ಕವಿತೆ: ಮಳೆ ಬಂತು ಮಳೆ
ಮಳೆ ಬಂತು ಮಳೆ ನಮ್ಮೂರ‍್ನಾಗು ಮಳೆ
ಸುಯ್ಯೆಂದು ಸುರಿಯಿತು
ಗುಡುಗುಡು ಸದ್ದಿನ ಸಪ್ಪಳ ಕೇಳಿ ಬಂತು
ಮಿರ‍್ರನೆ ಮಿರುಗುವ ಬೆಳ್ಳನೆ ಮಿಂಚು
ಬಾನೆಲ್ಲಾ ಬೆಳಗಿತು
ಇಬ್ಬೇಸಿಗೆಯಲಿ ಸುಡುವ ಸೂರ‍್ಯನ
ಒಮ್ಮೆಲೇ ಓಡಿಸಿತು
ಬಿಸಿಲ ಬೇಗೆಗೆ ನಲುಗಿದ್ದ ದರೆಗೆ
ಜಲದಾರೆ ಹರಿಸಿ ತಣಿಸಿತು
ಬಾಡಿದ ಗಿಡಮರಗಳಿಗೆಲ್ಲಾ ಮತ್ತೆ
ಮರುಜೀವ ತಂದಿತು
ಮಳೆ ಬಂತು ಮಳೆ ವರುಶದ ಮೊದಲ ಮಳೆ
ಸುರಿಸಿ ಅಚ್ಚರಿ ತಂತು
ಮಣ್ಣಿನ ಮಕ್ಕಳ ಮನವ ಹಗುರಾಗಿಸಿ
ಮೊಗದಲಿ ನಗೆಯ ಚೆಲ್ಲಿತು
ಮಳೆಯಿಂದ ತೊಯ್ದ ಮಣ್ಣಿನ ಗಮಲು
ಮತ್ತೆ ಕಾಯಕದೆಡೆ ಕರೆಯಿತು
ಮಳೆ ಬಂತು ಮಳೆ ನಮ್ಮೂರ‍್ನಾಗು ಮಳೆ
ಸುರಿದು ಊರಿಗೆ ಕಳೆ ಬಂತು
ಜನಮನಕೆ ಹರುಶ ತಂತು
ಮತ್ತದೇ ಸಡಗರ ಎಲ್ಲೆಲ್ಲೂ ಮೂಡಿತು
(ಚಿತ್ರ ಸೆಲೆ: unsplash.com)
ಇತ್ತೀಚಿನ ಅನಿಸಿಕೆಗಳು