ಉಪ್ಪು – ಹಿತಮಿತವಾಗಿ ಬಳಸಿ

– ಸಂಜೀವ್ ಹೆಚ್. ಎಸ್.

ಉಪ್ಪು

ಅಡುಗೆಮನೆಯ ಕಾಯಂ ಸದಸ್ಯ ಉಪ್ಪು. ಅಡುಗೆ ಮನೆಯಲ್ಲಿ ಏನಿಲ್ಲವೆಂದರೂ ಸದಾ‌ ಉಪ್ಪು ಇದ್ದೇ ಇರುತ್ತದೆ. ಯಾವುದೇ ಸಬೆ ಸಮಾರಂಬದ ಊಟದ ಪಂಕ್ತಿಯಲ್ಲಿ ಮೊಟ್ಟಮೊದಲಿಗೆ ಎಲೆಯ ಮೇಲೆ ಕಾಣಿಸಿಕೊಳ್ಳುವುದು ಉಪ್ಪು. ವೈಜ್ನಾನಿಕವಾಗಿ ಉಪ್ಪು ಎಂಬುದು ಒಂದು ಅಯಾನಿಕ್ ಮಿಶ್ರಣ. ಇದರಲ್ಲಿ ಸೋಡಿಯಂ ಹಾಗೂ ಕ್ಲೋರಿನ್ ತಲಾ ಒಂದು ಅಣುಗಳು 1:1 ರ ಅನುಪಾತದಲ್ಲಿ ಸೇರಿರುತ್ತವೆ. ಆದುದರಿಂದಲೇ ಇದರ ರಾಸಾಯನಿಕ ಸಂಕೇತ ಸೋಡಿಯಂ ಕ್ಲೋರೈಡ್ (NaCl) ಎಂದಾಗಿದೆ. ಉಪ್ಪಿನಲ್ಲೂ ಬಹಳ ವಿದಗಳಿವೆ. ಕಲ್ಲುಪ್ಪು, ಪುಡಿಯುಪ್ಪು (ಟೇಬಲ್‌ ಸಾಲ್ಟ್‌), ಕಪ್ಪುಪ್ಪು, ಸಾವಯವ ಉಪ್ಪು, ಹಿಮಾಲಯನ್ ಗುಲಾಬಿ ಉಪ್ಪು, ಕೆಂಪು ಹವಾಯಿಯನ್ ಸಾಲ್ಟ್, ಸಾಲ್ಟ್ ಪ್ಲ್ಯೂರ್ ಡಿ ಸೆಲ್, ಕಾಲಾ ನಮಕ್ ಉಪ್ಪು ಹೀಗೆ ಹತ್ತಾರು ವಿದಗಳಿವೆ.

ಕೈ ಅಳತೆ ಮೀರಿದರೆ, ಎಶ್ಟೇ ಸೊಗಸಾಗಿ ಅಡುಗೆ ಮಾಡಿದರೂ ಕೂಡ ಅಡುಗೆ ರುಚಿಸುವುದಿಲ್ಲ. “ಉಪ್ಪು ಎಲ್ಲಾ ಸರಿಯಾಗಿದೆಯಾ, ಒಂದು ಚೂರು ನೋಡಿ ಹೇಳಿ”?. ಇದು ಎಲ್ಲಾ ಅಡುಗೆಮನೆಯ ಕಾಯಂ ಡೈಲಾಗ್. ಉಪ್ಪು ನಮ್ಮ ದೈನಂದಿನ ಆಹಾರಗಳಲ್ಲಿ ಅತ್ಯಾವಶ್ಯಕ ಅನಿವಾರ‍್ಯ ಬಾಗ; ಉಪ್ಪು ನೀಡುವ ರುಚಿ ಮತ್ತಾವುದು ನೀಡಲು ಸಾದ್ಯ? “ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂದುವಿಲ್ಲ” ಎಂಬ ಗಾದೆ ಮಾತು ಉಪ್ಪಿನ ಮಹತ್ವವನ್ನು ತಿಳಿಸುತ್ತದೆ.

ಉಪ್ಪಿನ ಮಹತ್ವ

ಉಪ್ಪು ದೇಹದಲ್ಲಿ ಕನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಬೇಕಾಗಿರುವ ಪ್ರಮುಕ ಅಂಶವಾಗಿದೆ. ದೇಹದ ಪ್ರತಿಯೊಂದು ಅಂಗಕ್ಕೂ ಉಪ್ಪು ಬೇಕು. ಮೂಳೆ ಸಾಂದ್ರತೆ, ಸರಿಯಾದ ರಕ್ತಚಲನೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಉಪ್ಪು ಸಹಕಾರಿಯಾಗಿದೆ. ಉಪ್ಪಿನ ಮಹತ್ವ ಅದನ್ನು ಅರಿತವರಿಗೆ ಮಾತ್ರ ಗೊತ್ತು. ಉಪ್ಪಿನ ಮಹತ್ವ ಗೊತ್ತಿದ್ದರೂ ಅತವಾ ಗೊತ್ತಿಲ್ಲದಿದ್ದರೂ ಕೂಡ ನಾಲಿಗೆಗೆ ರುಚಿ ಕೊಡುವ ಉಪ್ಪನ್ನು ತುಸು ಹೆಚ್ಚಾಗಿಯೇ ಚಪ್ಪರಿಸಿಕೊಂಡು ಸೇವಿಸುವವರು ನಾವು. ಹಾಗಾಗಿ ನಾವಿಲ್ಲಿ ಉಪ್ಪಿನ ಮಹತ್ವಕ್ಕಿಂತ ಹೆಚ್ಚಾಗಿ ಅದರ ಅಡ್ಡ ಪರಿಣಾಮಗಳು ಮತ್ತು ವಾಸ್ತವದ ಬಗ್ಗೆ ತಿಳಿಯೋಣ.

ಹೆಚ್ಚು ಉಪ್ಪಿನ ಸೇವನೆಯ ಅಡ್ಡಪರಿಣಾಮಗಳು

ಉಪ್ಪನ್ನು ಸ್ಲೋ ವೈಟ್ ಪಾಯಿಸನ್ (slow white poison) ಎಂದೇ ಕರೆಯಲಾಗುತ್ತದೆ. ಉಪ್ಪಿನ ಅತಿಯಾದ ಸೇವನೆ ಶರೀರಕ್ಕೆ ಹಾನಿಯನ್ನುಂಟುಮಾಡುತ್ತದೆ. ಆಹಾರದಲ್ಲಿ ಹೆಚ್ಚಾಗಿ ಉಪ್ಪು ತೆಗೆದುಕೊಳ್ಳುವುದರಿಂದ ರಕ್ತದೊತ್ತಡದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಮತ್ತು ಕಾಲಾನಂತರದಲ್ಲಿ ಇದು ಹ್ರುದಯದ ರಕ್ತನಾಳಗಳ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಅದಿಕ ಉಪ್ಪು ಸೇವನೆ ಕಾಲಾನಂತರದಲ್ಲಿ ಮೂತ್ರಪಿಂಡಗಳ ಹಾನಿ ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ಅದಿಕ ರಕ್ತದೊತ್ತಡವು ಅಪದಮನಿಗಳನ್ನು ಗಟ್ಟಿಗೊಳಿಸುತ್ತದೆ, ಇದರಿಂದಾಗಿ ರಕ್ತ ಮತ್ತು ಆಮ್ಲಜನಕದ ಹರಿವನ್ನು ಕಡಿಮೆ ಮಾಡುತ್ತದೆ. ಇದು ಆಮ್ಲಜನಕದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಚರ‍್ಮವನ್ನು ಒಣಗಿಸುವ ಬದಲು ಸುಕ್ಕುಗಳನ್ನು ವೇಗವಾಗಿ ಉಂಟುಮಾಡುತ್ತದೆ. ಮುಕದಲ್ಲಿ ಕೊಬ್ಬು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜೊತೆಗೆ ‘ಆಸ್ಟಿಯೋಪೊರೊಸಿಸ್ ‘ ಮತ್ತು ತಲೆನೋವಿಗೂ ಕೂಡ ಕಾರಣವಾಗುತ್ತದೆ.

ಇತ್ತೀಚಿನ ಅದ್ಯಯನಗಳು ನಮ್ಮ ದೇಹದ ತೂಕ ಹೆಚ್ಚಾಗುವುದಕ್ಕೆ ಸೋಡಿಯಮ್ಮನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದೇ ಕಾರಣ ಎಂದು ತಿಳಿಸಿವೆ. “ಉಪ್ಪು ತಿಂದವನು ನೀರು ಕುಡಿಯಲೇಬೇಕು” ಎಂಬ ಗಾದೆ ವೈಜ್ನಾನಿಕವಾಗಿ ನೂರಕ್ಕೆ ನೂರರಶ್ಟು ಸತ್ಯ. ಹೆಚ್ಚು ಉಪ್ಪು ದೇಹದ ನೀರಿನ ಇರುವಿಕೆಯ ಮೇಲೆ ಅಡ್ಡ ಪರಿಣಾಮ ಬಿರಿ ದೇಹದ ಬಹುತೇಕ ಅಂಗಾಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ. ಉಪ್ಪಿನಿಂದ ಆರೋಗ್ಯದ ಮೇಲೆ ಹಲವಾರು ರುಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.”ಅತಿಯಾದರೇ ಎಲ್ಲವೂ ವಿಶವಾಗುತ್ತದೆ”, ಅಂತಹುದರಲ್ಲಿ ಇದು “ಬಿಳಿ ವಿಶ”, ಇದನ್ನು ಅತಿಯಾಗಿ ಸೇವಿಸಿದರೆ ವಿಶ ಇನ್ನಶ್ಟು ಹೆಚ್ಚಾಗುತ್ತದೆ.

ಉಪ್ಪಿನ ಬಳಕೆ ಮಿತವಾಗಿರಲಿ

ಉಪ್ಪನ್ನು ನಮ್ಮ ಹಿರಿಯರು, ಮೂಲನಿವಾಸಿಗಳು ಕೂಡ ಬಳಸುತ್ತಿದ್ದರು ಎಂಬುದು ಎಶ್ಟು ನಿಜವೋ, ಬಹಳ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಅವರು ಬಳಸುತ್ತಿದ್ದರು ಎಂಬುದು ಕೂಡ ಅಶ್ಟೇ ನಿಜ. ಅಂದರೆ ಇಂದು‌ ನಾವು ಅವಶ್ಯಕತೆಗಿಂತ ಹೆಚ್ಚಿನ ಉಪ್ಪಿನ ಸೇವನೆಯನ್ನು ಮಾಡುತ್ತಿದ್ದೇವೆ. ವಿಶ್ವ ಆರೋಗ್ಯ ಸಂಸ್ತೆ ಪ್ರಕಾರ ಒಬ್ಬ ಮನುಶ್ಯನಿಗೆ ದಿನಕ್ಕೆ 5 ಗ್ರಾಂ ಉಪ್ಪು ಸಾಕು, ಆದರೆ ಪ್ರತಿನಿತ್ಯ ಇದರ ಎರಡರಶ್ಟು ಅಂದರೆ ಸರಾಸರಿ 11 ಗ್ರಾಮ್ನಶ್ಟು ಸೇವನೆ ಮಾಡುತ್ತಿದ್ದೇವೆ. ಬದಲಾಗಿರುವ ದೈನಂದಿನ ಆಹಾರ ಕ್ರಮದಿಂದಾಗಿ ಅದಿಕ ಉಪ್ಪು ಸೇವನೆಗೆ ದಾಸರಾಗಿದ್ದೇವೆ, ಸಂಸ್ಕರಿಸಿದ ಆಹಾರ ಪದಾರ‍್ತಗಳಲ್ಲಿಯೂ ಕೂಡ ಉಪ್ಪಿನ ಬಳಕೆ ಇರುವುದರಿಂದ ಅಂತಹ ಪದಾರ‍್ತಗಳನ್ನು ಸೇವಿಸಿದರೆ ದೇಹಕ್ಕೆ ಉಪ್ಪು ಸೇರುತ್ತದೆ. ಶೇಕಡ 80ರಶ್ಟು ದೇಹಕ್ಕೆ ಬೇಕಾಗಿರುವ ಉಪ್ಪಿನಂಶ ಮನೆಯಲ್ಲಿ ಮಾಡುವ ಇತರ ಆಹಾರ ಪದಾರ‍್ತಗಳ ಮೂಲಕವೇ ದೇಹಕ್ಕೆ ಒದಗುತ್ತದೆ, ನೈಸರ‍್ಗಿಕವಾಗಿ ಹಲವು ಆಹಾರ ಪದಾರ‍್ತಗಳಲ್ಲಿಯೂ ಕೂಡ ಸೋಡಿಯಂ ಅಂಶ ಇರುತ್ತದೆ. ನೈಸರ‍್ಗಿಕವಾಗಿ ಒದಗಿಬಂದ ಸೋಡಿಯಂ ಅಂಶವೇ ನಮ್ಮ ದೇಹಕ್ಕೆ ಸಾಕಾಗಿಬಿಡುತ್ತದೆ. ಹೀಗಿರುವಾಗ, ಕೆಲವರು ಅನ್ನ ಮಾಡುವಾಗ ಕೂಡ ಉಪ್ಪನ್ನು ಉಪಯೋಗಿಸುತ್ತಾರೆ. ಇದರ ಮೇಲೆ ಮತ್ತಶ್ಟು ಉಪ್ಪನ್ನು ಹಾಕಿಕೊಂಡು ತಿನ್ನುವ ಅಬ್ಯಾಸವೂ ಕೆಲವರಿಗಿದೆ. ಉಪ್ಪಿನ ಬದಲಿಗೆ ಮಸಾಲೆ, ನಿಂಬೆ ಹಣ್ಣಿನ ರಸ ಅತವಾ ಗಿಡಮೂಲಿಕೆಗಳ ಸ್ವಾದವನ್ನು ಆಹಾರಕ್ಕೆ ಬಳಸಬಹುದು, ಇವು ಆಹಾರಕ್ಕೆ ರುಚಿಯನ್ನು ಒದಗಿಸಿ ಅದ್ಬುತ ಸ್ವಾದವನ್ನು ಕೂಡ ಒದಗಿಸುತ್ತದೆ.

ಸಾವಿರಾರು ರುಚಿಯನ್ನು ಆಸ್ವಾದಿಸುವ, ನಾಲಿಗೆಯಲ್ಲಿರುವ ರುಚಿ ಮೊಗ್ಗುಗಳು (taste buds), ನಾವು ಯಾವುದನ್ನು ಅವುಗಳಿಗೆ ಅಬ್ಯಾಸ ಮಾಡಿಸುತ್ತೇವೂ ಅವು ಹಾಗೆಯೇ ರೂಪುಗೊಳ್ಳುತ್ತದೆ. ಸರಾಸರಿ ಹನ್ನೊಂದು ಗ್ರಾಮ್ನಶ್ಟು ಉಪ್ಪು ಸೇವಿಸುತ್ತಿರುವ ನಾವು ಅದನ್ನು ಅರ‍್ದದಶ್ಟು ಕಡಿಮೆಗೊಳಿಸುವ ಪ್ರತಿಜ್ನೆ ಮಾಡಬೇಕಾಗಿದೆ. ಮನಸಿದ್ದರೆ ಮಾರ‍್ಗ. ನಮ್ಮ ರುಚಿ ಮೊಗ್ಗುಗಳನ್ನು ನಮ್ಮ ಮನಸ್ಸಿನ ಹಿಡಿತಕ್ಕೆ ತೆಗೆದುಕೊಳ್ಳೋಣ. ಅಬ್ಯಾಸ ಆಗುವತನಕ ಕಶ್ಟ, ಆದರೆ ಒಮ್ಮೆ ಅಬ್ಯಾಸವಾಗಿಬಿಟ್ಟರೆ ಸಲೀಸಾಗಿಬಿಡುತ್ತದೆ.  “ಉಪ್ಪು-ರುಚಿಗೆ ತಕ್ಕಶ್ಟು” ಎಂಬುದು ಎಲ್ಲರ ಸಾಮಾನ್ಯ ಹೇಳಿಕೆ, ಆದರೆ ರುಚಿಗೆ ತಕ್ಕಶ್ಟು, ರುಚಿಗೆ ತಕ್ಕಶ್ಟು ಎಂದು ಪ್ರತಿನಿತ್ಯ ಹೆಚ್ಚು ಸೇವಿಸುತ್ತಾ ಹೋದರೆ ಮುಂದೊಂದು ದಿನ ಆ ರುಚಿಗೆ ಬೆಲೆ ಕಟ್ಟಬೇಕಾಗುತ್ತದೆ. ಕ್ರಮೇಣ ಉಪ್ಪಿನ ಸೇವನೆಯನ್ನು ಕಡಿತಗೊಳಿಸಿ ದೀರ‍್ಗಾವದಿ ಉತ್ತಮ ಆರೋಗ್ಯಕ್ಕೆ ಅಡಿಪಾಯವಿಡೋಣ.

ದಿನದ ಅಡಿಗೆಯಲ್ಲಿ ತುಸು ಚಿಟಿಕೆ ಉಪ್ಪು ಹೆಚ್ಚಾದರೂ ಕೂಡ ಊಟ ರುಚಿಸುವುದಿಲ್ಲ, ಅಂತಹುದರಲ್ಲಿ ದಿನ ಎರಡರಶ್ಟು ಉಪ್ಪು ಸೇವನೆ ಮಾಡಿದರೆ ದೇಹಕ್ಕೆ ರುಚಿಸುತ್ತದೆಯೇ? ಉಪ್ಪಿನ ವಿಚಾರದಲ್ಲಿ ಕೈಯಳತೆ ಮನಸ್ಸಿನ ಅಳತೆ ಚೆನ್ನಾಗಿದ್ದರೆ ಎಲ್ಲವೂ ಚೆಂದ. “ಉಪ್ಪು ರುಚಿಗೆ ತಕ್ಕಶ್ಟು ಎಂಬುವುದಕ್ಕಿಂತ ತುಸು ರುಚಿಗೆ ಕಡಿಮೆಯಶ್ಟು ಬಳಸೋಣ”, ಆರೋಗ್ಯಕರ ಜೀವನ ನಡೆಸೋಣ.

(ಚಿತ್ರಸೆಲೆ: flickr.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks