ಮ್ಯಾರತಾನ್ ಓಟದ ಹಿನ್ನೆಲೆ

– ವಿನಾಯಕ ಕವಾಸಿ.

Orlen_Warsaw_Marathon_2014_al._KEN

ಓಡುವುದೆಂದರೆ ಯಾರಿಗೆ ತಾನೆ ಇಶ್ಟವಿಲ್ಲ? ಓಟವೆನ್ನುವುದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಶ್ಟಪಡುವ ಹೆಚ್ಚಿನ ಎಲ್ಲ ಆಟಗಳಲ್ಲಿ ಒಂದಾಗಿದೆ. ಕ್ರಿಕೆಟ್ಟು, ಕಾಲ್ಚೆಂಡಿನಾಟ, ಬೇಸ್ಬಾಲ್, ರಗ್ಬಿ ಎಂತಹ ನಾಡುನಡುವಿನ ಆಟಗಳಲ್ಲದೆ, ಓಣಿಗಳಲ್ಲಿ ನಡೆಯುವ ಕಣ್ಣಮುಚ್ಚಾಲೆ, ಲಗೋರಿ, ಚೆಂಡೆಸೆತದಂತಹ ಆಟಗಳಲ್ಲೂ ಓಟದ ಇರುವಿಕೆ ಇದೆ. ಓಡುವುದೆಂದರೆ ಬರಿ ಕುಶಿ ನೀಡುವುದಲ್ಲದೆ ನಮ್ಮ ಮನಸ್ಸಿನ ಆಯಾಸಗಳನ್ನು ದೂರಮಾಡಿ ಉಲ್ಲಸಿತರನ್ನಾಗಿಸುವ ಚಳಕವೂ ಹೌದು. ಇದಲ್ಲದೆ ಕೊಟ್ಟ ದೂರದ ಗುರಿಯೊಂದನ್ನು ಬೆನ್ನಟ್ಟಿ ಬರಿ ಓಡುವುದೂ ಕೂಡ ಒಂದು ಆಟದ ಬಗೆ. ಇದಕ್ಕೆ ಓಲಿಂಪಿಕ್ ನಲ್ಲೂ ಜಾಗವಿದೆ ಎನ್ನುವುದೊಂದು ಹೆಗ್ಗಳಿಕೆ. ಇವುಗಳಲ್ಲಿ ಕೇವಲ ಮೊದಲ ಮೂರು ಸ್ತಾನಗಳಿಗೆ ಮಾತ್ರ ಬೆಲೆ ಇರುತ್ತದೆ, ಮಿಕ್ಕವುಗಳಿಗೆ ಇರುವುದಿಲ್ಲ. ಅಂದರೆ, ಮೊದಲ ಮೂರರನ್ನು ಹೊರತಾಗಿ ಬೇರೆಯವರಿಗೆ ಯಾವುದೇ ಗೆಲ್ಚಿಪ್ಪುಗಳನ್ನು (medals) ಕೊಡಲಾಗುವುದಿಲ್ಲ. ಅಲ್ಲದೇ ಇವುಗಳಲ್ಲಿ ಸಾಮಾನ್ಯ ಜನರು ಪಾಲ್ಗೊಳ್ಳಲಾಗುವುದಿಲ್ಲ.

ಮ್ಯಾರತಾನ್ (Marathon) ಎನ್ನುವುದೊಂದು ಹೆಚ್ಚು ದೂರದವರೆಗೆ ಓಡುವ ಓಟದ ಪೈಪೋಟಿ ಆಟ. ಒಂದು ಮ್ಯಾರತಾನ್ 42.195 ಕಿಲೋ ಮೀಟರುಗಳ ಗುರಿಯನ್ನು ಒಳಗೊಂಡಿರುತ್ತದೆ. ಮ್ಯಾರತಾನಿನಲ್ಲಿ ಇಡಿದೂರದೋಟ, ಅರೆದೂರದೋಟ, 10 ಕಿ.ಮೀ ದೂರದೋಟ ಎಂದೆಲ್ಲ ಬೇರೆ ಬೇರೆ ಬಗೆಗಳಿವೆ. ಕೆಲವು ಮ್ಯಾರತಾನುಗಳಲ್ಲಿ 5 ಕಿ.ಮೀ ಇಲ್ಲವೇ 6 – 6.5 ಕಿ.ಮೀ ಗಳ ಚಿಕ್ಕೋಟಗಳೂ ಇರುವುದುಂಟು. ಇಡಿದೂರದೋಟವು 42.195 ಕಿ.ಮೀಗಳಶ್ಟು ಇದ್ದು, ಅರೆದೂರದೋಟ 21.092 ಕಿ.ಮೀಗಳಶ್ಟು ಇರುತ್ತದೆ. ಅಂದರೆ ಮೈಲುಗಳಲ್ಲಿ ಹೇಳುವುದಾದರೆ 26.21 ಮೈಲುಗಳು, ಅಂದಾಜಾಗಿ 26 ಮೈಲುಗಳು. ಈ ಓಟದಲ್ಲಿ ಕೊನೆಯ ಗೆರೆ ದಾಟಿದ ಎಲ್ಲರಿಗೂ ಗೆಲ್ಚಿಪ್ಪುಗಳನ್ನು ಕೊಡಲಾಗುತ್ತದೆ. ಓಟಗಾರರನ್ನು ವಯಸ್ಸಿನ ಆದಾರದ ಮೇಲೂ ಹಾಗೂ ದೂರದ ಆದಾರ ಮೇಲೂ ಬೇರೆಬೇರೆ ಹಂಚಿಕೆಗಳಲ್ಲಿ ಮೊದಲ ಮೂರು ಓಟಗಾರರನ್ನು ಜಗಲಿ-ಓಟಗಾರರೆಂದು (podium finishers) ಪರಿಗಣಿಸಿ ಬಹುಮಾನಗಳನ್ನು ಕೊಡಲಾಗುವುದು.

ಮ್ಯಾರತಾನ್ ಹಿನ್ನೋಟ:
ಹಿಂದೆ ಸುಮಾರು 490 ಕ್ರಿ. ಪೂ. ಮೊದಲಲ್ಲಿ ಗ್ರೀಕರು ಹಾಗೂ ಪರ‍್ಶಿಯನ್ನರ ನಡುವೆ ಮ್ಯಾರತಾನ್ ಎಂಬ ಊರೊಂದರಲ್ಲಿ ದೊಡ್ಡ ಕಾಳಗವೊಂದು ನಡೆಯಿತು ಅದರಲ್ಲಿ ಪರ‍್ಶಿಯನ್ನರ ಮೇಲೆ ಗ್ರೀಕರು ಗೆದ್ದರು. ಪೆಯಿದಿಪ್ಪೆದೆಸ್(Pheidippides) ಎಂಬ ಗ್ರೀಕ್ ಕಾದಾಳು ಗೆಲುವಿನ ಈ ಸಿಹಿಸುದ್ದಿಯನ್ನು ಅತೆನ್ಸ್ ಮಂದಿಗೆ ತಿಳಿಸಲು ಹುರುಪಿನಲ್ಲಿ ಮ್ಯಾರತಾನಿನಿಂದ ಅತೆನ್ಸ್ ವರೆಗೆ, ಎಲ್ಲಿಯೂ ನಿಲ್ಲದೆ ಒಂದೇ ಓಟದಲ್ಲಿ ಓಡಿ, ಸುದ್ದಿಮುಟ್ಟಿಸಿ ಅಸು ನೀಗಿದನಂತೆ. ಆಗಿನ ಮ್ಯರಾತಾನ್ ಹಾಗು ಅತೆನ್ಸ ನಡುವಿನ ದೂರ ಸುಮಾರು 41 ಕೀ.ಮಿ. ಗಳಶ್ಟು. ಈ ಕತೆಯು ಪ್ಲುತರ‍್ಕ್ (Plutarch) ಎನ್ನುವ ಹಿನ್ನಡವಳಿಗಾರನ ಹೊತ್ತಗೆಯಲ್ಲಿ ಮೂಡಿದೆ.

1896 ಇಸವಿಯ ಒಲಿಂಪಿಕ್ ಕೂಟವು ಗ್ರೀಸ್‍ನಲ್ಲಿ ನಡೆದಾಗ, ಅದರ ಏರ‍್ಪಾಡುಗಾರರು ಹೆಚ್ಚು ಮಂದಿಮೆಚ್ಚುಗೆಯನ್ನು ಪಡೆಯುವ ಆಟದ ಹುಡುಕಾಟದಲ್ಲಿದ್ದರಂತೆ. ಆಗ ಮೈಕೆಲ್ ಬ್ರಿಯಲ್ (Michel Bréal) ಎನ್ನುವ ಹಲನುಡಿಯರಿಗನೊಬ್ಬನು ಮ್ಯಾರತಾನಿನಲ್ಲಿ ನಡೆದ ಪ್ಲುತರ‍್ಕ್ ದೂರದೋಟದ ನೆನಪಿನಲ್ಲಿ 42.19 ಕೀ.ಮಿ ಗಳ ದೂರದೋಟದ ಹೊಳಹನ್ನು ತಿಳಿಸಿದನಂತೆ. ಅದನ್ನು ಮ್ಯಾರತಾನ್ ಎನ್ನುವ ಹೆಸರಿನಿಂದಲೇ ಕರೆಯಲಾಯಿತು. ಇದರ ಆಯ್ಕೆಯ ಸುತ್ತಿನಲ್ಲಿ ಚರಿಲವೊಸ್ ವಸಿಲಕೊಸ್ ಎನ್ನುವನು 3 ಗಂಟೆ 18 ನಿಮಿಶಗಳಲ್ಲಿ ಓಡಿದನು. ಆದರೆ, ಏಪ್ರಿಲ್‍ 10 ರಲ್ಲಿ ನಡೆದ ಓಟದಲ್ಲಿ ಸ್ಪೈರಿಡಾನ್ ಲೂಯಿಸ್ ಎನ್ನುವ ಗ್ರೀಕ್ ನೀರು ಒಯ್ಯುವವನೊಬ್ಬನು ಗೆದ್ದು ಮೊದಲ ಓಲಿಂಪಿಕ್ ದೂರದೋಟದ ಪದಕವನ್ನು ಬಾಚಿದನು. ಅವನು ಕೇವಲ 2 ಗಂಟೆ 58 ನಿಮಿಶಗಳಲ್ಲಿ ಓಡಿ ಮೊದಲ ಒಲಿಂಪಿಕ್ ಮ್ಯಾರತಾನನ್ನು ಓಡಿದ್ದನು.

ಹಿರಿಮೆಯುಳ್ಳ ನಾಡುನಡುವಿನ ಮ್ಯಾರತಾನ್:
ನಾಡುನಡುವಿನ ಮ್ಯಾರತಾನ್‍ಗಳಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಪಡೆಯುವುದೇ ಒಂದು ಹೆಗ್ಗಳಿಕೆಯಾಗಿದೆ. ಏಕೆಂದರೆ ಈ ಹಿರಿಮೆಯ ಮ್ಯಾರತಾನುಗಳಲ್ಲಿ ಪಾಲ್ಗೊಳ್ಳಲು ತನ್ನದೇ ಆದ ಗೊತ್ತುವಳಿಗಳಿವೆ. ಅವುಗಳಲ್ಲಿ ಗೊತ್ತುಪಡಿಸಿದ ಕಡಿಮೆಹೊತ್ತಿನಲ್ಲಿ ಓಟವನ್ನು ಮುಗಿಸಿದ್ದೀರ ಎಂಬುದಕ್ಕೆ ಕುರುಹು ಕೊಡಬೇಕು, ಹೀಗೆ ಬಂದ ಮನವಿಯೋಲೆಗಳಲ್ಲಿ, ಅತಿ ಕಡಿಮೆಹೊತ್ತಿನಲ್ಲಿ ಓಡಿದವರನ್ನು ಪರಿಗಣಿಸುವರು. ಇದಕ್ಕಾಗಿ ನೀವು ಆಯಾ ನಾಡುಳಲ್ಲಿ ಗುರುತಿಸಿದ ಮ್ಯಾರತಾನುಗಳಲ್ಲಿ ಓಡಿ ಅವರಿಂದ ಓಟದಹೊತ್ತಿನ ನನ್ನಿಯೋಲೆಯನ್ನು(certification letter) ಪಡೆದು ಕೊಟ್ಟರೆ ಸಾಕು. ಆದರೆ ಈ ನನ್ನಿಯೋಲೆಯು ನಿಮಗೆ ಬರಿ ಮನವಿಯನ್ನು ಮಾಡಲು ಮಾತ್ರವೇ. ಆಗಲೇ ತಿಳಿಸಿದಂತೆ ಮನವಿ ಸಲ್ಲಿಸಿದವರ ಪಟ್ಟಿಯಲ್ಲಿ ಹೆಚ್ಚು ಬಿರುಸಾಗಿ ಉರುಬಿನಿಂದ ಓಡಿದವರ (fastest runners) ಪಟ್ಟಿಯಲ್ಲಿ ನೀವು ಬಂದರೆ ಮಾತ್ರ ನಿಮಗೆ ಆ ಮ್ಯಾರತಾನುಗಳಲ್ಲಿ ಓಡುವ ತೆರಹು (opportunity) ದೊರಕುವುದು.

ಎತ್ತುಗೆಗೆ, ಬೋಸ್ಟನ್ (Boston) ಮ್ಯಾರತಾನಿನಲ್ಲಿ ನೀವು ಓಡಲು ಬಯಸುವಿರಿ ಎಂದಿಟ್ಟುಕೊಳ್ಳೋಣ. ಆ ಬೋಸ್ಟನ್ ಮ್ಯಾರತಾನಿನ ನಡೆಸುಗರು 4 ಗಂಟೆ ಒಳಗೆ ಓಡಿದವರೆಗೆ ಮಾತ್ರ ಅವಕಾಶ ನೀಡುವುದು ಎಂದು ತಿಳಿಸುವರು. ಒಂದು ವೇಳೆ, ಅದೇ ಏಡಿನಲ್ಲಿ(year) ನೀವು ಬೆಂಗಳೂರಿನಲ್ಲಿ ನಡೆದ ಮ್ಯಾರತಾನಿನಲ್ಲಿ 4 ಗಂಟೆ ಒಳಗೆ ಓಡಿದ್ದರೆ, ಅದರ ನನ್ನಿಯೋಲೆಯನ್ನು ಪಡೆದು ಬೋಸ್ಟನ್ ಮ್ಯಾರತಾನ್ ನಡೆಸುಗರಿಗೆ ತಲುಪಿಸಿಬೇಕು ಇಲ್ಲವೇ ಮಿಂದಾಣದಲ್ಲಿ ಹಾಕಬೇಕು. ನಿಮ್ಮ ಓಟದಹೊತ್ತು ಬಿರುಸಾಗಿ ಓಡಿದವರ ಪಟ್ಟಿಯಲ್ಲಿ ಬಂದರೆ ಬೋಸ್ಟನ್ ಮ್ಯಾರತಾನ್ ಓಡಲು ತೆರಹು ಸಿಗಬಹುದು.

ಇಂತಹ ಹಿರಿಮೆಯುಳ್ಳ ನಾಳ್ನಡುವಿನ ಮ್ಯಾರತಾನುಗಳು:
– ಟೋಕಿಯೋ ಮ್ಯಾರತಾನ್
– ಬೋಸ್ಟನ್ ಮ್ಯಾರತಾನ್
– ಬರ‍್ಲಿನ್ ಮ್ಯಾರಾತಾನ್
– ಲಂಡನ್ ಮ್ಯಾರತಾನ್
– ಚಿಕಾಗೋ ಮ್ಯಾರತಾನ್
– ನ್ಯೂಯ್ಯಾರ‍್ಕ್ ಮ್ಯಾರತಾನ್

ಬಾರತದಲ್ಲಿ ಹೆಸರುವಾಸಿಯಾದ ಮ್ಯಾರತಾನ್‍ಗಳು.
– ಮುಂಬೈ ಮ್ಯಾರತಾನ್, ಮುಂಬೈ
– ಬೆಂಗಳೂರು ಮ್ಯಾರತಾನ್, ಬೆಂಗಳೂರು
– ಟಿ.ಸಿ.ಎಸ್ ವರ‍್ಲ್ಡ್ 10ಕೆ ಮ್ಯಾರತಾನ್, ಬೆಂಗಳೂರು
– ಪುಮಾ ಅರ‍್ಬನ್ ಸ್ಟಾಂಪೀಡ್ ಮ್ಯಾರತಾನ್, ಬೆಂಗಳೂರು
– ಆವುರೋವಿಲ್ಲೇ (auroville) ಮ್ಯಾರತಾನ್
– ಲಾ ಅಲ್ಟ್ರ (La Ultra – The High) ಮ್ಯಾರತಾನ್
– ಹೈದರಾಬಾದ್ ಮ್ಯಾರತಾನ್
– ಸತಾರಾ ಹಿಲ್ ಮ್ಯಾರತಾನ್, ಸತಾರಾ
– ಕಾವೇರಿ ಟ್ರೈಲ್ ಮ್ಯಾರತಾನ್, ಬೆಂಗಳೂರು
– ಬೆಂಗಳೂರು ಅಲ್ಟ್ರ ಮ್ಯಾರತಾನ್, ಬೆಂಗಳೂರು
– ಡೆಲ್ಲಿ ಅರೆ ಮ್ಯಾರತಾನ್, ಡೆಲ್ಲಿ
– ಬೆಂಗಳೂರು ಮಿಡ್ನೈಟ್ ಮ್ಯಾರತಾನ್, ಬೆಂಗಳೂರು

ಮುಂದಿನ ಬರಹಗಳಲ್ಲಿ ಕೆಳಗಿನವುಗಳನ್ನು ತಿಳಿದುಕೂಳ್ಳೋಣ:
– ಮ್ಯಾರತಾನುಗಳಲ್ಲಿನ ಓಟದ ಬಗೆಗಳು
– ನೀವೂ ಮ್ಯಾರತಾನಿನಲ್ಲಿ ಓಡಬಹುದು
– ಮ್ಯಾರತಾನ್ ತಯಾರಿ ಬಗೆ
– ಬೆಂಗಳೂರಿನ ಮ್ಯಾರತಾನ್ ಓಟಗಾರರ ಗುಂಪುಗಳು

(ಮಾಹಿತಿ ಮತ್ತು ಚಿತ್ರ ಸೆಲೆ: wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications