ಮಕ್ಕಳ ಕತೆ : ನಂಬಿಕೆ ದ್ರೋಹ

– ವೆಂಕಟೇಶ ಚಾಗಿ.

ಮಗದ ರಾಜ್ಯದ ಒಂದು ಪ್ರಾಂತ್ಯದಲ್ಲಿ ಬಹುಲಕ ಎಂಬ ರಾಜನು ಆಳ್ವಿಕೆ ಮಾಡುತ್ತಿದ್ದನು. ರಾಜ ಚಿಕ್ಕವನಾಗಿದ್ದಾಗ ತನ್ನ ವಿದ್ಯಾಬ್ಯಾಸವನ್ನು ಒಬ್ಬ ರುಶಿಯ ಆಶ್ರಮದಲ್ಲಿ ಪಡೆದಿದ್ದನು . ರುಶಿಯ ಆಶ್ರಮವು ಹಿಮಾಲಯದ ತಪ್ಪಲಿನ ಒಂದು ದೊಡ್ಡ ಕಾಡಿನಲ್ಲಿ ಇತ್ತು. ಅಲ್ಲಿ ನಾನಾ ಕಡೆಯಿಂದ ಬಂದ ಮಕ್ಕಳು ಶಿಕ್ಶಣ ಪಡೆಯುತ್ತಿದ್ದರು. ಅವರಲ್ಲಿ ರಾಜಮನೆತನದ ಮಕ್ಕಳು, ಸಾಮಂತರ ಮಕ್ಕಳು, ಶ್ರೀಮಂತರ ಮಕ್ಕಳು, ಬಡವರ ಮಕ್ಕಳು , ಆಚಾರ‍್ಯರ ಮಕ್ಕಳು ಯಾವುದೇ ಬೇದಬಾವವಿಲ್ಲದೇ ಶಿಕ್ಶಣ ಪಡೆಯುತ್ತಿದ್ದರು. ಎಲ್ಲರಿಗೂ ಒಂದೇ ಸೂರಿನಡಿ ಶಿಕ್ಶಣ ನೀಡಲಾಗುತ್ತಿತ್ತು. ಎಲ್ಲರಿಗೂ ಸಮಾನವಾದ ಕೆಲಸ ಕಾರ‍್ಯಗಳನ್ನು ಹಂಚಿಕೆ ಮಾಡಿ ವೇದಾಬ್ಯಾಸ, ನೈತಿಕ ಶಿಕ್ಶಣವನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ದೇವದತ್ತ ಎಂಬ ಬಾಲಕನು ಬಹುಲಕ ರಾಜನೊಂದಿಗೆ ಶಿಕ್ಶಣವನ್ನು ಪಡೆಯುತ್ತಿದ್ದನು. ರಾಜ ಹಾಗೂ ದೇವದತ್ತ ಇಬ್ಬರು ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ದೇವದತ್ತ ಸ್ವಲ್ಪ ಆಸೆಬುರುಕ ಸ್ವಬಾವವನ್ನು ಹೊಂದಿದ್ದನು. ಶಿಕ್ಶಣ ಮುಗಿದ ನಂತರ ಎಲ್ಲಾ ವಿದ್ಯಾರ‍್ತಿಗಳು ತಮ್ಮ ತಮ್ಮ ಊರುಗಳಿಗೆ ಮರಳಿದರು.

ಬಹುಲಕನು ತನ್ನ ತಂದೆಯ ಮರಣಾನಂತರ ತಾನೇ ರಾಜ್ಯದ ಚುಕ್ಕಾಣಿ ಹಿಡಿದು ರಾಜ್ಯದ ಆಡಳಿತ ನಡೆಸತೊಡಗಿದನು. ತನ್ನ ಉತ್ತಮ ಆಡಳಿತದಿಂದ ಎಲ್ಲೆಡೆ ಹೆಸರಾದನು. ರಾಜ್ಯದ ಪ್ರಜೆಗಳು ರಾಜನನ್ನು ದೇವರಂತೆ ಕಾಣುತ್ತಿದ್ದರು. ಪ್ರಜೆಗಳ ಕಶ್ಟ-ಸುಕಗಳಿಗೆ ತಕ್ಶಣ ಸ್ಪಂದಿಸಿ ಅವರ ಪ್ರೀತಿ ವಾತ್ಸಲ್ಯಕ್ಕೆ ಪಾತ್ರರಾಗುತ್ತಿದ್ದನು. ಆಶ್ರಮದಲ್ಲಿ ಪಡೆದಂತಹ ನೈತಿಕ ಶಿಕ್ಶಣವು ಬಹುಲಕನನ್ನು ಒಳ್ಳೆಯ ರಾಜನನ್ನಾಗಿ ಮಾಡಿ ರಾಜ್ಯದ ಉತ್ತಮ ಆಡಳಿತಕ್ಕೆ ಬದ್ರ ಬುನಾದಿಯನ್ನು ಒದಗಿಸಿತ್ತು.

ಇತ್ತ ದೇವದತ್ತನು ತನ್ನ ಊರಿನಲ್ಲಿ ಒಂದು ಚಿಕ್ಕ ಅಂಗಡಿಯನ್ನು ಇಟ್ಟುಕೊಂಡು ಬಟ್ಟೆಯ ವ್ಯಾಪಾರ ಮಾಡುತ್ತಿದ್ದನು. ಮಾರಾಟಕ್ಕೆಂದು ಆಗಾಗ ಬೇರೆ ಬೇರೆ ಊರುಗಳಿಗೆ ಹೋಗಿ ಬಟ್ಟೆ ವ್ಯಾಪಾರ ಮಾರಾಟ ಮಾಡಿ ಮರಳಿ ತನ್ನ ಊರಿಗೆ ಬರುತ್ತಿದ್ದ. ವ್ಯಾಪಾರಕ್ಕೆಂದು ನಗರಕ್ಕೆ ಬಂದಾಗ ರಾಜ ಹಾಗೂ ಆತ್ಮೀಯ ಸ್ನೇಹಿತನಾದ ಬಹುಲಕನನ್ನು ಬೇಟಿಯಾಗಲು ಇಶ್ಟಪಡುತ್ತಾನೆ. ಅರಮನೆಗೆ ತೆರಳಿ ರಾಜಬಟರ ಮೂಲಕ ತಾನು ಬಹುಲಕನನ್ನು ಬೇಟಿಯಾಗಲು ಬಂದಿರುವ ಸುದ್ದಿಯನ್ನು ರಾಜನಿಗೆ ತಿಳಿಸುತ್ತಾನೆ. ಬಾಲ್ಯದ ಗೆಳೆಯ ತನ್ನನ್ನು ಬೇಟಿಯಾಗಲು ಬಂದಿರುವ ಸುದ್ದಿಯನ್ನು ತಿಳಿದು ಬಹುಲಕತುಂಬಾ ಸಂತೋಶಗೊಳ್ಳುತ್ತಾನೆ. ಅರಮನೆಯಿಂದ ಸ್ವತ ತಾನೇ ಹೊರಬಂದು ದೇವದತ್ತನನ್ನು ಆದರಿಂದ ಬರಮಾಡಿಕೊಳ್ಳುತ್ತಾನೆ. ಅರಮನೆಯೊಳಗೆ ತನ್ನ ಬಾಲ್ಯದ ಗೆಳೆಯನನ್ನು ಕರೆದುಕೊಂಡು ಹೋಗಿ ರಾಜೋಪಚಾರವನ್ನು ಮಾಡುತ್ತಾನೆ. ನಂತರ ಇಬ್ಬರೂ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕುಹಾಕುತ್ತಾ ಎರಡು ದಿನಗಳ ಕಾಲ ಕಾಲಕಳೆಯುತ್ತಾರೆ. ರಾಜನಾದ ಬಹುಲಕನು ತನ್ನ ಆತ್ಮೀಯ ಸ್ನೇಹಿತನಿಗೆ, “ಗೆಳೆಯ ನಿನಗಾಗಿ ನಾನು ಏನಾದರೂ ನೀಡಲು ಬಯಸುತ್ತೇನೆ. ಏನಾದರೂ ಕೇಳು ಕೊಡುವೆ” ಎಂದು ಹೇಳಿದನು. ಆಗ ದೇವದತ್ತನು ತನ್ನ ವ್ಯಾಪಾರಕ್ಕೆಂದು ತನ್ನ ಊರಿನಲ್ಲಿ ಒಂದು ದೊಡ್ಡ ಅಂಗಡಿಯ ಅವಶ್ಯಕತೆ ಇದೆ ಎಂದಾಗ, “ಆಗಲಿ ನಿನ್ನ ನಗರದಲ್ಲಿ ಒಂದು ದೊಡ್ಡ ಅಂಗಡಿಯನ್ನು ನಿನಗಾಗಿ ಕಟ್ಟಿ ಕೊಡುತ್ತೇನೆ” ಎಂದು ಸಂತೋಶದಿಂದ ದೇವದತ್ತನನ್ನು ಬೀಳ್ಕೊಟ್ಟನು.

ದೇವದತ್ತನು ತನ್ನ ನಗರಕ್ಕೆ ತೆರಳಿ ರಾಜನ ದನಸಹಾಯದಿಂದ ದೊಡ್ಡ ಅಂಗಡಿಯನ್ನು ಕಟ್ಟಿಕೊಂಡನು. ವ್ಯಾಪಾರ ಚೆನ್ನಾಗಿ ಆಗತೊಡಗಿದ್ದರಿಂದ ಲಾಬವೂ ಹೆಚ್ಚಿತು. ಇದರ ಮದ್ಯದಲ್ಲಿ ದೇವದತ್ತನಿಗೆ ಆಸೆ ಹೆಚ್ಚಾಯಿತು. ಮತ್ತೆ ತನ್ನ ಸ್ನೇಹಿತ ರಾಜನ ಬಳಿ ಹೋಗಿ ದೇವದತ್ತ ಬೇಟಿಯಾದನು. ನಗರದಲ್ಲಿ ತನಗೊಂದು ಉತ್ತಮ ಸ್ತಾನಮಾನವಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡನು. ರಾಜ ಬಹುಲಕ ತನ್ನ ಗೆಳೆಯನ ಬಯಕೆಯನ್ನು ಅರಿತು ತಕ್ಶಣ ಸ್ಪಂದಿಸಿ ಅದೇ ನಗರದ ಮುಕ್ಯಸ್ತನನ್ನಾಗಿ ನೇಮಿಸಿದನು. ದೇವದತ್ತನಿಗೆ ತುಂಬಾ ಸಂತೋಶವಾಯಿತು. ನಗರದ ಸಮಸ್ತ ಆಡಳಿತವನ್ನು ತಾನೇ ನೋಡಿಕೊಂಡನು. ನಗರದಿಂದ ಬರುವ ಬಹುಪಾಲು ಆದಾಯವನ್ನು ತನ್ನ ಬಳಿಗೆ ಇಟ್ಟುಕೊಂಡನು. ತನಗೆ ಬೇಕಾದ ಸುಂದರವಾದ ದೊಡ್ಡ ಮನೆಯೊಂದನ್ನು ಕಟ್ಟಿಸಿಕೊಂಡನು. ನಗರದ ಜನರು ದೇವದತ್ತನಿಗೆ ರಾಜನಿಗೆ ಸಮಾನವಾದ ಗೌರವವನ್ನು ನೀಡತೊಡಗಿದರು.

ಕೆಲವು ದಿನಗಳು ಕಳೆದ ನಂತರ ದೇವದತ್ತನಿಗೆ ಆಸೆ ಮತ್ತಶ್ಟು ಹೆಚ್ಚಿತು. ತಾನು ಕೇವಲ ಈ ನಗರದ ಮುಕ್ಯಸ್ತನಾಗದೆ, ಪ್ರಾಂತದ ಸಾಮಂತನಾದರೆ ಹೇಗೆ ಎಂದು ವಿಚಾರ ಮಾಡಿದನು. ರಾಜನ ಬಳಿ ತೆರಳಿ ತನ್ನ ಬಯಕೆಯನ್ನು ರಾಜನ ಬಳಿ ಹೇಳಿಕೊಂಡನು. ನನ್ನ ಪ್ರಾಣ ಸ್ನೇಹಿತನ ಬಯಕೆಯನ್ನು ಈಡೇರಿಸಲು ಆ ಪ್ರಾಂತದ ಸಾಮಂತನಾಗಿದ್ದ ಅದೀರ ಎಂಬುವನನ್ನು ಕರೆದು, ಅವನ ಅದಿಕಾರವನ್ನು ದೇವದತ್ತನಿಗೆ ನೀಡಲು ತಿಳಿಸಿ ದೇವದತ್ತನನ್ನು ಸಾಮಂತನನ್ನಾಗಿ ನೇಮಿಸಿದನು. ದೇವದತ್ತ ಸಂತೋಶಗೊಂಡನು.

ದಿನಗಳು ಕಳೆದಂತೆ ದೇವದತ್ತನ ಮನದಲ್ಲಿ ಅದಿಕಾರದ ವ್ಯಾಮೋಹ ಹೆಚ್ಚುತ್ತಲೇ ಹೋಯಿತು. ತಾನೂ ರಾಜನಂತೆ ಮೆರೆಯತೊಡಗಿದ. ತನ್ನದೇ ಆದ ಸೈನ್ಯವನ್ನು ಕಟ್ಟಿಕೊಂಡು ಸುತ್ತ-ಮುತ್ತಲಿನ ರಾಜ್ಯಗಳ ಮೇಲೆ ಹಾಗೂ ಪ್ರಾಂತ್ಯಗಳ ಮೇಲೆ ಆಕ್ರಮಣವನ್ನು ಮಾಡತೊಡಗಿದನು. ದೇವದತ್ತನ ಉಪಟಳವನ್ನು ತಾಳಲಾರದೆ ಇತರೆ ಪ್ರಾಂತ್ಯದ ಸಾಮಂತರು ರಾಜ ಬಹುಲಕನ ಬಳಿ ದೂರು ನೀಡುತ್ತಾರೆ. ರಾಜ ಬಹುಲಕನು ದೇವದತ್ತನನ್ನು ಅರಮನೆಗೆ ಕರೆಯಿಸಿ ಬುದ್ದಿವಾದ ಹೇಳಿದನು. ಆದರೂ ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳಲಾಗಿದೆ, ತನ್ನ ಮಿತ್ರನಿಗೇ ನಂಬಿಕೆ ದ್ರೋಹ ಬಗೆದು ರಾಜ್ಯವನ್ನೇ ತನ್ನ ವಶಕ್ಕೆ ತೆಗೆದುಕೊಳ್ಳಲು ಕುತಂತ್ರಗಳನ್ನು ಹೂಡಿದನು. ಬಹುಲಕ ದೇವದತ್ತನನ್ನು ಯುದ್ದದಲ್ಲಿ ಸೋಲಿಸಿ ಅವನಿಗೆ ನೀಡಲಾಗಿದ್ದ ಎಲ್ಲಾ ಸೌಲಬ್ಯಗಳನ್ನು ಕಿತ್ತುಕೊಂಡನು. ಮಿತ್ರ ದ್ರೋಹ ಹಾಗೂ ರಾಜದ್ರೋಹದ ಅಪರಾದದ ಮೇಲೆ ಅವನಿಗೆ ಶಿಕ್ಶೆ ನೀಡಿ ದೇವದತ್ತನನ್ನು ಮೊದಲಿದ್ದ ಸ್ತಿತಿಗೆ ತಂದನು. ಅದಿಕಾರದ ದುರ‍್ಬಳಕೆಯಿಂದ ತನಗೆ ಒದಗಿಬಂದ ದುಸ್ತಿತಿಗೆ ಬಿದ್ದ ದೇವದತ್ತ ಬದುಕಿರುವವರೆಗೂ ಪಶ್ಚಾತ್ತಾಪ ಪಟ್ಟನು.

(ಚಿತ್ರ ಸೆಲೆ: storyplanets.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: