ಮರೆಯಾಗುತ್ತಿರುವ ಬೇಸಾಯದ ಬಳಕಗಳು – ಕಂತು 2
– ನಿತಿನ್ ಗೌಡ.
ಈ ಹಿಂದಿನ ಕಂತಿನಲ್ಲಿ ಮರೆಯಾಗುತ್ತಿರುವ ಬೇಸಾಯದ ಕೆಲ ಬಳಕಗಳ ಬಗ್ಗೆ ತಿಳಿಸಲಾಗಿತ್ತು. ಇನ್ನಶ್ಟು ಬಳಕಗಳ ಕುರಿತ ಮಾಹಿತಿ ಈ ಬರಹದಲ್ಲಿ…
ರೋಣಗಲ್ಲು ಮತ್ತು ಅಟ್ಟು
ಇದನ್ನು ಬತ್ತದ ಒಕ್ಕಲು ಮಾಡಲು, ಹುರುಳಿ, ತೊಗರಿ ಮೊದಲಾದ ಬೆಳೆ ಬಿಡಿಸಲು ಸಹ ಬಳಸಲಾಗುತ್ತದೆ. ರೋಣಗಲ್ಲನ್ನು ಹಿಡಿದುಕೊಳ್ಳಲು ಅಟ್ಟು ಬಳಸಲಾಗುವುದು. ರೋಣಗಲ್ಲನ್ನು ಅಟ್ಟಿನ ಮೂಲಕ ಜೋಡೆತ್ತುಗಳ ನೊಗಕ್ಕೆ ಕಟ್ಟಲಾಗುವುದು. ಬತ್ತದ ಕುಯ್ಲನ್ನು ಮಟ್ಟವಾದ ಅಂಗಳದ ಮೇಲೆ ಹರಡಿ, ಅದರ ಮೇಲೆ ರೋಣಗಲ್ಲನ್ನು ಎತ್ತುಗಳ ಮೂಲಕ ಗಿರಕಿ ಸುತ್ತಿಸಲಾಗುವುದು. ಬತ್ತದ ತೆನೆ ರೋಣಗಲ್ಲಿನ ತೂಕಕ್ಕೆ ಬಿಡಿಸಿಕೊಂಡು ಕಾಳುಗಳು ಹೊರಬರುತ್ತವೆ. ಆಮೇಲೆ ಇದನ್ನು ಗಾಳಿಯಲ್ಲಿ ತೂರಿ, ಹೊಟ್ಟು ತೆಗೆದು ಬತ್ತವನ್ನು ಬೇರ‌್ಪಡಿಸಲಾಗುತ್ತದೆ. ಈ ಎಲ್ಲಾ ಕೆಲಸಗಳಿಗೆ ಒಕ್ಕಲು ಮಾಡುವುದು ಎನ್ನುವರು. ಒಕ್ಕಲಾದ ಮೇಲೆ ಆ ಹುಲ್ಲನ್ನು ಹೊರೆ(ಪಿಂಡಿ) ಕಟ್ಟಲಾಗುವುದು. ಹೀಗೆ ಕಟ್ಟಿದ ಹೊರೆಗಳನ್ನು ಒಂದರ ಮೇಲೊಂದು ಸೇರಿಸಿ ಎತ್ತರಿಸಲಾಗುವುದು. ಇದನ್ನು ಗೊಣಬೆ ಎನ್ನುವರು.
ಈ ಹುಲ್ಲನ್ನು ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಆಗಿ ಬಳಸುತ್ತಾರೆ ಮತ್ತು ಮನೆಗಳ ಮಾಳಿಗೆಗೆ ಹಂಚು ಹಾಕಲು ಶಕ್ತಿ ಇಲ್ಲದವರು ಹುಲ್ಲಿನ ಹಾಸು ಹಾಕುತ್ತಿದ್ದರು.
ನರಕೋಲು
ಬತ್ತದ ಒಕ್ಕಲು ಮಾಡುವಾಗ, ಚದುರಿದ ಹುಲ್ಲನ್ನು ಒಟ್ಟು ಮಾಡಲು ಬಳಸಲಾಗುವುದು. ಇದು ಉದ್ದವಾದ ಕೋಲನ್ನು ಹೊಂದಿದ್ದು, ಕೋಲಿನ ಒಂದು ಮೂತಿ ಚಿಕ್ಕ “L” ಆಕಾರದಲ್ಲಿ ಇರುವುದರಿಂದ ಹುಲ್ಲನ್ನು ಬಾಚಿಕೊಳ್ಳಲು/ಎಳೆದುಕೊಳ್ಳಲು ಸಹಕಾರಿಯಾಗಿರುತ್ತದೆ.
ಗುದ್ದಲಿ
ನೆಲದಲ್ಲಿ ಮಣ್ಣು ತೆಗೆಯಲು ಗುದ್ದಲಿಯನ್ನು ಬಳಸಲಾಗುತ್ತದೆ. ಇದರಲ್ಲಿ ಬೇರೆ ಬೇರೆ ಬಗೆಯ ಗುದ್ದಲಿಗಳನ್ನು ಕಾಣಬಹುದು. ಎತ್ತುಗೆಗೆ, ಕುಂಟಾಣಿ: ಇದು ಹೆಚ್ಚು ಅಗಲ ಇರುವುದಿಲ್ಲ. ನೆಲದಲ್ಲಿ ಆಳವಾಗಿ ಮಣ್ಣು ಅಗೆಯಲು ಬಳಸಲಾಗುವುದು, ಅಡಿಕೆ ತೋಟದ ಕಪ್ಪು ಹೆರೆಯಲು, ಶುಂಟಿ ಪಟ್ಟೆಯ ಕಪ್ಪು ತೆಗೆಯಲು ಹೀಗೆ ಮೊದಲಾದ ಬಳಕೆಗಳಿವೆ.
ಕಪ್ಪು ಎಂದರೆ ನೀರು ಹರಿಯಲು ಮಾಡಿರುವ ಕಡಿದಾದ ಕಾಲುವೆ . ಕಪ್ಪು ಇಲ್ಲದಿದ್ದರೆ ತೋಟದೊಳಗೆ ನೀರು ನಿಂತು, ನೆಲ ಜವುಳಾಗಿ(ನೀರು ನಿಂತ ಕೆಸರು ಮಣ್ಣು) ಅಡಿಕೆ ಗಿಡಗಳಿಗೆ ಶೀತವಾಗುವುದು. ಒಂದಕ್ಕೊಂದು ಕಪ್ಪುಗಳಿಂದ ಬೇರ‌್ಪಟ್ಟ ಮಣ್ಣಿನ ಆಯತಾಕಾರದ ದಿಬ್ಬಗಳಿಗೆ ಪಟ್ಟೆ ಎನ್ನುತ್ತಾರೆ.
ಕೆಳಗಿನ ತಿಟ್ಟದಲ್ಲಿ ಶುಂಟಿ ಪಟ್ಟೆ, ಕಪ್ಪು ಮತ್ತು ಅಡಿಕೆ ಸಸಿ ತೋಟಡ ಕಪ್ಪು ತೋರಿಸಲಾಗಿದೆ.
ಪಿಕಾಸಿ
ಮಣ್ಣು ಅಗೆಯಲು ಬಳಸುವ ಬಳಕ. ಇದನ್ನು ಆಳವಾದ ಮಣ್ಣು ತೆಗೆಯಲು, ಗುಂಡಿ ತೆಗೆಯಲು ಬಳಸಲಾಗುತ್ತದೆ. ಪಿಕಾಸಿಯ ಎರಡು ಬದಿಯಲ್ಲೂ ಚೂಪಾದ ಮೂತಿ ಇರುತ್ತದೆ.
ಕತ್ತಿ/ಕುಡುಗೋಲು
ಮರದ ರೆಂಬೆ, ಕೊಂಬೆ, ಕಟ್ಟಿಗೆ ಮುಂತಾದವುಗಳನ್ನು ಕಡಿಯಲು ಬಳಸೋ ಬಳಕ. ಇದರಲ್ಲಿ ಹಲವು ಬಗೆಯ ಕತ್ತಿಗಳಿವೆ.
- ಹುಲ್ಲು ಗತ್ತಿ/ಕುಯ್ಲ್ಗತ್ತಿ: ಜಾನುವಾರುಗಳಿಗೆ ಮೇವಿನ ಹುಲ್ಲು ಕುಯ್ಯಲು, ಬತ್ತದ ಕುಯ್ಲಿಗೆ ಬಳಸಲಾಗುವುದು. ಈ ಕತ್ತಿಯ ಅಂಚು ತೆಳ್ಳಗೆ ಇರವುದು.
- ಕಡಗತ್ತಿ: ಇದರ ಅಂಚು ಹುಲ್ಲುಗತ್ತಿಗಿಂತ ಗಟ್ಟಿಯಾಗಿರುವದರಿಂದ ಕಟ್ಟಿಗೆ ಕಡಿಯಲು ಬಳಸಲಾಗುವುದು.
ಕಣಜ
ಬಿದಿರಿನ ತಟ್ಟಿಯನ್ನು ಸುತ್ತಿ, ಅದರೊಳಗೆ ಬೆಳೆಯನ್ನು ಕೂಡಿಡಲು ಬಳಸಲಾಗುವುದು.
ಪಣತ
ಇದು ಬತ್ತ ಮುಂತಾದ ಬೆಳೆ ಕೂಡಿಡಲು ಬಳಸಲಾಗುವುದು. ಮಣ್ಣಿನಿಂದ ಒಂದು ಗುಂಡಾಕಾರವಾಗಿ ಚಿಕ್ಕ ಕೋಣೆ ಮಾಡಿ ಅದರ ಮೇಲೆ ಹುಲ್ಲಿನ ಹಾಸು(Ceil) ಹಾಕಲಾಗುವುದು. ಪಣತದ ಕೆಳಗೆ, ಬೆಳೆ ತೆಗೆದುಕೊಳ್ಳಲು ಒಂದು ತೂತು ಇರುತ್ತದೆ. ಈ ಕೆಳಗಿನ ತಿಟ್ಟ ಈಗಿನ ಪಣತ. ಇಲ್ಲಿ ಮರದ ಹಲಗೆ ಮತ್ತು ಹಂಚಿನ ಹಾಸು ಬಳಸಲಾಗಿದೆ.
ಹಲ್ಕ್
ಇದರಲ್ಲಿ ಮರದ ಸಮತಟ್ಟಾದ ದಿಣ್ಣೆಗೆ ಚೂಪಾದ ಹಲವು ಹಲ್ಲುಗಳು ಇರುವುದು. ಇದನ್ನು ಅಲ ಬಾಚುವ ಮುಂಚೆ ಬಳಸಲಾಗುವುದು.
ಹೆಡಿಗೆ ಬುಟ್ಟಿ
ಬಿದಿರಿನಿಂದ ಹೆಣೆದ ಬುಟ್ಟಿ. ಇದನ್ನು ಗೊಬ್ಬರ, ಮಣ್ಣು ಹೊರಲು ಬಳಸಲಾಗುತ್ತದೆ.
(ಚಿತ್ರ ಸೆಲೆ: indiawaterportal.org)
ಇತ್ತೀಚಿನ ಅನಿಸಿಕೆಗಳು