ಹ್ಯೂಮನ್ ಬ್ರೈನ್ ಹಮ್ಮುಗೆ: ಒಂದು ಬೆರಗು

– ನಿತಿನ್ ಗೌಡ.

ಈ ದಿನ ಅಣ್ಣಾವ್ರು ಬದುಕಿದ್ದಿದ್ರೆ, ವಿಶ್ವೇಶ್ವರಯ್ಯ ಅವರು ಬದುಕಿದ್ದಿದ್ರೆ ಮತ್ತು ಶಂಕರಣ್ಣ ಬದುಕಿದ್ದಿದ್ರೆ ಹೀಗೆ ‘ಈ ಬದುಕಿದ್ದಿದ್ರೆ’ ಅನ್ನುವ ನಮ್ಮ ಬಯಕೆಯ ಬಿಸಿಲು‌ ಕುದುರೆಯ ಹಿಂದೆ ಆ ಸಾದಕರು ಮತ್ತೆ ಹುಟ್ಟಿ ಮರಳಿ ಬರಬಹುದೇನೋ ಎಂಬ ನಿರೀಕ್ಶೆ ಮತ್ತು ಅವರು ಮರಳಿ ಬರಲು ಹೇಗೆ ಸಾದ್ಯ ಅನ್ನುವ ಹತಾಶೆ – ಇವೆರಡೂ ಒಟ್ಟೊಟ್ಟಿಗೆ ಕಾಣುತ್ತದೆ. ಆದರೆ ಆದದ್ದು ಅಯಿತು, ಇನ್ನು ಮುಂದಾದರೂ ನಮ್ಮ ನಡುವೆ ಹುಟ್ಟಿಕೊಳ್ಳುವ ಇಂತಹ ಸಾದಕರು, ನಮ್ಮನ್ನು ಬೌತಿಕವಾಗಿ ಅಗಲಿದ ಮೇಲೂ, ಅವರ ನೆನಹು(Thought) ಜೀವಂತವಾಗಿಡುವ ಯಾವುದಾದರೂ ದಾರಿ ಇರುವುದಾ ಎನ್ನುವ ಕೇಳ್ವಿ ನಿಮ್ಮದಾಗಿದ್ದರೆ, ಅದಕ್ಕೆ ಬದಲು ಹೌದು ಎಂಬುದಾಗಿದೆ. ಈ ಕನಸು 2005ರಲ್ಲೇ ಚಿಗುರೊಡೆದಿದೆ. ಈ ಹಮ್ಮುಗೆಯ ಹೆಸರು ‘ ಬ್ಲೂ ಬ್ರೈನ್’ (Blue brain). ಬ್ಲು ಬ್ಲೂ ಬ್ರೈನ್ ‘ಸ್ವಿಜ್ ಬ್ರೈನ್ ರಿಸರ‍್ಚ್ ಕೇಂದ್ರದ’ (Swiss Brain Research Center ) ಅನುದಾನಿತ ಹಮ್ಮುಗೆಯಾಗಿದ್ದು, ಮೊದಲ ಹಂತದಲ್ಲಿ, ಇಲಿಯ ಮೆದುಳಿನ ಡಿಜಿಟಲ್ ಅವತರಣಿಕೆಯ ಮರುಕಟ್ಟುವಿಕೆಯ ಗುರಿಯನ್ನು ಹೊಂದಿತ್ತು. ಈ ಹಮ್ಮುಗೆಯು 2005ರಲ್ಲಿ ‘ಬ್ರೈನ್ ಅಂಡ್ ಮೈಂಡ್ ಇನ್ಸ್ಟಿಟ್ಯೂಟ್ ಆಪ್ ಎಕೋಲ್ ಪಾಲಿಟೆಕ್ನಿಕ್ ಪೆಡರೆಲ್ ಡಿ ಲಾಸನ್ನೆ’ (Brain and Mind Institute of École Polytechnique Fédérale de Lausanne – EPFL)ಯ ಮೂಲಕ , ಹೆನ್ರಿ ಮಾರ‍್ಕ್ರಾಮ್ ಅವರ ಮುಂದಾಳತ್ವದಲ್ಲಿ ಮೊದಲುಗೊಂಡಿತು. ಅಲ್ಲದೇ ಈ ಯೋಜನೆಯು, 2013ರಲ್ಲಿ ಹುಟ್ಟಿಕೊಂಡ ಯುರೋಪಿಯನ್ ಒಕ್ಕೂಟ ಅನುದಾನಿತ ‘ಹ್ಯೂಮನ್ ಬ್ರೈನ್’ (Human Brain) ಹಮ್ಮುಗೆಯ ಒಂದು ಹಿಂದಿನ(Precursor) ಕಿರು ಹಮ್ಮುಗೆಯಾಗಿದೆ.

ಏನಿದು ಹ್ಯೂಮನ್ ಬ್ರೈನ್ ಹಮ್ಮುಗೆ ? ಏನಿದು ಬ್ಲೂ ಬ್ರೈನ್ ? ಇದರ ಹಿಂದಿನ ಪ್ರೇರಣೆ ಏನು ? ಈ ಕನಸಿನ ಸಾಕಾರ ಸಾದ್ಯವೇ ? ಇದರ ಸುತ್ತ ಸದ್ಯದ ಬೆಳವಣಿಗೆಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮಾನವ ಮೆದುಳಿನ ಹಮ್ಮುಗೆ (Human Brain Project- HBP)

ಮಾನವ ಮೆದುಳಿನ ಹಮ್ಮುಗೆ, ಇದು ವೈಜ್ನಾನಿಕ ಮತ್ತು ಕೈಗಾರಿಕಾ ಅರಕೆಯರಿಗರಿಗೆ(research scientist) ನರದರಿಮೆ(Neuroscience), ಕಂಪ್ಯೂಟಿಂಗ್ ಮತ್ತು ಮೆದುಳಿಗೆ ಸಂಬಂದಿಸಿದ ಮದ್ದಿನ(Medicine) ಕ್ಶೇತ್ರದಲ್ಲಿ ನಮ್ಮ ತಿಳಿವನ್ನು ಹೆಚ್ಚಿಸಲು ಎಡೆಮಾಡಿಕೊಡುವ ಹಮ್ಮುಗೆಯಾಗಿದೆ. ಈ ಸಲುವಾಗಿ ಇವರಿಗೆ ಬೆಂಬಲಿಸಲು ಅತ್ಯಾದುನಿಕ ಅರಕೆಯ ಮೂಲ ಸವಲತ್ತುಗಳ ಏರ‍್ಪಾಡನ್ನು(Cutting edge Research Infrastructure) ಕಟ್ಟುವ ಗುರಿಯನ್ನು ಹೊಂದಿದೆ. ಈ ಹಮ್ಮುಗೆಯಲ್ಲಿ ಯುರೋಪ್ ಒಕ್ಕೂಟದ ಹಲವಾರು ಸಂಸ್ತೆಗಳಿದ್ದು, ಜಗತ್ತಿನ ಹಲವಾರು ಅರಿಗರು ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಇ.ಪಿ.ಎಪ್.ಲ್( EPFL) ಈ ತಂಡಗಳ ನಡುವೆ ಸಹಯೋಗ ಮತ್ತು ಹೊಂದಾಣಿಕೆ ಮೂಡಿಸುವ ಕೆಲಸ ಮಾಡುತ್ತದೆ. ಅಲ್ಲದೇ, ಅವರು ಕೊಟ್ಟ ಮಾಹಿತಿಯ ಸುತ್ತ ಮೆದುಳಿನ ಅಣಕವನ್ನು ಸೂಪರ‍್ ಕಂಪ್ಯೂಟರ್ ನಲ್ಲಿ ತರುವ ಹಲವಾರು ಕೆಲಸಗಳನ್ನು ಮಾಡುತ್ತದೆ.

ಹೆಚ್.ಬಿ.ಪಿ(H.B.P) ಇದು ಹಲವಾರು ಕವಲುಗಳನ್ನು ಹೊಂದಿದೆ. ಎತ್ತುಗೆಗೆ;

  1. ಮೆದುಳಿನ ಅಣಕ ಮಾಡುವ ಹಮ್ಮುಗೆ ( Brain Simulation Platform – B.S.P ) ಮತ್ತು ಇ-ಬ್ರೈನ್ಸ್ EBRAINS.

ಇದು ಜಗತ್ತಿನ ಅರಿಗರಿಗೆ( Research Scientist ) ತಮ್ಮ ಅರಕೆಯ ಪರೀಕ್ಶೆಯಿಂದ ದೊರೆತದದ್ದನ್ನು ಹೋಲಿಸಲು ಮತ್ತು ಇದರ ಸುತ್ತ ಇರುವ ಇತರ ಡಿಜಿಟಲ್ ಟೂಲ್ ಮತ್ತು ಸೇವೆಗಳನ್ನು ಪಡೆದು ಮೆದುಳು ಕೆಲಸ ಮಾಡುವ ಬಗೆಯನ್ನು ಅಣಕ ಮಾಡಲು ಒಂದು ವೇದಿಕೆಯನ್ನು ಕೊಡುತ್ತದೆ. ಬ್ಲೂ ಬ್ರೈನ್ ಇದರ ಕೆಳ ಬರುವ ಒಂದು ಕಿರು ಹಮ್ಮುಗೆಯಾಗಿದೆ. ಇ-ಬ್ರೈನ್ಸ್ ಇದರ ಸಂಬಂದಿತ ಮೂಲ ಸವಲತ್ತುಗಳನ್ನು ಒದಗಿಸುವ ವೇದಿಕೆಯಾಗಿದೆ.

     2.  ನ್ಯೂರೋ ರೊಬಾಟಿಕ್ಸ್ ( Neuro Robotics )

ಇದು ನರದರಿಮೆ, ರೊಬಾಟಿಕ್ಸ್ ಮತ್ತು ಕಟ್ಟು ಜಾಣ್ಮೆ(Artificial Intelligence) – ಈ ಮೂರನ್ನು ಒಟ್ಟುಗೂಡಿಸಿ ನಡೆಸುವ ಒಂದು ಕಲಿಕೆಯಾಗಿದೆ. ನಮಗೆಲ್ಲ ತಿಳಿದಿರುವಂತೆ ರೊಬಾಟ್ ಗಳನ್ನು ಮನುಶ್ಯನಿಗೆ ಸಹಾಯ ಮಾಡಲು ಮತ್ತು ಆತನ ಕೆಲಸಗಳನ್ನು ಮಾಡಲು ಹುಟ್ಟುಹಾಕಲಾಗಿದೆ. ರೋಬಾಟಿಕ್ಸ್ ನ ಗುರಿಯೇ ಇದು. ಇಂತಹ ಮಶೀನುಗಳು ಕೆಲಸ ಮಾಡಲು ಕಂಪ್ಯೂಟರ್ ಅಲ್ಗಾರಿದಮ್(ಎಸಗುಬಗೆ) ಮತ್ತು ಕಟ್ಟು ಜಾಣ್ಮೆ ಸಹಕಾರಿಯಾಗಿದೆ. ಮನುಶ್ಯನ ಮೆದುಳು ಹೇಗೆ ಕೆಲಸಮಾಡುತ್ತದೆ ಎಂಬುದರಿಂದ ಪ್ರೇರೇಪಣೆ ಪಡೆದು ಇಂತಹ ಎಸಗುಬಗೆಗಳು ಹುಟ್ಟಿಕೊಳ್ಳುತ್ತವೆ. ಇದನ್ನು ನಮಗೆ ಹೋಲಿಸಿ ಕೂಡಾ ನೋಡಬಹುದು. ರೋಬಾಟ್ ನಮ್ಮ ದೇಹವಿದ್ದಂತೆ. ನಮ್ಮ ದೇಹದೊಳಗೆ ಅಡಕವಾಗಿರುವ ಮೆದುಳ ಜಾಲಕ್ಕೆ ಸಮನಾಗಿ, ನ್ಯೂರಲ್ ನೆಟವರ್‍ಕ್ ಅನ್ನು ನಾವು ಮೇಲ್ನೋಟಕ್ಕೆ ಅಂದಾಜಿಸಿಕೊಳ್ಳಬಹುದು.

3. ತಿಳಿವಿನ ಸುತ್ತಲಿನ ಅರಿಮೆ ( Cognitive Science ) 

ತಿಳಿವಿನ ಅರಿಮೆಯು ಮನಸ್ಸು ಮತ್ತು ಜಾಣ್ಮೆಯ ಸುತ್ತಲಿನ ಕಲಿಕೆಯಾಗಿದ್ದು, ತತ್ವಶಾಸ್ತ್ರ (ಅರಿವಿನರಿಮೆ/Philosophy), ಒಳಗಿನರಿಮೆ( Psychology), ಕಟ್ಟು ಜಾಣ್ಮೆ , ನರದರಿಮೆ (Neuro Science), ನುಡಿಯರಿಮೆ (Linguistics) ಮತ್ತು ಮಂದಿಯರಿಮೆಯ (Anthropology) ತಳಹದಿಯನ್ನು ಒಳಗೊಂಡಿದೆ. ಆಡುನುಡಿಯಲ್ಲಿ ಹೇಳುವುದಾದರೆ, ನಮ್ಮ ಮೆದುಳು ತನ್ನ ಸುತ್ತಲಿನ ಆಗುಹೋಗುಗಳನ್ನು ಹೇಗೆ ಅರ್‍ತೈಸಿಕೊಳ್ಳುತ್ತದೆ ಮತ್ತು ಅದಕ್ಕೆ ಬದಲಾಗಿ ಹೇಗೆ ನಡೆದುಕೊಳ್ಳುತ್ತದೆ ಹಾಗೂ ಅದು ಹೇಗೆ ಕೆಲಸಮಾಡುತ್ತದೆ ಎನ್ನುವುದರ ಸುತ್ತ ತಿಳಿದುಕೊಳ್ಳುವ ಒಂದು ಅರಿಮೆಯಾಗಿದೆ.

4.ಮದ್ದರಿಮೆ Medicine

ಮನುಶ್ಯನಿಗೆ ಬಂದೊದುಗುವ ಹಲವಾರು ಕಾಯಿಲೆಗಳಿಗೆ ಮದ್ದನ್ನು ಕಂಡುಕೊಳ್ಳಲು ಈ ಯೋಜನೆ ಹೇಗೆ ಸಹಕಾರಿಯಾಗಲಿದೆ ಎಂಬುದು ಈ ಕವಲಿಗೆ ಬರುತ್ತದೆ. ಎತ್ತುಗೆಗೆ ಲಕ್ವಾ, ಪಿಟ್ಸ್, ಮೆದುಳು ಕಸಿ, ಕೋಮಾದಲ್ಲಿರುವ ರೋಗಿಯ ಆರೈಕೆ ಹೀಗೆ ಹಲವಾರು ವಿಶಯದಲ್ಲಿ ಈ ಯೋಜನೆ ಸಹಕಾರಿಯಾಗಬಲ್ಲದು.

ಈ ಬಗೆಗಿನ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೊಂಡಿಯಲ್ಲಿ ತಿಳಿದುಕೊಳ್ಳಬಹುದು.

ಬ್ಲೂ ಬ್ರೈನ್ ( Blue brain ) – ಒಂದು ಕಿರು ಪರಿಚಯ

ಬ್ಲೂ ಬ್ರೈನ್ ವಿಶ್ವದ ಮೊದಲ ನೆನಸಿನ ಮೆದುಳಿನ( Virtual brain) ಹೆಸರಾಗಿದೆ. ಈ ನೆನಸಿನ ಮಶೀನ್(virtual machine) ಕಟ್ಟು ಜಾಣ್ಮೆಯ(Artificial Intelligence) ತಳಹದಿಯ ಮೇಲೆ ಮಾಡಲಾಗುತ್ತಿರುವ ಮೆದುಳಿನ ಅರಿಕೆಯಾಗಿದೆ(application). ಹಿಮ್ಮುಕ ಬಿಣಿಗೆಯರಿಮೆ( Reverse Engineering) ಮೂಲಕ ಒಂದು ಅಣಕದ(Simulation) ವಾತಾವರಣದಲ್ಲಿ; ಮಿದುಳನ್ನು ಜೀವಕೋಶಗಳ ಮಟ್ಟದಿಂದ(Cellular level) ಡಿಜಿಟಲಿ ಮರುಹುಟ್ಟಿಸುವ ಮೊಗಸನ್ನು ಇಲ್ಲಿ ಮಾಡಲಾಗುತ್ತದೆ.

ಆಡು ನುಡಿಯಲ್ಲಿ ಹೇಳುವುದಾದರೆ, ಇದು ಮೆದುಳಿನ ಮೆದುಸರಕಿನ ಅವತರಣಿಕೆ (Software) ಮಾಡುವ ಹಮ್ಮುಗೆಯಾಗಿದೆ. ಆ ಮೆದುಳಿಗೆ ಒಡಲು(Body) ಬೇಕಿಲ್ಲ ಮತ್ತು ಆ ಜೀವಿ ಬದುಕಿದ್ದಾಗ ಹೇಗೆ ಯೋಚಿಸುತ್ತಿತ್ತೋ, ಯಾವ ಬಗೆಯ ತೀರ‍್ಮಾನ ಇತ್ಯಾದಿ ತೆಗೆದುಕೊಳ್ಳುತ್ತಿತ್ತೋ; ಅದೇ ಕೆಲಸ ಈ ನೆನಸಿನ ಮೆದುಳು ಮಾಡುತ್ತದೆ. ಅಂದರೆ ಇದನ್ನು ಮುಂದೆ ಮನುಶ್ಯನ ಮೆದುಳ ಅಣಕ(Simulate) ಮಾಡಲು ಬಳಸಬಹುದು. ಈ ಮೂಲಕ ಆ ವ್ಯಕ್ತಿ ಸತ್ತಮೇಲೂ , ಆತನ ಆಲೋಚನೆಗಳನ್ನು ಜೀವಂತವಾಗಿಡುವ ದಾರಿ ದೊರೆತಂತಾಯಿತಲ್ಲವೇ! ಕೇಳಲು ಅರಿಮೆಯ ಕಟ್ಟುಕತೆಯ( Science fiction) ತರ ಸೊಗಸಾಗಿದೆ ಅಲ್ವಾ! ಆದರೆ ಈ ಹಿರಿಹಂಬಲದ ಹಮ್ಮುಗೆಯ ಹಿಂದಿನ ಕೆಲಸದ ಬಗೆಗೆ ನಮಗೆ ಕೊಂಚ ಅಂದಾಜಾದಾರೂ ಸಿಗಬೇಕಾದರೆ, ಮೊದಲು ನಾವು ನಮ್ಮ ನರಮಂಡಲದ ಏರ‍್ಪಾಡು ಅದರಲ್ಲೂ ಹೆಚ್ಚಾಗಿ ಮೆದುಳಿನ ಅಗಾದತೆಯ ಬಗ್ಗೆ ಅರಿಯಬೇಕು. ಇದು ಇಲಿಯ ಮೆದುಳಿನ ಸುತ್ತ ನಡೆದ ಹಮ್ಮುಗೆಯಾದರೂ, ಕೊನೆಗೆ ಇದನ್ನು ಮನುಶ್ಯನ ಮೆದುಳ ಬಗ್ಗೆ ಅರಿಯಲು ಬಳಸಲಾಗುತ್ತದೆ. ಕಾರಣ ಮೂಲದಲ್ಲಿ ಇಲಿಯು ಮತ್ತು ಮನುಶ್ಯ ಇಬ್ಬರೂ ಮೊಲೆಯೂಡಿಗಳಾಗಿದ್ದು, ನರ ಮಂಡಲದ ಏರ‍್ಪಾಡು ಒಂದೇ ತರಹವಿದ್ದು ಅದರ ಬೆಳವಣಿಗೆಯ ಮಟ್ಟ ಮತ್ತು ಜಟಿಲತೆ ಮನುಶ್ಯನಲ್ಲಿ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ನಾವು ಮನುಶ್ಯನ ಮೆದುಳಿನ ಹೆಚ್ಚುಗಾರಿಕೆಯ ಬಗ್ಗೆ ತಿಳಿಯುವ ಮೂಲಕವೇ ಈ ಬ್ಲೂ ಬ್ರೈನ್ ಹಮ್ಮುಗೆಯ ಜೊತೆ ತಾಳೆ ಹಾಕಬೇಕಾಗಿದೆ. ಮುಂದಿನ ಬರಹದಲ್ಲಿ ನಮ್ಮ ಮೆದುಳ ಬಗೆಗೆ ತಿಳಿದುಕೊಳ್ಳೋಣ.

( ಮಾಹಿತಿ ಮತ್ತು ಚಿತ್ರ ಸೆಲೆ: EBRAINS, humanbrainProject.eupixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: