ಹಣತೆ

– ಅಂಕುಶ್ ಬಿ.

deepavali-hanate

ಹಲವಾರು ಬಾರಿ
ರೇಗಿಸಿದ್ದೆನು ಹಣತೆಯ
ನಿನ್ನದು ಬಕಾಸುರನ ಹೊಟ್ಟೆ
ನಕ್ಕಿತ್ತು ಹಣತೆ, ಬೆಳಗಿತ್ತು ಸುಮ್ಮನೆ

ಮತ್ತೊಂದು ಬಾರಿ
ಟೀಕಿಸಿದೆನು ಹಣತೆಯ
ನೀನು ಉರಿದ ಮೇಲೆ
ಉಳಿಯುವುದೊಂದೆ ಬಸ್ಮ
ಮೌನದಲೆ ಬೆಳಕು ಚೆಲ್ಲಿತ್ತು ಹಣತೆ

ಮಗದೊಂದು ಬಾರಿ
ಜರಿದೆನು ಹಣತೆಯ
ನಿನ್ನಯ ಒಡಲು
ಸುಟ್ಟ ಮಣ್ಣಿನ ಕಡಲು
ನೀರವತೆಯಲ್ಲೆ ಬೆಳಗಿತ್ತು ಹಣತೆ

ಅದೊಂದು ದಿನ
ಕಗ್ಗತ್ತಲ ರಾತ್ರಿಯಲಿ
ಕಾಡಿತ್ತು ಬಯವು
ಮೂಡಿತ್ತು ಹಣತೆಯ ಮೇಲೆ ಒಲವು

ಅಂದಿನಿಂದಲೆ ಹಣತೆಯನು
ಇಟ್ಟಿರುವೆನು ದೇವರ ಮನೆಯಲಿ
ಮನೆಯ ಬೆಳಗಲೆಂದು
ಮನದ ಕತ್ತಲೆಯ ತೊಡೆಯಲೆಂದು

(ಚಿತ್ರ ಸೆಲೆ: avadhimag.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *