ಅರಾಬಿಕಾ ಮತ್ತು ರೊಬಸ್ಟಾ ಕಾಪಿಗಳ ಬೇರ‍್ಮೆ

– ರತೀಶ ರತ್ನಾಕರ.

ಹಿಂದಿನ ಬರಹದಲ್ಲಿ ಕಾಪಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ ತಿಳಿಸಿರುವಂತೆ ಜಗತ್ತಿನಲ್ಲಿ ಬೆಳೆಯುತ್ತಿರುವ ಕಾಪಿಯಲ್ಲಿ 75% ಅರಾಬಿಕವನ್ನು ಬೆಳೆದರೆ ಉಳಿದ ಹೆಚ್ಚಿನ ಬಾಗ ರೊಬಸ್ಟಾವನ್ನು ಬೆಳೆಯುತ್ತಾರೆ. ಹಾಗಾದರೆ ಈ ಅರಾಬಿಕಾ ಹಾಗು ರೊಬಸ್ಟಾ ಕಾಪಿಯ ನಡುವಿನ ಬೇರ‍್ಮೆಗಳೇನು ಎಂಬುದನ್ನು ಈ ಬರಹದಲ್ಲಿ ತಿಳಿಯೋಣ.

ಅರಾಬಿಕಾ ಮತ್ತು ರೊಬಸ್ಟಾ ಕಾಪಿಗಳು ನೋಡುವುದಕ್ಕೆ ಹೆಚ್ಚುಕಡಿಮೆ ಒಂದೇ ರೀತಿಯಲ್ಲಿ ಕಂಡರೂ, ಬೆಳೆಯುವ ಬಗೆ ಮತ್ತು ಅವುಗಳ ಗುಣಗಳಲ್ಲಿ ಹಲವು ಬೇರ‍್ಮೆಗಳನ್ನು ಕಾಣಬಹುದು. ಆ ಗುಣಗಳು ಮತ್ತು ಅದರ ಬೇರ‍್ಮೆಗಳನ್ನು ಈ ಕೆಳಗೆ ನೀಡಲಾಗಿದೆ.ARB4ಕಾಪಿಯ ತಳಿ:

ಅರಾಬಿಕಾ ಕಾಪಿಯೂ ‘ಕಾಪಿಯೇಯ್ ಅರಾಬಿಕಾ‘(Coffea Arabica) ಎಂಬ ತಳಿಯಾಗಿದ್ದು ಈ ತಳಿಯ ಇರುವಿಕೆಯನ್ನು 1753 ರಲ್ಲಿ ಕಂಡು ಹಿಡಿಯಲಾಯಿತು. ಮೊತ್ತ ಮೊದಲನೆಯದಾಗಿ ಬೇಸಾಯ ಮಾಡಿ ಬೆಳೆಯಲು ಆರಂಬಿಸಿದ ತಳಿ ಎಂಬ ಹೆಗ್ಗಳಿಗೆಯನ್ನು ಇದು ಹೊಂದಿದೆ. ಅತಿ ಎತ್ತರದ ಮತ್ತು ಬೆಟ್ಟದ ಸಾಲುಗಳಲ್ಲಿ ಬೆಳೆಯಲು ಸೂಕ್ತವಾಗಿರುವ ಬೆಳೆಯಾದ ಇದು ‘ಬೆಟ್ಟದ ಕಾಪಿ’ ಎಂದು ಹೆಸರುವಾಸಿಯಾಗಿದೆ. ಈ ಕಾಪಿಯಲ್ಲಿರುವ ‘ಕೆಪಿನ್’ (Caffeine) ಅಂಶವು ಕಾಪಿಯ ಉಳಿದ ಎಲ್ಲಾ ತಳಿಗಳಿಗಿಂತ ಕಡಿಮೆಯಿದೆ, ಹಾಗಾಗಿ ಉಳಿದ ಕಾಪಿಯ ತಳಿಗಳಿಗಿಂತ ರುಚಿಕರವಾದ ಕಾಪಿ ಎಂದು ಕೂಡ ಕರೆಸಿಕೊಳ್ಳುತ್ತದೆ.

ರೊಬಸ್ಟಾ ಕಾಪಿಯೂ ‘ಕಾಪಿಯೇಯ್ ಕನೆಪೋರಾ‘ (Coffea Canephora) ಎಂಬ ತಳಿಯಾಗಿದ್ದು ಇದನ್ನು 1895ರಲ್ಲಿ ಕಂಡು ಹಿಡಿಯಲಾಯಿತು. ವ್ಯಾವಹಾರಿಕ ಉದ್ದೇಶಕ್ಕಾಗಿಯೇ ಈ ಕಾಪಿಯ ತಳಿಯನ್ನು ಕಂಡು ಹಿಡಿಯಲಾಗಿದೆ. ಅರಾಬಿಕಾ ಕಾಪಿಗಿಂತ ಹೆಚ್ಚಿನ ಇಳುವರಿಯನ್ನು ರೊಬಸ್ಟಾ ಕಾಪಿಬೆಳೆಯಲ್ಲಿ ಕಾಣಬಹುದು. ಅರಾಬಿಕಾ ಕಾಪಿಯ ಬೆಳೆಗೆ ಹೋಲಿಸಿದರೆ ಇದು ಕೀಟ ಮತ್ತು ರೋಗಕ್ಕೆ ಕೂಡಲೇ ತುತ್ತಾಗುವುದಿಲ್ಲ ಮತ್ತು ಬದಲಾಗುವ ಗಾಳಿಪಾಡಿಗೆ ಹೊಂದಿಕೊಂಡು ಬೆಳೆಯುತ್ತದೆ ಹಾಗಾಗಿ ರೊಬಸ್ಟಾ ಬೆಳೆಯನ್ನು ಅರಾಬಿಕಕ್ಕಿಂತ ಕಡಿಮೆ ಪೋಶಣೆ ಕೊಟ್ಟು ಸುಲಬವಾಗಿ ಬೆಳೆಯಬಹುದು.

ಕಾಪಿ ಬೆಳೆಯುವ ಗಾಳಿಪಾಡು:
ಅರಾಬಿಕಾ ಕಾಪಿ ಬೆಳೆಯಲು ವರುಶದ ಬಿಸುಪು 15-24 ಡಿಗ್ರಿ ಸೆಂಟಿಗ್ರೇಡ್ ಮತ್ತು ವರುಶಕ್ಕೆ 1200 – 2200 ಮಿ.ಮೀ ಮಳೆ ಬೀಳುವಂತಿರಬೇಕು. ಕಡಲ ಮಟ್ಟದಿಂದ ಅರಾಬಿಕಾ ಕಾಪಿ ಬೆಳೆಯುವ ಜಾಗ ಕಡಿಮೆ ಎಂದರೂ 1200 -2200 ಮೀಟರ್ ನಶ್ಟು ಎತ್ತರದಲ್ಲಿರಬೇಕು. ಆದರೆ ಹಿಮ ಬೀಳುವ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲು ಸಾದ್ಯವಿಲ್ಲ.

ರೊಬಸ್ಟಾ ಕಾಪಿಬೆಳೆಯಲು ವರುಶದ ಬಿಸುಪು 18-35 ಡಿಗ್ರಿಯವರೆಗೆ ಮತ್ತು ವರುಶಕ್ಕೆ ಅರಾಬಿಕಾಕ್ಕಿಂತ ಹೆಚ್ಚಿನ ಮಳೆ ಅಂದರೆ 2200 ರಿಂದ 3000 ಮಿ.ಮೀ ಮಳೆ ಬೀಳುವಂತಿರಬೇಕು. ಕಡಲ ಮಟ್ಟದಿಂದ ತೀರ ಎತ್ತರವಿಲ್ಲದ ಜಾಗದಲ್ಲಿಯೂ ಕೂಡ ಇದನ್ನು ಬೆಳೆಯಬಹುದು. ಇದನ್ನು ಬೆಳೆಯಲು ಕಡಲ ಮಟ್ಟದಿಂದ ಸುಮಾರು 0-800 ಮೀಟರ್ ನಶ್ಟು ಎತ್ತರದಲ್ಲಿರುವ ಜಾಗವಿದ್ದರೂ ಸಾಕು.

ARB1ಕಾಪಿ ಬೀಜ ಮತ್ತು ಗಿಡದ ಇಟ್ಟಳ:

ಅರಾಬಿಕಾ ಕಾಪಿಯೂ ನೆಲದಿಂದ 9-12 ಮೀಟರ್ ನವರೆಗೆ ಬೆಳೆಯುತ್ತವೆ. ಎಲೆಗಳು ಕಂದು ಹಸಿರು ಬಣ್ಣದಲ್ಲಿದ್ದು ಕೊಂಚ ಹೊಳೆಯವಂತಿರುತ್ತವೆ. ಮೊಟ್ಟೆಯಾಕಾರದ ಎಲೆಗಳು ಸುಮಾರು 6-12 ಸೆ.ಮೀ. ಉದ್ದ ಮತ್ತು 4-8 ಸೆ.ಮೀ. ಅಗಲವಿರುತ್ತವೆ. ಅರಾಬಿಕಾ ಕಾಪಿಯ ಹಣ್ಣುಗಳು 10-15 ಮಿ.ಮಿ ಅಡ್ಡಳತೆ ಹೊಂದಿದ್ದು ಎರೆಡು ಬೇಳೆಗಳನ್ನು ಒಳಗೊಂಡಿರುತ್ತದೆ. ಈ ಬೇಳೆಗಳೇ ಕಾಪಿ ಬೀಜಗಳು. ಕಾಪಿ ಬೀಜವು ಉದ್ದ-ಉರುಟಾದ (Elliptical) ಆಕಾರವನ್ನು ಹೊಂದಿರುತ್ತವೆ. ಅರಾಬಿಕಾ ಕಾಪಿಯ ಬೇರುಗಳು ರೊಬಸ್ಟಾಗೆ ಹೋಲಿಸಿದರೆ ಹೆಚ್ಚು ಆಳಕ್ಕೆ ಹರಡಿಕೊಂಡಿರುತ್ತದೆ.

ರೊಬಸ್ಟಾ ಕಾಪಿಯೂ ಕೂಡ ನೆಲದಿಂದ 10 ಮೀಟರ್ ವರೆಗೆ ಬೆಳೆಯುತ್ತವೆ. ಆದರೆ ಇದರ ಕಾಂಡವು ಅರಾಬಿಕಾಕ್ಕಿಂತ ಹೆಚ್ಚು ದಪ್ಪನಾಗಿದ್ದು ಎಲೆಗಳು ಕೂಡ ದೊಡ್ಡದಾಗಿರುತ್ತವೆ. ಕಾಪಿಬೀಜವು ಉಂಡನೆಯ ಆಕಾರದಲ್ಲಿದ್ದು ಹೆಚ್ಚು ಕಡಿಮೆ ಮೊಟ್ಟೆಯಾಕಾರದಲ್ಲಿರುತ್ತವೆ (Oval).

ಇರ‍್ಪರಿಮೆ (Chemistry):
ಕಾಪಿಗಿಡಗಳು ಹೊರಗಿನ ರೋಗ ಮತ್ತು ಕೀಟಗಳಿಂದ ಕಾಪಾಡಿಕೊಳ್ಳಲು ತಮ್ಮ ಕಾಪಿ ಬೀಜಗಳಲ್ಲಿ ಕೆಪಿನ್ ಮತ್ತು ಕ್ಲೋರೊಜೆನಿಕ್ ಹುಳಿ(Chlorogenic Acid) ಯನ್ನು ಹೊಂದಿರುತ್ತವೆ. ಅರಾಬಿಕಾ ಕಾಪಿ ಬೀಜವು 0.8 – 1.4% ನಶ್ಟು ಕೆಪಿನ್ ಹಾಗು 5.5-8.0% ನಶ್ಟು ಕ್ಲೋರೋಜೆನಿಕ್ ಹುಳಿಯನ್ನು ಹೊಂದಿದೆ. ರೊಬಸ್ಟಾವು ಅರಾಬಿಕಾಕ್ಕಿಂತ ಎರೆಡು ಪಟ್ಟು ಅಂದರೆ 1.7 – 4% ನಶ್ಟು ಕೆಪಿನ್ ಮತ್ತು 7-10% ಕ್ಲೋರೋಜೆನಿಕ್ ಹುಳಿಯನ್ನು ಹೊಂದಿದೆ. ಇದರಿಂದ ರೊಬಸ್ಟಾ ಕಾಪಿಯು ಕೀಟ ಹಾಗು ರೋಗಗಳಿಗೆ ಬೇಗನೆ ತುತ್ತಾಗುವುದಿಲ್ಲ ಮತ್ತು ಅರಾಬಿಕಾಕ್ಕಿಂತ ಗಟ್ಟಿಮುಟ್ಟಾಗಿ ಬೆಳೆಯುತ್ತದೆ.

ARB3ಅರಾಬಿಕಾ ಕಾಪಿಯೂ ರೊಬಸ್ಟಾಗಿಂತ ಸರಿಸುಮಾರು 60% ಹೆಚ್ಚು ಸೀರೆಣ್ಣೆ(Lipids) ಯನ್ನು ಮತ್ತು ರೊಬಸ್ಟಾಗಿಂತ ಎರೆಡುಪಟ್ಟು ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದೆ. ಅರಾಬಿಕಾದಲ್ಲಿ 6-9% ಸಕ್ಕರೆ ಅಂಶವಿದ್ದರೆ ರೊಬಸ್ಟಾದಲ್ಲಿ 3-7% ಇದೆ. 15-17% ಸೀರೆಣ್ಣೆ ಅರಾಬಿಕಾ ಬೀಜದಲ್ಲಿ ಇದ್ದರೆ 10-11.5% ರೊಬಸ್ಟಾದಲ್ಲಿದೆ, ಇದರಿಂದಾಗಿ ಅರಾಬಿಕ ಕಾಪಿಯ ಹುಳಿತ (Acidity) ಹೆಚ್ಚಿದೆ. ಸಕ್ಕರೆಯ ಅಂಶ ಕಡಿಮೆಯಿದ್ದು ಕೆಪಿನ್ ಅಂಶ ಹೆಚ್ಚಿರುವುದರಿಂದ ರೊಬಸ್ಟಾ ಕಾಪಿಯು ಹೆಚ್ಚು ಕಹಿಯಾಗಿದೆ.

ಇದಲ್ಲದೇ ಕಾಪಿ ಬೀಜದಲ್ಲಿ ಹಲವು ರಾಸಾಯನಿಕ ಅಂಶಗಳವೆ. ಅವುಗಳಲ್ಲಿ ಕ್ವಿನಿಕ್ (Quinic), ಕ್ಲೋರೋಜೆನಿಕ್ (Chlorogenic), ಸಿಟ್ರಿಕ್ (Citric), ಪಾಸ್ಪರಿಕ್ (Phosphoric) , ಅಸಿಟಿಕ್ (Acetic) ಹುಳಿಗಳು (Acids), ಟ್ರೈಗೊನೆಲೈನ್, ಕೆಪಿನ್, ಸೀರೆಣ್ಣೆ ಮತ್ತು ಕಾರ‍್ಬೋಹೈಡ್ರೇಟ್ಸ್.

ಇದಲ್ಲದೇ, ಈ ಕಾಪಿಯ ತಳಿಗಳ ನಡುವೆ ಮತ್ತಶ್ಟು ಬೇರ‍್ಮೆಗಳಿವೆ ಮೇಲಿನವು ಕೆಲವು ಮುಕ್ಯವಾದವು ಮಾತ್ರ. ಈ ಬೇರ‍್ಮೆಗಳ ಕಾರಣದಿಂದ ಅರಾಬಿಕಾ ಹಾಗು ರೊಬಸ್ಟಾ ಬೆಳೆಗಳ ಬೇಸಾಯದಲ್ಲಿಯೂ ಕೂಡ ಬೇರ‍್ಮೆಗಳನ್ನು ಕಾಣಬಹುದು. ಅರಾಬಿಕಾ ಕಾಪಿಯನ್ನು ಹೆಚ್ಚು ನಿಗಾವಹಿಸಿ ಕೀಟ ಹಾಗು ರೋಗಗಳಿಂದ ಕಾಪಾಡಿಕೊಂಡು ಬೆಳೆಯ ಬೇಕಾಗುತ್ತದೆ. ಅಲ್ಲದೇ ಗಾಳಿಪಾಡಿನ ಹೆಚ್ಚುಕಡಿಮೆ ಕೂಡ ಅರಾಬಿಕಾ ಗಿಡವನ್ನು ತೊಂದರೆಗೆ ಈಡು ಮಾಡುತ್ತದೆ. ಇದಕ್ಕೆ ಹೆಚ್ಚಿನ ನೆರಳಿನ ಅವಶ್ಯಕತೆ ಇದೆ. ಆದರೆ ರೊಬಸ್ಟಾ ಬೆಳೆ ಹಾಗಲ್ಲ, ಇದನ್ನು ಬೆಳೆಯುವುದು ಅರಾಬಿಕಾಕ್ಕಿಂತ ಸುಲಬ ಹಾಗು ಹೆಚ್ಚಿನ ನಿಗಾ ವಹಿಸುವ ಅವಶ್ಯಕತೆ ಇರುವುದಿಲ್ಲ.

ARB2

ಬೇರ‍್ಮೆಗಳು ಏನೇ ಇದ್ದರು ಎರೆಡೂ ಬಗೆಯ ಕಾಪಿಗಳು ತಮ್ಮ ಒಂದಲ್ಲ ಒಂದು ಗುಣಗಳಿಂದ ಹೆಸರುವಾಸಿಯಾಗಿವೆ. ಇವುಗಳನ್ನು ಬೆಳೆಯುವ ಬಗೆಯನ್ನು ಮುಂದಿನ ಬರಹಗಳಲ್ಲಿ ಅರಿಯೋಣ.

5 ಅನಿಸಿಕೆಗಳು

 1. Coffee ಎಂದು ಬರೆಯುವಾಗ “ಫ ಅಥವಾ ಫ಼” ಅನ್ನು ಬಳಸಿ.. ಮಹಾಪ್ರಾಣಗಳು ಕನ್ನಡಕ್ಕೆ ಬೇಡ ನಿಜ, ಏಕೆಂದರೆ ಅವುಗಳನ್ನು ನಾವು ಬಹಳ ವಿರಳವಾಗಿ ಬಳಸುತ್ತೇವೆ. ಆದರೆ Coffeeಯನ್ನು copy ಅಂತ ಯಾರೂ ಬಳಸುವುದಿಲ್ಲ. ಬಳಸಿದರೂ ಶಿಕ್ಷಣದ ಕೊರತೆಯಿಂದ ಗ್ರಾಮೀಣ ಜನರು ಬಳಸಬಹುದೇನೋ!. ಅಥವಾ ಕನ್ನಡದ ಹೊಸ ಪದಗಳನ್ನು ಕಟ್ಟುತ್ತಿರುವ ನೀವು ಹೊಸ ಒಂದೆರಡು ಅಕ್ಷರಗಳನ್ನು ಕಟ್ಟಿ. ಓದುವಾಗ ಅವು ಅಸಂಬದ್ಧವಾಗಿ ಕಾಣದಿದ್ದರೆ ಸಾಕು.

 2. @Anil Ml..ಒಂದೇ ಪದಕ್ಕೆ ಒಂದಕ್ಕಿಂದ ಹೆಚ್ಚಿನ ಅರ್ತ ಇರಬಹುದಲ್ಲವೆ. ಪದ ಯಾವ ಅರ್ತವನ್ನು ಕೊಡುತ್ತದೆ ಎನ್ನುವುದು ಬಳಸಿದ ವಾಕ್ಯದ ಮೇಲೆ ನಿರ್ದಾರವಾಗುತ್ತದೆ.
  @Anil Ml
  “ಆದರೆ Coffeeಯನ್ನು copy ಅಂತ ಯಾರೂ ಬಳಸುವುದಿಲ್ಲ. ಬಳಸಿದರೂ ಶಿಕ್ಷಣದ ಕೊರತೆಯಿಂದ ಗ್ರಾಮೀಣ ಜನರು ಬಳಸಬಹುದೇನೋ”……ಶಿಕ್ಶಣ ಎನ್ನುವುದು ನಾಲ್ಕು ಗೋಡೆಗಳ ನಡುವೆ ಕೂತು ಪಂಡಿತರು ಬರೆಯುವ ಪುಸ್ತಕಲ್ಲಿ ಮಾತ್ರ ಇಲ್ಲ. ಶಿಕ್ಶಣದ ಕೊರತೆಯಿರುವುದು ಪುಸ್ತಕದ ಬನೆಕಾಯಿ ಓದಿಕೊಂಡವರಿಗೆ. ಬದನೆಕಾಯಿ ಬೆಳೆದು ಜೀವನ ನಡೆಸುವ ಬಲವಿರುವ ಹಳ್ಳಿ ಜನರಿಗಲ್ಲ. ಸದ್ಯದ ಮಟ್ಟಿಗೆ ಕನ್ನಡದ ಪದಗಳನ್ನು ಕಲಿಯಬೇಕಾಗಿರುವುದು ಹಳ್ಳಿಗರಿಂದ; ಶಿಕ್ಶಣದ ಬನೆಕಾಯಿ ಕಲಿತು ಶುದ್ದ-ಕನ್ನಡ (ಸಂಸ್ಕ್ರುತ ಕನ್ನಡ) ಇಲ್ಲವೇ ಕಂಗ್ಲಿಶ್ ಆಡುವ ಶಿಕ್ಶಿತ ಪೇಟೆ ಜನಗಳಿಂದ ಅಲ್ಲ. ನನಗೆ ಹಾಗು ನಮ್ಮ ಹಳ್ಳಿಯಲ್ಲಿ ಹೆಚ್ಚಿನವರಿಗೆ ಓದು-ಬರಹ ಬರುತ್ತದೆ. ಆದರೆ ನಾವು coffee ನ ‘ಕಾಪಿ’ ಅಂತ ಬಳಸುತ್ತೆವೆ. ex. ‘ಒಂದ್ ಲೋಟ ಕಾಪಿ ಕೊಟ್ಟಿರ?’

  ” ಅಥವಾ ಕನ್ನಡದ ಹೊಸ ಪದಗಳನ್ನು ಕಟ್ಟುತ್ತಿರುವ ನೀವು ಹೊಸ ಒಂದೆರಡು ಅಕ್ಷರಗಳನ್ನು ಕಟ್ಟಿ”. …coffee ಗೆ ಈಗಾಗಲೇ ‘ಬೂದಿಬಿಸಿನೀರು’, ಬೂದ್ಬಿಸ್ನೀರು, ಬೂಂದ್ ಬಿಸಿನೀರು’ ಪದಗಳು ಕಟ್ಟಿಯಾಗಿದೆ. ಆದರೆ ಬಳಕೆಯಲ್ಲಿರುವುದು ‘ಕಾಪಿ’.

  ಬರಹ ಮಾತಿಗೆ ಹೊಂದಿಕೊಳ್ಳಬೇಕು; ಮಾತು ಬರಹಕ್ಕೆ ಹೊಂದಿಕೊಳ್ಳಬೇಕಾಗಿಲ್ಲ.!!!!!!!

 3. ಅನಿಲ್ ಅವರೇ,

  ನಿಮ್ಮ ಹಿನ್ನುಣಿಕೆಗೆ ನನ್ನಿ.
  ಕಾಪಿ ಬೆಳೆಗಾರರ ಕುಟುಂಬದಿಂದಲೇ ಬಂದ ನಾನು ಕಾಪಿಯನ್ನು ಕಾಫಿ ಎಂದು ಕೇಳಿದ್ದು ಪಟ್ಟಣಕ್ಕೆ ಬಂದ ಮೇಲೆಯೇ, ಅದೂ ಕೆಲವರ ಬಾಯಲ್ಲಿ ಮಾತ್ರ. ಶಿಕ್ಶಣದ ಕೊರತೆ ಎಂಬ ಮಾತು ಇಲ್ಲಿ ಅಶ್ಟಾಗಿ ಒಪ್ಪುವುದಿಲ್ಲ. ನಮ್ಮ ಮಾತು ಮತ್ತು ಕಲಿಕೆಗೆ ಹತ್ತಿರವಾಗಿಯೇ ಬರವಣಿಗೆ ಇರಬೇಕು ಎಂಬುದು ಈ ಬರಹಗಳ ಉದ್ದೇಶ.

  ರತೀಶ ರತ್ನಾಕರ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.