ಬೀಟ್‍ರೂಟ್ ಪರೋಟಾ
– ಸವಿತಾ.
ಬೇಕಾಗುವ ಸಾಮಾನುಗಳು
- ಬೀಟ್‍ರೂಟ್ – 1
- ಎಣ್ಣೆ – 1 ಬಟ್ಟಲು
- ಹಸಿ ಮೆಣಸಿನಕಾಯಿ – 3
- ಬೆಳ್ಳುಳ್ಳಿ ಎಸಳು – 4
- ಹಸಿ ಶುಂಟಿ – 1/4 ಇಂಚು
- ಜೀರಿಗೆ – 1/4 ಚಮಚ
- ಓಂ ಕಾಳು ಅತವಾ ಅಜ್ವೈನ್ – 1/4 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
- ಅರಿಶಿಣ ಪುಡಿ – ಸ್ವಲ್ಪ (ಬೇಕಾದರೆ)
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಆಮ್ ಚೂರ್ ಪೌಡರ್ – 1/2 ಚಮಚ ಅತವಾ ನಿಂಬೆ ರಸ – 1/2 ಹೋಳು
- ಗರಮ್ ಮಸಾಲೆ ಪುಡಿ – 1 ಚಮಚ
ಮಾಡುವ ಬಗೆ
ಒಂದು ದೊಡ್ಡ ಬೀಟ್‍ರೂಟ್ ತೊಳೆದು ಸಿಪ್ಪೆ ತೆಗೆದು ತುರಿದು ಇಟ್ಟುಕೊಳ್ಳಿ. ಎರಡು ಚಮಚ ಎಣ್ಣೆ ಬಾಣಲೆಗೆ ಹಾಕಿ, ಬಿಸಿ ಮಾಡಿ. ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ. ನಾಲ್ಕು ಬೆಳ್ಳುಳ್ಳಿ ಎಸಳು, ಕಾಲು ಇಂಚು ಹಸಿ ಶುಂಟಿ ಹಾಕಿ. ಬೀಟ್‍ರೂಟ್ ತುರಿ ಸೇರಿಸಿ ಚೆನ್ನಾಗಿ ಹುರಿಯಿರಿ. ಎರಡು ಚಮಚ ನೀರು ಸೇರಿಸಿ ಸ್ವಲ್ಪ ಕುದಿಸಿ ಇಳಿಸಿ. ನಂತರ ಜೀರಿಗೆ, ಓಂ ಕಾಳು ಅತವಾ ಅಜ್ವೈನ್, ರುಚಿಗೆ ತಕ್ಕಶ್ಟು ಉಪ್ಪು, ಬೇಕಾದರೆ ಸ್ವಲ್ಪ ಅರಿಶಿಣ ಪುಡಿ ಹಾಕಿ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೇ ಎರಡು ಬಟ್ಟಲು ಗೋದಿ ಹಿಟ್ಟು, ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟು ಕಲಸಿ. ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಆಮ್ ಚೂರ್ ಪೌಡರ್, ಗರಮ್ ಮಸಾಲೆ ಪುಡಿ ಮತ್ತು ಮೂರು ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ.
ಸ್ವಲ್ಪ ಹಿಟ್ಟು ಹಿಡಿದು ಉಳ್ಳೆ ಮಾಡಿ, ಚಪಾತಿ ಲಟ್ಟಿಸಿ ಎಣ್ಣೆ ಹಚ್ಚಿ, ಎರಡೂ ಬದಿ ಬೇಯಿಸಿ ತೆಗೆಯಿರಿ. ಈಗ ಬೀಟ್ ರೂಟ್ ಪರೋಟಾ ತಯಾರು ಆಯಿತು. ಬೀಟ್ ರೂಟ್ ಪರೋಟಾವನ್ನು ಚಟ್ನಿ, ಸಾಸ್, ತುಪ್ಪ, ಉಪ್ಪಿನಕಾಯಿ, ಪಲ್ಯ, ನಿಮಗೆ ಇಶ್ಟವಾದದ್ದರ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು