ಕೋವಿಡ್ ಜೊತೆಗಿನ ಬದುಕು

ಸಚಿನ್ ಎಚ್‌. ಜೆ.

ಕೊರೊನಾ ವೈರಸ್, Corona Virus

ಕೊರೊನಾ ಇತ್ತೀಚೆಗೆ ಅಂಟಾರ‍್ಟಿಕಾ ಸೇರುವ ಮೂಲಕ ಎಲ್ಲ ಕಂಡಗಳಿಗೂ ವಿಸ್ತರಿಸಿ “ಪಾಂಡೆಮಿಕ್” ಪದಕ್ಕೆ ಸಂಪೂರ‍್ಣವಾಗಿ ಅರ‍್ತ ಕೊಟ್ಟಂತೆ ಆಯಿತು. ಒಂದೊಂದೇ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಕೋವಿಡ್ ಹೆಡೆ ತೆರೆದು ರೌದ್ರರೂಪ ತೋರಿಸಿತು. ಲಾಕ್ಡೌನು ಮಾಡಿದ್ದಾಯಿತು, ಹಣಕಾಸಿನ ನಶ್ಟ ಅನುಬವಿಸಿದ ಮೇಲೆ ಅದನ್ನು ನಿಲ್ಲಿಸಲಾಯಿತು. ಕೊರೊನಾ ವೈರಾಣು ಎಶ್ಟರ ಮಟ್ಟಿಗೆ ಸಾಂಕ್ರಾಮಿಕ ಅನ್ನೋದನ್ನ ನಾವು ಅರಿಯಬೇಕು. ಚಳಿಗಾಲದ ಮುಂಜಾವಿನಲ್ಲಿ ಕೆಮ್ಮಿದಾಗ, ಮಾತಾಡಿದಾಗ, ಉಪ್ ಎಂದು ಊದಿದಾಗ ಹವೆಯಲ್ಲಿನ ತೇವ ಮಂಜಾಗಿ ‘ಹೊಗೆ’ಯಂತೆ ಕಾಣಿಸುವುದನ್ನು ಗಮನಿಸಿರುತ್ತೀರಿ. ಅಶ್ಟು ದೂರಕ್ಕಿಂತ ದುಪ್ಪಟ್ಟು ದೂರ ನಮ್ಮ ಕಣ್ಣಿಗೆ ಕಾಣಿಸದೆ ಈ ವೈರಾಣು ಕ್ರಮಿಸಬಲ್ಲದು ಅನ್ನುವುದು ಸತ್ಯ.

ಹಾಗಾದರೆ ನಮ್ಮ ಮೈಮೇಲೆ ಮೂಗಿನ ಒಳಗೆ ವೈರಾಣು ಮುಟ್ಟಿಬಿಟ್ಟರೆ ಸೋಂಕು ತಗುಲೋದು ಗ್ಯಾರಂಟಿನಾ? ಇಲ್ಲ. ವೈರಾಣುಗಳ ಸಂಕೆ ಸಾಕಶ್ಟು ಇದ್ದರೆ ಮಾತ್ರ ಅಂಟಿದ ವೈರಾಣು ದೇಹದ ಕಣಗಳನ್ನು ಪ್ರವೇಶಿಸಿ ರೋಗಕ್ಕೆ ಕಾರಣವಾಗಬಲ್ಲದು. ವಿಚಿತ್ರ ಅಂದರೆ, ಹಲವರಲ್ಲಿ ಮೂಗಿನ ಮತ್ತು ಗಂಟಲಿನ “Mucosa”ದಲ್ಲಿಯೇ ಈ ವೈರಾಣು ಉಳಿದು ಬೆಳೆದು ವ್ಯಕ್ತಿಗೆ ಯಾವದೇ ತೊಂದರೆಯನ್ನೇ ಕೊಡದೆ ಮಾಯವಾಗಬಹುದು. ಇಂತವರು ಸಮಾಜದಲ್ಲಿ ಕೊರೊನಾ ವೈರಸ್ಸಿನ ಕಜಾನೆಯ ಪಾತ್ರವಹಿಸಬಹುದು.

ಈಗ ವ್ಯಾಕ್ಸೀನ್ ಲಸಿಕೆ ಬರುವ ಸಮಯ ಬಂದಿದೆ. ಆದರೆ ಬಹಳಶ್ಟು ಮಂದಿ ಲಸಿಕೆ ಮೇಲೆ ಅಗತ್ಯಕ್ಕಿಂತ ಹೆಚ್ಚು ನಂಬಿಕೆ, ಬರವಸೆ ಇಟ್ಟಿರುವುದು ಸೂಕ್ಶ್ಮ ಜೀವಶಾಸ್ತ್ರ ತಗ್ನರಿಗೇ (micro-biologists) ಅಚ್ಚರಿ ಉಂಟುಮಾಡಿದೆ. ಪೋಲಿಯೋ, ರೇಬೀಸ್, ಸಣ್ಣ ಸಿಡುಬು (small pox) ಮೊದಲಾದ ಉದಾಹರಣೆಗಳಶ್ಟೇ ಜನರಿಗೆ ಗೊತ್ತಿದ್ದು ವಯಸ್ಕರ ಚುಚ್ಚಿಕೆಯಲ್ಲಿನ (adult vaccination) ಸವಾಲುಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಈಗ ಬ್ರಿಟನ್ನಿನ ರೂಪಾಂತರಿ ವೈರಾಣು 70% ಹೆಚ್ಚು ಹರಡಬಲ್ಲದು ಅಂದಾಗ ಮತ್ತೊಮ್ಮೆ ಕೋಲಾಹಲ ಆಗಿದ್ದು ಇದರ ದ್ಯೋತಕವಾಗಿದೆ. ಸ್ಪಾನಿಶ್ ಪ್ಲೂ ಕೂಡ ಇದೇ ರೀತಿ ಅಲೆ ಅಲೆಯಾಗಿ ಬಂದು ಮನುಕುಲಕ್ಕೆ ತೊಂದರೆ ನೀಡಿದ್ದನ್ನು ಒಂದು ಶತಮಾನದ ಒಳಗೇ ಮನುಕುಲ ಮರತುಬಿಟ್ಟಿದೆ.

ಲಾಕ್ಡೌನ್, ಲಸಿಕೆ, ದಿಗ್ಬಂದನ ಯಾವುದೂ ಕೆಲಸ ಮಾಡದು ಅಂದರೆ ಏನು ಮಾಡಬೇಕು ಅಂದಾಗ ತಕ್ಕ ಮಟ್ಟಿಗೆ ಉತ್ತರ ಸಿಗುವುದು ಜಪಾನಿನ ಮಾದರಿಯಲ್ಲಿ. ಜಪಾನಿನ ಚಾರ‍್ಟನ್ನು ಗಮನಿಸಿದರೆ ಬೇರೆ ಎಲ್ಲ ದೇಶಗಳಿಗೆ ಹೋಲಿಸಿದರೆ, ಅಶ್ಟೊಂದು ಜನಸಾಂದ್ರತೆ ಇದ್ದರೂ ಕಡಿಮೆ ವೇಗದಲ್ಲಿ ವೈರಾಣು ಹಬ್ಬಿರೋದನ್ನ ಗಮನಿಸಬಹುದು. ಅಲ್ಲಿ ಲಾಕ್ಡೌನ್ ಹೇರದೇ‌ ಇದ್ದರೂ ಕೂಡ ಹೇಗೆ ನಿಯಂತ್ರಿಸಿದರು? ಅವರ ಉತ್ತರ‌ “ಸಾನ್ ಮಿಟ್ಸು” – 3 ಸಿ ( 3 C )

  • close contact setting
  • close spaces
  • crowded spaces.

ಜನರನ್ನು ಮುಟ್ಟುವ ಸಾದ್ಯತೆ ಹೆಚ್ಚಿರುವ ಸನ್ನಿವೇಶಗಳು, ಗಾಳಿ ಆಡಲು ಆಸ್ಪದ ನೀಡದ ಸ್ತಳಗಳು, ಜನಸಾಂದ್ರತೆ ಜಾಸ್ತಿ ಇರುವ ಜಾಗಗಳು – ಇವೆಲ್ಲದರಿಂದ ದೂರ ಇರುವುದು. ಇದು ನಮಗೆ ತಿಳಿಯದ ವಿಶಯವೇನಲ್ಲ‌ ಅಂತ ನೀವು ಹೇಳಬಹುದು. ಆದರೆ ಜಪಾನಿಯರಿಗು ನಮಗು ಇರುವ ವ್ಯತ್ಯಾಸ ಇಶ್ಟೆ. ಅವರು ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಆದ್ದರಿಂದ ಲಸಿಕೆ ಬರುವ ಹೊತ್ತಿಗೆ ವಯಸ್ಸಾದ ಜನ ಅತಿ ಹೆಚ್ಚು ಸಂಕೆಯಲ್ಲಿರುವ ಜಪಾನ್ ಅಶ್ಟೇನು ನಶ್ಟ ಅನುಬವಿಸದೇ ಕೊರೊನಾ ನಿರ‍್ಮೂಲನೆಗೆ ಸನ್ನದ್ದವಾಗಿದೆ.

ನೆಮ್ಮದಿಯ ಸಂಗತಿ ಅಂದರೆ ಬ್ರಿಟನ್ನಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಾಣು ಹರಡುವಿಕೆಯಲ್ಲಿ ಎತ್ತಿದ ಕೈ ಆದರೂ ಹೆಚ್ಚು ಉಲ್ಬಣಗೊಳ್ಳುವ ರೋಗಕ್ಕೆ ಕಾರಣವಾಗಬಹುದು ಅನ್ನೋದಕ್ಕೆ ಸದ್ಯಕ್ಕೆ ಪುರಾವೆ ಇಲ್ಲ. ಹಾಗೆಯೇ ನಾವು ಇದುವರೆಗೂ ತಯಾರಿಸುವ ಲಸಿಕೆಗೆ ವೈರಾಣು ಬಗ್ಗುವುದಿಲ್ಲವೆಂದು ಕೂಡ ಇಲ್ಲ. ಆದರೆ ಬೂಮಿ ಮೇಲಿನ ಎಲ್ಲ ಜನರಿಗೂ ಸೋಂಕು ತಾಗಲು ಅವಕಾಶ ಮಾಡಿಕೊಟ್ಟರೆ ಮುಂಬರುವ ರೂಪಾಂತರಿಗಳು ಮಾರಣಾಂತಿಕವಾಗಿಯೋ ಅತವಾ ಲಸಿಕೆ ಲೆಕ್ಕಿಸದ ಪ್ರಬೇದಗಳಾಗಿ ಹೊರಹೊಮ್ಮುವ ಸಾದ್ಯತೆಗಳೂ ಇಲ್ಲದಿಲ್ಲ. ಆದ್ದರಿಂದ ಅದ್ರುಶ್ಟ ಪರೀಕ್ಶೆ ಮಾಡುವ ವಿಶಯ ಇದಲ್ಲ. ಇದು ಕೋಟಿ ಜೀವಗಳ ಪ್ರಶ್ನೆ. ಮನುಕುಲದ ಪ್ರಶ್ನೆ. ಲಸಿಕೆ ಬಂದ ಮೇಲೂ ಕೂಡ, ನಮ್ಮ ಅಬ್ಯಾಸಗಳೇ ನಮಗೆ ದಾರಿ ದೀಪವಾಗಲು ಸಾದ್ಯ.

ಸಾಮಾಜಿಕ ಅಂತರ ಒಂದು ತಪ್ಪಾದ ಪದ. ನಾವು ಸಾಮಾಜಿಕವಾಗಿ ಒಟ್ಟಾಗಿಯೇ ಇರಬಹುದು. ಆದರೆ ಆದಶ್ಟು ದೂರ ಕಾಪಾಡಿಕೊಳ್ಳೋದು, ಇನ್ನೂಬ್ಬರನ್ನು ಮಾತಾಡಿಸುವ ಮುನ್ನ ಅಂತರ ಕಾಯ್ದುಕೊಳ್ಳಲು, ದೂರದಿಂದ ಮತ್ತು ಎತ್ತರದ ದನಿಯಲ್ಲಿ ಮಾತಾಡುವುದು ಒಳಿತು. ನೀವು ಬಟ್ಟೆ ಮಾಸ್ಕನ್ನೇ ಉಪಯೋಗಿಸಿದರೂ ಸಹ ಚೊಕ್ಕ ಮಾಡದೆ ಮರುಪ್ರಯೋಗ ಮಾಡಬೇಡಿ ಅಂತ ಕೇಳಿಕೊಳ್ಳುತ್ತೇನೆ. ಐದಾರು ಮಾಸ್ಕ್ ಇಟ್ಟುಕೊಂಡು ಚೊಕ್ಕ ಮಾಡಿ ಮರುಬಳಕೆ ಮಾಡಿ. ಮಾಸ್ಕನ್ನು ತೆಗೆದ ಮೇಲೆ ಕೈ ತೊಳೆದು ಊಟ ಮಾಡಿ.

ಎಲ್ಲ ಜನರಿಂದ ದೂರ ಇರುವುದು, ಯಾರನ್ನೂ ಮುಟ್ಟದೇ ಇರುವುದು ಆತ್ಮೀಯವಾಗಿ ಹೆಗಲ ಮೇಲೆ ಕೈ ಹಾಕಿದಾಗ ದೂರ ಹೋಗುವುದು ಇದೆಲ್ಲದರಿಂದ ನನ್ನ ಜೊತೆ ಕೆಲಸ ಮಾಡುವ ನನ್ನ ಸಹಪಾಟಿಗಳೇ ಬೇಸರ ವ್ಯಕ್ತಪಡಿಸೋದು ನನಗೆ ಅಬ್ಯಾಸವಾಗಿದೆ. ಆದರೆ ಏನು ಮಾಡುವುದು ಕಾಲಕ್ಕೆ ತಕ್ಕಂತೆ ನಡೆದವನನ್ನು ಬದಲಾದವನನ್ನು ಪ್ರಕ್ರುತಿ ಬದುಕಿಸುತ್ತದೆ, ಪೋಶಿಸುತ್ತದೆ. ಕೊರೊನಾ ಇವತ್ತು ಇರಬಹುದು ಮುಂದೆ ಇರದೇ ಇರಬಹುದು. ಆದರೆ ನಮ್ಮ ನಡವಳಿಕೆಯಲ್ಲಿನ ಬದಲಾವಣೆಗಳು, ಶುಚಿತ್ವ ಮುಂದೆಯೂ ಸಹ ಬೇರೆ ರೋಗಗಳಿಂದ ದೂರ ಇಡುವವು. ನಿಮ್ಮ ಕೈಗಳು ಸದಾ ಶುಚಿಯಾಗಿರಲಿ. ದೈಹಿಕ‌ ಅಂತರ ಕಾಪಾಡಿಕೊಳ್ಳಿ.

ಹೊಸ ವರುಶದ ಶುಬಾಶಯಗಳೊಂದಿಗೆ…

( ಚಿತ್ರ ಸೆಲೆ : wiki  )

( ಮಾಹಿತಿ ಸೆಲೆ : economist.com, washingtonpost.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications