ನಗೆಬರಹ : ಪ್ರಶ್ನೆಗಳು

– .

ಈ ಬರಹ ಪ್ರಾರಂಬಿಸುವ ಮುನ್ನ ನಿಮಗೆಲ್ಲಾ ಒಂದೆರೆಡು ಸಣ್ಣ ಪ್ರಶ್ನೆ ಕೇಳಿ ಬಿಡ್ತೀನಿ, ಇದು ಎಲ್ಲರಿಗೂ ಸಂಬಂದಪಟ್ಟಿದೆ. ಇಂದು ಬೆಳಿಗ್ಗೆ ನೀವು ಹಾಸಿಗೆಯಿಂದ ಎದ್ದ ತಕ್ಶಣ ಎದುರಿಸಿದ ಮೊದಲ ಪ್ರಶ್ನೆ ಯಾವುದು? ನೀವು ಕೇಳಿದ ಮೊದಲ ಪ್ರಶ್ನೆ ಯಾವುದು? ಎದ್ದು ತುಂಬಾ ಹೊತ್ತಾಯ್ತು ಅಂದರೆ, ಹೋಗ್ಲಿ ಬಿಡಿ. ಮತ್ತೊಂದು ಪ್ರಶ್ನೆ, ಈ ಬರಹ ಓದುವ ಮುನ್ನ ನಿಮ್ಮ ಮನೆಯ ಸದಸ್ಯರಲ್ಲಿ ನೀವು ಕೇಳಿದ ಮೊದಲ ಪ್ರಶ್ನೆ ಯಾವುದು? ನನಗೆ ಗೊತ್ತು, ಇದೂ ಸಹ ಕಬ್ಬಿಣದ ಕಡಲೆಯೇ! ನಿಮ್ಮ ಮನದಲ್ಲಿ ಇವು ಕಂಡಿತ ಉಳಿದಿರುವುದಿಲ್ಲ. ಉತ್ತರಕ್ಕೆ ಅರ‍್ಜೆಂಟೇನಿಲ್ಲಾ, ಯಾಕೆಂದರೆ ಇದು ಪ್ರಶೆಗಳ ಬರಹವಲ್ಲವೇ? ನಿದಾನವಾಗಿ ಯೋಚಿಸಿ, ಈ ಬರಹ ಓದಿ ಮುಗಿಸುವ ಮುನ್ನ ಹೊಳೆದರೆ, ಪ್ರತಿಕ್ರಿಯೆಯಲ್ಲಿ ಹಾಕಿ.

ಸ್ವಲ್ಪ ಯೋಚಿಸಿ ನೋಡಿ, ಪ್ರಶ್ನೆಗಳೇ ಇಲ್ಲವಾಗಿದ್ದರೆ ಏನಾಗುತ್ತಿತ್ತು? ಎಂದು. ಕಂಡಿತ, ಅಕ್ಶರಶಹ ಏನೂ ಆಗುತ್ತಿರಲಿಲ್ಲ, ಉತ್ತರಗಳೂ ಇರುತ್ತಿರಲಿಲ್ಲ. ಯಾರ ಮನದಲ್ಲಿ ಯಾವ ಸಂಶಯ ಇರುತ್ತಿತ್ತೋ ಅದು ಹಾಗೇ ಇರುತ್ತಿತ್ತು, ಅಲ್ಲವೇ? ಇದು ಒಂದು ಪ್ರಶ್ನೆಯಾಯಿತು! ಇರಲಿ ಬಿಡಿ, ಮುಂದಕ್ಕೆ ಹೋಗುವ. ಅರೇ! ಹೊರಟೇ ಬಿಟ್ರಾ? ಬೇಡ ನಿಲ್ಲಿ. ಮುಂದಕ್ಕೆ ಹೋಗುವಾ ಅಂದ್ರೆ, ಬರಹದಲ್ಲಿ ಮುಂದೆ ಹೋಗುವಾ ಅಂತ. ಪ್ರಶ್ನೆ ಕೇಳದಿದ್ದರೆ ಹೀಗೇ ಆಗುವುದು ನೋಡಿ. ಯಾರಿಂದಲಾದರೂ, ಯಾವುದಾದರೂ ವಿಶಯವನ್ನು ಹೊರ ತೆಗೆಯಬೇಕಾದಲ್ಲಿ, ಪ್ರಶ್ನೆ ಮಾಡಬೇಕಾದದ್ದು ಅನಿವಾರ‍್ಯ. ಇದನ್ನೇ ಪೋಲೀಸ್ ಇಲಾಕೆಯವರು ಮಾಡುವುದು. ಪ್ರಶ್ನೆಗಳಿಗೂ ಜಗ್ಗದೇ ಇರುವವರಿಗೆ ಅವರುಗಳು ನೀಡುವ ಎರಡನೇ ಹಂತ… ಅದು ಇಲ್ಲಿ ಬೇಡ ಬಿಡಿ. ಪ್ರಶ್ನೆ ಮಾಡುತ್ತಾ ಮಾಡುತ್ತಾ ಉತ್ತರಿಸುವವರನ್ನು ತಬ್ಬಿಬ್ಬು ಮಾಡಿ, ಅವರು ನೀಡಿದ ಉತ್ತರದಲ್ಲಿ ಅವರನ್ನೇ ಸಿಕ್ಕಿಸುವುದೂ, ಸರಿಯಾದ ಉತ್ತರ ಹೊರಗೆಳೆಯುವುದು ಒಂದು ಕಲೆಯಲ್ಲವೇ? ಮತ್ತೆ ಪ್ರಶ್ನೆ! ಹ್ಹಹ್ಹಹ್ಹ… ಪ್ರಶ್ನೆ ಮಾಡದೆ ಉತ್ತರ ಪಡೆಯುವುದು ಸಾದ್ಯವೇ? ಕಂಡಿತಾ ಇಲ್ಲ, ಯೋಚಿಸಿ.

ಹುಟ್ಟಿದಾಗಿನಿಂದ, ಕೊನೆ ಉಸಿರೆಳೆಯುವವರೆಗೂ ಮನುಶ್ಯ ಎದುರಿಸುವ ಪ್ರಶ್ನೆಗಳು ಅಸಂಕ್ಯಾತ. ಪ್ರಶ್ನೆಗಳಲ್ಲೇ ಮುಳುಗೇಳುತ್ತಿರುತ್ತಾನೆ. ಯಾಕೆ? ಏನು? ಎತ್ತ? ಎಲ್ಲಿ? ಹೌದಾ? ಇಲ್ವಾ? ಇದೆಯಾ? ಅಲ್ವಾ? – ಅಬ್ಬಬ್ಬಾ ಪ್ರಶ್ನೆಗಳು ಪ್ರಶ್ನೆಗಳು! ಮಗು ಹುಟ್ಟಿದ ತಕ್ಶಣ ಸಂಬಂದಿಕರಿಂದ, ವಿಶಯ ತಿಳಿದವರಿಂದ ಬರುವ ಮೊದಲ ಪ್ರಶ್ನೆ ‘ಮಗು ಗಂಡೋ? ಹೆಣ್ಣೋ?’ ಎಂದು. ಅಲ್ಲಿಂದ ಮಗುವಿನ ಬಗ್ಗೆ ಪ್ರಾರಂಬವಾಗುವ ಪ್ರಶ್ನೆಗಳು ಮುಗಿಯುವುದೇ ಇಲ್ಲ. ನಂತರದ್ದು, ನಾರ‍್ಮಲ್ಲೋ? ಸಿಸೇರಿಯನ್ನೋ? ಇದರ ಜೊತೆಗೆ ಪುಂಕಾನುಪುಂಕವಾಗಿ ಪ್ರಶ್ನೆಗಳ ಸುರಿಮಳೆ ಶುರುವಾಗುತ್ತೆ. ‘ಡಾಕ್ಟರ‍್ ಯಾರು? ಆಸ್ಪತ್ರೆ ಕರ‍್ಚು ಎಶ್ಟಾಯಿತು? ಅಯ್ಯೋ ಅಶ್ಟೊಂದಾ? ಇಶ್ಟು ದೂರ ಯಾಕೆ ಬಂದ್ರಿ? ಮನೆ ಹತ್ರ ಯಾವ್ದೂ ಸರಿಯಾದ ಆಸ್ಪತ್ರೆ ಇರಲಿಲ್ಲವಾ?’ ಇತ್ಯಾದಿ. ಹುಟ್ಟು ಸಾವಿನ ಮದ್ಯೆ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಇದುವರೆಗೂ ಯಾರೂ ಲೆಕ್ಕವಿಟ್ಟಂತೆ ಕಾಣುವುದಿಲ್ಲ. ಇಡಲು ಪ್ರಾರಂಬಿಸಿದರೆ ಲೆಕ್ಕ ತಪ್ಪುವುದಂತೂ ಗ್ಯಾರಂಟಿ.

ಮರಣಿಸುವ ಮುನ್ನ ಆಸ್ಪತ್ರೆಯಲ್ಲಿ ನೋಡಲು ಬರುವವರು ದೈರ‍್ಯ, ಸಾಂತ್ವನ ಹೇಳುವ ಬದಲಿಗೆ ‘ಯಾಕೇ? ಏನಾಯ್ತು? ಬಿಪಿನಾ? ಶುಗರ‍್ರಾ? ಎಶ್ಟಾಗಿದೆ ವಯಸ್ಸು? ಎಂಬತ್ತಾ?’ ಇದೂ ಪ್ರಶ್ನೆಯೇ! ಅವರ ಪ್ರಕಾರ ಎಂಬತ್ತಾದರೆ ಮರಣಿಸಲು ಪಕ್ವವಾದ ವಯಸ್ಸು. ಮನುಶ್ಯ ತನ್ನ ಜೀವಿತಾವದಿಯಲ್ಲಿ ಉತ್ತರಿಸಬೇಕಾದ ಪ್ರಶ್ನೆಗಳ ಸಂಕ್ಯೆ ಎಶ್ಟೆಂದರೆ, ತೆಗೆದುಕೊಂಡು, ಹೊರಹಾಕಿದ ಶ್ವಾಸದ ಸಂಕ್ಯೆಗಿಂತಲೂ ಹೆಚ್ಚು. ಮನೆಯವರಿಂದ, ಅಪ್ಪ ಅಮ್ಮರಿಂದ, ಪರೀಕ್ಶೆಗಳಲ್ಲಿ, ಸಂದರ‍್ಶನಗಳಲ್ಲಿ, ಬಾಸ್ ನಿಂದ, ಮಕ್ಕಳಿಂದ ಕೊನೆಗೆ ಮಡದಿಯಿಂದ ಹೀಗೆ, ಹಲವರಿಂದ ಹತ್ತು ಹಲವು ದಿಕ್ಕುಗಳಿಂದ ಪ್ರಶ್ನೆಗಳ ಸುರಿಮಳೆಯನ್ನು ಎದಿರಿಸಬೇಕಾಗುತ್ತದೆ.

ಪರೀಕ್ಶೆಗಳನ್ನು ಎದುರಿಸುವಾಗ, ಒಂದು ಪದದಲ್ಲಿ ಉತ್ತರಿಸಿ, ಒಂದು ವಾಕ್ಯದಲ್ಲಿ ಉತ್ತರಿಸಿ, ಅರ‍್ದ ಪುಟದಶ್ಟು ಉತ್ತರ ಬರೆಯಿರಿ, ಹೀಗೆ ಹಲವು ಪ್ರಶ್ನೆಗಳನ್ನು ಕೇಳುವುದು ಸಹಜ. ಜೀವನದಲ್ಲೂ ಇದು ಕಂಡು ಬರುತ್ತದೆ. ಉದಾಹರಣೆಗೆ, ಮಡದಿ ಕೋಪಿಸಿಕೊಂಡಾಗ ಎಶ್ಟೇ ದೊಡ್ಡ ಪ್ರಶ್ನೆ ಕೇಳಿದರೂ ಬರುವ ಉತ್ತರಗಳು ‘ಹೌದು, ಇಲ್ಲ, ಆಯ್ತು, ಗೊತ್ತಿಲ್ಲ, ಬೇಡ’ ಎಂದು. ಇನ್ನೂ ಕೆಲವರಿರುತ್ತಾರೆ, ಅವರಿಗೆ ನೀವು ಯಾವುದೇ ಪ್ರಶ್ನೆಯನ್ನಾದರೂ ಕೇಳಿ ಅವರು ಮರುಪ್ರಶ್ನೆಯಲ್ಲೇ ಉತ್ತರಿಸಿರುತ್ತಾರೆ. ಅವರಿಂದ ನೇರ ಉತ್ತರ ಮರೀಚಿಕೆಯೇ!

ಈಗ ಈ ಬರಹ ಓದಿ ಮುಗಿಸಿದಿರಿ. ಹೇಳಿ, ನಿಮ್ಮಿಂದ ಯಾವ ಪ್ರಶ್ನೆಯನ್ನು ನಿರೀಕ್ಶಿಸಬಹುದು? ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರ ಹುಡುಕಿಕೊಂಡು ಬರ‍್ತೀನಿ, ಆಯ್ತಾ? 🙂

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks