ಯಯನ ಮಾಡಲಾಗಿದೆ. ಕೊಬ್ಬು ಮತ್ತು ಕ್ಯಾಲೊರಿಗಳು ಅದಿಕವಾಗಿದ್ದರೂ, ಕಡಲೇಕಾಯಿಗಳು ತೂಕ ಹೆಚ್ಚಾಗಲು ಕಾರಣವಾಗುವುದಿಲ್ಲ, ಇದರ ಹಿಂದೆ ಅದ್ಬುತ ವಿಜ್ನಾನವಿದೆ.

ಗಮನಾರ‍್ಹವಾಗಿ, ಕಡಲೇಕಾಯಿಯಲ್ಲಿ ಹ್ರುದಯದ ಆರೋಗ್ಯಕ್ಕೆ ಬೇಕಾಗುವ ಹಲವಾರು ಪೋಶಕಾಂಶಗಳು ಇವೆ. ಇವುಗಳಲ್ಲಿ ಮೆಗ್ನೀಸಿಯಮ್, ನಿಯಾಸಿನ್, ತಾಮ್ರ, ಒಲೀಕ್ ಆಮ್ಲ ಮತ್ತು ರೆಸ್ವೆರಾಟ್ರೊಲ್ ನಂತಹ ಪೋಶಕಾಂಶಗಳು ಸೇರಿವೆ. ಪೊಟಾಶಿಯಂ, ಸೋಡಿಯಂ, ಕ್ಯಾಲ್ಸಿಯಂ, ಜಿಂಕ್, ಪಸ್ಪರಸ್, ವಿಟಮಿನ್ಗಳು, ನಯಾಸಿನ್, ಪೋಲೆಟ್, ಆಂಟಿ ಆಕ್ಸಿಡೆಂಟ್ ಮತ್ತು ಪಾಲಿಪಿನಾಲ್ ನಂತಹ ಹಲವು ಪೌಶ್ಟಿಕಾಂಶಗಳು ಜೀವಕೋಶಗಳನ್ನು ರಕ್ಶಿಸಲು ನೆರವಾಗುತ್ತವೆ. ಅಶ್ಟೇ ಅಲ್ಲದೆ ಮೂಳೆಗಳನ್ನು ಬಲಪಡಿಸಲು, ಪಾರ‍್ಶ್ವವಾಯು ತಡೆಯಲು, ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು, ಪಿತ್ತಕೋಶಗಳ ಸಮಸ್ಯೆಯನ್ನು ತಡೆಯಲು, ತ್ವಚೆಯ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ. ಶೇಂಗಾಬೀಜಗಳಲ್ಲಿ ಉತ್ತಮ ಪ್ರಮಾಣದ ಸತು ಇರುವ ಕಾರಣ ಮೆದುಳಿನ ಕ್ಶಮತೆ ಹೆಚ್ಚುತ್ತದೆ. ಪರಿಣಾಮವಾಗಿ ಸ್ಮರಣಶಕ್ತಿ ಉತ್ತಮಗೊಳ್ಳುತ್ತದೆ. ಮಕ್ಕಳ ಸ್ಮರಣಶಕ್ತಿ ಹೆಚ್ಚಿಸಬೇಕೆಂದರೆ ಕಡಲೆ ಕಾಯಿ ತಿನ್ನಿಸಿ.

ಕೇವಲ ದೈಹಿಕ ಆರೋಗ್ಯ ಅಶ್ಟೇ ಅಲ್ಲದೆ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಶೇಂಗಾಬೀಜ ಪ್ರಮುಕ ಪಾತ್ರ ವಹಿಸುತ್ತದೆ. ಶೇಂಗಾಬೀಜದ ಸೇವನೆ ದೇಹದಲ್ಲಿ ಟ್ರಿಪ್ಟೋಪಾನ್ (tryptophan) ಎಂಬ ಪೋಶಕಾಂಶದ ಉತ್ಪತ್ತಿಗೆ ನೆರವಾಗುತ್ತದೆ. ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತ ಸ್ರವಿಸಲು ನೆರವಾಗುತ್ತದೆ. ಈ ಸೆರೋಟೋನಿನ್ ಮಾನಸಿಕವಾದ ನಿರಾಳತೆಗೆ ಅಗತ್ಯವಾದ ರಸದೂತವಾಗಿದೆ. ಬಾವಾವೇಶ ಹಾಗೂ ಇತರ ಕಾರಣಗಳಿಂದ ಎದುರಾಗಿದ್ದ ಕಿನ್ನತೆಯಿಂದ ಹೊರಬರಲು ಸೆರೋಟೋನಿನ್ ನೆರವಾಗುತ್ತದೆ.

ಕಡಲೇಕಾಯಿ ಹಲವು ರೀತಿಯ ವೈವಿದ್ಯಮಯ ಕಾದ್ಯಗಳಲ್ಲಿ ಮತ್ತು ಸಂಸ್ಕರಣೆಯಲ್ಲಿ ಬಾಗಿಯಾಗಿದೆ. ಸಂಸ್ಕರಣಾ ವಲಯದಲ್ಲಿ ಕೋಟಿಗಟ್ಟಲೆ ಸಂಪಾದನೆಯೂ ಕೂಡ ಇದರಿಂದ ಆಗುತ್ತಿದೆ. ಕಡಲೇಕಾಯಿ ಎಣ್ಣೆ ಉದ್ಯಮ ಅತ್ಯಂತ ವಿಸ್ತಾರವಾಗಿದೆ. ಯಾವುದೇ ಇತರ ವಸ್ತುಗಳಿಂದ ಕಲಬೆರಕೆ ಮಾಡದೆ ದೇಶಿಯ ಪದ್ದತಿಯಂತೆ ಗಾಣದಲ್ಲಿ ತೆಗೆದ ಶೇಂಗಾ ಎಣ್ಣೆ ದೇಹಕ್ಕೆ ಬಹಳ ಆರೋಗ್ಯಕರ ಮತ್ತು ರುಚಿಕರ.  ಕಡಲೇಕಾಯಿ ಕೆಲವೊಮ್ಮೆ ಆಪ್ಲಾಟಾಕ್ಸಿನ್ (aflotoxin) ಎಂಬ ಅಂಶದಿಂದ ಕಲುಶಿತಗೊಂಡಿರುತ್ತದೆ. ಕಡಲೇಕಾಯಿ ತಿನ್ನುವಾಗ ನಿಮಗೆ ಸಿಗುವ ಕಹಿ ಅನುಬವ ಅದು. ಸರಿಯಾದ ರೀತಿಯಲ್ಲಿ ಸಂಗ್ರಹಣೆ ಮತ್ತು ಸಂಸ್ಕರಣೆ ಮಾಡದಿದ್ದಲ್ಲಿ ಈ ಅಂಶವೂ ಉತ್ಪತ್ತಿಗೊಳ್ಳುತ್ತದೆ. ದಯವಿಟ್ಟು ನಿಮ್ಮ ಬಾಯಿಗೆ ಈ ಕಹಿ ಅನುಬವವಾದ ತಕ್ಶಣವೇ ಅದನ್ನು ಸೇವಿಸಬೇಡಿ, ಇದರಿಂದಾಗಿ ಹಲವು ಕಾಯಿಲೆಗಳಿಗೆ ತುತ್ತಾಗಬಹುದು.

ಕೆಲವರಿಗೆ ಕಡಲೇಕಾಯಿಯ ಪೋಶಕಾಂಶಗಳಿಂದ ಅಲರ‍್ಜಿ ಉಂಟಾಗಬಹುದು. ಅತಿಯಾದ ಸೇವನೆ ಪಿತ್ತಕಾರಕ ಸಮಸ್ಯೆಯನ್ನು ತಂದೊಡ್ಡಬಹುದು. ಅತಿಯಾದರೆ ಅಮ್ರುತವೂ ವಿಶ. ಹಾಗಾಗಿ ಮಿತವಾಗಿ ಹಿತವಾಗಿ ಸೇವಿಸಿದರೆ ಅಮ್ರುತದಂತಹ ಪೋಶಕಾಂಶಗಳು ದೇಹಕ್ಕೆ ಒದಗುತ್ತದೆ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: