ಕಾಯಿ ಹಾಲು ಮತ್ತು ಮಾಲ್ದಿ ಪುಡಿ

– ಶ್ಯಾಮಲಶ್ರೀ.ಕೆ.ಎಸ್.

ಈ ಹಿಂದಿನ ಬರಹದಲ್ಲಿ ರಾಗಿ ಹಿಟ್ಟಿನ ಒತ್ತು ಶಾವಿಗೆ ಮಾಡುವುದು ಹೇಗೆಂದು ತಿಳಿಸಲಾಗಿತ್ತು, ಒತ್ತು ಶಾವಿಗೆಯೊಂದಿಗೆ ಕಾಯಿ ಹಾಲು ಮತ್ತು ಮಾಲ್ದಿ ಪುಡಿ ಇದ್ದರೆ ಸವಿಯಲು ಇನ್ನೂ ಚೆನ್ನಾಗಿರುತ್ತದೆ. ಇವುಗಳನ್ನು ಮಾಡುವುದು ಹೇಗೆಂದು ನೋಡೋಣ ಬನ್ನಿ.

ಕಾಯಿ ಹಾಲು

ಬೇಕಾಗುವ ಸಾಮಾನುಗಳು

ಕಾಯಿ ತುರಿ – 1 ಬಟ್ಟಲು
ಬೆಲ್ಲದ ಪುಡಿ – 1 ಬಟ್ಟಲು
ಏಲಕ್ಕಿಪುಡಿ -1 ಸ್ವಲ್ಪ
ಗಸಗಸೆ – 1 ಚಮಚ

ಮಾಡುವ ಬಗೆ

ಮೊದಲಿಗೆ ತೆಂಗಿನ ತುರಿ, ಗಸಗಸೆಗೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಬೇಕು. ನಂತರ ಅಗತ್ಯವಿರುವಶ್ಟು ನೀರಿಗೆ ಬೆಲ್ಲದ ಪುಡಿ ಸೇರಿಸಿ ಕುದಿಸಬೇಕು. ಹೀಗೆ ಕುದಿಯುವ ವೇಳೆ ರುಬ್ಬಿದ ಮಿಶ್ರಣ ಸೇರಿಸಿ ಮತ್ತೆ ಕುದಿಯಲು ಬಿಡಬೇಕು. ಆ ವೇಳೆಗೆ ಏಲಕ್ಕಿ ಪುಡಿ ಸೇರಿಸಿದರೆ ಕಾಯಿ ಹಾಲು ಸಿದ್ದವಾಗುತ್ತದೆ.

ಮಾಲ್ದಿ ಪುಡಿ

ಬೇಕಾಗುವ ಸಾಮಾನುಗಳು

ಹುರಿಗಡಲೆ – 1/2 ಬಟ್ಟಲು
ಬಿಳಿ ಎಳ್ಳು – 2 ಚಮಚ
ಗಸಗಸೆ – 1 ಚಮಚ
ಏಲಕ್ಕಿ ಪುಡಿ – ಸ್ವಲ್ಪ
ಬೆಲ್ಲದ ಪುಡಿ -2 ಚಮಚ

ಮಾಡುವ ಬಗೆ

ಹುರಿಗಡಲೆ, ಗಸಗಸೆ ಮತ್ತು ಎಳ್ಳನ್ನು ಸ್ವಲ್ಪ ಹದಕ್ಕೆ ಹುರಿದು ಮಿಕ್ಸರ್ ನಲ್ಲಿ ಪುಡಿ ಮಾಡಿ, ಬೆಲ್ಲದ ಪುಡಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿದರೆ ಮಾಲ್ದಿ ಪುಡಿ ತಯಾರಾಗುತ್ತದೆ. (ಬೇಕಿದ್ದಲ್ಲಿ ಹುರಿದ ಕಡಲೆಬೀಜದ ಪುಡಿಯನ್ನು ಸೇರಿಸಬಹುದು).

ನಮ್ಮ ಸಾಂಪ್ರದಾಯಿಕ ಶೈಲಿಯ ತಿನಿಸು ರಾಗಿ ಹಿಟ್ಟಿನ ಒತ್ತು ಶಾವಿಗೆ ಮೇಲೆ ಕಾಯಿ ಹಾಲು, ಮಾಲ್ದಿಪುಡಿ ಉದುರಿಸಿ, ಮೂರನ್ನು ಬೆರೆಸಿ ಸವಿದರೆ ತುಂಬಾ ರುಚಿಬರಿತವಾಗಿರುತ್ತದೆ. ಹಾಗೆಯೇ ನಮ್ಮ ಆರೋಗ್ಯಕ್ಕೂ ಬಹಳ ಹಿತವಾದುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: