ಮಯ್ಸೂರು ದಸರಾ ಮತ್ತು ಗುಜರಾತದ ರಣ ಉತ್ಸವ

ಸಂದೀಪ್ ಕಂಬಿ.

IMG_0146

ಬೂಮಿಯಿಂದ ನೇರವಾಗಿ ಚಂದ್ರವೋ ಇಲ್ಲವೇ ಇನ್ನಾವುದೋ ಬೇರೆ ಬೆಳ್ಳನೆಯ ಗ್ರಹದಲ್ಲಿ ಬಂದಿಳಿದಂತಹ ಅನುಬವ ಕೊಡುವ ಈ ಉಪ್ಪುಗಾಡು ಇರುವುದು ಗುಜರಾತದ ಕಚ್ ಬಾಗದಲ್ಲಿ. ಇದನ್ನು ರಣ ಎಂದು ಕರೆಯುತ್ತಾರೆ. ಇದು ಪ್ರಪಂಚದ ಅತಿ ದೊಡ್ಡ ಉಪ್ಪುಗಾಡೂ ಹವ್ದು. ಇಲ್ಲಿ ಪ್ರತಿ ವರುಶ ಡಿಸೆಂಬರ್‍-ಜನವರಿ ತಿಂಗಳುಗಳಲ್ಲಿ ‘ರಣ ಉತ್ಸವ’ ಎಂಬ ಹಬ್ಬ ನಡೆಯುತ್ತದೆ. ಸುಮಾರು ಒಂದುವರೆ ತಿಂಗಳುಗಳ ಕಾಲ ನಡೆಯುವ ಈ ಹಬ್ಬ, ಕಚ್ ಬಾಗ ಮತ್ತು ಅದರ ಮಂದಿಯ ಬದುಕು, ನಡಾವಳಿ, ಮತ್ತು ನಡೆನುಡಿಗಳನ್ನು ಪ್ರಪಂಚಕ್ಕೆ ಎತ್ತಿ ತೋರಿಸುವ ಒಂದು ನೆಲೆಯಾಗಿದೆ.

ಪ್ರವಾಸಿಗರಿಗೆ ತಂಗಲು ಕಟ್ಟುವ ಮನೆಗಳು, ಬಿಡಾರಗಳಿಂದ ಹಿಡಿದು, ಅಲ್ಲಿ ಮಾರುವ ತಿಂಡಿ ತಿನಿಸುಗಳು, ಆಟಿಕೆಗಳು, ಕಲೆಯ ವಸ್ತುಗಳು, ಬಟ್ಟೆಬರೆಗಳು, ಮತ್ತು ಅಲ್ಲಿ ನಡೆಯುವ ಸಾಂಸ್ಕ್ರುತಿಕ ಕಾರ್‍ಯಕ್ರಮಗಳವರೆಗೂ ಎಲ್ಲವೂ ‘ಕಚ್’ಮಯ. ಬೆರಗು ಹುಟ್ಟಿಸುವ ಉಪ್ಪುಗಾಡಿನ ಚೆಲುವಿನ ಜೊತೆಯಲ್ಲೇ, ಬೇರೆಲ್ಲೂ ನೋಡಲು, ಅನುಬವಿಸಲು ಸಿಗದ ಕಚ್ ನಡಾವಳಿಯ ರಸದವ್ತಣವನ್ನು ಬಡಿಸಿ, ಅಲ್ಲಿಗೆ ಬಂದ ಪ್ರವಾಸಿಗರ ಮಯ್ ಮನ ತಣಿಸಿ ಕಳಿಸುತ್ತದೆ ಈ ಹಬ್ಬ. ಇದೇ ಕಾರಣಕ್ಕೆ, ಈ ಹಿಂದೆ ಆಶ್ಟು ಹೆಸರು ಮಾಡದ ಈ ಜಾಗಕ್ಕೆ, ಕಳೆದ ಕೆಲವು ವರುಶಗಳಲ್ಲಿ ತೀರಾ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಕಳೆದ ವರುಶ ನಾನು ಅಲ್ಲಿಗೆ ಕೆಲವು ಗೆಳೆಯರೊಂದಿಗೆ ಹೋಗಿದ್ದಾಗ, ಹಬ್ಬವು ಮೊದಲಾಗುವ ಹಲವು ತಿಂಗಳುಗಳ ಮುಂಚೆಯೇ ಅಲ್ಲಿ ಉಳಿಯಲು ಇರುವ ಬಿಡಾರಗಳೆಲ್ಲ ಕಾದಿರಿಸಲಾಗುತ್ತವೆ ಎನ್ನುವ ವಿಶಯ ತಿಳಿದು ಬಂದಿತು.

ಹೋದ ಶನಿವಾರವಶ್ಟೇ ನಮ್ಮ ನಾಡಹಬ್ಬ ಎನಿಸಿಕೊಂಡ ಮಯ್ಸೂರು ದಸರಾ ಹಬ್ಬವನ್ನು ತೊಡಗಿಸಲಾಯಿತು. ಗುಜರಾತದ ರಣ ಉತ್ಸವದಂತೆ, ಮಯ್ಸೂರು ದಸರಾ ನಮ್ಮ ನಾಡಿನ ನಡಾವಳಿಯನ್ನು ಜಗತ್ತಿಗೆ ಎತ್ತಿ ತೋರಿಸುವ ಒಂದು ಚಿನ್ನದಂತಹ ನೆಲೆ. ಆದರೆ ಕಳೆದ ಕೆಲವು ವರುಶಗಳಲ್ಲಿ ನಮ್ಮ ದಸರಾ ಹಿಡಿಯುತ್ತಿರುವ ಹಾದಿ ನೋಡಿದರೆ ನಾವು ಈ ನೆಲೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದು ದಿಟ. ಇದರ ಒಂದು ಸಣ್ಣ ಎತ್ತುಗೆ ಇಲ್ಲಿದೆ:

dasara_kutch

ಮೇಲಿನ ಚಿತ್ರದ ಎಡಗಡೆ ಇರುವುದು ಮಯ್ಸೂರು ದಸರಾ ತಾಣದಿಂದ ಪಡೆದ ತೆರೆಹಿಡಿತ. ಬಲಗಡೆಯದು ರಣ ಉತ್ಸವದ ಮಿನ್ನೆಲೆಯಿಂದ ಪಡೆದ ತೆರೆಹಿಡಿತ. ಮೊದಲನೆಯದರಲ್ಲಿ, ಮಯ್ಸೂರಲ್ಲಿ ನಾವು ನಾಡಹಬ್ಬ ಏಕೆ ಆಚರಿಸಲು ಹೊರಟಿದ್ದೇವೆ ಎಂಬುದರ ಗೊತ್ತು ಗುರಿಯಿಲ್ಲದಿರುವುದು ಎದ್ದು ಕಾಣುತ್ತದೆ. ಆದರೆ ಎರಡನೆಯದರಲ್ಲಿ, ಕಚ್ ಜನರ ಬದುಕು ಮತ್ತು ನಡಾವಳಿಗಳನ್ನು ತೋರ್‍ಪಡಿಸುವ ಗುರಿ ತಿಳಿಯಾಗಿ ಕಾಣುತ್ತದೆ. ಮೊದಲೇ ಹೇಳಿದಂತೆ ಇದು ಒಂದು ಸಣ್ಣ ಎತ್ತುಗೆ ಮಾತ್ರ. ಒಟ್ಟಾರೆಯಾಗಿ ಹೇಳಬೇಕಾದರೆ, ಬೇರೆ ರಾಜ್ಯದ ತಿಂಡಿ ತಿನಿಸುಗಳು, ಸಂಸ್ಕ್ರುತಿಕ ಕಾರ್‍ಯಕ್ರಮಗಳು, ಅವರ ಕುಣಿತಗಳು, ಅವರ ಬಟ್ಟೆ-ಬರೆ, ಕಲೆಯ ವಸ್ತುಗಳು ಮತ್ತು ಬಾಲಿವುಡ್ ಸಂಗೀತವನ್ನು ನಮ್ಮ ನಾಡಹಬ್ಬ ನೀಡಲು ಹೊರಟಿದೆ. ಆದರೆ ಅದೇ ರಣ ಉತ್ಸವ ಗುಜರಾತದ, ಅದರಲ್ಲೂ ಕಚ್ ಬಾಗದ ಬೇರ್‍ಮೆಯನ್ನೇ ಒಡ್ಡಿ ಮಂದಿಯನ್ನು ಸೆಳೆಯುತ್ತಿದೆ. ಇಲ್ಲಿ ಎಲ್ಲೂ ಬೇರೆ ರಾಜ್ಯದ ಬಗ್ಗೆ ಒಂದು ಸೊಲ್ಲೂ ಇಲ್ಲ. ಬಾಲಿವುಡ್ ಅಂತೂ ಅವರು ಲೆಕ್ಕಕ್ಕೇ ತೆಗೆದುಕೊಂಡಂತೆ ಕಾಣುವುದಿಲ್ಲ.

ನಾಡಹಬ್ಬವು ನಾಡಿನ ಬೇರ್‍ಮೆಯನ್ನು ಸರಿಯಾಗಿ ಎತ್ತಿಹಿಡಿಯದಿದ್ದರೆ ಏನು ಪ್ರಯೋಜನ? ದೇಶದ ಎಲ್ಲ ಸಂಸ್ಕ್ರುತಿಗಳನ್ನು ಒಳಗೊಳ್ಳುವ ಆತುರದಲ್ಲಿ ನಮ್ಮತನವನ್ನು ತೋರಿಸಲಾಗದಿದ್ದರೆ, ದಸರಾ ಹಬ್ಬದ ಸೆಳೆತವೆಲ್ಲಿ ಉಳಿಯುತ್ತದೆ? ಈ ಬಗೆಯಲ್ಲಿ ನೋಡಿದರೆ ನಿಜವಾಗಿಯೂ ಗುಜರಾತದ ರಣ ಉತ್ಸವ ನಡೆದಿರುವುದು ಸರಿಯಾದ ಹಾದಿ ಎನಿಸುತ್ತದೆ, ಮತ್ತು ಮಯ್ಸೂರು ದಸರಾ ಹಬ್ಬವನ್ನು ಹಮ್ಮಿಕೊಳ್ಳುವವರು ಗುಜರಾತದವರಿಂದ ಕಲಿಯಬೇಕಾದುದು ಬಹಳವಿದೆ.

 

ಇವುಗಳನ್ನೂ ನೋಡಿ

1 ಅನಿಸಿಕೆ

  1. 05-12-2013

    […] ವರುಶ ಗೆಳೆಯರೊಡನೆ ಗುಜರಾತಿಗೆ ಕಾರನ್ನು ಓಡಿಸಿಕೊಂಡು ಹೋದಾಗ ಬೆಳಗಾವಿಯ […]

ಅನಿಸಿಕೆ ಬರೆಯಿರಿ: