ಬ್ರೆಕ್ಟ್ ಕವನಗಳ ಓದು – 5 ನೆಯ ಕಂತು
– ಸಿ.ಪಿ.ನಾಗರಾಜ.
ಕೂತುಂಬುವವರು
(ಕನ್ನಡ ಅನುವಾದ: ಕೆ.ಪಣಿರಾಜ್)
ಕೂತುಂಬುವವರು
ಹಾಸಿಗೆ ಇದ್ದಷ್ಟು ಕಾಲು ಚಾಚೆಂದು
ಬೋಧನೆ ಮಾಡುವರುವಿಧಿಲೀಲೆಯಂದದಿ ಯಾರಿಗೆ ದೇಣಿಗೆ
ಹರಿದುಬರುವುದೋ ಅವರು
ಇತರರಿಂದ ತ್ಯಾಗವನ್ನು ಬಯಸುವರುಹೊಟ್ಟೆ ತುಂಬಿದವರು
ಹಸಿದವರಿಗೆ ಮುಂಬರಲಿರುವ
ಸುದಿನಗಳ ಬಗ್ಗೆ ಕೊರೆಯುವರುದೇಶವನ್ನು ಅಧೋಗತಿಗೆ ತಳ್ಳುವ ಮುಂದಾಳುಗಳು
ಆಳುವ ಭಾರ ಪಾಮರರಿಗೆ
ಬಲು ಘೋರವೆಂಬರು.
ದುಡಿಮೆಯ ಮೂಲಕ ಸಮಾಜಕ್ಕೆ ಒಳಿತನ್ನು ಮಾಡದೆ, ಉಪದೇಶದ ಮಾತುಗಳನ್ನಾಡುತ್ತ ಪರಾವಲಂಬಿಗಳಾಗಿ ಬಾಳುತ್ತಿರುವ ವ್ಯಕ್ತಿಗಳ ಕಪಟತನದ ನಡೆನುಡಿಯನ್ನು ಈ ಕವನದಲ್ಲಿ ಹೇಳಲಾಗಿದೆ.
ಕೂತುಂಬುವವರು=ಕೂತು+ಉಂಬುವವರು; ಕೂತು=ಕುಳಿತುಕೊಂಡು; ಉಂಬುವವರು=ಉಣ್ಣುವವರು/ಊಟವನ್ನು ಮಾಡುವವರು; ಕೂತುಂಬುವವರು=ಇದೊಂದು ನುಡಿಗಟ್ಟು. ಮಾನವ ಸಮುದಾಯದ ಬದುಕಿಗೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯ ರಂಗಗಳಲ್ಲಿ ಯಾವುದೇ ಒಂದು ದುಡಿಮೆಯನ್ನು ಮಾಡದೇ, ಕಂಡವರ ಆಸ್ತಿ ಇಲ್ಲವೇ ಸಂಪತ್ತಿನಿಂದ ಆರಾಮವಾಗಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಗಳು;
ಹಾಸಿಗೆ ಇದ್ದಷ್ಟು ಕಾಲು ಚಾಚು=ಇದೊಂದು ಗಾದೆ. ವ್ಯಕ್ತಿಯು ತನ್ನ ದುಡಿಮೆಯಿಂದ ಬರುವ ಆದಾಯದ ಮಿತಿಯಲ್ಲಿಯೇ ತನ್ನ ಜೀವನವನ್ನು ಕಟ್ಟಿಕೊಳ್ಳಬೇಕು. ಆದಾಯಕ್ಕಿಂತ ಹೆಚ್ಚು ವೆಚ್ಚವನ್ನು ಮಾಡಿದರೆ ಸಾಲಸೋಲಗಳಿಗೆ ಸಿಲುಕಿ ನರಳಬೇಕಾಗುತ್ತದೆ ಎಂಬ ಎಚ್ಚರವನ್ನು ಈ ಗಾದೆಯ ತಿರುಳು ಸೂಚಿಸುತ್ತದೆ; ಬೋಧನೆ=ಉಪದೇಶ/ತಿಳಿಯ ಹೇಳುವುದು;
ಕೂತುಂಬುವವರು ಹಾಸಿಗೆ ಇದ್ದಷ್ಟು ಕಾಲು ಚಾಚೆಂದು ಬೋಧನೆ ಮಾಡುವರು=ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ದುಡಿದು ತಮ್ಮ ಬದುಕನ್ನು ನಡೆಸದೆ ಮಯ್ಗಳ್ಳರಾಗಿರುವ ವ್ಯಕ್ತಿಗಳು, ಇತರರಿಗೆ ದುಂದು ವೆಚ್ಚವನ್ನು ಮಾಡದೇ ಇದ್ದುದರಲ್ಲಿಯೇ ಹಿತಮಿತವಾಗಿ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಉಪದೇಶವನ್ನು ಮಾಡುತ್ತಿದ್ದಾರೆ; ಇತರರಿಗೆ ನೀತಿಯನ್ನು ಹೇಳುವ ಮುನ್ನ ತಾನು ನೀತಿವಂತನಾಗಿ ಬಾಳಬೇಕೆಂಬ ಅರಿವು ಮತ್ತು ಎಚ್ಚರವಿಲ್ಲದ ವ್ಯಕ್ತಿಗಳ ವರ್‍ತನೆಯು ಈ ಬಗೆಯಲ್ಲಿರುತ್ತದೆ;
ವಿಧಿ+ಲೀಲೆಯ+ಅಂದದಿ; ವಿಧಿ=ಹಣೆಬರಹ; ಲೀಲೆ=ಆಟ;
ವಿಧಿಲೀಲೆ=ಮಾನವ ಜೀವಿಗಳ ಹುಟ್ಟಿಗೆ ದೇವರು ಕಾರಣನಾಗಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಸಾವಿನ ತನಕ ಏನೇನು ಆಗಬೇಕು? ಏನೇನು ದೊರೆಯಬೇಕು? ಎಂಬುದೆಲ್ಲವನ್ನೂ ಆ ದೇವರು ವ್ಯಕ್ತಿಯ ಹಣೆಯಲ್ಲಿ ಬರೆದಿರುತ್ತಾನೆ. ಹಿಂದಿನ ಜನ್ಮಗಳಲ್ಲಿ ಜೀವಿಯು ಮಾಡಿದ ಪಾಪ ಪುಣ್ಯಗಳಿಗೆ ಅನುಸಾರವಾಗಿ, ಈ ಜನ್ಮದಲ್ಲಿ ಸಿರಿವಂತಿಕೆ ಇಲ್ಲವೇ ಬಡತನ ದೊರೆಯುತ್ತದೆ. ವ್ಯಕ್ತಿಯು ತನ್ನ ಪಾಲಿಗೆ ಬಂದಿದ್ದನ್ನು ಒಪ್ಪಿಕೊಂಡು ಬಾಳಬೇಕು ಎಂಬ ನಂಬಿಕೆಯು ಜನಮನದಲ್ಲಿ ಪರಂಪರಾಗತವಾಗಿ ನೆಲೆಸಿದೆ. ಇಂತಹ ನಂಬಿಕೆಯನ್ನು ಸಾವಿರಾರು ವರುಶಗಳಿಂದಲೂ ಸಾಹಿತ್ಯ, ಸಂಗೀತ. ಕಲೆ, ಶಿಲ್ಪಗಳೆಲ್ಲವೂ ಜನಮನದಲ್ಲಿ ಬೇರೂರಿಸಿವೆ. ಈ ನಂಬಿಕೆಯಿಂದಾಗಿ ಬಡವರು ತಮ್ಮ ಹಸಿವು, ಅಪಮಾನ ಮತ್ತು ಬಡತನಕ್ಕೆ ಜಾತಿಮತಗಳ ಮೇಲು ಕೀಳಿನ ವ್ಯವಸ್ತೆ ಮತ್ತು ಹಣಕಾಸಿನ ಏರ್‍ಪಾಟಿನಲ್ಲಿನ ತಾರತಮ್ಯ ಕಾರಣವಾಗಿದೆ ಎಂಬುದನ್ನು ಅರಿಯದೆ, ಮುಂದಿನ ಜನ್ಮದಲ್ಲಾದರೂ ಒಳ್ಳೆಯದಾಗಲಿ ಎಂದು ದೇವರ ಮೊರೆಹೋಗುತ್ತಾರೆ;
ಅಂದದಿ=ರೀತಿಯಲ್ಲಿ; ದೇಣಿಗೆ=ಕೊಡುಗೆ/ಕಾಣಿಕೆ;
ವಿಧಿಲೀಲೆಯಂದದಿ ಯಾರಿಗೆ ದೇಣಿಗೆ ಹರಿದುಬರುವುದು=ತಮ್ಮ ಸಿರಿತನ ಇಲ್ಲವೇ ಬಡತನಕ್ಕೆ ತಮ್ಮ ಹಣೆಬರಹವೇ ಕಾರಣವೆಂದು ನಂಬಿರುವ ಜನರು ಮುಂದಿನ ದಿನಗಳಲ್ಲಾದರೂ ಇಲ್ಲವೇ ಮುಂದಿನ ಜನ್ಮದಲ್ಲಾದರೂ ಸಿರಿಸಂಪದಗಳು ದೊರೆಯುವಂತಾಗಲಿ ಎಂಬ ಆಸೆಯಿಂದ ಜಾತಿ/ಮತ/ದೇವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಒಕ್ಕೂಟಗಳಿಗೆ ಮತ್ತು ಅಲ್ಲಿನ ಗುರುಹಿರಿಯರಿಗೆ ಹರಕೆಯ ರೂಪದಲ್ಲಿ ಹಣವನ್ನು ನೀಡುತ್ತಾರೆ. ಸಿರಿವಂತರು ಇನ್ನೂ ಹೆಚ್ಚಿನ ಸಂಪತ್ತು ದೊರೆಯಲಿ ಎಂದು ದೊಡ್ಡ ಮೊತ್ತದ ಹರಕೆಯನ್ನು ಒಪ್ಪಿಸಿದರೆ, ಬಡವರು ತಮ್ಮ ಬಡತನ ನೀಗುವಂತಾಗಲಿ ಎಂದು ತಾವು ಪರಿಶ್ರಮದ ದುಡಿಮೆಯಿಂದ ಗಳಿಸಿದ್ದ ಸಣ್ಣ ಮೊತ್ತದ ಹಣವನ್ನೇ ಕಾಣಿಕೆಯಾಗಿ ನೀಡುತ್ತಾರೆ. ಈ ರೀತಿ ಬಡವ ಬಲ್ಲಿದರಿಬ್ಬರಿಂದಲೂ ಜಾತಿ/ಮತ/ದೇವರ ಹೆಸರಿನ ಒಕ್ಕೂಟಗಳಿಗೆ ಕೋಟಿಗಟ್ಟಲೆ ಹಣ ಪ್ರತಿನಿತ್ಯವೂ ಸಂದಾಯವಾಗುತ್ತಿರುತ್ತದೆ;
ಅವರು=ಜನರು ಕೊಡುವ ಕಾಣಿಕೆಯ ಹಣದಿಂದಲೇ ಜೀವನದಲ್ಲಿ ಎಲ್ಲ ಬಗೆಯ ಅನುಕೂಲವನ್ನು ಪಡೆದು ಬಾಳುತ್ತಿರುವವರು; ತ್ಯಾಗ=ದಾನ/ಕೊಡುಗೆ/ಕಾಣಿಕೆ;
ಅವರು ಇತರರಿಂದ ತ್ಯಾಗವನ್ನು ಬಯಸುವರು=ಇತರರು ನೀಡಿದ ದೇಣಿಗೆಯ ಹಣದಿಂದಲೇ ತಮ್ಮ ಹೊಟ್ಟೆಹೊರೆದುಕೊಳ್ಳುತ್ತಿರುವ ಈ ಸೋಮಾರಿಗಳು “ಮಾನವ ಜೀವನವೆಂಬುದು ನೀರಮೇಲಣ ಗುಳ್ಳೆಯಂತೆ. ಆದ್ದರಿಂದ ಜನರೆಲ್ಲರೂ ಒಡವೆ ವಸ್ತುಗಳಿಗಾಗಿ ಆಸೆಪಡದೆ ತ್ಯಾಗಶೀಲರಾಗಿ ಬಾಳಬೇಕೆಂದು” ದೊಡ್ಡದಾಗಿ ಉಪದೇಶವನ್ನು ನೀಡುತ್ತಾರೆ;
ಹೊಟ್ಟೆ ತುಂಬಿದವರು=ನೆಮ್ಮದಿಯ ಜೀವನಕ್ಕೆ ಅಗತ್ಯವಾದ ವಸ್ತು ಒಡವೆ ಆಸ್ತಿಯನ್ನು ಹೊಂದಿರುವವರು; ಮುಂದೆ+ಬರಲಿರುವ; ಸುದಿನ=ಒಳ್ಳೆಯ ದಿನ/ಯಾವುದೇ ಕೊರತೆಗಳಿಲ್ಲದೆ ನೆಮ್ಮದಿಯಿಂದ ಬಾಳುವ ದಿನ; ಕೊರೆ=ಕೇಳುವವರಿಗೆ ಬೇಸರ ಉಂಟಾಗುವಂತೆ ಒಂದೇ ಸಮನೆ ಹೇಳಿದ್ದನ್ನೇ ಹೇಳುತ್ತಿರುವುದು;
ಹೊಟ್ಟೆ ತುಂಬಿದವರು ಹಸಿದವರಿಗೆ ಮುಂಬರಲಿರುವ ಸುದಿನಗಳ ಬಗ್ಗೆ ಕೊರೆಯುವರು=ಬಡವರ ಹಸಿವು, ಅಪಮಾನ ಮತ್ತು ಬಡತನದ ನಿವಾರಣೆಗೆ ಅಡ್ಡಿಯಾಗಿರುವ ಜಾತಿ ಮತದ ವ್ಯವಸ್ತೆ ಮತ್ತು ಹಣಕಾಸಿನ ಏರ್‍ಪಾಟಿನಲ್ಲಿರುವ ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸದೆ, ಮುಂದಿನ ದಿನಗಳಲ್ಲಿ ಬಡವರಿಗೆ ಜೀವನಕ್ಕೆ ಅಗತ್ಯವಾದುದೆಲ್ಲವೂ ದೊರೆಯುವುದೆಂಬ ಪೊಳ್ಳು ಬರವಸೆಯ ನುಡಿಗಳನ್ನು ಆಡುವರು;
ಅಧೋಗತಿ=ಅವನತಿ/ಕೆಳಮಟ್ಟ; ತಳ್ಳು=ದೂಡು/ನೂಕು/ದಬ್ಬು; ಮುಂದಾಳು=ನಾಯಕ/ಮುನ್ನಡೆಸುವವನು;
ದೇಶವನ್ನು ಅಧೋಗತಿಗೆ ತಳ್ಳುವ ಮುಂದಾಳುಗಳು=ದೇಶದ ಆಡಳಿತ ಸೂತ್ರವನ್ನು ಹಿಡಿದು, ಜನಸಮುದಾಯದ ಒಲವು ನಲಿವು ನೆಮ್ಮದಿಯ ಜೀವನಕ್ಕೆ ಅತ್ಯಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯದ ಅನುಕೂಲಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಿ, ಅವನ್ನು ಸರಿಯಾಗಿ ಸಕಾಲದಲ್ಲಿ ಕಾರ್‍ಯರೂಪಕ್ಕೆ ತರದೆ , ಅದಿಕಾರದ ಗದ್ದುಗೆಯನ್ನು ಪಡೆಯುವುದಕ್ಕಾಗಿ ಮತ್ತು ಪಡೆದ ಅದಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತ, ಜಾತಿ ಮತ ದೇವರ ಹೆಸರಿನಲ್ಲಿ ಜನಸಮುದಾಯಗಳ ನಡುವೆ ಅಸಹನೆ, ಅನುಮಾನ, ಅಸೂಯೆ ಮತ್ತು ಹಗೆತನದ ಒಳಮಿಡಿತಗಳನ್ನು ಕೆರಳಿಸಿ, ಪರಸ್ಪರ ಹೊಡೆದಾಟ ಕೊಲೆ ಸುಲಿಗೆಯಲ್ಲಿ ತೊಡಗುವಂತೆ ಮಾಡುತ್ತ, ಸಿರಿವಂತರ ಸಂಪತ್ತನ್ನು ಇಮ್ಮಡಿಗೊಳಿಸುತ್ತ , ದುಡಿಯುವ ಶ್ರಮಜೀವಿಗಳ ಬದುಕನ್ನು ಬಡತನದ ಆಳಕ್ಕೆ ತಳ್ಳುತ್ತಿರುವ ರಾಜಕಾರಣಿಗಳು;
ಆಳುವ ಭಾರ=ಆಡಳಿತವನ್ನು ನಡೆಸುವ ಹೊಣೆಗಾರಿಕೆ/ಜವಾಬ್ದಾರಿ;
ಪಾಮರ=ದಡ್ಡ/ಗತಿಯಿಲ್ಲದವನು/ತಿಳುವಳಿಕೆಯಿಲ್ಲದವನು; ಬಲು=ಬಹಳ/ಅತಿ ಹೆಚ್ಚು; ಘೋರ+ಎಂಬರು; ಘೋರ=ಕಶ್ಟ/ತೊಂದರೆ/ಹಿಂಸೆ; ಎಂಬರು=ಎನ್ನುವರು;
ಆಳುವ ಭಾರ ಪಾಮರರಿಗೆ ಬಲು ಘೋರವೆಂಬರು=ದೇಶದ ಆಡಳಿತವನ್ನು ಸುಗಮವಾಗಿ ನಡೆಸುವುದಕ್ಕೆ ಬಹಳ ಅಡ್ಡಿ ಆತಂಕಗಳಿವೆ. ಅವನ್ನೆಲ್ಲಾ ತೊಡೆದುಹಾಕಿ, ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಕಸುವು ಪಾಮರರಲ್ಲಿ ಇಲ್ಲವೆಂದು ಆಡಳಿತದ ಗದ್ದುಗೆಯನ್ನು ಹಿಡಿದು ಕುಳಿತವರು ಹೇಳುತ್ತಾರೆ;
ದೇಶವನ್ನು ಅಧೋಗತಿಗೆ ತಳ್ಳುವ ಮುಂದಾಳುಗಳು ಆಳುವ ಭಾರ ಪಾಮರರಿಗೆ ಬಲು ಘೋರವೆಂಬರು=ದೇಶದ ಆಡಳಿತದ ಗದ್ದುಗೆಯನ್ನು ಜಾತಿಮತದ ಬಲ, ಹಣಬಲ, ತೋಳ್ಬಲದಿಂದ ಹಿಡಿದುಕೊಂಡಿರುವ ರಾಜಕಾರಣಿಗಳು ದುಡಿಯುವ ಶ್ರಮಜೀವಿಗಳ ಕಯ್ಗೆ ದೇಶದ ಆಡಳಿತ ಸೂತ್ರವನ್ನು ಕೊಡಲು ಒಪ್ಪುವುದಿಲ್ಲ. ಏಕೆಂದರೆ ಅದಿಕಾರ ಒಮ್ಮೆ ಕಯ್ ತಪ್ಪಿದರೆ ತಮ್ಮ ಜಾತಿ ಮತದ ಹಿರಿಮೆ ಕುಗ್ಗುತ್ತದೆ; ತಮ್ಮ ಸಂಪತ್ತು ಕಡಿಮೆಯಾಗುತ್ತದೆ ಮತ್ತು ತಮ್ಮ ದಬ್ಬಾಳಿಕೆಯ ಆಡಳಿತ ಕೊನೆಗೊಳ್ಳುತ್ತದೆ ಎಂಬ ಹೆದರಿಕೆಯು ದೇಶವನ್ನು ಆಳುತ್ತಿರುವ ರಾಜಕಾರಣಿಗಳ ಮನದಲ್ಲಿದೆ ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ.
ದಿನ ಬೆಳಗಾದರೆ ಪ್ರಕಟಗೊಳ್ಳುತ್ತಿರುವ ಪತ್ರಿಕಾ ವರದಿಗಳಲ್ಲಿ ಮತ್ತು ಇಪ್ಪತ್ನಾಲ್ಕು ಗಂಟೆಯೂ ಪ್ರಸಾರಗೊಳ್ಳುವ ಟಿ.ವಿ. ಚಾನೆಲ್ ಗಳಲ್ಲಿ ಜನರಿಗೆ ಉಪದೇಶ ಮಾಡುವವರಲ್ಲಿ ಬಹುತೇಕ ಮಂದಿ ಯಾವುದೇ ದುಡಿಮೆಯನ್ನು ಮಾಡದೆ ಮತ್ತು ಒಳ್ಳೆಯ ಆಡಳಿತವನ್ನು ನಡೆಸದೆ, ಬರಿ ಮಾತಿನಲ್ಲೇ ಮಂಟಪವನ್ನು ಕಟ್ಟಿದಂತೆ ಜನಸಮುದಾಯದ, ಸಮಾಜದ ಮತ್ತು ದೇಶದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿರುವ ಬಗೆಯನ್ನು ಈ ಕವನ ಸೂಚಿಸುತ್ತಿದೆ.
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು