ಮರೂರ್ ಕೋಳಿ ಸಾರು

– ಯಶವನ್ತ ಬಾಣಸವಾಡಿ.

ಮುದ್ದೆ ಕೋಳಿ ಸಾರು, Mudde Koli saaru

ಏನೇನು ಬೇಕು?

  • ಕತ್ತರಿಸಿದ ಕೋಳಿ – 1 ಕೆ ಜಿ
  • ದೊಡ್ಡ ಈರುಳ್ಳಿ – 1
  • ತಕ್ಕಾಳಿ (ಟೊಮೇಟೊ) – 2
  • ಬೆಳ್ಳುಳ್ಳಿ ಎಸಳು – 8-10
  • ಶುಂಟಿ – 1-2
  • ದನ್ಯ ಪುಡಿ – 1 ದೊಡ್ಡ ಚಮಚ
  • ಹುರಿದ ಒಣ ಮೆಣಸಿನಕಾಯಿ – 12-14 (ಕಾರಕ್ಕೆ ತಕ್ಕಶ್ಟು)
  • ಚಕ್ಕೆ – 2
  • ಲವಂಗ – 4/5
  • ಕೊತ್ತಂಬರಿ ಸೊಪ್ಪು – ಒಂದು ಹಿಡಿ
  • ಕಾಯಿ ತುರಿ – 1/4 ಬಟ್ಟಲು
  • ಎಣ್ಣೆ – 2 ದೊಡ್ಡ ಚಮಚ

ಮಾಡುವ ಬಗೆ:

ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಯಲ್ಲಿ ಕೋಳಿಯ ತಂಡುಗಳನ್ನು ಸುರಿದು ಚಿಟಕೆ ಉಪ್ಪು ಮತ್ತು ಅರಿಶಿನ ಪುಡಿ ಬೆರೆಸಿ. ಕೆಲವು ನಿಮಿಶಗಳಲ್ಲಿ ಕೋಳಿಯಿಂದ ನೀರು ಬಿಡುತ್ತದೆ; ಈ ನೀರು ಇಂಗುವವರೆಗೂ ಕೋಳಿಯನ್ನು ಬೇಯಿಸಿ. ಕೋಳಿ ಬೇಯುತ್ತಿರುವ ಹೊತ್ತಿನಲ್ಲಿ ಮಸಾಲೆಯನ್ನು ಅಣಿ ಮಾಡಿಕೊಳ್ಳಿ. ಒಣ ಮೆಣಸಿನಕಾಯಿ, ಚಕ್ಕೆ ಮತ್ತು ಲವಂಗಗಳನ್ನು ಒಂದು ಬಾಣಲೆಯಲ್ಲಿ ಹುರಿಯಿರಿ.

ಒಳಕಲ್ಲು ಇಲ್ಲವೇ ರುಬ್ಬುಗೆಯಲ್ಲಿ(mixer) ಈರುಳ್ಳಿ, ತಕ್ಕಾಳಿ, ಬೆಳ್ಳುಳ್ಳಿ, ಹುರಿದ ಒಣ ಮೆಣಸಿನಕಾಯಿ, ಚಕ್ಕೆ, ಲವಂಗ ಸೇರಿಸಿ. ಜೊತೆಗೆ ದನ್ಯ ಪುಡಿ, ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೇಯುತ್ತಿರುವ ಕೋಳಿಯಲ್ಲಿ ನೀರು ಇಂಗಿದ ಕೂಡಲೇ, ಮಸಾಲೆಯನ್ನು ಸೇರಿಸಿ ನಿಮಗೆ ಬೇಕಾದ ಹದಕ್ಕೆ ನೀರು ಮತ್ತು ರುಚಿಗೆ ತಕ್ಕಶ್ಟು ಉಪ್ಪು ಬೆರಸಿ ಕುದಿಯಲು ಬಿಡಿ. ಒಂದು ಕುದಿ ಬಂದ ಮೇಲೆ ಉರಿಯನ್ನು ತಗ್ಗಿಸಿ, ಪಾತ್ರೆಯನ್ನು ಒಂದು ತಟ್ಟೆಯಿಂದ ಮುಚ್ಚಿ ಎಣ್ಣೆ ಬಿಡುವವರೆಗೂ ಕುದಿಸಿ.

ಮುದ್ದೆ, ಅನ್ನ ಮತ್ತು ರೊಟ್ಟಿಗಳೊಡನೆ ಸವಿಯಲು “ಮರೂರ್” ಕೋಳಿ ಸಾರು ಅಣಿಗೊಳ್ಳುತ್ತದೆ 🙂

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *