ಬೆಲ್ಹೆವೆನ್ – ಪ್ರಯೋಜನವಿಲ್ಲದ ಸೇತುವೆ
– ಕೆ.ವಿ.ಶಶಿದರ.
ಬೆಲ್ಹೆವೆನ್ ಸೇತುವೆ ಇರುವುದು ಸ್ಕಾಟ್ಲೆಂಡ್ ನ ಡಂಬಾರ್ ಪಟ್ಟಣದ ಬೀಲ್ ಎಂಬ ಹಳ್ಳಿಯಲ್ಲಿ. ಈ ಬೀಲ್ ಹಳ್ಳಿಯಲ್ಲಿ ಹರಿಯುವ ತೊರೆಯತ್ತ ನೋಡಿದರೆ ವಿಸ್ಮಯವೊಂದು ಗೋಚರವಾಗುತ್ತದೆ. ಅದೇನೆಂದರೆ ನೀರಿನ ಮದ್ಯದಲ್ಲಿರುವ ಚಿಕ್ಕದಾದ ಸೇತುವೆ. ಈ ಸೇತುವೆ ಎಲ್ಲರನ್ನೂ ಸೆಳೆಯಲು ಕಾರಣವೇನೆಂದರೆ ಇದರ ಎರಡೂ ಬದಿಯಲ್ಲಿರುವ ಮೆಟ್ಟಲುಗಳು ನೀರಿನಲ್ಲಿವೆ. ಮೆಟ್ಟಲುಗಳ ಬಳಿ ಸಾಗಲು ನೀರಿನಲ್ಲೇ ಹಾದು ಹೋಗಬೇಕು. ಮೆಟ್ಟಲು ಹತ್ತಿ ಸೇತುವೆಯ ಮೇಲೆ ನಡೆದು ಆಚೆ ಬದಿಗೆ ಬಂದರೆ, ಅಲ್ಲಿ ಕೆಳಿಗಿಳಿಯಲು ಮೆಟ್ಟಲುಗಳಿವೆ. ಆ ಮೆಟ್ಟಲುಗಳನ್ನು ಇಳಿದರೆ ಮತ್ತೆ ನೀರಿನಲ್ಲೇ ಇಳಿಯಬೇಕು. ಇದರಿಂದ ಸಾರ‍್ವಜನಿಕರಿಗೆ ಯಾವುದೇ ಉಪಯೋಗವಾಗದಿದ್ದಲ್ಲಿ ಇದನ್ನು ನಿರ‍್ಮಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.
‘ಬೀಲ್ ವಾಟರ್’ ಒಂದು ತೊರೆಯಾಗಿದ್ದು, ಇದನ್ನು ಬೀಲ್ ಹಳ್ಳಿಯ ಹೆಗ್ಗುರುತಾಗಿ ಕಾಣಬಹುದು. ಲುಗೇಟ್ ಬರ್‍ನ್ ನಿಂದ ಮೊದಲಾಗುವ ಈ ತೊರೆ, ಬೀಲ್ ಹಳ್ಳಿಯ ಮೂಲಕ ಹಾದು ಹೋಗಿ, ಸುಮಾರು 4.5 ಕಿಲೋಮೀಟರ್ ಉದ್ದ, ದಕ್ಶಿಣ ಸ್ಕಾಟ್ಲ್ಯಾಂಡ್ ನ ಬೆಲ್ಹೆವೆನ್ ಕೊಲ್ಲಿಯನ್ನು ಸೇರುತ್ತದೆ. ನೀರಿನ ಪ್ರಮಾಣ ಕಡಿಮೆಯಿರುವಾಗ ಸ್ತಳೀಯರು ಹಾಗು ಪ್ರವಾಸಿಗರು ನೀರಿಲ್ಲದ ಬೇಲ್ ವಾಟರ್ ತೊರೆಯ ಮೇಲೆ ನಡೆದು ಹೋಗಿ, ಈ ಸೇತುವೆಯನ್ನು ಹತ್ತಿ ಇಳಿದು ನಂತರ ಬೆಲ್ಹೆವೆನ್ ಬೇ ಬೀಚ್ ಸೇರಬಹುದು. ಈ ಕರಾವಳಿಯಲ್ಲಿ ಮರಳಿನ ದಿಬ್ಬಗಳು, ಉಪ್ಪಿನ ಜವುಗುಗಳು ಮತ್ತು ಹುಲ್ಲುಗಾವಲಿನ ಸುಂದರ ದ್ರುಶ್ಯಗಳನ್ನು ಕಾಣಬಹುದು. ಕೊಲ್ಲಿಯ ಏರಿಳಿತಗಳು ಕಡಿಮೆ ಮಟ್ಟದಲ್ಲಿರುವ ಸಮಯದಲ್ಲಿ ಪ್ರವಾಸಿಗರು ಮತ್ತು ಸ್ತಳೀಯರು ಅಲ್ಲಿನ ಸೊಗಸಾದ ಸಮಯವನ್ನು ಆಸ್ವಾದಿಸುತ್ತಾರೆ.
ಸ್ಕಾಟ್ಲ್ಯೆಂಡ್ ನ ಬಿಸಿಲಿನ ಪ್ರದೇಶಗಳಲ್ಲಿ ಇದು ವಿಶೇಶವಾಗಿದೆ. ಇದರ ಸುತ್ತಮುತ್ತಲಿನ ನೋಟವು ಅದ್ಬುತವಾಗಿದ್ದು, ಇಲ್ಲಿ ಸೂರ‍್ಯ ಮುಳುಗುವ ಸಮಯದಲ್ಲಿ ಬಾನಿನಲ್ಲಿ ಮೂಡುವ ರಂಗುರಂಗಿನ ಚಿತ್ತಾರಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿಯಲು ಹಲವಾರು ಪೊಟೋಗ್ರಾಪರ್ ಗಳು ಕಾತುರದಿಂದ ಕಾದು ಕುಳಿತಿರುತ್ತಾರೆ. ಇಲ್ಲಿನ ಸಮುದ್ರದ ಏರಿಳಿತವು ಸಹ ಅಶ್ಟೇ ಅದ್ಬುತವಾದ ವಾತಾವರಣವನ್ನು ಸ್ರುಶ್ಟಿಸುತ್ತದೆ. ಸಮುದ್ರದ ಉಬ್ಬರವು ಹೆಚ್ಚಿದ್ದಾಗ ಸೇತುವೆಯ ಹೆಚ್ಚಿನ ಬಾಗವು ನೀರಿನಲ್ಲಿ ಮುಳುಗುವ ಹಿನ್ನೆಲೆಯಲ್ಲಿ, ತೊರೆಯನ್ನು ದಾಟುವ ಸಾಹಸಕ್ಕೆ ಕೈ ಹಾಕುವುದು ಒಳ್ಳೆಯದಲ್ಲ. ಕೊಲ್ಲಿಯ ಉಬ್ಬರವಿಳಿತವು ಸಾಹಸ ಕ್ರೀಡೆಯಂತೆ ಇರುವ ಹಿನ್ನಲೆಯಲ್ಲಿ ಸಾಹಸಿಗರು ಹಾಗೂ ಪೊಟೋಗ್ರಾಪರ್ ಗಳು ಆ ಕ್ಶಣಕ್ಕಾಗಿ ಚಾತಕ ಪಕ್ಶಿಯಂತೆ ಕಾದು ಕುಳಿತಿರುತ್ತಾರೆ.
ಚಳಿಗಾಲದಲ್ಲಿ ಬೆಲ್ಹೆವೆನ್ ಕೊಲ್ಲಿಯು ಮಂಜಿನಿಂದ ಸುತ್ತುವರೆದಿರುತ್ತದೆ. ಆಗ ಈ ಸೇತುವೆಯ ಚಿತ್ರಣ ಬಹಳ ಸುಂದರವಾಗಿ ಕಂಡುಬರುತ್ತದೆ. ವಸಂತಕಾಲ ಮತ್ತು ಬೇಸಿಗೆಯಲ್ಲಿ ಬೀಲ್ ಹಳ್ಳಿಯು ಮರೆಯಲಾಗದ ಸ್ಕಾಟಿಶ್ ತಾಣವಾಗಿ ಬದಲಾಗುತ್ತದೆ. ಗಾಡ ಬಣ್ಣಗಳು ಚಾಯಾಗ್ರಾಹಕರನ್ನು ಕೈ ಬೀಸಿ ಕರೆಯುತ್ತವೆ. ಹಾಗಾಗಿ ಎಲ್ಲಾ ಕಾಲದಲ್ಲೂ ಈ ಸ್ತಳ ಪ್ರವಾಸಿಗರು ಮತ್ತು ಪೊಟೋಗ್ರಾಪರ್ ಗಳಿಂದ ತುಂಬಿರುತ್ತದೆ.
ಬೆಲ್ಹೆವೆನ್ ಬೇ ಬೀಚ್ ಮುಯಿರ್ ಕಂಟ್ರಿ ಪಾರ‍್ಕಿನ ಬಾಗವಾಗಿದೆ. 1976ರಲ್ಲಿ ಸ್ತಾಪಿತವಾದ ಮುಯಿರ್ ಕಂಟ್ರಿ ಪಾರ‍್ಕಿನ ಉದ್ಯಾನವನ ಸುಮಾರು 7.73 ಚದರ ಕಿಲೋಮೀಟರ್ ವಿಸ್ತೀರ‍್ಣವನ್ನು ಹೊಂದಿದೆ. ಈ ಉದ್ಯಾನವನ 400ಕ್ಕೂ ಹೆಚ್ಚು ವಿಶಿಶ್ಟ ಜಾತಿಯ ಸಸ್ಯ ಮತ್ತು ಬಹುವಿದದ ಚಿಟ್ಟೆಗಳು ಹಾಗೂ ಪಕ್ಶಿಗಳಿಗೆ ಆಶ್ರಯ ತಾಣವಾಗಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: hiddenscotland.co, thebearandthefox.com, unusualplaces.org, facebook.com )
ಇತ್ತೀಚಿನ ಅನಿಸಿಕೆಗಳು