ಕರ‍್ನಾಟಕ ಕ್ರಿಕೆಟ್ ತಂಡದ ಮೊದಲನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ.

Ranaji Karnataka team, ರಣಜಿ ಕರ‍್ನಾಟಕ ತಂಡ

ಬಾರತ ಕ್ರಿಕೆಟ್ ತಂಡಕ್ಕೆ ಮೊದಲಿನಿಂದಲೂ ಸಾಕಶ್ಟು ‪ದಿಗ್ಗಜ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ಕರ‍್ನಾಟಕ, ದಶಕಗಳಿಂದ ದೇಸೀ ಕ್ರಿಕೆಟ್ ನ ಒಂದು ಪ್ರಬಲ ತಂಡವಾಗಿ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಇರಿಸಿಕೊಂಡಿದೆ. ಮುಂಬೈ ನಂತರ ಅತಿ ಹೆಚ್ಚು (8) ರಣಜಿ ಟೂರ‍್ನಿಗಳನ್ನು ಗೆದ್ದಿರುವ ಹೆಗ್ಗಳಿಕೆ ಕರ‍್ನಾಟಕದ್ದು. ಜೊತೆಗೆ ಒಂದು ದಿನದ ಮಾದರಿ ಕ್ರಿಕೆಟ್ ಪಂದ್ಯಾವಳಿಯಾದ ವಿಜಯ್ ಹಜಾರೆ ಟೂರ‍್ನಿಯನ್ನು 4 ಬಾರಿ ಮತ್ತು ಟಿ-20 ಮಾದರಿಯ ಸಯ್ಯದ್ ಮುಶ್ತಾಕ್ ಅಲಿ ಟೂರ‍್ನಿಯನ್ನು 2 ಬಾರಿ ಗೆದ್ದು ಎಲ್ಲಾ ಮಾದರಿಗಳಲ್ಲೂ ಪ್ರಾಬಲ್ಯ ಮೆರೆದಿದೆ. 1934 ರ ಮೊದಲ ರಣಜಿ ಟೂರ‍್ನಿಯಲ್ಲಿ ಆಗಿನ ಮೈಸೂರು ತಂಡ ಮದ್ರಾಸ್ ಎದುರು ತನ್ನ ಮೊದಲ ಪಂದ್ಯ ಆಡಿ ಮೊದಲ ದಿನವೇ ಇನ್ನಿಂಗ್ಸ್ ಹಾಗೂ 23 ರನ್ ಗಳ ಹೀನಾಯ ಸೋಲು ಕಂಡಿತ್ತು. ಆದರೆ ಅಲ್ಲಿಂದ 86 ವರುಶಗಳಲ್ಲಿ ಕರ‍್ನಾಟಕ ಕ್ರಿಕೆಟಿಗರ ಪಡೆ ಒಂದು ಸಶಕ್ತ ತಂಡವಾಗಿ ಬೆಳೆದು ಕೇವಲ ದೇಸೀ ಕ್ರಿಕೆಟ್ ತಂಡಗಳನ್ನು ಮಣಿಸುವುದು ಮಾತ್ರವಲ್ಲದೇ ವಿಂಡೀಸ್, ನ್ಯೂಜಿಲ್ಯಾಂಡ್ ಅಂತ ಪ್ರವಾಸಿ ಅಂತರಾಶ್ಟ್ರೀಯ ತಂಡಗಳೆದುರೂ ಗೆಲುವು ದಾಕಲಿಸಿದೆ. ಈ ಬೆಳವಣಿಗೆಯ ಹಿಂದೆ ಆಗಿನ ಮೈಸೂರು ಕ್ರಿಕೆಟ್ ಸಂಸ್ತೆಯ ಎಲ್ಲಾ ಅದ್ಯಕ್ಶರು, ಕಾರ‍್ಯದರ‍್ಶಿಗಳು ಹಾಗೂ ತಂಡದ ನಾಯಕರೂ ಸೇರಿ ಹಲವಾರು ಆಟಗಾರರ ಶ್ರಮವಿದೆ ಅನ್ನುವುದನ್ನು ಕರ‍್ನಾಟಕದ ಪ್ರತಿಯೊಬ್ಬ ಕ್ರಿಕೆಟ್ ಅಬಿಮಾನಿಯೂ ನೆನಪಿನಲ್ಲಿಟ್ಟುಕೊಳ್ಳಬೇಕು.

ಕರ‍್ನಾಟಕ ತಂಡ 1974 ರಲ್ಲಿ ಮೊದಲ ರಣಜಿ ಟೂರ‍್ನಿ ಗೆಲ್ಲುವುದಕ್ಕೂ ಮೊದಲು, ಹಿಂದಿನ ಮೈಸೂರು ತಂಡ ಎರಡು ಬಾರಿ ಪೈನಲ್ಸ್ ನಲ್ಲಿ ಸೋಲುಂಡಿತ್ತು. 1941/42 ರಲ್ಲಿ ಶಪಿ ದರಾಶಾ ಅವರ ಮುಂದಾಳ್ತನತನದಲ್ಲಿ ಆಡಿದ ಕರ‍್ನಾಟಕ, ವಿಜಯ್ ಮರ‍್ಚೆಂಟ್ ನಾಯಕತ್ವದ ಬಾಂಬೆ ಎದುರು ಇನ್ನಿಂಗ್ಸ್ ಹಾಗೂ 281 ರನ್ ಗಳ ಹೀನಾಯ ಸೋಲಿಗೆ ಗುರಿಯಾಗಿತ್ತು. ಬಳಿಕ 1959/60 ರಲ್ಲಿ ಕೆ. ವಾಸುದೇವ ಮೂರ‍್ತಿಯವರ ಮುಂದಾಳತ್ವದ ಕರ‍್ನಾಟಕ ಪಾಲಿ ಉಮ್ರಿಗಾರ್ ಮುನ್ನಡೆಸಿದ ಬಾಂಬೆ ಎದುರು ಮತ್ತೊಮ್ಮೆ ಇನ್ನಿಂಗ್ಸ್ ಹಾಗೂ 22 ರನ್ ಗಳಿಂದ ಮುಗ್ಗರಿಸಿತ್ತು. ಎರಡೂ ಬಾರಿ ಟೂರ‍್ನಿಯ ಕೊನೆಯವರೆಗೆ ತಲುಪಿ ಬ್ಯಾಟಿಂಗ್ ವೈಪಲ್ಯದಿಂದ ಪೈಪೋಟಿ ಕೂಡ ನೀಡದೆ ಸೋತಿದ್ದು ತಂಡದ ಆಗಿನ ಮುಕ್ಯ ಬ್ಯಾಟ್ಸ್ಮನ್ ಆಗಿದ್ದ ವಿ. ಸುಬ್ರಮಣ್ಯ ಅವರನ್ನು ತುಂಬಾ ಕಾಡಿತು. ನಂತರ 60ರ ದಶಕದುದ್ದಕ್ಕೂ ಹೆಚ್ಚಿನ ಪಂದ್ಯಗಳಲ್ಲಿ ನಾಯಕರಾಗಿದ್ದ, ತಂಡದ ಸದಸ್ಯರ ಪ್ರೀತಿಯ ಸುಬ್ಬು ತಂಡದ ಬ್ಯಾಟಿಂಗ್ ಬಲಗೊಳಿಸುವತ್ತ ಗಮನ ಹರಿಸಿದರು. ಹೊಸ ಪ್ರತಿಬೆಗಳ ಹುಡುಕಾಟದಲ್ಲಿದ್ದಾಗ ಗುಂಡಪ್ಪ ವಿಶ್ವನಾತ್ ಹಾಗೂ ಬ್ರಿಜೇಶ್ ಪಟೇಲ್ ರಂತಹ ಯುವ ಬ್ಯಾಟ್ಸ್ಮನ್ ಗಳು ಅವರ ಕಣ್ಣಿಗೆ ಬೀಳುತ್ತಾರೆ. ಬಿ. ಎಸ್. ಚಂದ್ರಶೇಕರ್, ಪ್ರಸನ್ನ, ವಿಜಯ್ ಕ್ರಿಶ್ಣ, ವಿಜಯ್ ಕುಮಾರ್ ಹಾಗೂ ಸಯ್ಯದ್ ಕಿರ‍್ಮಾನಿ ರಂತಹ ಅಳವುಳ್ಳ ಹುಡುಗರ ಪಡೆಯನ್ನು ಕಟ್ಟಿಕೊಂಡು ರಣಜಿ ಟೂರ‍್ನಿಯನ್ನು ಗೆಲ್ಲುವ ಕನಸನ್ನು ಮೊದಲು ಕಂಡವರು ನಾಯಕ ಸುಬ್ರಮಣ್ಯ ಅವರು. ಅದನ್ನು ಸಾಕಾರ ಮಾಡಿದವರು, ಅವರ ಗರಡಿಯಲ್ಲಿ ನಾಯಕತ್ವದ ಪಟ್ಟುಗಳನ್ನು ಕಲಿತ ಎರಪಲ್ಲಿ ಪ್ರಸನ್ನ ಅವರು.

ಕಡೆಗೂ ಕೈಗೂಡಿದ ರಣಜಿ ಟ್ರೋಪಿ ಗೆಲ್ಲುವ ಕನಸು – ಮೊದಲ ಗೆಲುವು

1973/74 ರ ಸಾಲಿನ ರಣಜಿ ಟೂರ‍್ನಿಯುದ್ದಕ್ಕೂ ಯಾವುದೇ ಅಂತರಾಶ್ಟ್ರೀಯ ಪಂದ್ಯಗಳು ಇಲ್ಲದಿದ್ದರಿಂದ ಬಾರತ ತಂಡದ ಕಾಯಮ್ ಸದಸ್ಯರಾಗಿದ್ದ ಪ್ರಸನ್ನ, ಚಂದ್ರ ಹಾಗೂ ವಿಶ್ವನಾತ್ ರ ಸಂಪೂರ‍್ಣ ಸೇವೆ ನಾಡ ತಂಡಕ್ಕೆ ದೊರಕಿತು. ದಕ್ಶಿಣ ವಲಯದಲ್ಲಿ ಒಟ್ಟು 4 ಲೀಗ್ ಪಂದ್ಯಗಳನ್ನಾಡಿ ಒಂದೂ ಪಂದ್ಯ ಸೋಲದೆ, 2 ಪಂದ್ಯಗೆದ್ದು ಒಟ್ಟು 26 ಪಾಯಿಂಟ್ ಗಳಿಂದ ಮೊದಲ ಬಾರಿಗೆ ಕರ‍್ನಾಟಕ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಮೈಸೂರು ತಂಡ ಮತ್ತೊಮ್ಮೆ ಕ್ವಾರ‍್ಟರ್ ಪೈನಲ್ ತಲುಪಿತು.

ಬಿಶನ್ ಸಿಂಗ್ ಬೇಡಿ ಮುಂದಾಳ್ತನದ ದೆಹಲಿ ಎದುರು ಬೆಂಗಳೂರಿನ ಹೊಸ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಕ್ವಾರ‍್ಟರ್ ಪೈನಲ್ ಪಂದ್ಯದಲ್ಲಿ ಕರ‍್ನಾಟಕ 223 ರನ್‌ಗಳ ಸುಳುವಾದ ಗೆಲುವು ಪಡೆಯಿತು. ಬ್ರಿಜೇಶ್ (168) ಮತ್ತು ವಿಶ್ವನಾತ್ (65) ರ ಉತ್ತಮ ಬ್ಯಾಟಿಂಗ್ ಹಾಗೂ ಬಿ ಎಸ್ ಚಂದ್ರ (7/76 ಹಾಗೂ 3/38 -10 ವಿಕೆಟ್ಸ್) ಮತ್ತು ಪ್ರಸನ್ನರ (3/74 ಹಾಗೂ 4/80 – 7 ವಿಕೆಟ್) ಮಾರಕ ಬೌಲಿಂಗ್ ಗೆ ದೆಹಲಿ ಪಡೆಯ ಬಳಿ ಯಾವುದೇ ಉತ್ತರವಿರಲಿಲ್ಲ. ಕರ‍್ನಾಟಕ ನಿರಾಯಾಸವಾಗಿ ಸೆಮಿಪೈನಲ್ ತಲುಪಿತು.

ಸೆಮಿಪೈನಲ್ ಎದುರಾಳಿ – ಸೋಲರಿಯದ ಬಾಂಬೆ

1958/59 ರಿಂದ 1972/73 ರ ತನಕ ಸತತ 15 ಬಾರಿ ರಣಜಿ ಟೂರ‍್ನಿ ಗೆದ್ದಿದ್ದ ಬಾಂಬೆ ಆ ಅವದಿಯಲ್ಲಿ ಒಂದು ಪಂದ್ಯವನ್ನೂ ಸೋತಿರುವುದಿಲ್ಲ. ತಮಗೆ ಯಾರೂ ಸರಿಸಾಟಿಯಿಲ್ಲ, ಕಣಕ್ಕಿಳಿದರೆ ಸಾಕು ಗೆಲುವು ನಮ್ಮದೇ ಎಂದು ಜಂಬದಿಂದ ಬೀಗುತ್ತಿದ್ದ ಕಾಲವದು. ವಾಡೇಕರ್ ನಾಯಕರಾಗಿದ್ದ ಬಾಂಬೆ ತಂಡದಲ್ಲಿ ಗಾವಸ್ಕರ್, ಅಶೋಕ್ ಮಂಕಡ್ ಹಾಗೂ ಏಕನಾತ್ ಸೋಲ್ಕರ್ ರಂತಹ ಅಂತರಾಶ್ಟ್ರೀಯ ಆಟಗಾರರಿರುತ್ತಾರೆ. ವಿಶ್ವನಾತ್ ಅವರ 162 ಹಾಗೂ ಬ್ರಿಜೇಶ್ ಪಟೇಲ್ ಅವರ 106 ರನ್‌ಗಳ ನೆರವಿನಿಂದ ಕರ‍್ನಾಟಕ ಒಟ್ಟು 385 ರನ್ ಗಳನ್ನು ಕಲೆಹಾಕಿ, ಬಳಿಕ ಬಾಂಬೆಯನ್ನು 307 ರನ್ ಗಳಿಗೆ ಕಟ್ಟಿ ಹಾಕಿದ್ದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಸನ್ನ (5/117) ಹಾಗೂ ಚಂದ್ರ (4/145) ತಮ್ಮ ಬೌಲಿಂಗ್‌ನಿಂದ ಮತ್ತೊಮ್ಮೆ ಮಿಂಚುತ್ತಾರೆ. ಸುದಾಕರ್ ರಾವ್ ನೇರ ಹಿಟ್ ನಿಂದ ವಾಡೇಕರ್ ರನ್ನು ರನೌಟ್ ಮಾಡಿದ್ದು ಮತ್ತು ಬೆರಗಾಗುವಂತಹ ಆಪ್ ಸ್ಪಿನ್ ಚಳಕದಿಂದ ಪ್ರಸನ್ನ ಗವಾಸ್ಕರ್ ರ ಸ್ಟಂಪ್ಸ್ ಉರುಳಿಸಿದ್ದು ಈ ಪಂದ್ಯದ ಮುಕ್ಯ ಅಂಶಗಳು. ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಈ ಪಂದ್ಯದಲ್ಲಿ ಕರ‍್ನಾಟಕ 78 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದು ಬಾಂಬೆಯ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿತು. ಬಾಂಬೆ ಟೂರ‍್ನಿಯಿಂದ ಹೊರಬಿದ್ದಿದ್ದು ಆಗಿನ ಎಲ್ಲಾ ಪತ್ರಿಕೆಗಳಲ್ಲೂ ಮುಕ್ಯ ವಿಶಯವಾಗಿ ಚರ‍್ಚೆಗೆ ಗ್ರಾಸವಾಗುತ್ತದೆ.

ಪೈನಲ್ ಪಂದ್ಯ – ಎದುರಾಳಿ ರಾಜಸ್ತಾನ

ಜೈಪುರದಲ್ಲಿ ನಡೆದ ಕೊನೆಯ ಪಂದ್ಯವನ್ನು ಕರ‍್ನಾಟಕ ಸುಳುವಾಗಿ ಪರಿಗಣಿಸುವಂತಿರಲಿಲ್ಲ. ಯಾಕಂದರೆ ಹನುಮಂತ್ ಸಿಂಗ್ ನಾಯಕತ್ವದ ರಾಜಸ್ತಾನ ತಂಡದಲ್ಲಿ ಸಲೀಮ್ ದುರಾನಿ, ಕೈಲಾಶ್ ಗಟ್ಟಾನಿ ಅವರಂತಹ ದಿಗ್ಗಜರಿರುತ್ತಾರೆ. ಬಾಂಬೆಯನ್ನೇ ಸೋಲಿಸಿದ್ದೇವೆ ಇನ್ನು ರಾಜಸ್ತಾನ ಏನು ಲೆಕ್ಕ ಎಂದು ಆಟಗಾರರು ಮೈಮರೆಯದಂತೆ ನೋಡಿಕೊಳ್ಳುವ ಹೊಣೆ ನಾಯಕ ಪ್ರಸನ್ನ ಅವರ ಮೇಲಿರುತ್ತದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ‍್ನಾಟಕಕ್ಕೆ ಮೊದಲ ಹಂತದಲ್ಲಿ ಆಗಾತ ಕಾದಿರುತ್ತದೆ. ಪ್ರಮುಕ ಬ್ಯಾಟ್ಸ್‌ಮನ್‌ಗಳಾದ ವಿಶ್ವನಾತ್ ಹಾಗೂ ಬ್ರಿಜೇಶ್ ಕ್ರಮವಾಗಿ 15 ಹಾಗೂ 8 ರನ್ ಗಳಿಸಿ ಮೊದಲ ಬಾರಿಗೆ ವೈಪಲ್ಯ ಅನುಬವಿಸುತ್ತಾರೆ. ಆದರೆ ಇದರಿಂದ ಎದೆಗುಂದದೆ ವಿಜಯ್ ಕುಮಾರ್ 66, ವಿಜಯ್ ಕ್ರಿಶ್ಣ 71 ಹಾಗೂ ಜಯಪ್ರಕಾಶ್ 55 ರನ್ ಗಳಿಸಿ ಬೌಲರ್ ಗಳಿಗೆ ಹೋರಾಡಲು ಸಾಕಾಗುವಶ್ಟು ರನ್ ಗಳನ್ನು(276) ಕಲೆ ಹಾಕುತ್ತಾರೆ. ನಂತರ ಬೌಲಿಂಗ್ ನಲ್ಲೂ ಮಿಂಚಿದ ವಿಜಯ್ ಕುಮಾರ್ 9 ರನ್ ನೀಡಿ 4 ವಿಕೆಟ್ ಪಡೆಯುತ್ತಾರೆ. ಪ್ರಸನ್ನ 4/56 ಪಡೆದರೆ, ಚಂದ್ರ ಇನ್ನುಳಿದ ಎರಡು ವಿಕೆಟ್ ಪಡೆದು (2/81), ರಾಜಸ್ತಾನವನ್ನು 176 ಕ್ಕೆ ಕಟ್ಟಿ ಹಾಕಿ ಕರ‍್ನಾಟಕ ತಂಡ 100 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ನೆರವಾಗುತ್ತಾರೆ. ಕರ‍್ನಾಟಕದಿಂದ ತಂಡದೊಂದಿಗೆ ಜೈಪುರಕ್ಕೆ ತೆರಳಿದ್ದ ಹತ್ತಾರು ಅಬಿಮಾನಿಗಳ ಪೈಕಿ ಶಂಕರ್ ರಾವ್, ರಾಜಾ ರಾವ್ ಮತ್ತು ರಾಮನರಸಿಂಹ ಅವರು ಮೊದಲೆರಡು ದಿನಗಳ ಆಟ ಮುಗಿದ ಮೇಲೆ ಸ್ತಳೀಯ ಸಂಸ್ತೆ ಪಿಚ್ಅನ್ನು ಹಾಳುಗೆಡವಬಹುದು ಎಂಬ ಅನುಮಾನದಿಂದ ಆಟದ ಅಂಗಳದಲ್ಲೇ ಮಲಗಿ, ಪಿಚ್ ಕಾದದ್ದು ಕನ್ನಡಿಗರ ಕ್ರಿಕೆಟ್ ಪ್ರೀತಿಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು.

ಬಳಿಕ ಎರಡನೇ ಇನ್ನಿಂಗ್ಸ್ ನಲ್ಲೂ ಬ್ಯಾಟಿಂಗ್ ಆದಾರ ಸ್ತಂಬಗಳಾದ ವಿಶ್ವನಾತ್ ಸೊನ್ನೆಗೆ ಔಟಾದರೆ ಮತ್ತು ಬ್ರಿಜೇಶ್ 9 ರನ್ ಗಳಿಸಿ ದಿಗಿಲು ಉಂಟುಮಾಡುತ್ತಾರೆ. ಆದರೆ ಕೆಳಗಿನ ಕ್ರಮಾಂಕದಲ್ಲಿ ಮತ್ತೊಮ್ಮೆ ಜಯಪ್ರಕಾಶ್ 64* ಹಾಗೂ ಕಿರ‍್ಮಾನಿ 60 ರನ್ ಗಳಿಸುತ್ತಾರೆ. ತಂಡದ ಸ್ಕೋರ್ 212/8 ಆಗಿದ್ದಾಗ ಪ್ರಸನ್ನ ಡಿಕ್ಲೇರ್ ಮಾಡಿ ರಾಜಸ್ತಾನಕ್ಕೆ 313 ರನ್ ಗಳ ಸವಾಲಿನ ಗುರಿ ನೀಡುತ್ತಾರೆ. ಎರಡನೇ ಇನ್ನಿಂಗ್ಸ್ ನಲ್ಲಿ ಪ್ರಸನ್ನ (5/45) ಮತ್ತು ಚಂದ್ರರ (3/56) ಸ್ಪಿನ್ ದಾಳಿಗೆ ರಾಜಸ್ತಾನ 127 ರನ್‌ಗಳಿಗೆ ನೆಲಕಚ್ಚುತ್ತದೆ. ಕರ‍್ನಾಟಕ 185 ರನ್ ಗಳಿಂದ ಪೈನಲ್ ಗೆದ್ದು ಮೊದಲ ಬಾರಿಗೆ ರಣಜಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಳ್ಳುತ್ತದೆ. ಆ ವೇಳೆಗಾಗಲೇ ತವರು ತೊರೆದು ಆಸ್ಟ್ರೇಲಿಯಾದಲ್ಲಿ ಬದುಕು ಕಟ್ಟಿಕೊಂಡಿದ್ದ ಕನ್ನಡ ನಾಡಿನ ಮಾಜಿ ನಾಯಕ ವಿ. ಸುಬ್ರಮಣ್ಯ ಅವರ ಬಹುದಿನದ ರಣಜಿ ಟೂರ‍್ನಿ ಗೆಲ್ಲುವ ಕನಸು ನನಸಾಗುತ್ತದೆ.

ಗೆಲುವಿನ ಸಂಬ್ರಮ, ಹರಿದು ಬಂದ ಅಬಿನಂದನೆಗಳ ಮಹಾಪೂರ

ಜೈಪುರದಲ್ಲಿ ಮೊದಲುಗೊಂಡ ಗೆಲುವಿನ ಸಂಬ್ರಮ ರೈಲಿನ ಪ್ರಯಾಣದುದ್ದಕ್ಕೂ ಹಾಡು, ಕೇಕೆ, ವಿಜಯ ಗೋಶಗಳಿಂದ ಮುಂದುವರೆಯುತ್ತದೆ. ರಣಜಿ ಟ್ರೋಪಿ ಎಶ್ಟೋ ವರುಶಗಳ ಬಳಿಕ ದಕ್ಶಿಣ ಬಾರತಕ್ಕೆ ಬರುತ್ತಿದೆ ಎಂದು ಸಂತಸ ಪಟ್ಟು ತಮಿಳುನಾಡಿನ ಕ್ರಿಕೆಟ್ ಸಂಸ್ತೆಯ ಅದ್ಯಕ್ಶರಾದ ಶ್ರೀರಾಮನ್, ಕರ‍್ನಾಟಕದ ಆಟಗಾರರಿದ್ದ ರೈಲು ಮದ್ರಾಸ್ ನ ಸೆಂಟ್ರಲ್ ನಿಲ್ದಾಣ ತಲುಪಿದಾಗ ನೇರವಾಗಿ ಅಲ್ಲಿಗೇ ಬಂದು ಆಟಗಾರರನ್ನು ಅಬಿನಂದಿಸುತ್ತಾರೆ. ನಂತರ ಅಲ್ಲಿಂದ ರೈಲು ಬೆಂಗಳೂರು ನಿಲ್ದಾಣ ತಲುಪುವ ವೇಳೆಗೆ ಅಲ್ಲಿ ಜನಸಾಗರವೇ ಸೇರಿರುತ್ತದೆ. ಕರ‍್ನಾಟಕ ಕ್ರಿಕೆಟ್ ಸಂಸ್ತೆಯ ಅದ್ಯಕ್ಶರಾದ ಚಿನ್ನಸ್ವಾಮಿ ಆಟಗಾರರನ್ನು ಬರಮಾಡಿಕೊಳ್ಳಲು ಹಾರ-ತುರಾಯಿಗಳೊಂದಿಗೆ ಸಜ್ಜಾಗಿರುತ್ತಾರೆ. ಮೊದಲ ಬಾರಿ ರಾಜ್ಯಕ್ಕೆ ರಣಜಿ ಟ್ರೋಪಿ ತಂದುಕೊಟ್ಟ ತಮ್ಮ ನಾಡಿನ ಹೆಮ್ಮೆಯ ಆಟಗಾರರನ್ನು ಹತ್ತಿರದಿಂದ ನೋಡುವ ತವಕ. ಆ ದಿನ ಆಟಗಾರರಿಗೆ ರೈಲು ನಿಲ್ದಾಣದಿಂದ ಹೊರ ಬರುವುದೇ ದೊಡ್ಡ ಸಾಹಸವಾಗುತ್ತದೆ!

ನಂತರ ಆಟಗಾರರಿಗೆ ಎಲ್ಲಾ ಬಗೆಯ ಗೌರವಗಳು ಸಲ್ಲುತ್ತವೆ. ಆಗಿನ ಮುಕ್ಯಮಂತ್ರಿಯಾಗಿದ್ದ ಶ್ರೀ.ದೇವರಾಜ್ ಅರಸ್ ಅವರು ವಿದಾನಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ ಔತಣಕೂಟ ಆಯೋಜಿಸಿ ಆಟಗಾರರಿಗೆ ತಲಾ ರೂ.1,000 ಗಳ ಚೆಕ್ ಜೊತೆಗೆ ಎಲ್ಲರಿಗೂ ಸರ‍್ಕಾರಿ ಸೈಟುಗಳನ್ನುಉಡುಗೊರೆಯಾಗಿ ನೀಡುತ್ತಾರೆ. ರಾಜ್ಯ ಕ್ರಿಕೆಟ್ ಸಂಸ್ತೆ ಕೂಡ ಹೆಚ್ಚುವರಿ ರೂ. 500 ಗಳನ್ನು ಪ್ರತಿ ಆಟಗಾರರಿಗೆ ನೀಡುತ್ತದೆ. ಆ ಹರ‍್ಶೋದ್ಗಾರ, ಆ ಗೆಲುವಿನ ಸಂಬ್ರಮವನ್ನು ಆಗಿನ ಕಾಲದ ಅಬಿಮಾನಿಗಳಿಂದ ಕೇಳಿದಾಗ ‘ಅಬ್ಬಾ, ದೇಸೀ ಕ್ರಿಕೆಟ್ ಗೆ ಆಗ ಅಶ್ಟು ಮನ್ನಣೆ ಇತ್ತೇ’ ಎಂದು ನಮಗನಿಸದೇ ಇರದು.

ಕನ್ನಡನಾಡಿನ ಕ್ರಿಕೆಟ್ ಪಡೆ ನಾಡಿನ ಗಂಡಬೇರುಂಡ ಲಾಂಚನವನ್ನು ಬಾರತ ಕ್ರಿಕೆಟ್ ಇತಿಹಾಸದಲ್ಲಿ ರಾರಾಜಿಸುವಂತೆ ಮಾಡಿದ ಕತೆ ಇದು. ಪ್ರಸನ್ನ, ಚಂದ್ರ, ವಿಶ್ವನಾತ್, ಬ್ರಿಜೇಶ್ ಪಟೇಲ್, ವಿಜಯ್ ಕ್ರಿಶ್ಣ, ವಿಜಯ್ ಕುಮಾರ್, ಜಯಪ್ರಕಾಶ್ ಹಾಗೂ ಕಿರ‍್ಮಾನಿ ರವರ ನಂಬಿಕೆ ಹಾಗೂ ಸಾಹಸದ ಕತೆ ಇದು. ನಮ್ಮ ನಾಡಿನಲ್ಲಿ ಇಂದು ಬಾಲ್ ಅತವಾ ಬ್ಯಾಟ್ ಹಿಡಿಯುವ ಪುಟ್ಟ ಮಕ್ಕಳಿಂದ ಪ್ರತೀ ಕ್ರಿಕೆಟ್ ಪ್ರೇಮಿಗೂ ತಿಳಿದಿರಬೇಕಾದ ಕತೆ ಇದು.

(ಚಿತ್ರ ಸೆಲೆ: twitter.com/RanjiKarnataka)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications