ಡೇವಿಸ್ ಕಪ್ – ಟೆನ್ನಿಸ್ ನ ವಿಶ್ವಕಪ್

– ರಾಮಚಂದ್ರ ಮಹಾರುದ್ರಪ್ಪ.

ಟೆನ್ನಿಸ್ ಪೋಟಿ ಎಂದೊಡನೆ ನಮಗೆಲ್ಲರಿಗೂ ಮೊದಲಿಗೆ ನೆನಪಾಗೋದೇ ಪ್ರಮುಕ ಹಾಗೂ ಜನಪ್ರಿಯ ನಾಲ್ಕು ಗ್ರಾಂಡ್ ಸ್ಲಾಮ್ ಗಳು. ಆದರೆ ಇತರೆ ಆಟಗಳಂತೆ ಟೆನ್ನಿಸ್ ನಲ್ಲೂ ದೇಶ-ದೇಶಗಳು ತಂಡಗಳನ್ನು ಕಟ್ಟಿಕೊಂಡು ಸೆಣಸುವ ವಿಶ್ವ ಮಟ್ಟದ ಗಂಡಸರ ಪ್ರತಿಶ್ಟಿತ ಡೇವಿಸ್ ಕಪ್ ಗೂ ಕೂಡ ಗ್ರಾಂಡ್ ಸ್ಲಾಮ್ ಮಟ್ಟದ ಮನ್ನಣೆ ಇದೆ ಎಂಬುದು ದಿಟ. ಇದರ ಅರಿವು ಟೆನ್ನಿಸ್ ಅಬಿಮಾನಿಗಳಿಗೆ ಇದ್ದರೂ ಬಹುತೇಕ ಮಂದಿಗೆ ಡೇವಿಸ್ ಕಪ್ ನ ಮಹತ್ವ ಹಾಗೂ ಇತಿಹಾಸದ ಅರಿವಿಲ್ಲ. ದಿಗ್ಗಜ ಆಟಗಾರರು ಹತ್ತಾರು ಗ್ರಾಂಡ್ ಸ್ಲಾಮ್ ಗಳನ್ನು ಗೆದ್ದಿದ್ದರೂ ತಮ್ಮ ದೇಶವನ್ನು ಪ್ರತಿನಿದಿಸಿ ಡೇವಿಸ್ ಕಪ್ ಗೆಲ್ಲದೇ ಹೋದರೆ, ಅದು ಅವರ ವ್ರುತ್ತಿ ಬದುಕಿನ ದೊಡ್ಡ ಕುಂದು ಎಂಬುದೇ ಟೆನ್ನಿಸ್ ಪಂಡಿತರ ಅಂಬೋಣ. ಹಾಗಾಗಿ ಟೆನ್ನಿಸ್ ನಲ್ಲಿ ಗ್ರಾಂಡ್ ಸ್ಲಾಮ್ ಹಾಗೂ ಒಲಂಪಿಕ್ಸ್ ಪದಕಕ್ಕಿರುವಶ್ಟೇ ಬೆಲೆ ಹಾಗೂ ಗೌರವ ಡೇವಿಸ್ ಕಪ್ ಗೆಲುವಿಗೂ ಇದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಇದಕ್ಕೆ ಪುಶ್ಟಿ ನೀಡುವಂತೆ ಹಲವಾರು ಮಾಜಿ ಹಾಗೂ ಹಾಲಿ ದಿಗ್ಗಜ ಟೆನ್ನಿಸ್ ಆಟಗಾರರು, ಪ್ರಮುಕ ATP ಪಂದ್ಯಾವಳಿಗಳಿಂದ ದೂರ ಸರಿದು ಡೇವಿಸ್ ಕಪ್ ನಲ್ಲಿ ತಮ್ಮ ದೇಶದ ಪರ ರಾಕೆಟ್ ಬೀಸಿರುವ ಎತ್ತುಗೆಗಳು ಇತಿಹಾಸದ ಪುಟಗಳಲ್ಲಿ ದಾಕಲಾಗಿವೆ. ಸಿಂಗಲ್ಸ್ ನಲ್ಲಿ ಗ್ರಾಂಡ್ ಸ್ಲಾಮ್ ಗಳನ್ನು ಗೆದ್ದಿರುವ ಆಟಗಾರರಿಲ್ಲದೇ ಹೋದರೂ ಒಂದು ತಂಡವಾಗಿ ಡೇವಿಸ್ ಕಪ್ ನಲ್ಲಿ ಪಾಲ್ಗೊಳ್ಳುವ ಬಾರತಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ಇರುವುದು ಹೆಮ್ಮೆಯ ವಿಶಯ. ಗಟಾನುಗಟಿ ಆಟಗಾರರಿರುವ ತಂಡಗಳೂ ಸಹ ಬಾರತವನ್ನು ಎಂದಿಗೂ ಹಗುರವಾಗಿ ಪರಿಗಣಿಸಿಲ್ಲ. ಪ್ರತೀ ವರ‍್ಶ ಬಾರತ ತಂಡ ಪಂದ್ಯಾವಳಿ ಗೆಲ್ಲದೇ ಹೋದರೂ ಸ್ತಿರ ಪ್ರದರ‍್ಶನದಿಂದ ಗಮನ ಸೆಳೆದಿದೆ. 2014 ರ ವೇಳೆಗೆ ಗಂಡಸರ ಅತಿಹೆಚ್ಚು ಗ್ರಾಂಡ್ ಸ್ಲಾಮ್ ಗಳನ್ನು ಗೆದ್ದಿದ್ದ ಸ್ವಿಟ್ಜರ‍್ಲ್ಯಾಂಡ್ ನ ದಿಗ್ಗಜ ರೋಜರ್ ಪೆಡೆರರ್ ತಮ್ಮ ದೇಶದ ಸ್ಟಾನ್ ವಾವ್ರಿಂಕ ರೊಂದಿಗಿನ ವಯಕ್ತಿಕ ಮನಸ್ತಾಪಗಳನ್ನು ಬದಿಗಿಟ್ಟು ಒಂದು ತಂಡವಾಗಿ ಆಡಿ ಸ್ವಿಟ್ಜರ‍್ಲ್ಯಾಂಡ್ ಗೆ ಮೊದಲ ಡೇವಿಸ್ ಕಪ್ ಕಿರೀಟವನ್ನು ತೊಡಿಸಿದ್ದು ಈಗ ಇತಿಹಾಸ. ಆ ಗೆಲುವಿನ ಕ್ಶಣವನ್ನು ಪೆಡೆರರ್ ಇಂದಿಗೂ ಹೆಮ್ಮೆಯಿಂದ ನೆನೆಯುತ್ತಾರೆ. ಟೆನ್ನಿಸ್ ಆಟದ ಎಲ್ಲಾ ದಾಕಲೆಗಳನ್ನೂ ತಮ್ಮದಾಗಿಸಿಕೊಂಡಿದ್ದ ಪೆಡೆರರ್ ತಮ್ಮನ್ನು ಯಾವ ಕುಂದು ಕಾಡದಂತೆ 2014 ರಲ್ಲಿ ಡೇವಿಸ್ ಕಪ್ ಗೆಲುವಿನೊಂದಿಗೆ ತಮ್ಮ ವ್ರುತ್ತಿ ಬದುಕನ್ನು ಪರಿಪೂರ‍್ಣಗೊಳಿಸಿಕೊಂಡಿದ್ದರು.

ಡೇವಿಸ್ ಕಪ್ ನ ಇತಿಹಾಸ
ಅಮೇರಿಕಾದ ದ್ವೈಟ್ ಪಿಲ್ಲೇ ಡೇವಿಸ್ ಅವರು 1900 ರಲ್ಲಿ ಗ್ರೇಟ್ ಬ್ರಿಟನ್ ಮತ್ತು ಅಮೇರಿಕಾದ ಉತ್ತಮ ಆಟಗಾರರು ಎದುರಾಗಲು ಹುಟ್ಟುಕಾಕಿದ ಪಂದ್ಯಾವಳಿಯೇ ಡೇವಿಸ್ ಕಪ್. ಅವರು ಅಂದು ಬಿತ್ತ ಬೀಜ ಇಂದು ದೊಡ್ಡ ಮರವಾಗಿ ಬೆಳೆದು ಟೆನ್ನಿಸ್ ಜಗತ್ತಿನ ಕಳಶವಾಗಿ ಗುರುತಿಸಿಕೊಂಡಿದೆ. ಸದ್ಯಕ್ಕೆ ITF (ಇಂಟರ‍್ನ್ಯಾಶನಲ್ ಟೆನ್ನಿಸ್ ಪೆಡೆರೇಶನ್) ನಡೆಸುವ ಡೇವಿಸ್ ಕಪ್ ನಲ್ಲಿ ಇಲ್ಲಿಯವರೆಗೂ ಸುಮಾರು 155 ದೇಶಗಳ ತಂಡಗಳು ಕಣಕ್ಕಿಳಿದು ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಿವೆ. ಅಮೇರಿಕಾ ಒಟ್ಟು 32 ಬಾರಿ ಡೇವಿಸ್ ಕಪ್ ಅನ್ನು ಗೆದ್ದು ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡರೆ, ಅವರ ಹಿಂದೆ 28 ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಆಸ್ಟ್ರೇಲಿಯಾ ದಶಕಗಳಿಂದ ಪೈಪೋಟಿ ನೀಡುತ್ತಾ ಬಂದಿದೆ. ಐತಿಹಾಸಿಕವಾಗಿ ಶ್ರೇಶ್ಟ ಟೆನ್ನಿಸ್ ಆಟಗಾರರ ತವರಾಗಿರುವ ಯೂರೋಪ್ ಕಂಡದ ತಂಡಗಳೂ ಸಹ ಈ ಪಂದ್ಯಾವಳಿಯನ್ನು ಹಲವಾರು ಬಾರಿ ಗೆದ್ದಿವೆ. ಪ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ ತಲಾ 10 ಬಾರಿ ಡೇವಿಸ್ ಕಪ್ ನ ಗೆಲ್ಲುಗರಾದರೆ, ಇವುಗಳ ಹಿಂದೆ ಸ್ವೀಡನ್ (7) ಮತ್ತು ಸ್ಪೇನ್ (6) ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಇತ್ತೀಚಿಗೆ 2022 ರಲ್ಲಿ ನಡೆದ ಡೇವಿಸ್ ಕಪ್ ಅನ್ನು ಕೆನೆಡಾ ಚೊಚ್ಚಲ ಬಾರಿಗೆ ಗೆದ್ದು ಬೀಗಿತು.

ಡೇವಿಸ್ ಕಪ್ ನ ಸ್ವರೂಪ
ಪ್ರಪಂಚದ 18 ಅಗ್ರಶ್ರೇಯಾಂಕಿತ ದೇಶದ ತಂಡಗಳು ಪ್ರತೀ ವರ‍್ಶ ನಡೆಯುವ ಡೇವಿಸ್ ಕಪ್ ಗೆ ನೇರವಾಗಿ ಅರ‍್ಹತೆ ಪಡೆದು ವಿಶ್ವ ಗುಂಪಿನಲ್ಲಿ ಪ್ರಶಸ್ತಿಗಾಗಿ ಸೆಣಸಿದರೆ, ಇನ್ನುಳಿದ ತಂಡಗಳು ಮೂರು ಪ್ರಾದೇಶಿಕ ವಲಯಗಳಲ್ಲಿ (ಅಮೇರಿಕಾ, ಏಶಿಯಾ/ಒಶಿನಿಯಾ ಮತ್ತು ಯೂರೋಪ್/ಆಪ್ರಿಕಾ) ಕಾದಾಡುತ್ತವೆ. ತಂಡಗಳ ರ‍್ಯಾಂಕಿಂಗ್ ಹೊಣೆಯನ್ನು ITF ತನ್ನ ಕಾರ‍್ಯಸೂಚಿಯಂತೆ (ಹಿಂದಿನ ವರ‍್ಶದ ಪ್ರದರ‍್ಶನವನ್ನು ಪರಿಗಣಿಸಿ) ನಿರ‍್ವಹಿಸುತ್ತದೆ. ಸ್ವಾಬಾವಿಕವಾಗಿ ಕಳೆದ ವರ‍್ಶದ ಪೈನಲ್ ನಲ್ಲಿ ಸ್ಪರ‍್ದಿಸಿದ ತಂಡಗಳು ರ‍್ಯಾಂಕಿಂಗ್ ನ ಮೊದಲೆರಡು ಎಡೆಗಳನ್ನು ಪಡೆಯುತ್ತವೆ. ನಾಲ್ಕು ವಾರಾಂತ್ಯಗಳಲ್ಲಿ ನಡೆಯುವ ಈ ಪಂದ್ಯಾವಳಿಯ ನಾಕೌಟ್ ಪಂದ್ಯಗಳು ತಂಡದವೊಂದರ ತವರಿನ ಅಂಗಳದಲ್ಲಿ ನಡೆಯುತ್ತದೆ. ಆತಿತೇಯ ತಂಡವನ್ನು ITF ಸರದಿಯಂತೆ ಎಲ್ಲಾ ಅರ‍್ಹ ತಂಡಗಳಿಗೂ ನೀಡುತ್ತದೆ. ಆ ಆತಿತೇಯ ತಂಡಕ್ಕೆ ತಮಗೆ ಬೇಕಾದ ಮಾದರಿಯ ಕೋರ‍್ಟ್ (ಹುಲ್ಲು ಹಾಸಿನ, ಕ್ಲೇ ಅತವಾ ಹಾರ‍್ಡ್ ಕೋರ‍್ಟ್) ಅನ್ನು ಅಣಿ ಮಾಡುವ ಆಯ್ಕೆ ಸ್ವಾತಂತ್ರ ಇರುತ್ತದೆ. ಒಟ್ಟು ಐದು ರೌಂಡ್ ರಾಬಿನ್ ಪಂದ್ಯಗಳಲ್ಲಿ (4 ಸಿಂಗಲ್ಸ್, 1 ಡಬಲ್ಸ್) ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳು ಮುಂದಿನ ಸುತ್ತಿಗೆ ಲಗ್ಗೆ ಇಡುತ್ತವೆ. ಅಂಕಪಟ್ಟಿಯ ಮೊದಲೆರಡು ತಂಡಗಳು ನೇರವಾಗಿ ಪೈನಲ್ಸ್ ನಲ್ಲಿ ಪ್ರಶಸ್ತಿಗಾಗಿ ಸೆಣಸುತ್ತವೆ. ಹಾಗೇ ಈ ಮೇಲ್ಮಟ್ಟದ ಗುಂಪಿನಲ್ಲಿ ಸೋತ ತಂಡಗಳು ವಲಯವಾರು ವಿಜೇತ ತಂಡಗಳ ಎದುರು ಮುಂದಿನ ವರ‍್ಶದ ಡೇವಿಸ್ ಕಪ್ ನ ವಿಶ್ವ ಗುಂಪಿನ ಅರ‍್ಹತೆಗೆ ಪೋಟಿ ಮಾಡುತ್ತವೆ. ಮೂರು ಸೆಟ್ ಗಳ ಈ ಡೇವಿಸ್ ಕಪ್ ಪೋಟಿ 2019 ರಿಂದ ತನ್ನ ಸ್ವರೂಪದಲ್ಲಿ ಕೊಂಚ ಮಾರ‍್ಪಾಡು ಕಂಡಿದೆ. ವಿಶ್ವ ಗುಂಪಿನ ರೌಂಡ್ ರಾಬಿನ್ ಪಂದ್ಯಗಳ ಎಣಿಕೆಯನ್ನು ಮೂರಕ್ಕೆ ಇಳಿಸಿ ಪಂದ್ಯಾವಳಿಯನ್ನು ಡೇವಿಸ್ ಕಪ್ ಪೈನಲ್ಸ್ ಎಂದು ಹೆಸರಿಸಲಾಗಿದೆ. ಇನ್ನುಳಿದಂತೆ ಅರ‍್ಹತೆ ಮತ್ತು ನಾಕೌಟ್ ಮಾನದಂಡಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಪೋಟಿಗಳಲ್ಲಿ ಸ್ಪರ‍್ದಿಸದ ಮಾಜಿ ಆಟಗಾರನೊಬ್ಬನನ್ನು ತಂಡದ ನಾಯಕನ್ನಾಗಿ ನೇಮಿಸುವ ಅವಕಾಶ ತಂಡಗಳಿಗೆ ಇರುತ್ತದೆ. ಆ ನಾಯಕ ಒಬ್ಬ ತರಬೇತುದಾರನಾಗಿ ಕೂಡ ಆಟಗಾರರನ್ನು ಪ್ರತ್ಯೇಕ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳಿಗೆ ಆರಿಸುವ, ಮತ್ತು ಆಟದ ರಣತಂತ್ರಗಳನ್ನು ರೂಪಿಸುವ ಸಂಪೂರ‍್ಣ ಜವಾಬ್ದಾರಿಯನ್ನು ಹೊರುತ್ತಾನೆ.

ಡೇವಿಸ್ ಕಪ್ ನಲ್ಲಿ ಬಾರತ
ಆಲ್ ಇಂಡಿಯಾ ಟೆನ್ನಿಸ್ ಅಸೋಶಿಯೇಶನ್ (AITF) ಅಡಿಯಲ್ಲಿರುವ ಬಾರತದ ಗಂಡಸರ ತಂಡ 1921 ರಿಂದ ಇಲ್ಲಿಯ ತನಕ ಒಟ್ಟು 84 ವರ‍್ಶಗಳ ಕಾಲ ಡೇವಿಸ್ ಕಪ್ ನಲ್ಲಿ ಕಣಕ್ಕಿಳಿದರೂ ಒಮ್ಮೆಯೂ ತಂಡಕ್ಕೆ ಪ್ರಶಸ್ತಿ ಕೈಗೆಟುಕಿಲ್ಲ. ಒಟ್ಟು 15 ಬಾರಿ ನೇರ ವಿಶ್ವ ಗುಂಪಿನಲ್ಲಿ ಆಡಿರುವ ದಾಕಲೆ ಹೊಂದಿರುವ ಬಾರತ ತಂಡ 3 ಬಾರಿ ಪೈನಲ್ (1966, 1974 ಮತ್ತು 1987) ತಲುಪಿರುವ ಹಿರಿಮೆ ಕೂಡ ತನ್ನದಾಗಿಸಿಕೊಂಡಿದೆ. ಈ ಮೂರು ಪೈನಲ್ ಗಳಲ್ಲಿ ಬಾರತ ಎರಡು ಬಾರಿ ಸೋಲುಂಡರೆ, ಒಮ್ಮೆ 1974 ರಲ್ಲಿ ಎದುರಾಳಿ ದಕ್ಶಿಣ ಆಪ್ರಿಕಾದ ಅನಿಶ್ಟ ಅಪಾರ‍್ತೀಡ್ ನೀತಿಯ ರಾಜಕೀಯ ಕಾರಣದಿಂದ ಪೈನಲ್ ನಲ್ಲಿ ಸೆಣಸದೆ ಪ್ರಶಸ್ತಿಯನ್ನು ಬಿಟ್ಟು ಕೊಟ್ಟಿತ್ತು. ಆ ಹೊತ್ತಿನಲ್ಲಿ ಬಾರತ ತಂಡದಲ್ಲಿದ್ದ ದಿಗ್ಗಜ ಸಹೋದರರಾದ ಆನಂದ್ ಅಮ್ರಿತ್ ರಾಜ್ ಮತ್ತು ವಿಜಯ್ ಅಮ್ರಿತ್ ರಾಜ್ ತಮ್ಮ ಆಟದ ಉತ್ತುಂಗದಲ್ಲಿದ್ದಿದ್ದರಿಂದ ಬಾರತವೇ ಪಂದ್ಯಾವಳಿಯ ನೆಚ್ಚಿನ ತಂಡವಾಗಿತ್ತು. ಆದರೆ ದುರಾದ್ರುಶ್ಟವಶಾತ್ ಆಟೇತರ ಕಾರಣಗಳಿಂದ ಬಾರತ ಪಂದ್ಯದಿಂದ ಹಿಂದೆ ಸರಿದಿತ್ತು. ಬಾರತದ ಟೆನ್ನಿಸ್ ಪಂಡಿತರು ಈಗಲೂ ಆ ಕಹಿ ಗಟನೆಯನ್ನು ಕೈಗೆ ಬಂದ ತುತ್ತು ಬಾಯಿಗೆ ದಕ್ಕಲಿಲ್ಲ ಎಂದು ನೋವಿನಿಂದಲೇ ನೆನೆಯುತ್ತಾರೆ. ಇಲ್ಲಿಯವರೆಗೂ ಪಾಲ್ಗೊಂಡಿರುವ ಅವ್ರುತ್ತಿಗಳಲ್ಲಿ ಒಟ್ಟು 201 ಪಂದ್ಯಗಳನ್ನು ಆಡಿರುವ ಬಾರತ 119 ಪಂದ್ಯಗಳನ್ನು ಗೆದ್ದು 82 ರಲ್ಲಿ ಸೋಲುಂಡಿದೆ. ರಾಮನಾತನ್ ಕ್ರಿಶ್ನನ್ ಬಾರತದ ಪರ ಅತ್ಯದಿಕ (50) ಸಿಂಗಲ್ಸ್ ಗೆಲುವುಗಳನ್ನು ದಾಕಲಿಸಿದರೆ ಟೆನ್ನಿಸ್ ದಂತಕತೆ ಲಿಯಾಂಡರ್ ಪೇಸ್ ಕ್ರಮವಾಗಿ ಅತಿಹೆಚ್ಚು ಡಬಲ್ಸ್ ಗೆಲುವುಗಳು (45) ಹಾಗೂ ಅತಿಹೆಚ್ಚು ಒಟ್ಟು ಗೆಲುವುಗಳ (93) ಸಾದನೆ ಮಾಡಿದ್ದಾರೆ. ಅತ್ಯದಿಕ ವರ‍್ಶಗಳ ಕಾಲ (30) ಬಾರತವನ್ನು ಪ್ರತಿನಿದಿಸಿರುವ ದಾಕಲೆ ಕೂಡ ಲಿಯಾಂಡರ್ ಪೇಸ್ ರ ಹೆಸರಲ್ಲೇ ಇದೆ. ಇದರೊಟ್ಟಿಗೆ ದೇಶದ ಶ್ರೇಶ್ಟ ಡಬಲ್ಸ್ ತಂಡ (25 ಗೆಲುವುಗಳು-2 ಸೋಲುಗಳು) ಎಂಬ ಹೆಗ್ಗಳಿಕೆಯನ್ನು ಮಹೇಶ್ ಬೂಪತಿ ಹಾಗೂ ಲಿಯಾಂಡರ್ ಪೇಸ್ ರ ಜೋಡಿ ತನ್ನದಾಗಿಸಿಕೊಂಡಿದೆ. ಇಂದಿಗೆ ಮಹೇಶ್ ಬೂಪತಿ ನಾಯಕರಾಗಿರುವ ಬಾರತದ ಡೇವಿಸ್ ಕಪ್ ತಂಡದಲ್ಲಿ ಯೂಕಿ ಬಾಂಬ್ರಿ, ರೋಹನ್ ಬೋಪಣ್ಣ, ರಾಮ್ ಕುಮಾರ್ ರಾಮನಾತನ್ ಹಾಗೂ ದಿವಿಜ್ ಶರಣ್ ರಂತಹ ಪ್ರತಿಬಾನ್ವಿತ ಆಟಗಾರರಿದ್ದಾರೆ. ಹಾಗಾಗಿ ಆದಶ್ಟು ಬೇಗ ಬಾರತದ ಟೆನ್ನಿಸ್ ತಂಡ ಡೇವಿಸ್ ಕಪ್ ಅನ್ನು ಗೆದ್ದು ಇತಿಹಾಸ ಸ್ರುಶ್ಟಿಸಲಿ ಎಂಬುದೇ ದೇಶದ ಟೆನ್ನಿಸ್ ಒಲವಿಗರ ಹೆಬ್ಬಯಕೆ.

(ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: