ವಿಜಯ್ ಬಾರದ್ವಾಜ್ – ಕರ‍್ನಾಟಕ ಕ್ರಿಕೆಟ್‌ನ ವಿಶೇಶ ಪ್ರತಿಬೆ

– ರಾಮಚಂದ್ರ ಮಹಾರುದ್ರಪ್ಪ.

ಆರು ದಶಕಗಳ ಒಂದು ದಿನದ ಅಂತರಾಶ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಬಾರತದ ಒಬ್ಬೇ ಒಬ್ಬ ಆಟಗಾರ ಮಾತ್ರ ಇದುವರೆಗೂ ಆಡಿದ ಚೊಚ್ಚಲ ಸರಣಿಯಲ್ಲೇ ಸರಣಿ ಶ್ರೇಶ್ಟ ಪ್ರಶಸ್ತಿ ಪಡೆದು ದಾಕಲೆ ಮಾಡಿದ್ದಾರೆ. ಸೊಗಸಾದ ಆಲ್ ರೌಂಡ್ ಪ್ರದರ‍್ಶನದಿಂದ ಆ ದಾಕಲೆ ಮಾಡಿದವರೇ ನಮ್ಮ ಕರ‍್ನಾಟಕದ ಹೆಮ್ಮೆಯ ಬಲಗೈ ಬ್ಯಾಟ್ಸ್ಮನ್ ಹಾಗೂ ಆಪ್ ಸ್ಪಿನ್ನರ್ ವಿಜಯ್ ಬಾರದ್ವಾಜ್. 1999 ರಲ್ಲಿ ನೈರೋಬಿಯಲ್ಲಿ ನಡೆದ ಎಲ್.ಜಿ ಕಪ್ ತ್ರಿಕೋನ ಸರಣಿಯಲ್ಲಿ ಈ ದಾಕಲೆ ಮಾಡಿ ಕರ‍್ನಾಟಕ ಕ್ರಿಕೆಟ್ ನ ಬವ್ಯ ಪರಂಪರೆಯನ್ನು ಅಂತರಾಶ್ಟ್ರೀಯ ಮಟ್ಟದಲ್ಲಿ ಮುಂದುವರೆಸಿಕೊಂಡು ಹೋಗುವ ಬರವಸೆ ನೀಡಿದವರು ನಮ್ಮ ಕನ್ನಡಿಗ ವಿಜಯ್ ರಾಗವೇಂದ್ರ ರಾವ್ ಬಾರದ್ವಾಜ್.

ಹುಟ್ಟು, ಎಳವೆಯ ಕ್ರಿಕೆಟ್ ಒಲವು

ಆಗಸ್ಟ್ 15, 1975 ರಂದು ರಾಗವೇಂದ್ರ ರಾವ್ ಮತ್ತು ಕುಮುದಿನಿ ದಂಪತಿಗಳ ಮಗನಾಗಿ ಬೆಂಗಳೂರಿನಲ್ಲಿ ವಿಜಯ್ ಬಾರದ್ವಾಜ್ ಹುಟ್ಟಿದರು. ಶಾಲೆಯ ದಿನಗಳಿಂದಲೇ ವಿದ್ಯಾಬ್ಯಾಸದಲ್ಲಿ ಮುಂದಿದ್ದ ಪುಟ್ಟ ವಿಜಯ್, ಗೆಳೆಯರೊಂದಿಗೆ ಬೆಂಗಳೂರಿನ ರಸ್ತೆಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದರು. ಹದಿಮೂರರ ಹರೆಯದಲ್ಲೇ ಸಿಟಿ ಕ್ರಿಕೆಟರ‍್ಸ್ ಕ್ಲಬ್ ತಂಡದ ಸದಸ್ಯರಾಗಿ, ವ್ರುತ್ತಿಪರ ಕ್ರಿಕೆಟರ್ ಆಗುವತ್ತ ಮೊದಲ ಹೆಜ್ಜೆ ಇಟ್ಟರು. ವಿಜಯ ಹೈಸ್ಕೂಲ್ ನಂತರ ವಿಜಯ ಕಾಲೇಜ್ ನಲ್ಲಿ ಶಿಕ್ಶಣ ಮುಂದುವರೆಸಿದ ಬಾರದ್ವಾಜ್ ಕ್ರಿಕೆಟ್ ನಲ್ಲೂ ಬೆಳೆಯುತ್ತಾ ಹೋದರು. ಒಮ್ಮೆ ಪೆಂಟಾಂಗುಲರ್ ಟೂರ‍್ನಿಯಲ್ಲಿ ಅವರ ಕ್ಲಬ್ ತಂಡ 50/9 ಗೆ ಕುಸಿದು ಸೋಲಿನ ಸುಳಿಯಲ್ಲಿದ್ದಾಗ ಕೊನೆಯ ವಿಕೆಟ್ ಗೆ 140 ರನ್ ಗಳ ಜೊತೆಯಾಟವಾಡಿ ತಂಡವನ್ನು ಪವಾಡದ ರೀತಿಯಲ್ಲಿ ಮೇಲೆತ್ತಿದ್ದರು. ಆ ಜೊತೆಯಾಟದಲ್ಲಿ ಅವರು 125 ರನ್ ಗಳಿಸಿ ತಮಗೆ ಒತ್ತಡದಲ್ಲಿ ಆಡುವ ಅಳವಿದೆ ಎಂದು ಎಳೆಯ ವಯಸ್ಸಿನಲ್ಲೇ ನಿರೂಪಿಸಿ ಗಮನ ಸೆಳೆದಿದ್ದರು. ಹೀಗೆ ಕೆ.ಎಸ್.ಸಿ.ಎ. ಮೊದಲ ಡಿವಿಶನ್ ಟೂರ‍್ನಿಗಳಲ್ಲಿ ಸ್ತಿರ ಪ್ರದರ‍್ಶನ ನೀಡಿ ಕರ‍್ನಾಟಕ ಕಿರಿಯರ ತಂಡಕ್ಕೆ ಆಯ್ಕೆಯಾಗುವುದರ ಜೊತೆಗೆ (ಅಂಡರ್ 19, 21, 23, 25) ತಂಡಗಳ ನಾಯಕ ಕೂಡ ಆದರು. ಈ ಹೊತ್ತಿನಲ್ಲಿ ವಿಜಯ್ ಮರ‍್ಚೆಂಟ್ ಟ್ರೋಪಿ, ಬುಚ್ಚಿ ಬಾಬು, ಸಿ.ಕೆ ನಾಯ್ಡು ಪಂದ್ಯಾವಳಿಗಳಲ್ಲಿ ರನ್ ಹೊಳೆ ಹರಿಸಿ ಸದ್ದು ಮಾಡಿದ ವಿಜಯ್ ಬಾರದ್ವಾಜ್ ರಣಜಿ ಟೂರ‍್ನಿಗೆ ಕರ‍್ನಾಟಕ ತಂಡದಲ್ಲಿ ಎಡೆ ಪಡೆದರು.

ರಣಜಿ ಕ್ರಿಕೆಟ್ ಬದುಕು

1994/95 ರಲ್ಲಿ ಆಂದ್ರ ಎದುರು ಬೆಂಗಳೂರಿನಲ್ಲಿ ಬಾರದ್ವಾಜ್ ತಮ್ಮ ಚೊಚ್ಚಲ ಪಂದ್ಯವಾಡಿದರು. ಮೊದಲ ಕೆಲವು ಪಂದ್ಯಗಳಲ್ಲಿ ರನ್ ಗಳಿಸದೆ ತಂಡದಲ್ಲಿ ಎಡೆ ಕಳೆದುಕೊಳ್ಳುವ ಒತ್ತಡದಲ್ಲಿದ್ದಾಗ ಬದ್ರಾವತಿಯಲ್ಲಿ ತಮಿಳು ನಾಡು ಎದುರು ಬರ‍್ಜರಿ ಶತಕ (122) ಗಳಿಸಿ ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ ಲಯ ಕಂಡುಕೊಂಡು ತಮ್ಮ ಅಳವನ್ನು ಸಾಬೀತು ಮಾಡಿದರು. ಒಳ್ಳೆಯ ಬ್ಯಾಟಿಂಗ್ ತಂತ್ರಗಾರಿಕೆ ಹೊಂದಿದ್ದ ಅವರು ಸಾಂಪ್ರದಾಯಿಕ ಬಗೆಯಲ್ಲಿ ನೇರ ಬ್ಯಾಟ್ ನಿಂದ ಆಡುವುದು ಮಾತ್ರವಲ್ಲದೆ ಅಗತ್ಯ ಬಿದ್ದಾಗ ಬಿರುಸಿನ ಹೊಡೆತಗಳನ್ನು ಕೂಡ ಆಡುತ್ತಿದ್ದದ್ದು ವಿಜಯ್ ಅವರ ಹೆಚ್ಚುಗಾರಿಕೆಯಾಗಿತ್ತು. ರಾಜ್ಯ ತಂಡ ಹದಿಮೂರು ವರುಶಗಳ ಬಳಿಕ 1995/96 ರಲ್ಲಿ ರಣಜಿ ಟೂರ‍್ನಿ ಗೆದ್ದಾಗ ಪೈನಲ್ ನಲ್ಲಿ ತಮಿಳು ನಾಡು ಎದುರು ಬಾರದ್ವಾಜ್ 146 ರನ್ ಗಳ ಕೊಡುಗೆ ನೀಡಿದರು. ಅದೇ ಸಾಲಿನ ಇರಾನಿ ಕಪ್‌ನಲ್ಲೂ 93 ರನ್ ಗಳಿಸಿ ಕರ‍್ನಾಟಕದ ಪ್ರಶಸ್ತಿ ಗೆಲುವಿನಲ್ಲಿ ಮುಕ್ಯ ಪಾತ್ರ ವಹಿಸಿದರು. ಬಳಿಕ 1997/98 ರ ರಣಜಿ ಗೆಲುವಿನಲ್ಲೂ ಉತ್ತರ ಪ್ರದೇಶ ಎದುರು ಪೈನಲ್ ನಲ್ಲಿ ಬಾರದ್ವಾಜ್ 122 ರನ್ ಸಿಡಿಸಿ ಮಿಂಚಿದರು. ಅದರ ಬೆನ್ನಲ್ಲೇ ಆ ಸಾಲಿನ ಇರಾನಿ ಕಪ್ ಅನ್ನು ರಾಜ್ಯ ತಂಡ ಮುಡಿಗೇರಿಸಿಕೊಂಡಾಗ ಅವರು 87 ರನ್ ಗಳಿಸುವುದರ ಜೊತೆಗೆ ಬೌಲರ್‌ ಆಗಿ 2 ವಿಕೆಟ್ ಕೂಡ ಪಡೆದು ತಾವು ತಂಡದ ಬರವಸೆಯ ಆಟಗಾರ ಎಂದು ಮತ್ತೊಮ್ಮೆ ಸಾರಿ ಹೇಳಿದರು. ಹೀಗೆ ದೇಸೀ ಕ್ರಿಕೆಟ್ ನಲ್ಲಿ ನಿರಂತರ ಪ್ರದರ‍್ಶನದಿಂದ ಬೆಳೆದು ಬಾರತ-ಎ ತಂಡದ ಕಾಯಮ್ ಆಟಗಾರರಾದರು. ನಂತರ ಬಾರದ್ವಾಜ್ ಅವರ ಬ್ಯಾಟಿಂಗ್ ನಾಗಾಲೋಟ 1998/99 ರ ರಣಜಿ ಟೂರ‍್ನಿಯಲ್ಲೂ ಮುಂದುವರೆದು ತನ್ನ ಉತ್ತುಂಗ ತಲುಪಿತು. ಆ ರುತುವಿನಲ್ಲಿ ಅವರು ಗಳಿಸಿದ ಬರೋಬ್ಬರಿ 1,280 ರನ್ ಗಳು ಈಗಲೂ ರಾಜ್ಯ ತಂಡದ ಪರ ಬ್ಯಾಟ್ಸ್ಮನ್ ಒಬ್ಬರ ಅತಿ ಹೆಚ್ಚು ರನ್ ಗಳಿಕೆಯಾಗಿ ಇನ್ನೂ ಉಳಿದಿದೆ. ಜೊತೆಗೆ ಪೈನಲ್ ನಲ್ಲಿ ಎರಡು ಅರ‍್ದಶತಕಗಳು (86 ಮತ್ತು75) ಹಾಗೂ ಬೌಲಿಂಗ್ ನಲ್ಲಿ (6/21) ದಾಳಿಯಿಂದ ಡ್ರಾ ಆಗುವಂತಿದ್ದ ಪಂದ್ಯದ ದಿಕ್ಕನ್ನೇ ಬದಲಿಸಿ ಬಾರದ್ವಾಜ್ ಕರ‍್ನಾಟಕಕ್ಕೆ ಮತ್ತೊಂದು ರಣಜಿ ಕಿರೀಟ ತೊಡಿಸಿದರು. ದುಲೀಪ್ ಟ್ರೋಪಿಯಲ್ಲೂ ದಕ್ಶಿಣ ವಲಯದ ಪರ ಅವರು ನಿರಂತರವಾಗಿ ರನ್ ಗಳಿಸಿದರು. ಹೀಗೆ ಸತತ 5 ವರುಶಗಳ ಕಾಲ ದೇಸೀ ಕ್ರಿಕೆಟ್ ನಲ್ಲಿ ಪಳಗಿ ರನ್ ಗೋಪುರ ಕಟ್ಟಿದ್ದ ಕನ್ನಡಿಗ ವಿಜಯ್ ಬಾರದ್ವಾಜ್ ಅವರನ್ನು ಆಯ್ಕೆಗಾರರು 1999 ರಲ್ಲಿ ಬಾರತ ತಂಡಕ್ಕೆ ಆಯ್ಕೆ ಮಾಡಿದರು.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

ಕೀನ್ಯಾದ ನೈರೋಬಿಯಲ್ಲಿ ನಡೆದ ಎಲ್.ಜಿ. ಕಪ್ ತ್ರಿಕೋನ ಸರಣಿಯಲ್ಲಿ ದಕ್ಶಿಣ ಆಪ್ರಿಕಾ ಎದುರು ಅಜಯ್ ಜಡೇಜಾ ನಾಯಕತ್ವದಲ್ಲಿ ವಿಜಯ್ ಬಾರದ್ವಾಜ್ ತಮ್ಮ ಮೊದಲ ಅಂತರಾಶ್ಟ್ರೀಯ ಒಂದು ದಿನದ ಪಂದ್ಯ ಆಡಿದರು. ಈ ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿ ಕೇವಲ 16 ರನ್ ನೀಡಿ ಜಾಕ್ ಕಾಲೀಸ್ ರ ವಿಕೆಟ್ ಪಡೆಯುವುದರ ಜೊತೆಗೆ ಬ್ಯಾಟಿಂಗ್ ನಲ್ಲಿ ಔಟಾಗದೆ 18 ರನ್ ಗಳಿಸಿದರು. ಈ ಸರಣಿಯ ಒಟ್ಟು 4 ಪಂದ್ಯಗಳಲ್ಲಿ ತಮ್ಮ ಆಪ್ ಸ್ಪಿನ್ ಚಳಕದಿಂದ 10 ವಿಕೆಟ್ ಗಳೊಟ್ಟಿಗೆ ಬ್ಯಾಟಿಂಗ್ ನಲ್ಲಿ ಕಡಿಮೆ ಅವಕಾಶ ಸಿಕ್ಕರೂ 89 ರನ್ ಗಳಿಸಿ ಸರಣಿ ಶ್ರೇಶ್ಟ ಪ್ರಶಸ್ತಿ ಪಡೆದು ಸಂಚಲನ ಮೂಡಿಸಿದರು. ಇದರಿಂದ ಪ್ರಬಾವಿತರಾದ ಆಯ್ಕೆಗಾರರು ಅವರನ್ನು ಟೆಸ್ಟ್ ಪಂದ್ಯಗಳಿಗೂ ಆಯ್ಕೆ ಮಾಡುತ್ತಾರೆ. ಆದರೆ ಮೊಹಾಲಿಯಲ್ಲಿ ನ್ಯೂಜಿಲ್ಯಾಂಡ್ ಎದುರು ಪಾದಾರ‍್ಪಣೆ ಟೆಸ್ಟ್ ನಲ್ಲಿ ಸೊನ್ನೆ ಸುತ್ತಿ ಬಾರದ್ವಾಜ್ ನಿರಾಸೆ ಅನುಬವಿಸಿದರು. ಎರಡನೇ ಟೆಸ್ಟ್ ಹಾಗೂ ಆ ಬಳಿಕ ಅದೇ ತಂಡದ ಎದುರು ಆಡಿದ ಐದು ಒಂದು ದಿನದ ಪಂದ್ಯಗಳಲ್ಲಿ 5 ವಿಕೆಟ್ ಪಡೆದರೂ ಅವರ ಬ್ಯಾಟ್ ನಿಂದ ನಿರೀಕ್ಶಿತ ಮಟ್ಟಕ್ಕೆ ರನ್ ಬರುವುದಿಲ್ಲ. ನಂತರ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್ ವೇಳೆ ಬೆನ್ನು ನೋವಿನಿಂದ ತತ್ತರಿಸಿ ಹೋದ ಬಾರದ್ವಾಜ್ ಸರಣಿಯ ನಡುವಿನಲ್ಲೇ ತವರಿಗೆ ಮರಳುತ್ತಾರೆ. ಆ ಹೊತ್ತಿನಲ್ಲಿ ಕನ್ನಡಕ ತೊಡುತ್ತಿದ್ದ ಅವರು ಅದರಿಂದ ಮುಕ್ತಿ ಪಡೆಯಲು ಕಣ್ಣಿನ ಶಸ್ತ್ರಚಿಕೆತ್ಸೆಗೆ ಒಳಗಾಗುತ್ತಾರೆ. ಆದರೆ ದುರದ್ರುಶ್ಟವಶ್ಯಾತ್ ಆ ಶಸ್ತ್ರಚಿಕೆತ್ಸೆಯ ಅಡ್ಡಪರಿಣಾಮದಿಂದ ಅವರ ದ್ರುಶ್ಟಿಗೆ ದೊಡ್ಡಹಾನಿಯಾಗುತ್ತದೆ. ಅಬ್ಯಾಸದ ವೇಳೆ ಬಾಲ್ ಗುರುತಿಸಲೂ ಸಹ ಕಶ್ಟ ಪಡುವಂತಾಗಿ ಬಾರದ್ವಾಜ್ ಮಾನಸಿಕ ಕಿನ್ನತೆಗೆ ಸಿಲುಕುತ್ತಾರೆ. ಇನ್ನೇನು ಅವರ ವ್ರುತ್ತಿ ಬದುಕು ಮುಗಿದೇ ಹೋಯಿತು ಎಂದು ಊಹಾಪೋಹಗಳು ಮೊದಲಾದರೂ ಅವರು ಮಾತ್ರ ಎದೆಗುಂದದೆ 2001/2002 ರ ರಣಜಿ ಟೂರ‍್ನಿಯಲ್ಲಿ ಮತ್ತೊಮ್ಮೆ ತಮಿಳು ನಾಡು ಎದುರು ದ್ವಿಶತಕ ಗಳಿಸುತ್ತಾರೆ. ಆ ಸಾಲಿನಲ್ಲಿ ಸುದಾರಿತ ಪ್ರದರ‍್ಶದಿಂದ 2002 ರಲ್ಲಿ ಜಿಂಬಾಬ್ವೆ ಎದುರು ಒಂದು ದಿನದ ಸರಣಿಗೆ ಮತ್ತೊಮ್ಮೆ ಬಾರತ ತಂಡಕ್ಕೆ ಆಯ್ಕೆಯಾಗುತ್ತಾರೆ. ಆ ಪಂದ್ಯದಲ್ಲಿ ಒಂದು ವಿಕೆಟ್ ಪಡೆದ ಅವರು ದಿನೇಶ್ ಮೊಂಗಿಯರ ತಪ್ಪು ಕರೆಯಿಂದ ಸೊನ್ನೆಗೆ ರನ್ ಔಟ್ ಆಗುತ್ತಾರೆ. ಅಲ್ಲಿಗೆ 10 ಒಂದು ದಿನದ ಪಂದ್ಯಗಳು ಹಾಗೂ 3 ಟೆಸ್ಟ್ ಪಂದ್ಯಗಳೊಂದಿಗೆ ಅವರ ಅಂತರಾಶ್ಟ್ರೀಯ ಕ್ರಿಕೆಟ್ ಬದುಕು ಕೊನೆಗೊಳ್ಳುತ್ತದೆ.

ಆಟದ ಕಸುವು ಕಸಿದುಕೊಂಡು ಕಣ್ಣಿನ ಶಸ್ತ್ರಚಿಕಿತ್ಸೆ

ಕಣ್ಣಿನ ಶಸ್ತ್ರಚಿಕಿತ್ಸೆ ಅವಗಡದ ಬಳಿಕ 2000 ಇಸವಿಯಿಂದಾಚೆಗೆ ವಿಜಯ್ ಬಾರದ್ವಾಜ್ ಎಂದಿಗೂ ತಮ್ಮ ನೈಜ ಆಟ ಆಡಲಾಗಲಿಲ್ಲ. ಅವರ ಕಣ್ಣುಗಳು ಅವರ ಬ್ಯಾಟಿಂಗ್ ಅಳವನ್ನು ಕುಸಿಯುವಂತೆ ಮಾಡಿದವು. ಎಶ್ಟೇ ಕಶ್ಟ ಪಟ್ಟರೂ ಆಗಿನ್ನೂ 25 ರ ಹರೆಯದಲ್ಲಿದ್ದ ಬಾರದ್ವಾಜ್ ಚೆಂಡನ್ನು ಸರಿಯಾದ ಸಮಯಕ್ಕೆ ಅದರ ದಿಕ್ಕು ಹಾಗೂ ವೇಗವನ್ನು ಗುರುತಿಸಿ ಮೊದಲಿನಂತೆ ನಿರಾಯಾಸವಾಗಿ ಬ್ಯಾಟ್ ಬೀಸಲು ಆಗಲೇ ಇಲ್ಲ. 2003 ರಲ್ಲಿ ಬಾರತ-ಎ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ, 2003/04 ಹಾಗೂ 2004/05 ರ ರಣಜಿ ರುತುಗಳಲ್ಲಿ ಸಾಲು ಸಾಲು ವೈಪಲ್ಯ ಅನುಬವಿಸಿ ಹತಾಶೆಗೊಳಗಾಗುತ್ತಾರೆ. ಕಡೆಗೆ ಇದು ಸಲ್ಲದು ಎಂದು ಕರ‍್ನಾಟಕ ತಂಡಕ್ಕೆ ತಾವಿನ್ನು ಬಾರವಾಗಕೂಡದು ಎಂದು ತೀರ‍್ಮಾನ ಮಾಡಿ 2005/06 ಸಾಲಿಗೆ ಜಾರ‍್ಕಂಡ್ ತಂಡ ಸೇರುತ್ತಾರೆ. ಆ ತಂಡದ ಪರ ಒಂದು ವರ‍್ಶ ಆಡಿ ಆ ನಂತರ ರಾಜ್ಯ ತಂಡಕ್ಕೆ ಮತ್ತೊಮ್ಮೆ ಮರಳುವ ತುಡಿತದಿಂದ ಕೆ.ಎಸ್.ಸಿ.ಎ ವಿನ ತಂಡದೊಂದಿಗೆ ಎಮರ‍್ಜಿಂಗ್ ಆಟಗಾರರ ಟೂರ‍್ನಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ಪ್ರವಾಸ ಕೈ ಗೊಂಡರೂ ಅವರ ಬ್ಯಾಟ್ ನಿಂದ ರನ್ ಬರುವುದಿಲ್ಲ. ಕಡೆಗೆ ಬೇಸತ್ತು “ಇನ್ನು ನಾನು ವ್ರುತ್ತಿಪರ ಕ್ರಿಕೆಟ್ ಆಡುವುದರಲ್ಲಿ ಅರ‍್ತವಿಲ್ಲ, ಅದಕ್ಕೆ ಬೇಕಾದ ಚಳಕ ಇನ್ನು ನನ್ನಲ್ಲಿಲ್ಲ” ಎಂದು ನಿರ‍್ಣಯ ಮಾಡಿ ಕೇವಲ 31 ರ ವಯಸ್ಸಿನಲ್ಲಿ ನೋವಿನಿಂದ ಎಲ್ಲಾ ಬಗೆಯ ಕ್ರಿಕೆಟ್ ನಿಂದ ನಿವ್ರುತ್ತಿ ಗೋಶಿಸಿದರು.

ಕರ‍್ನಾಟಕ ತಂಡದ ದಿಗ್ಗಜ ಬಾರದ್ವಾಜ್

ಅಂತರಾಶ್ಟ್ರೀಯ ಮಟ್ಟದಲ್ಲಿ ಹೆಚ್ಚು ಕಾಲ ಮಿಂಚದಿದ್ದರೂ ಕರ‍್ನಾಟಕ ತಂಡದ ಮಟ್ಟಿಗೆ ಬಾರದ್ವಾಜ್ ಅವರ ಕೊಡುಗೆ ಅಪಾರ. ರಾಜ್ಯ ತಂಡದೊಟ್ಟಿಗೆ ಒಟ್ಟು ಮೂರು ರಣಜಿ ಟೂರ‍್ನಿ ಹಾಗೂ ಎರಡು ಇರಾನಿ ಕಪ್ ಗೆದ್ದಿರುವ ಅವರು ಪ್ರತಿಯೊಂದು ಗೆಲುವಿನಲ್ಲೂ ಎಲ್ಲರಿಗಿಂತ ಹೆಚ್ಚು ಕೊಡುಗೆ ನೀಡಿರುವುದು ವಿಶೇಶ. 90 ರ ದಶಕದಲ್ಲಿ ರಾಹುಲ್ ದ್ರಾವಿಡ್ ಅವರೊಟ್ಟಿಗೆ ಕರ‍್ನಾಟಕದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಬಾರದ್ವಾಜ್ ಒಟ್ಟು 96 ಮೊದಲ ದರ‍್ಜೆ ಪಂದ್ಯ ಆಡಿ 42 ರ ಸರಾಸರಿಯಲ್ಲಿ 14 ಶತಕ ಹಾಗೂ 26 ಅರ‍್ದಶತಕಗಳೊಂದಿಗೆ 5,553 ಗಳಿಸಿದ್ದಾರೆ. ಜೊತೆಗೆ 59 ವಿಕೆಟ್ ಗಳನ್ನೂ ಪಡೆದಿದ್ದಾರೆ. 72 ಲಿಸ್ಟ್ -ಎ ಪಂದ್ಯಗಳಲ್ಲಿ 1 ಶತಕ ಹಾಗೂ 5 ಅರ‍್ದಶತಕಗಳೊಂದಿಗೆ 32 ರ ಸರಾಸರಿಯಲ್ಲಿ 1,707 ಗಳಿಸಿದರೆ ಬೌಲರ್ ಆಗಿ 46 ವಿಕೆಟ್ ಕೂಡ ಪಡೆದಿದ್ದಾರೆ. 12 ವರುಶಗಳ ಮೊದಲ ದರ‍್ಜೆ ವ್ರುತ್ತಿ ಬದುಕಿನಲ್ಲಿ ಬಾರದ್ವಾಜ್ ಎರಡು ರಣಜಿ ಪಂದ್ಯಗಳಲ್ಲಿ ನಾಯಕನಾಗಿ ರಾಜ್ಯ ತಂಡವನ್ನು ಮುನ್ನಡೆಸಿ ಒಂದು ಪಂದ್ಯದಲ್ಲಿ ಗೆಲುವು ಕಂಡಿದ್ದಾರೆ.

ನಿವ್ರುತ್ತಿ ನಂತರದ ಬದುಕು

ಆಟಗಾರನಾಗಿ ತಮ್ಮ ವ್ರುತ್ತಿ ಬದುಕು ಪೂರೈಸಿದ ಮೇಲೆ ಬಾರದ್ವಾಜ್ ಕೆಲಕಾಲ ಕರ‍್ನಾಟಕ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದರು. 2008 ರಲ್ಲಿ ಐಪಿಎಲ್ ಮೊದಲ್ಗೊಂಡಾಗ ಬೆಂಗಳೂರು ತಂಡದ ಸಹಾಯಕ ಕೋಚ್ ಆಗಿದ್ದ ಅವರು ರಾಜ್ಯ ತಂಡದ ವಿನಯ್ ಕುಮಾರ್, ಬಿ.ಅಕಿಲ್, ಬರತ್ ಚಿಪ್ಲಿ ಹಾಗೂ ದೇವರಾಜ್ ಪಾಟೀಲ್ ರಂತಹ ಅಳವುಳ್ಳ ಆಟಗಾರರನ್ನು ಐಪಿಎಲ್ ಗೆ ಆರಿಸಿ ಯುವ ಆಟಗಾರರಿಗೆ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟರು. ಅನಿಲ್ ಕುಂಬ್ಳೆ ರಾಜ್ಯ ಕ್ರಿಕೆಟ್ ಸಂಸ್ತೆಯ ಅದ್ಯಕ್ಶರಾಗಿ ಅದಿಕಾರದ ಚುಕ್ಕಾಣಿ ಹಿಡಿದ 2010-13 ರ ಹೊತ್ತಿನಲ್ಲಿ ಬಾರದ್ವಾಜ್ ಮ್ಯಾನೇಜಿಂಗ್ ಕಮಿಟಿಯ ಸದಸ್ಯರಾಗಿ ಹಲವು ಮೊದಲುಗಳಿಗೆ ಸಾಕ್ಶಿಯಾದರು. ಪ್ರಸ್ತುತ ಸ್ಟಾರ್ ಸ್ಪೋರ‍್ಟ್ಸ್ ಕನ್ನಡ ಚ್ಯಾನೆಲ್ ನ ನೇರುಲಿಗರಾಗಿರುವ(commentator) ಅವರು ತಮ್ಮದೇ ಸ್ವಂತ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡಿ ಕನ್ನಡಿಗರಿಗೆ ಕನ್ನಡದಲ್ಲೇ ಕ್ರಿಕೆಟ್ ಆಟವನ್ನು ಸೊಗಸಾಗಿ ಉಣಬಡಿಸುತ್ತಾ ಇದ್ದಾರೆ.

ವಿಜಯ್ ಬಾರದ್ವಾಜ್ ಅವರ ಕ್ರಿಕೆಟ್ ವ್ರುತ್ತಿ ಬದುಕಿನ ಬೆಳವಣಿಗೆಯನ್ನು ನೋಡಿದವರು ಕಂಡಿತ ಅವರನ್ನು ವಿಶೇಶ ಪ್ರತಿಬೆ ಎಂದೇ ಹೇಳುತ್ತಾರೆ. ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ರಂತಹ ದಿಗ್ಗಜರು ಮುಕ್ತಕಂಟದಿಂದ ಬಾರದ್ವಾಜ್ ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದೇ ಇದಕ್ಕೆ ದೊಡ್ಡ ಎತ್ತುಗೆ. ಬಾರದ್ವಾಜ್‌ರಿಗೂ ಸಹ ಕೊಂಚ ಅದ್ರುಶ್ಟದ ಬಲವಿದ್ದು ಅವರ ದ್ರುಶ್ಟಿ ಅವರಿಗೆ ಕೈ ಕೊಡದೆ ಇದ್ದಿದ್ದರೆ ಕಂಡಿತ ಅವರು ದೊಡ್ಡಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದರು ಎಂಬುವುದರಲ್ಲಿ ಎರಡು ಮಾತಿಲ್ಲ. ಪ್ರತೀ ಬಾರಿ ಕರ‍್ನಾಟಕ ತಂಡದೆದುರು ದೊಡ್ಡ ಜೊತೆಯಾಟ ನಡೆಯುತ್ತಿರುವಾಗ, ಇದನ್ನು ಮುರಿಯಲು ಬಾರದ್ವಾಜ್ ರಂತೆ ಸಂಕಶ್ಟದ ವೇಳೆ ವಿಕೆಟ್ ಪಡೆಯುವ ಚಳಕವುಳ್ಳ ಒಬ್ಬ ಬೌಲರ್ ಈಗ ತಂಡದಲ್ಲಿಲ್ಲವೇ ಎಂದು ಅಬಿಮಾನಿಗಳು ಇಂದಿಗೂ ನೆನೆಯುವುದು ಸುಳ್ಳಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಕರ‍್ನಾಟಕದ ಬರವಸೆಯಾಗಿದ್ದ ಗೆಳೆಯರ ಪ್ರೀತಿಯ ವಿಜಯ್ ನಿಜಕ್ಕೂ ದಿಗ್ಗಜ ಆಟಗಾರ. ಅವರ ಕೊಡುಗೆಯನ್ನು ಕ್ರಿಕೆಟ್ ಪ್ರೀತಿಸುವ ಪ್ರತಿಯೊಬ್ಬ ಕನ್ನಡಿಗನೂ ಮರೆಯದಿರಲಿ!

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications