ಅಲ್ಲಮನ ವಚನಗಳ ಓದು – 5ನೆಯ ಕಂತು

– ಸಿ.ಪಿ.ನಾಗರಾಜ.

 

ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ ನೆರೆ ಮೂರುಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ.

ತಾವು ಮಾಡಬೇಕಾದ ಕೆಲಸವನ್ನು ಒಲವು ನಲಿವುಗಳಿಂದ ಸರಿಯಾಗಿ ಮಾಡದೆ, ಹತ್ತಾರು ಬಗೆಯ ನೆಪಗಳನ್ನೊಡ್ಡಿ, ಕಾಲ ಕಳೆಯುವಂತಹ ವ್ಯಕ್ತಿಗಳ ನಡೆನುಡಿಗಳನ್ನು ಈ ವಚನದಲ್ಲಿ ಅಲ್ಲಮನು ಟೀಕಿಸಿದ್ದಾನೆ.

ದೂರದ ಪಯಣಕ್ಕಾಗಿ ಇಲ್ಲವೇ ಕಾಳಗದ ಕಣಕ್ಕೆ ತೆರಳುವುದಕ್ಕಾಗಿ ಕೊಟ್ಟಿರುವ ಕುದುರೆಯನ್ನು ಹತ್ತಿ, ಅದನ್ನು ಹತೋಟಿಯಲ್ಲಿಟ್ಟುಕೊಂಡು ಸವಾರಿ ಮಾಡುತ್ತ ಮುನ್ನಡೆಸುವ ಕುಶಲತೆ ಹಾಗೂ ತಲುಪಬೇಕಾದ ಎಡೆಯತ್ತ ಹೋಗುವ ಹಂಬಲವಿಲ್ಲದ ವ್ಯಕ್ತಿಗಳು, ತಮ್ಮ ಕಣ್ಣಮುಂದಿರುವ ಕುದುರೆಯನ್ನು “ಸವಾರಿಗೆ ಲಾಯಕ್ಕಾಗಿಲ್ಲ” ಎಂದು ಆರೋಪಿಸಿ, ಕುದುರೆಯ ಮೊಗಕ್ಕೆ ಹಾಕುವ ಕಡಿವಾಣ ಮತ್ತು ಅದರ ಬೆನ್ನಿನ ಮೇಲೆ ಹಾಕಬೇಕಾದ ಜೀನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮತ್ತೊಂದು ಕುದುರೆಗಾಗಿ ಹುಡುಕಾಡುತ್ತ ಅಲೆಯುತ್ತಿರುವ ಸಂಗತಿಯೊಂದನ್ನು ಒಂದು ರೂಪಕವನ್ನಾಗಿ ಅಲ್ಲಮನು ಚಿತ್ರಿಸಿದ್ದಾನೆ. ಈ ಶಬ್ದಚಿತ್ರವು “ವ್ಯಕ್ತಿಗಳು ತಮ್ಮ ಮೇಲಿನ ಹೊಣೆಗಾರಿಕೆಯಿಂದ ಜಾರಿಕೊಂಡು ತಿಳಿಗೇಡಿತನದಿಂದ ನಡೆದುಕೊಳ್ಳುವುದನ್ನು” ಸೂಚಿಸುತ್ತದೆ.

ಜಗತ್ತಿನಲ್ಲಿ ನಿತ್ಯವೂ ನೂರೆಂಟು ಬಗೆಯ ಕೆಲಸಗಳಲ್ಲಿ ತೊಡಗಿರುವ ಜನರಲ್ಲಿ ಕೆಲವರು, ತಾವು ಮಾಡುತ್ತಿರುವ ಕೆಲಸದಲ್ಲಿ ತಮ್ಮ ಮಯ್ ಮನಗಳನ್ನು ಇಡಿಯಾಗಿ ತೊಡಗಿಸದೆ, ಅಸಡ್ಡೆ ಮತ್ತು ಸೋಮಾರಿತನದಿಂದ ಕೆಲಸವನ್ನು ಹದಗೆಡಿಸುತ್ತಾರೆ. ಇದಕ್ಕೆ ಬದಲಾಗಿ ಮತ್ತೊಂದು ಕೆಲಸವನ್ನು ಹೆಸರಿಸುತ್ತಾ, ಅದರ ಕಡೆಗೆ ಒಲವನ್ನು ತೋರಿಸುತ್ತಾ “ಆ ಕೆಲಸ ದೊರೆತಿದ್ದರೆ ತುಂಬಾ ಚೆನ್ನಾಗಿ ಮಾಡುತ್ತಿದ್ದೆ” ಎಂದು ಹೇಳಿಕೊಳ್ಳುವುದನ್ನು ಪದೇ ಪದೇ ನಾವೆಲ್ಲರೂ ಕೇಳುತ್ತಿರುತ್ತೇವೆ. ಈ ಬಗೆಯ ಮಾತುಗಳನ್ನು ಕೆಲವೊಮ್ಮೆ ನಾವು ಮಾಡಬೇಕಾಗಿರುವ ಕೆಲಸದ ಬಗೆಗೂ ನಾವೇ ಆಡಿಕೊಳ್ಳುತ್ತಿರುತ್ತೇವೆ.

ತಮ್ಮ ಮತ್ತು ಸಹಮಾನವರ ಒಳಿತಿನ ಬಗ್ಗೆ ಕಾಳಜಿಯಿಲ್ಲದ ಜನರು ತಾವು ಮಾಡಬೇಕಾಗಿರುವ ಕೆಲಸದಲ್ಲಿ ಕುಂದುಕೊರತೆಗಳನ್ನು ಹುಡುಕಿ, ಅದನ್ನು ಕಯ್ ಬಿಡುವುದಕ್ಕಾಗಿ ತಮ್ಮ ಸುತ್ತಮುತ್ತಲಿನ ನಿಸರ‍್ಗದ ಪರಿಸರ/ಸಾಮಾಜಿಕ ವಾತಾವರಣ/ಹಣಕಾಸಿನ ಸಂಗತಿಗಳಲ್ಲಿರುವ ಅಡೆತಡೆಗಳನ್ನು ನೆಪಗಳನ್ನಾಗಿ ಮುಂದೊಡ್ಡುವುದರಲ್ಲಿ ಕಡುಜಾಣರಾಗಿರುತ್ತಾರೆಯೇ ಹೊರತು, ತಮ್ಮ ಪಾಲಿನ ಕೆಲಸವನ್ನು ಚೆನ್ನಾಗಿ ಮತ್ತು ಸರಿಯಾಗಿ ಮಾಡುವುದಕ್ಕಾಗಿ ತಮ್ಮಲ್ಲಿರುವ ಜಾಣತನ/ಕುಶಲತೆ/ಕಸುವನ್ನು ಒಗ್ಗೂಡಿಸಿ ದುಡಿಯಬೇಕೆಂಬ ಮನಸ್ಸನ್ನು ಹೊಂದಿರುವುದಿಲ್ಲ.

ಶಿವಶರಣ-ಶರಣೆಯರ ಪಾಲಿಗೆ “ಲಿಂಗ” ಎಂದರೆ ಕಲ್ಲು/ಮಣ್ಣು/ಲೋಹಗಳಿಂದ ರೂಪುಗೊಂಡಿರುವ ಶಿವನಲ್ಲ; ಸಮಾಜದಲ್ಲಿನ ಸಹಮಾನವರಿಗೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳನ್ನೇ ಲಿಂಗರೂಪಿಯಾದ ಶಿವನೆಂದು ಅವರು ನಂಬಿದ್ದರು. ಆದುದರಿಂದಲೇ ಲಿಂಗದ ಬಗೆಗಿನ ಬಕುತಿಗೆ/ಪೂಜೆಗೆ/ನೆನಪಿಗೆ ವ್ಯಕ್ತಿಗಳ ಸಾಮಾಜಿಕ ನಡೆನುಡಿಗಳನ್ನು ತಳಕುಹಾಕಿದ್ದರು/ಹೆಣೆದಿದ್ದರು. ತಾವು ಮಾಡಬೇಕಾದ ಕೆಲಸವನ್ನು ಕಡೆಗಣಿಸುವ ವ್ಯಕ್ತಿಗಳು ಲಿಂಗದ ಸ್ವರೂಪವನ್ನಾಗಲಿ/ಲಿಂಗದ ಒಳಿತಿನ ಮೊಗವನ್ನಾಗಲಿ ತಿಳಿಯಲಾರರು ಎಂಬ ನಿಲುವನ್ನು ಶಿವಶರಣ-ಶರಣೆಯರು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಮನು ತಮ್ಮ ಪಾಲಿನ ಕೆಲಸವನ್ನು ಕಡೆಗಣಿಸುವವರನ್ನು ಕುರಿತು “ಗುಹೇಶ್ವರನೆಂಬ ಲಿಂಗವನು ಅವರೆತ್ತ ಬಲ್ಲರೋ” ಎಂದು ಕಟುವಾಗಿ ಟೀಕಿಸಿದ್ದಾನೆ.

(ಕೊಟ್ಟ=ನೀಡಿದ; ಕುದುರೆ+ಅನ್+ಏರಲ್+ಅರಿಯದೆ; ಅನ್=ಅನ್ನು; ಏರಲ್=ಹತ್ತಿ ಸವಾರಿ ಮಾಡಲು; ಅರಿ=ತಿಳಿ; ಅರಿಯದೆ=ತಿಳಿಯದೆ/ಕುಶಲತೆಯಿಲ್ಲದೆ; ಮತ್ತು+ಒಂದು; ಮತ್ತೊಂದು=ಬೇರೊಂದನ್ನು/ಇನ್ನೊಂದನ್ನು; ಬಯಸು=ಇಚ್ಚಿಸು/ಕೇಳು; ವೀರ=ಕೆಚ್ಚೆದೆಯುಳ್ಳವನು/ಕಸುವುಳ್ಳವನು; ಧೀರ=ಎದೆಗಾರಿಕೆಯುಳ್ಳವನು/ದಿಟ್ಟತನವುಳ್ಳವನು; ನೆರೆ=ಇಡಿಯಾಗಿ/ಸಂಪೂರ‍್ಣವಾಗಿ/ಎಲ್ಲವನ್ನು ಒಳಗೊಂಡು; ಮೂರುಲೋಕ+ಎಲ್ಲವು; ಮೂರುಲೋಕ=ದೇವಲೋಕ/ಬೂಲೋಕ/ಪಾತಾಳಲೋಕ ಎಂಬ ಮೂರು ಲೋಕಗಳು. ಬೂಲೋಕದ ಕೆಳಗೆ ನಾಗದೇವತೆಗಳು ನೆಲೆಸಿರುವ ಪಾತಾಳಲೋಕ ಮತ್ತು ಬೂಲೋಕದ ಮೇಲೆ ಇಂದ್ರ ಮೊದಲಾದ ದೇವತೆಗಳು ನೆಲೆಸಿರುವ ದೇವಲೋಕವಿದೆ ಎಂಬ ಕಲ್ಪನೆಯು ಜನಮನದಲ್ಲಿತ್ತು; ಹಲ್ಲಣ=ಜೀನು/ಕುದುರೆಯ ಬೆನ್ನ ಮೇಲೆ ಸವಾರನು ಕುಳಿತುಕೊಳ್ಳಲು ನೆರವಾಗಲು ತಯಾರಿಸಿರುವ ತೊಗಲಿನ ವಸ್ತು; ಬಳಲುತ್ತ+ಐದಾರೆ; ಬಳಲು=ಆಯಾಸಗೊಳ್ಳುವುದು/ದಣಿಯುವುದು; ಐದಾರೆ=ಅಯ್ದಾರೆ<ಎಯ್ದಾರೆ/ಇದ್ದಾರೆ; ಬಳಲುತ್ತೈದಾರೆ=ದಣಿದು ಸುಸ್ತಾಗುತ್ತಿದ್ದಾರೆ/ಆಯಾಸದಿಂದ ಬಸವಳಿಯುತ್ತಿದ್ದಾರೆ; ಗುಹೇಶ್ವರನ್+ಎಂಬ; ಲಿಂಗ+ಅನ್+ಅವರ‍್+ಎತ್ತ; ಗುಹಾ+ಈಶ್ವರ=ಗುಹೇಶ್ವರ; ಗುಹಾ=ಗುಹೆ/ಬೆಟ್ಟಗುಡ್ಡಗಳಲ್ಲಿರುವ ಕಲ್ಲಿನ ಪೊಟರೆ; ಈಶ್ವರ=ಶಿವ; ಗುಹೇಶ್ವರ=ಶಿವನ ಮತ್ತೊಂದು ಹೆಸರು/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ; ಎತ್ತ=ಯಾವ ಕಡೆಯಿಂದ/ರೀತಿಯಿಂದ; ಬಲ್ಲ=ತಿಳಿ/ಅರಿ; ಬಲ್ಲರೋ=ತಿಳಿದಿದ್ದಾರೆಯೋ/ಅರಿತಿದ್ದಾರೆಯೋ; ಎತ್ತ ಬಲ್ಲರೋ=ಯಾವ ರೀತಿಯಲ್ಲಿ ತಾನೆ ತಿಳಿಯಬಲ್ಲರು)

( ಚಿತ್ರ ಸೆಲೆ: lingayatreligion.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.