ಬೇಸಾಯದಲ್ಲಿ ನಯ್ಟ್ರೋಜನ್ ಊರಿಕೆಯ ಹೆಚ್ಚುಗಾರಿಕೆ

ಚಯ್ತನ್ಯ ಸುಬ್ಬಣ್ಣ.

ಗಿಡಗಳಿಗೆ ಹೆಚ್ಚಾಗಿ ಬೇಕಿರುವ ಅದಿರು ಪೊರೆಕ(mineral nutrients)ಗಳಲ್ಲಿ ನಯ್ಟ್ರೋಜನ್ ಒಂದೆಂದು ನಾವೀಗಾಗಲೇ ಅರಿತಿದ್ದೇವೆ. ನಯ್ಟ್ರೋಜನ್ ಬೇರಡಕವನ್ನು ಗಾಳಿಯಿಂದಲೂ ಕೆಲವು ಗಿಡಗಳು ಪಡೆಯಬಲ್ಲವು. ಅದನ್ನು ಈ ಬರಹದಲ್ಲಿ ತಿಳಿಯೋಣ.

ಗಾಳಿಪದರ(atmosphere)ದಲ್ಲಿ ನಯ್ಟ್ರೋಜನ್ ಬೇರಡಕವು ಎರಡು ನಯ್ಟ್ರೋಜನ್ ಅಣುಗಳನ್ನು ಹೊಂದಿರುವ ನಯ್ಟ್ರೋಜನ್ ಅಣುಕೂಟ(N2)ದ ರೂಪದಲ್ಲಿರುತ್ತದೆ. ನಯ್ಟ್ರೋಜನ್ ನಯ್ಸರ‍್ಗಿಕವಾಗಿ ಇಲ್ಲವೇ ಮನುಶ್ಯನ ಕಯ್ವಾಡದಿಂದ ಬೇರೆಯ ಬೇರಡಕಗಳೊಂದಿಗೆ ಸೇರಿ ಕೂಡಿಕೆ(compound)ಯಾಗಿ ಮಾರ‍್ಪಡುವುದನ್ನು ನಯ್ಟ್ರೋಜನ್ ಊರಿಕೆ (nitrogen fixation) ಎನ್ನುವರು.

ಸಿಡಿಲು ಬಡೆದಾಗ ಗಾಳಿಯ ನಯ್ಟ್ರೋಜನ್ ಉಸಿರ‍್ಗಾಳಿಯೊಂದಿಗೆ ಕೂಡಿಕೊಂಡು ನಯ್ಟ್ರಿಕ್ ಆಕ್ಸಯ್ಡ್(NO) ಆಗುವುದೂ ನಯ್ಟ್ರೋಜನ್ ಊರಿಕೆಯೇ. ಗಿಡಗಳು ಗಾಳಿಪದರದ ನಯ್ಟ್ರೋಜನ್ ಅಣುಕೂಟವನ್ನು ಅದೇ ರೂಪದಲ್ಲಿ ತಮ್ಮ ಪೊರೆತಕ್ಕೆ ಬಳಸಿಕೊಳ್ಳಲಾರವು. ಗಾಳಿಪದರದ ನಯ್ಟ್ರೋಜನ್ ಅನ್ನು ಅಮ್ಮೋನಿಯಾ ಅಣುಕೂಟವಾಗಿ ಉಸಿರಿಗಳ ನೆರವಿನಿಂದ ಮಾರ‍್ಪಡಿಸುವ ಎಸಕವನ್ನು ಉಸಿರರಿಮೆಯ ನಯ್ಟ್ರೋಜನ್ ಊರಿಕೆ(biological nitrogen fixation) ಎಂದು ಕರೆಯಬಹುದು. ಇದನ್ನು ಮೊದಲು ಕಂಡುಕೊಂಡವರು ಜರ‍್ಮನ್ ಸಾಗುವಳಿ ಇರ‍್ಪರಿಗ(agricultural chemist) ಹರ‍್ಮನ್ ಹೆಲ್ರೀಗಲ್ ಮತ್ತು ಡಚ್ ಸೀರುಸಿರಿಯರಿಗ (microbiologist) ಮಾರ‍್ಟಿನಸ್ ಬೆಯ್ಜರಿಂಕ್.

ನಯ್ಟ್ರೋಜಿನೇಸ್ ಎಂಬ ದೊಳೆ(enzyme)ಯ ನೆರವು ಈ ಎಸಕಕ್ಕೆ ಬೇಕಾಗುತ್ತದೆ. ಈ ದೊಳೆಯು ರಯ್ಜೋಬಿಯಂ (rhizobium), ಪ್ರಾಂಕಿಯ(frankia), ಅಜಟೋಬ್ಯಾಕ್ಟರ‍್ (azotobacter), ಅಜೋಸ್ಪಯ್ರಿಲ್ಲಂ (azospirillum)ನಂತಹ ಸೀರುಗಗಳಲ್ಲಿ ನಯ್ಸರ‍್ಗಿಕವಾಗಿ ಇರುತ್ತದೆ. ಇವುಗಳಲ್ಲಿ ರಯ್ಜೋಬಿಯಂ, ಪ್ರಾಂಕಿಯ ನಂತಹ ಸೀರುಗಗಳು ಗಿಡಗಳೊಂದಿಗೆ ಹೊಂದಾಣಿಕೆಯ ಬದುಕು ಸಾಗಿಸಿದರೆ, ಅಜಟೋಬ್ಯಾಕ್ಟರ್, ಅಜೋಸ್ಪಯ್ರಿಲ್ಲಂ ನಂತಹ ಸೀರುಗಗಳು ಮಣ್ಣಿನಲ್ಲಿ ತಮ್ಮಶ್ಟಕ್ಕೆ ತಾವು ಬದುಕಬಲ್ಲವು. ಈ ಬರಹದಲ್ಲಿ ರಯ್ಜೋಬಿಯಂ ಸೀರುಗದ ನಡವಳಿಕೆ ಮೇಲೆ ಹೆಚ್ಚು ಗಮನವಿಡಲಾಗಿದೆ.

ಇಬ್ಬೇಳೆ ಗಿಡ(dicotyledons)ಗಳ ಗುಂಪಿನಲ್ಲಿ ಪಾಬೇಸೀ (fabeceae) ಕುಟುಂಬಕ್ಕೆ ಸೇರಿದ ಹಲವಾರು ಬೇಳೆಕಾಳು ಗಿಡ(legume/pulse)ಗಳ ಬೇರುಗಂಟು(root nodules)ಗಳಲ್ಲಿ ರಯ್ಜೋಬಿಯಂ ಸೀರುಗಗಳು ಸೇರಿಕೊಂಡು ಹೊಂದಾಣಿಕೆಯ ನಂಟಿನ(symbiotic relationship) ಬದುಕು ನಡೆಸುತ್ತವೆ. ಈ ಗಿಡಗಳ ಬೇರುಗೂದಲು(root hairs)ಗಳನ್ನು ಸೇರಿಕೊಳ್ಳುವ ಮಣ್ಣಿನಲ್ಲಿರುವ ರಯ್ಜೋಬಿಯಂ ಸೀರುಗಗಳು, ಚಿಕ್ಕ ಚಿಕ್ಕ ಗಂಟುಗಳನ್ನು ಬೇರಿನ ಮೇಲೆ ಉಂಟುಮಾಡುತ್ತವೆ. ಉಸಿರರಿಮೆಯ ನಯ್ಟ್ರೋಜನ್ ಊರಿಕೆ ಈ ಗಂಟುಗಳಲ್ಲಿ ನಡೆಯುತ್ತದೆ.

ಎಸಕ ನಡೆಯುವ ಬಗೆ:

ಬೇರುಗಂಟಿನೊಳಗೆ ಗಾಳಿಪದರದ ನಯ್ಟ್ರೋಜನ್, ಅಮೋನಿಯಾ ಆಗಿ ಮಾರ‍್ಪಡುತ್ತದೆ. ಆ ಎಸಕವನ್ನು ಈ ಕೆಳಗಿನ ಅಡಕ ಬರೆಹ(formula)ದಲ್ಲಿ ತೋರಿಸಲಾಗಿದೆ.

N2 + 8H+ + 8e–   —————>    2NH3 + H2

ನಯ್ಟ್ರೋಜನ್ ಅಣುಕೂಟವು ಹಯ್ಡ್ರೋಜನ್ ಅಣುಗಳೊಂದಿಗೆ ಸೇರಿಕೊಂಡು ಅಮ್ಮೋನಿಯಾ ಅಣುಕೂಟವಾಗಿ ಮಾರ‍್ಪಡುತ್ತದೆ, ಹಾಗೂ ಹಯ್ಡ್ರೋಜನ್ ಅಣುಕೂಟವು ಬಿಡುಗಡೆಯಾಗುತ್ತದೆ.

ಬೆಳಕಿನ ಒಂದುಗೆ (photosynthesis)ಯಲ್ಲಿ ದೊರೆಯುವ ಸಕ್ಕರೆ ಬೇರುಗಂಟಿಗೆ ಸಾಗಿಸಲ್ಪಡುತ್ತದೆ. ಆ ಸಕ್ಕರೆಯಿಂದ ಉಂಟುಮಾಡಲ್ಪಟ್ಟ ಅಡೆನೋಸಯ್ನ್ ಟ್ರಯ್ಪಾಸ್ಪೇಟ್ ಅಣುಕೂಟಗಳನ್ನು ಕಸುವಾಗಿ ಬಳಸಿಕೊಂಡು ಈ ಎಸಕವನ್ನು ಗಿಡಗಳು ನಡೆಸುತ್ತವೆ.

ಗಿಡ ಮತ್ತು ಬೇರಿನ ಬೆಳವಣಿಗೆ, ಅಡೆನೋಸಯ್ನ್ ಟ್ರಯ್ಪಾಸ್ಪೇಟ್ ಅಣುಕೂಟದ ಮಾಳ್ಕೆ(production) ಮುಂತಾದವಕ್ಕೆಲ್ಲ ರಂಜಕದ ನೆರವು ಗಿಡಕ್ಕೆ ಬೇಕಾಗುತ್ತದೆ. ಈ ಎಸಕಕ್ಕೆ ಬೇಕಾದ ನಯ್ಟ್ರೋಜಿನೇಸ್ ದೊಳೆಯನ್ನು ರಯ್ಜೋಬಿಯಂ ಸೀರುಗವು ಒದಗಿಸುತ್ತದೆ. ಆದರೆ ಈ ದೊಳೆ ಕೆಲಸ ಮಾಡಲು ಉಸಿರ‍್ಗಾಳಿ ಒತ್ತಡ ಕಡಿಮೆ ಇರಬೇಕು. ಇದಕ್ಕಾಗಿ ಮತ್ತೊಂದು ಚಳಕವನ್ನು ಗಿಡ-ರಯ್ಜೋಬಿಯಂ ಕೂಟವು ಅಳವಡಿಸಿಕೊಂಡಿದೆ. ಲೆಗ್ ಹಿಮೋಗ್ಲೋಬಿನ್ ಎಂಬ ಹಿರಿ-ಅಣುಕೂಟ(macromolecule)ವನ್ನು ರಯ್ಜೋಬಿಯಮ್ಮಿನ ಜೊತೆಗೂಡಿ ಗಿಡವು ಕಟ್ಟುತ್ತದೆ. ಈ ಅಣುಕೂಟವು ಉಸಿರ‍್ಗಾಳಿಯನ್ನು ಹಿಡಿದಿಟ್ಟು ನಯ್ಟ್ರೋಜನ್ ಊರಿಕೆಗೆ ತಡೆಯುಂಟಾಗದಂತೆ ಕಾಪಾಡುತ್ತದೆ.

ಲೆಗ್ ಹಿಮೋಗ್ಲೋಬಿನ್ ಇರುವ ಬೇರುಗಂಟುಗಳು ಕೆಂಪು ಇಲ್ಲವೇ ಕಂದು ಬಣ್ಣದಲ್ಲಿರುತ್ತವೆ. ಹಾಗಾಗಿ ನಯ್ಟ್ರೋಜನ್ ಊರಿಕೆಯು ಕೆಂಪು/ಕಂದು ಬಣ್ಣದಲ್ಲಿರುವ, ಚಟುವಟಿಕೆಯಿಂದ ಕೂಡಿರುವ ಬೇರುಗಂಟುಗಳಲ್ಲಿ ಹೆಚ್ಚಾಗಿ ನಡೆಯುವುದನ್ನು ಗಮನಿಸಬಹುದು. ಈ ಎಸಕದಲ್ಲಿ ಮಾಡಲ್ಪಡುವ ಅಮೋನಿಯಾ, ಮುಂದೆ ಅಮಯ್ನೋ ಆಸಿಡ್, ಬಳಿಕ ಮುನ್ನಿನ(protein)ರೂಪ ಪಡೆದು ಗಿಡದ ಕಟ್ಟಣೆಯಲ್ಲಿ ತೊಡಗಿಸಲ್ಪಡುವುದು.

ಕೆಲ ರಯ್ಜೋಬಿಯಂ ಗುಂಪುಗಳು ಹಾಗೂ ಅವುಗಳಿಗೆ ಆಸರೆಯನ್ನೊದಗಿಸುವ ಗಿಡಗಳ ಪಟ್ಟಿ.

ರಯ್ಜೋಬಿಯಂ ಗುಂಪು

ಆಸರೆ ಗಿಡ

ಬ್ರಾಡಿರಯ್ಜೋಬಿಯಂ ಜಪಾನಿಕಂ ಸೋಯಾ ಅವರೆ
ರಯ್ಜೋಬಿಯಂ ಪಾಸಿಯೋಲಿ ಚಪ್ಪರದವರೆ
ರಯ್ಜೋಬಿಯಂ ಟ್ರಯ್ಪೋಲಿಯಯ್ ಲವಂಗ
ರಯ್ಜೋಬಿಯಂ ಲೆಗ್ಯುಮಿನೋಸೇರಂ ಬಟಾಣಿ
ಅಲಸಂದೆ ರಯ್ಜೋಬಿಯಂ ಗುಂಪು ಅಲಸಂದೆ, ನೆಲಗಡಲೆ/ಶೇಂಗಾ

ಉಸಿರರಿಮೆಯ ನಯ್ಟ್ರೋಜನ್ ಊರಿಕೆಯನ್ನು ಕಯ್ಗೊಳ್ಳಬಲ್ಲವಾದ್ದರಿಂದ, ಇಬ್ಬಿತ್ತಿನೆಲೆ ಗಿಡಗಳು ತಮಗೆ ಬೇಕಿರುವ ನಯ್ಟ್ರೋಜನ್ ನಲ್ಲಿ ಹೆಚ್ಚಿನ ಬಾಗವನ್ನು ತಾವೇ ಪೂರಯ್ಸಿಕೊಳ್ಳುತ್ತವೆ. ಒಬ್ಬೇಳೆ/ಒಬ್ಬಿತ್ತಿನೆಲೆ(monocotyledons) ಗಿಡಗಳಾದ ಬತ್ತ, ರಾಗಿ, ಜೋಳಗಳಿಗಿಂತ ಕಡಿಮೆ ಪ್ರಮಾಣದ ನಯ್ಟ್ರೋಜನ್ ಹೊಂದಿರುವ ರಸಗೊಬ್ಬರಗಳು(ಯೂರಿಯಾ, ಅಮೋನಿಯಂ ನಯ್ಟ್ರೇಟ್ ಮುಂತಾದವು) ಇಬ್ಬಿತ್ತಿನೆಲೆ ಗಿಡಗಳಿಗೆ ಸಾಕಾಗುತ್ತದೆ.

nitrogen-fixation-1

 

ಬೇಳೆಕಾಳು ಬೆಳೆ ಆದರಿಸಿದ ಬೆಳೆಪದ್ದತಿಯಲ್ಲಿ ಉಸಿರರಿಮೆಯ ನಯ್ಟ್ರೋಜನ್ ಊರಿಕೆಯ ಪಾತ್ರ:

ಒಂದು ಅತವಾ ಹೆಚ್ಚಿನ ಬೆಳೆಗಳನ್ನು ಹಾಗೂ ಬೆಳೆವರಸೆ(crop sequence)ಗಳನ್ನು ಹೊಲದಲ್ಲಿ ಕಯ್ಗೊಳ್ಳುವುದು, ಅವುಗಳನ್ನು ತಕ್ಕನಾದ ನಡೆಸುವಿಕೆ ಚಳಕ(management techniques)ಗಳನ್ನು ಬಳಸಿ ಗೊತ್ತುಪಡಿಸಿದ ಹೊಲದಲ್ಲಿ ಹಲವಾರು ವರುಶಗಳವರೆಗೂ ಸಾಗುವಳಿ ಮಾಡುವ ಪದ್ದತಿಯನ್ನು ಬೆಳೆಪದ್ದತಿ/ಬೆಳೆಯೇರ‍್ಪಾಟು(cropping system) ಎನ್ನುವರು. ಬೂಮಿಯಲ್ಲಿ ಒಂದೆಡೆ ಒಂದು ಬಗೆಯ ಬೆಳೆಯ ಕೊಯ್ಲಾದ ಮೇಲೆ ಅದೇ ಬೆಳೆಯನ್ನು ಮುಂದುವರೆಸುವುದನ್ನು ಒಬ್ಬೆಳೆಯೇರ‍್ಪಾಡು (monocropping) ಎನ್ನಬಹುದು.

ಇದರಿಂದ ಕೆಲ ತೊಂದರೆಗಳಿವೆ. ಪದೇ ಪದೇ ಒಂದೇ ಬೆಳೆ ಇಡುವುದರಿಂದ ಆ ಬೆಳೆ ಮಣ್ಣಿನಿಂದ ಪೊರೆಕಗಳನ್ನು ಹೆಚ್ಚಾಗಿ ಹೊರತೆಗೆದು ತನ್ನ ಬೆಳವಣಿಗೆಗೆ ಬಳಸಿಕೊಂಡು ಮಣ್ಣು ಕಳಪೆಯಾಗಬಹುದು. ಒಂದು ಬೆಳೆಗೆ ಕೆಲವು ಬಗೆಯ ಹುಳ, ಮತ್ತು ರೋಗ ಬರಿಸುವ ಸೀರುಗಗಳು ಜೋತು ಬಿದ್ದು ಕಾಡುತ್ತವೆ. ಅದೇ ಬೆಳೆಯನ್ನು ಮತ್ತೆ ನಾಟಿಮಾಡಿದಲ್ಲಿ ಆ ಬೆಳೆಯೊಂದಿಗೆ ಒಡನಾಡುವ ಹುಳ, ರೋಗ ಬರಿಸುವ ಸೀರುಗಗಳ ಬಾಳ್ಮೆ ಸುತ್ತಿನ (life cycle) ಮುಂದುವರಿಕೆಗೆ ಆಸರೆ ದೊರೆತು ಅವುಗಳ ಕಾಟ ಹೆಚ್ಚು ಮಡಿಯಾಗುತ್ತದೆ. ಇದನ್ನು ತಡೆಗಟ್ಟಲು ಬೆಳೆಸರದಿ (crop rotation) ನೆರವಾಗುವುದು.

ಬೆಳೆಪದ್ದತಿಯಲ್ಲಿ ಬೆಳೆಸರದಿ ಬಲು ಅರಿದಾದ ಚಳಕ. ಹಳ್ಳಿಗರು ಹೊಲದ ಗೇಯ್ಮೆಯಲ್ಲಿ ಈ ಬೆಳೆಸರದಿಯ ಹೊಲಬನ್ನು ಹಿಂದಿನಿಂದಲೂ ಪಳಗಿಸಿಕೊಂಡು ಬಂದಿದ್ದಾರೆ. ಹೊಲದಲ್ಲಿ ಒಂದು ಬೆಳೆಯ ಬಳಿಕ ಬೇರೆ ಬೆಳೆಯನ್ನು/ಬೆಳೆಗಳನ್ನು ಗೊತ್ತುಮಾಡಿದ ವರಸೆಯಲ್ಲಿ ಬೆಳೆಯುವುದು ಬೆಳೆಸರದಿ. ಎತ್ತುಗೆಗೆ ರಾಗಿಯ ಕಟಾವಿನ ಬಳಿಕ ನೆಲಗಡಲೆ ಬೆಳೆಯುವುದು ಇಲ್ಲವೇ ಹತ್ತಿ ಬೆಳೆ ಮುಗಿದ ಬಳಿಕ ಅದೇ ತೋಟದಲ್ಲಿ ಮೆಣಸಿನಕಾಯಿ ಬೆಳೆಯುವುದು.

ಬೇಳೆಕಾಳು ಬೆಳೆಗಳನ್ನು ಬುಡವಾಗಿಟ್ಟುಕೊಂಡು ಹಲವು ಬೆಳೆವರಸೆಯ ಪದ್ದತಿಗಳನ್ನು ರಯ್ತರು ಕ್ರುಶಿ ಬೂಮಿಯಲ್ಲಿ ದುಡಿಸಿಕೊಂಡು, ಒರೆಹಚ್ಚಿ ನೋಡಿದ್ದಾರೆ. ಬೇಳೆಕಾಳು ಗಿಡಗಳು ಮೊದಲೇ ತಿಳಿಸಿದಂತೆ ಗಾಳಿಯ ನಯ್ಟ್ರೋಜನ್ ಊರಿಕೆಯನ್ನು ಕಯ್ಗೊಳ್ಳಬಲ್ಲವು. ಒಂದು ಹೆಕ್ಟೇರು ಬೂಮಿಯಲ್ಲಿ ಬೆಳೆದ ನೆಲಗಡಲೆ/ಶೇಂಗಾ ಬೆಳೆಯು 150 ರಿಂದ 200 ಕೆಜಿಗಳಶ್ಟು ನಯ್ಟ್ರೋಜನ್ ಅನ್ನು ಊರಬಲ್ಲದೆಂದು ಅರಕೆಗಳಿಂದ ತಿಳಿದುಬಂದಿದೆ. ಬೇಳೆಕಾಳು ಗಿಡಗಳಾದ ಅಲಸಂದೆ, ನೆಲಗಡಲೆ, ತೊಗರಿ, ಸೋಯಾ ಅವರೆ ಮುಂತಾದವನ್ನು ಬೆಳೆದಾಗ, ನಯ್ಟ್ರೋಜನ್ ನಿಂದ ಕೂಡಿದ ಕೂಡಿಕೆಗಳು(nitrogenous compounds) ಮಣ್ಣಿಗೆ ಸೇರುತ್ತವೆ.

nitrogen-fixation-2

 

ಬೇಳೆಕಾಳು ಬೆಳೆಯನ್ನು ಮೇದ ಆಕಳು, ಕುರಿ, ಮೇಕೆ ಮುಂತಾದ ಸಾಕುಪ್ರಾಣಿಗಳ ಸೆಗಣಿ, ಹಿಕ್ಕೆ ಮತ್ತು ಉಚ್ಚೆಯ ಮೂಲಕ ಈ ಕೂಡಿಕೆಗಳು ಮಣ್ಣಿಗೆ ಸೇರಬಹುದು. ಬೇರುಗಂಟುಗಳಿಂದ ಹೊರವಡಿಕೆ(excretion)ಯಾಗಿ ಈ ಕೂಡಿಕೆಗಳು ಮಣ್ಣಿಗೆ ದೊರಕುತ್ತವಾದರೂ ಅದರ ಪ್ರಮಾಣ ಬಲು ಕಡಿಮೆ. ಮುಕ್ಯವಾಗಿ ಬೆಳೆಕೊಯ್ಲಿನ ಬಳಿಕ ಬೇರು, ಗಂಟುಗಳು, ಎಲೆ, ಟೊಂಗೆಗಳಂತಹ ಗಿಡದ ಉಳಿಕೆಗಳ ಕೊಳೆತದಿಂದ ನಯ್ಟ್ರೋಜನ್ ಮಣ್ಣಿಗೆ ಸೇರುವುದು.

ಮುಂದಿನ ಬೆಳೆಗೆ ಮಣ್ಣಲ್ಲಿ ಬೆರೆತ ಈ ಪೊರೆಕಗಳು ಸುಲಬವಾಗಿ ಸಿಗುತ್ತವೆ. ಇದನ್ನು ಬೇಸಾಯದರಿಮೆಯಲ್ಲಿ ಉಳಿಕೆಯಾಗುಹ(residual effect) ಎನ್ನುವರು. ಬೇಳೆಕಾಳು ಗಿಡದ ಬೆಳೆಯನ್ನು ಒಬ್ಬಿತ್ತಿನೆಲೆ ಗಿಡದ ಬೆಳೆಯೊಂದಿಗೆ ಸರದಿ ಪ್ರಕಾರ ಬೆಳೆದರೆ ಮಣ್ಣಿನ ಪಲವತ್ತತೆ ಕುಗ್ಗದಂತೆ ಸರಿತೂಗಿಸಬಹುದು. ಎತ್ತುಗೆಗೆ ಮುಂಗಾರಿನಲ್ಲಿ ಜೂನ್-ಜುಲಯ್ ನಿಂದ ಸೆಪ್ಟೆಂಬರ‍್-ಅಕ್ಟೋಬರ್ ವರೆಗೂ ಹೆಸರುಕಾಳನ್ನು ಕಪ್ಪು ಮಣ್ಣಿನಲ್ಲಿ ಬೆಳೆದು, ನಂತರದ ಹಿಂಗಾರು ಬೆಳೆಯಾಗಿ ಜೋಳವನ್ನು ಬೆಳೆದಲ್ಲಿ, ಹೆಸರುಕಾಳಿನ ನಯ್ಟ್ರೋಜನ್ ಊರಿಕೆಯ ಲಾಬವು ಜೋಳದ ಬೆಳೆಗೆ ದಕ್ಕುವುದು.
ಉಸಿರರಿಮೆಯ ನಯ್ಟ್ರೋಜನ್ ಊರಿಕೆಯು ಬೆಳೆಯ ಸಾಗುವಳಿಯಲ್ಲಿ ಮತ್ತು ಮಣ್ಣಿನ ಪಲವತ್ತತೆಯನ್ನು ಕಾಪಿಡುವಲ್ಲಿ ಅರಿದಾದ ಸ್ತಾನವನ್ನು ಗಳಿಸಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications