ಕವಿತೆ: ನೀರ ಮೇಲಿನ ಗುಳ್ಳೆ

– ಮಹೇಶ ಸಿ. ಸಿ.

ಹೊರಾಟ, ಬದುಕು, life, challenges

ನೀರ ಮೇಲಿನ ಗುಳ್ಳೆಯಂತಿಹುದು
ನಮ್ಮ ಬದುಕಿನ ಹೋರಾಟ
ಕಶ್ಟ ಸುಕಗಳನು ಗೆಲ್ಲೋ ತಾಳ್ಮೆಯೆ
ನಮ್ಮ ಜೀವನದ ದೊಂಬರಾಟ

ಬಡವ-ಬಲ್ಲಿದ ಮೇಲು-ಕೀಳೆಂಬ
ನಾಲ್ಕು ದಿನಗಳ ಕಿರುಚಾಟ
ನಾನು ನನದೆಂಬ ಸ್ವಾರ‍್ತದ ನಡುವೆ
ದಿನವು ನಡೆಯುತಿದೆ ಹೊಡೆದಾಟ

ಹೊತ್ತು ಕೂಳಿಗೂ ಅಲೆಯೋ ಜೀವಿಗಳ
ಬದುಕೇ ಒಂದು ಪರದಾಟ
ಬಡವನ ಮೇಲೆ ಸವಾರಿ ಮಾಡುತ
ನೋಡು ಉಳ್ಳವರ ಮೆರೆದಾಟ

ಬೆಂಕಿ ಹಚ್ಚದಿರು ನಾಲ್ಕಾರು ಮಂದಿಯ
ತಲೆ ಬೀಳುವಂತೆ ಬಡಿದಾಟ
ಸಾದ್ಯವಾದರೆ ಮೂಡಿಸಬೇಕು ಮುಗ್ದ
ಮನಗಳ ಮೊಗದಲಿ ನಗೆಯಾಟ

ಸ್ರುಶ್ಟಿ ಜೀವಿಗಳು ನರಳುವಂತೆ ಮಾಡುವ
ಕ್ರೂರ ಬುದ್ದಿಯ ಮನುಜನಾಟ
ಅವರವರ ಪಾಲಿನ ಸಮಯ ಮುಗಿಯಲು
ಬುವಿಯಲಿ ಸ್ರುಶ್ಟಿಯದೇ ಆಟ

(ಚಿತ್ರ ಸೆಲೆ: 8-principles-of-life )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: