ಕನ್ನಡಿಯ ಕಡಲ ತೀರ – ಚಿಚಿಬುಗಹಮಾ

– .

ಚಿಚಿಬುಗಹಮಾ ಕಡಲ ತೀರ ಇತ್ತೀಚಿನವರೆಗೂ ಯಾರ ದ್ರುಶ್ಟಿಗೂ ಬೀಳದೆ ಅಜ್ನಾತವಾಗಿತ್ತು. 2016ರಲ್ಲಿ ಪ್ರವಾಸೋದ್ಯಮ ಸಂಸ್ತೆಯೊಂದು ಆಯೋಜಿಸಿದ್ದ ಚಾಯಾಚಿತ್ರ ಸ್ಪರ‍್ದೆಯಲ್ಲಿ ಈ ಕಡಲ ತೀರದ ಚಿತ್ರ ಸಹ ಸೇರಿತ್ತು. ಆ ಚಿತ್ರ ತೀರ‍್ಪುಗಾರರನ್ನು ದಂಗುಬಡಿಸಿತ್ತು. ಚಾಯಾಗ್ರಾಹಕ ಆ ಚಿತ್ರದಲ್ಲಿ ಇಬ್ಬರು ಮಕ್ಕಳು ಪ್ರಶಾಂತ ನೀರಿನ ಕನ್ನಡಿಯಲ್ಲಿ ಪ್ರತಿಬಿಂಬಿಸುವುದನ್ನು ಬಹಳ ಸೊಗಸಾಗಿ ಸೆರೆಹಿಡಿದಿದ್ದ. ಈ ಚಿತ್ರ ಕಂಡ ಸ್ತಳೀಯ ಪ್ರವಾಸಿಗರು  ಹುಚ್ಚೆದ್ದು ಕುಣಿದಿದ್ದರು. ಕುತೂಹಲ ತಡೆಯಲಾರದೆ ಸಾವಿರಾರು ಪ್ರವಾಸಿಗರು ಈ ಅದ್ಬುತವನ್ನು ತಮ್ಮ ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿಯಲು ಚಿಚಿಬುಗಹಮಾ ಕಡಲ ತೀರಕ್ಕೆ ಬಂದು, ನೂರಾರು ಪೋಟೋಗಳನ್ನು ಕ್ಲಿಕ್ಕಿಸಿ ಸಂತಸಪಟ್ಟರು. ಈಗ ಚಿಚಿಬುಗಹಮಾ ಕಡಲ ತೀರ ಅತಿ ಹೆಚ್ಚು ಪ್ರವಾಸಿಗರನ್ನು ಆಕರ‍್ಶಿಸುವ ಕೇಂದ್ರವಾಗಿದೆ.

ಚಿಚಿಬುಗಹಮಾ ಕಡಲ ತೀರ ಇರುವುದು ಜಪಾನಿನ ಶಿಕೋಕು ದ್ವೀಪದ, ಕಗಾವಾ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟ ಮಿಟೊಯೊ ನಗರದ ಸನಿಹದಲ್ಲಿ.  ಈ ಕಡಲ ತೀರದಲ್ಲಿನ ಮರಳು ಬಂಗಾರದ ಬಣ್ಣವಾಗಿದ್ದು, ಸಮುದ್ರದ ತೆರೆಗಳ ನಿರಂತರ ಏರಿಳಿತದ ಪರಿಣಾಮ ಅಲ್ಲಲ್ಲಿ ಸಣ್ಣ ಸಣ್ಣ ಕೊಳಗಳು ರೂಪುಗೊಂಡಿರುತ್ತವೆ. ಸೂರ‍್ಯಾಸ್ತದ ಸಮಯದಲ್ಲಿ ಇಂತಹ ಕೊಳಗಳಲ್ಲಿ ನಿಂತ ನೀರು ಕನ್ನಡಿಯಾಗಿ ಮಾರ‍್ಪಟ್ಟು ಅದ್ಬುತವಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ.

ಅತಿ ಕಡಿಮೆ ಅವದಿಯಲ್ಲಿ ಚಿಚಿಬುಗಹಮಾ ಕಡಲತೀರವು ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ಜನಪ್ರಿಯತೆಗೆ ಇಂದಿನ ಸಾಮಾಜಿಕ ಜಾಲತಾಣದ ಕೊಡುಗೆ ಅಪಾರ. ಇಂದು, “ಬೀಚ್ ಆಪ್ ಮಿರರ‍್ಸ್” ಎಂದು ಕರೆಯಲ್ಪಡುವ ಈ ಕಡಲ ತೀರವನ್ನು, ಬೊಲಿವಿಯಾದಲ್ಲಿನ ವಿಶ್ವದ ಅತಿ ದೊಡ್ಡ ಉಪ್ಪಿನ ಸಮತಟ್ಟಾದ ‘ಸಲಾ‍ರ್ ಡಿ ಯುಯುನಿಯ’ ದ ಹೊಳೆಯುವ ಸೌಂದರ‍್ಯಕ್ಕೆ ಹೋಲಿಸಲಾಗುತ್ತದೆ.

ಚಿಚಿಬುಗಹಮಾ ಕಡಲ ತೀರವು ಸರಿ ಸುಮಾರು ಒಂದು ಮೈಲಿಗಳಶ್ಟು ಉದ್ದ ವ್ಯಾಪಿಸಿದೆ. 1995ರಿಂದ ಇದು ಸ್ತಳೀಯ ಸಂಗವೊಂದರ ಸುಪರ‍್ದಿಯಲ್ಲಿದೆ. ಈ ಸಂಗದ ದ್ಯೇಯ, ಈ ಕಡಲ ತೀರದಲ್ಲಿ ಸ್ವಚ್ಚತೆಯನ್ನು ಕಾಪಾಡುವುದು. ಪ್ರವಾಸಿಗರು/ಸಂದರ‍್ಶಕರು, ಈ ಕಡಲ ತೀರದ ಎತ್ತರದ ಪ್ರದೇಶದಲ್ಲಿ ನಿಂತು, ಈ ಕಡಲತೀರದ ವಿಹಂಗಮ ಮತ್ತು ಅದ್ಬುತ ನೋಟವನ್ನು ಆಸ್ವಾದಿಸಬಹುದು. ಈಗಾಗಲೇ ಹೇಳಿದಂತೆ ಚಿಚಿಬುಗಹಮಾ ಕಡಲತೀರವು ಮಿಟೊಯೊ ನಗರದ ಸನಿಹವೇ ಇರುವ ಕಾರಣ, ನಗರದ ರೈಲು ನಿಲ್ದಾಣದಿಂದ ನಿಯೋ ಲೈನ್ ಬಸ್ ಮೂಲಕ ಕೇವಲ ಇಪ್ಪತ್ತೈದು ನಿಮಿಶದ ಪ್ರಯಾಣದಲ್ಲಿ ಕಡಲ ತೀರವನ್ನು ತಲುಪಬಹುದು. ಚಿಚಿಬುಗಹಮಾ ಕಡಲ ತೀರ ನೀಲಿ ಆಕಾಶ ಮತ್ತು ಪ್ರಶಾಂತ ಪೆಸಿಪಿಕ್ ಸಾಗರ ಒಂದಾಗುವ ಅದ್ಬುತ ದ್ರುಶ್ಯದ ಸ್ತಳವೆಂದು ಈಗಾಗಲೇ ಪ್ರಕ್ಯಾತಿಯನ್ನು ಹೊಂದಿದ್ದು, ಇದರ ಉನ್ನತೀಕರಣಕ್ಕೆ ಕ್ರಮವಿಡಲಾಗುತ್ತಿದೆ.

ಈ ಕಡಲ ತೀರ ಚಾಯಾಗ್ರಾಹಕರ ಸ್ವರ‍್ಗವೆನಿಸಿದ್ದು, ಪ್ರತಿ ಬೇಸಿಗೆಯಲ್ಲೂ ಅನೇಕ ಪ್ರವಾಸಿಗರನ್ನು ಸೆಳೆಯುತ್ತದೆ. ನಂಬಲಾಗದ ನೈಸರ‍್ಗಿಕ ಕನ್ನಡಿಯಲ್ಲಿ ಪ್ರತಿಬಿಂಬವನ್ನು ಸೆರೆಹಿಡಿಯುವ ತಾಣವಾಗಿ ಪ್ರಸಿದ್ದವಾಗಿದೆ. ಈ ಕಡಲ ತೀರದಲ್ಲಿ ಗಾಳಿಯು ಹೆಚ್ಚಿನ ವೇಗದಲ್ಲಿರದೆ ನೀರನ ಮೇಲ್ಮೈಯನ್ನು ಕದಡದೆ ಇದ್ದಲ್ಲಿ, ಹಾಗೂ ಆಕಾಶ ತಿಳಿಯಾಗಿದ್ದಲ್ಲಿ, ಕಡಲ ತೀರದಲ್ಲಿನ ಸಣ್ಣ ಸಣ್ಣ ಕೊಳಗಳಲ್ಲಿನ ನೀರು ಅದ್ಬುತವಾಗಿ ಪ್ರತಿಪಲಿಸಿ ನೈಸರ‍್ಗಿಕ ಕನ್ನಡಿಯಾಗುತ್ತದೆ. ಇದರ ಸೌಂದರ‍್ಯವನ್ನು ಅನುಬವಿಸಲು ತಾಳ್ಮೆಯಿರಬೇಕಶ್ಟೆ. ಸೂರ‍್ಯಾಸ್ತದ ಸಮಯದಲ್ಲಿ ಇಲ್ಲಿನ ಅತ್ಯದ್ಬುತ ದ್ರುಶ್ಯಾವಳಿಗಳು ಮನ ಸೂರೆಗೊಳ್ಳುವುದಲ್ಲದೆ, ಜಪಾನಿನ 100 ಅದ್ಬುತ ಸೂರ‍್ಯಾಸ್ತದ ಸ್ತಳಗಳಲ್ಲಿ ಒಂದು ಎಂದು ಇದನ್ನು ಹೆಸರಿಸಬಹುದು.

ಈ ಕಡಲ ತೀರದಲ್ಲಿ ಪಾಲಿಸಬೇಕಾದ ನಿಯಮಗಳೆಂದರೆ,
1. ಚಾಯಾಚಿತ್ರಗ್ರಾಹಕರು ಚಿತ್ರಗಳನ್ನು ತೆಗೆಯುವಾಗ ಅಪರಿಚಿತರ ಚಿತ್ರ ಸಹ ಅದರಲ್ಲಿ ಸೆರೆಯಾಗಬಹುದು. ಅಂತಹ ಸಮಯದಲ್ಲಿ ಅದನ್ನು ಬೇರೆಲ್ಲಾದರೂ ಪ್ರದರ‍್ಶಿಸಬೇಕಾದಲ್ಲಿ ಆ ಪೋಟೋದಲ್ಲಿನ ಅಪರಿಚಿತರ ಅನುಮತಿ ಪಡೆಯುವುದು ಸೂಕ್ತ.
2. ಸ್ತಳೀಯ ಸ್ವಯಂಸೇವಕರು ಈ ಕಡಲ ತೀರವನ್ನು ಸ್ವಚ್ಚವಾಗಿಡಲು ಕಳೆದ 20 ವರ‍್ಶಗಳಿಂದ ಶ್ರಮಿಸುತ್ತಿದ್ದಾರೆ. ಆದ್ದರಿಂದ ಪ್ರವಾಸಿಗರು ಕಸವನ್ನು ಎಲ್ಲಂದರಲ್ಲಿ ಹಾಕದೆ ಸ್ವಚ್ಚತೆಯನ್ನು ಕಾಪಾಡಲು ಸಹಕರಿಸಬೇಕಿದೆ. ಇದು ಕಡ್ಡಾಯ.
3. ಕಡಲ ತೀರದ ಶೌಚಾಲಯಗಳಲ್ಲಿ ಪ್ಲಶ್ ಇರುವುದಿಲ್ಲ ಮತ್ತು ಅದನ್ನು ಉಪಯೋಗಿಸುವವರೇ ಅದರ ಸ್ವಚ್ಚತೆಯ ಜವಾಬ್ದಾರರು.
4. ತೇವದ ಮರಳಿರುವ ಕಾರಣ, ಮಳೆ ಬೂಟುಗಳನ್ನು ಬಳಸುವುದು ಒಳಿತು. ಹಾಗೆ ಬೇಸಿಗೆಯಲ್ಲಿ ಬೀಚ್ ಸ್ಯಾಂಡಲ್ಸ್ ಗಳು ಉಪಯೋಗಕ್ಕೆ ಬರುತ್ತವೆ ಮತ್ತು ಟವಲ್ ಗಳೂ ಸಹ ಅವಶ್ಯಕ.

(ಮಾಹಿತಿ ಮತ್ತು ಚಿತ್ರಸೆಲೆ: shikoku-tourism.com, chushikokuandtokyo.org, independent.co.uk, odditycentral.com, thesmartlocal.jp, instagram.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks