‘ನೋಬೆಲ್’ – ಕುತೂಹಲಕಾರಿ ವಿಶಯಗಳು
‘ನೋಬೆಲ್’ ಹೆಸರಲ್ಲೇ ಅದೇನೋ ತೂಕ. ನೋಬೆಲ್ ಪ್ರಶಸ್ತಿ ಜಗತ್ತಿನಲ್ಲಿಯೇ ಹೆಚ್ಚುಗಾರಿಕೆಯುಳ್ಳ ಬಿರುದುಗಳಲ್ಲಿ ಒಂದು. 1895ರಿಂದ ಸ್ವೀಡಿಶ್ ವಿಜ್ನಾನಿ ಆಲ್ಪ್ರೆಡ್ ನೋಬೆಲ್(Alfred Nobel) ಎನ್ನುವವರ ಹೆಸರಿನಲ್ಲಿ ನೀಡಲಾಗುವ ಈ ಬಿರುದನ್ನು ಕಲಿಕೆ, ನಡೆ-ನುಡಿ ಮತ್ತು ಅರಕೆಗಳಿಗಾಗಿ (Research) ನೀಡಲಾಗುತ್ತದೆ. ಸ್ವೀಡನ್ ದೇಶದ ಬಿಣಿಗೆಯರಿಗ(Engineer), ಆಲ್ಪ್ರೆಡ್ ನೋಬೆಲ್ 1895ರ ನವೆಂಬರ್ 27ರಂದು ತನ್ನ ಆಸ್ತಿಯನ್ನು ನೋಬೆಲ್ ಪ್ರಶಸ್ತಿ ನೀಡಲು ಉಯಿಲು ಬರೆದರು. ಇವರ ಉಯಿಲಿನಂತೆ ನೋಬೆಲ್ ಪ್ರಶಸ್ತಿಯನ್ನು ನೀಡಲೆಂದೇ ನೋಬೆಲ್ ಪೌಂಡೇಶನ್ಅನ್ನು 1900ರಲ್ಲಿ ಹುಟ್ಟು ಹಾಕಲಾಯಿತು. ಈ ಸಂಸ್ತೆ ಕಟ್ಟಿದ ಸ್ವೀಡಿಶ್ ಅಕಾಡೆಮಿ (Swedish Academy) ಮತ್ತು ನಾರ‍್ವೆಯನ್ ನೋಬೆಲ್ ಕಮಿಟಿಯಿಂದ(Norwegian Nobel Committee) ನೋಬೆಲ್ ಪ್ರಶಸ್ತಿಯನ್ನು ನೀಡುತ್ತಾರೆ. ಪ್ರಶಸ್ತಿಯು ಹೊನ್ನಿನ ಪದಕ, ಪ್ರಶಸ್ತಿ ಪಲಕ ಮತ್ತು ಸುಮಾರು 1.2 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಒಳಗೊಂಡಿದೆ.
ಇಲ್ಲಿಯವರೆಗೆ ನೀಡಿದ್ದು ಎಶ್ಟು ನೋಬೆಲ್?
ಮೊದಲ ನೋಬೆಲ್ ಪ್ರಶಸ್ತಿಯನ್ನು ನೀಡಿದ್ದು 1901ರಲ್ಲಿ. ಕೆಲವೊಮ್ಮೆ ನೋಬೆಲ್ ಪ್ರಶಸ್ತಿಯನ್ನು ಇಬ್ಬರು ಅತವಾ ಮೂವರು ಮಂದಿಯ ನಡುವೆಯೂ ಹಂಚಲಾಗುತ್ತದೆ. ಇಲ್ಲಿಯವರೆಗೆ 579 ಪ್ರಶಸ್ತಿಗಳನ್ನು ನೀಡಲಾಗಿದ್ದು ಇದನ್ನು ಪಡೆದವರು 885 ಮಂದಿ ಮತ್ತು 26 ಸಂಸ್ತೆಗಳು.
ನೋಬೆಲ್ಅನ್ನು ಯಾರ್‍ಯಾರಿಗೆ ನೀಡಲಾಗುತ್ತದೆ?
ಇರ್‍ಪರಿಮೆ(Chemistry), ಹಣಕಾಸಿನರಿಮೆ(Economics), ನಲ್ಬರಹ(Literature), ಶಾಂತಿ, ಇರುವರಿಮೆ(Physics) ಮತ್ತು ಮಾಂಜರಿಮೆಗಳಲ್ಲಿ(Medicine) ಅಸಾದಾರಣ ಸಾದನೆ ಮಾಡಿದವರನ್ನು ಗುರುತಿಸಿ ನೋಬೆಲ್ ಬಿರುದನ್ನು ನೀಡಲಾಗುತ್ತದೆ. ಇರುವರಿಮೆಗೆ ಇಲ್ಲಿಯವರೆಗೆ ಅತೀ ಹೆಚ್ಚು ಅಂದರೆ 110 ಪ್ರಶಸ್ತಿಗಳನ್ನು ನೀಡಲಾಗಿದೆ.
ಹಣಕಾಸಿನರಿಮೆಗೆ(Economics) ನೀಡಲಾಗುವ ನೋಬೆಲ್ ಪ್ರಶಸ್ತಿ ಯನ್ನು 1968ರಿಂದ ಸೇರಿಸಲಾಗಿದ್ದು, ಸ್ವೀಡನ್‍ನ ರಾಶ್ಟ್ರೀಯ ಹಣಮನೆ ಸ್ವೆರಿಜೆಸ್ ರಿಕ್ಸ್‌ಬ್ಯಾಂಕ್(Sveriges Riksbank) ಇದನ್ನು ಶುರುಮಾಡಿತು.
ನೋಬೆಲ್ ಇಲ್ಲದ ವರುಶಗಳು
1901ರಿಂದ ಶುರುಮಾಡಿ ಪ್ರತಿ ವರುಶವೂ ನೋಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ನಡುವೆ ಹಲವು ಕಾರಣಗಳಿಂದ ಕೆಲವು ವರುಶ ನೋಬೆಲ್ ಪ್ರಶಸ್ತಿಯನ್ನು ನೀಡಿರಲಿಲ್ಲ. ಮೊದಲ ವಿಶ್ವಕಾಳಗ (1914-18) ಮತ್ತು ಎರಡನೇ ವಿಶ್ವಕಾಳಗದ ಹೊತ್ತಿನಲ್ಲಿ(1939-45) ಹಲವು ಸಲ ನೋಬೆಲ್ ಪ್ರಶಸ್ತಿಯನ್ನು ನೀಡಿರಲಿಲ್ಲ.
ನೋಬೆಲ್ ಪಡೆದ ಅತೀ ಹಿರಿಯ ಮತ್ತು ಕಿರಿಯರು ಯಾರು ಗೊತ್ತೇ?
ಇತ್ತೀಚಿಗೆ 2014ರಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಮಲಾಲ ಯೂಸುಪಾಜಿ(Malala Yousafzai) ನೋಬೆಲ್ ಪಡೆದ ಅತೀ ಕಿರಿಯ ವ್ಯಕ್ತಿ. ನೋಬೆಲ್ ಪ್ರಶಸ್ತಿ ಪಡೆದಾಗ ಇವರಿಗೆ ಬರೀ 17 ವರುಶ! 1915ರಲ್ಲೇ ಇರುವರಿಮೆಗಾಗಿ ನೋಬೆಲ್ ಪಡೆದ ಲಾರೆನ್ಸ್ ಬ್ರಾಗ್(Lawrence Bragg) ಅವರ ಹರೆಯ ಬರೀ 25 ವರುಶ.
2007ರಲ್ಲಿ ಪುರುಳರಿಮೆಗಾಗಿ ನೋಬೆಲ್ ಪಡೆದ ಪೋಲೆಂಡ್‍ನ ಲಿಯೋ ಹರ್‍ವಿಕ್ಸ್(Leonid Hurwicz) ಅತ್ಯಂತ ಹಿರಿಯರು. ನೋಬೆಲ್ ಪ್ರಶಸ್ತಿ ಸಿಕ್ಕಾಗ ಅವರಿಗೆ 90 ವರ್‍ಶ ವಯಸ್ಸು.
ನೋಬೆಲ್ ಪಡೆದ ಮಹಿಳೆಯರು
ಇಲ್ಲಿಯವರೆಗೆ ನೋಬೆಲ್ ಪಡೆದವರಲ್ಲಿ 49 ಮಂದಿ ಮಹಿಳೆಯರು. ಮೇರಿ ಕ್ಯೂರಿ(Marie Curie) ಈ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ.ಇವರು ಎರಡು ಬಾರಿ ನೋಬೆಲ್ ಪಡೆದ ಮೊದಲನೆಯವರೂ ಆಗಿದ್ದಾರೆ. 1903ರಲ್ಲಿ ಇರುವರಿಮೆ ಮತ್ತು 1911ರಲ್ಲಿ ಇರ್‍ಪರಿಮೆಗೆ ನೋಬೆಲ್ ಪಡೆದಿದ್ದಾರೆ.
ಅತೀ ಹೆಚ್ಚು ನೋಬೆಲ್ ಪಡೆದವರು
ಅಂತರರಾಶ್ಟ್ರೀಯ ರೆಡ್‍ಕ್ರಾಸ್ ಸಂಸ್ತೆ(International Committee of the Red Cross (ICRC)) ಅತೀ ಹೆಚ್ಚು ನೋಬೆಲ್ ಪಡೆದ ಹೆಗ್ಗಳಿಕೆಯನ್ನು ಹೊಂದಿದೆ. ಈ ಸಂಸ್ತೆಗೆ 3 ಪ್ರಶಸ್ತಿಗಳು ಸಿಕ್ಕರೆ ಈ ಸಂಸ್ತೆಯನ್ನು ಕಟ್ಟಿದ ಹೆನ್ರಿ ಡುನಾಂಟ್(Henry Dunant) ಅವರೇ 1901ರಲ್ಲಿ ಮೊದಲ ನೋಬೆಲ್ ಪಡೆದದ್ದು. ಮೇರಿ ಕ್ಯೂರಿ ಎರಡು ಪ್ರಶಸ್ತಿ ಪಡೆದರೂ ಅದರಲ್ಲಿ ಮೊದಲನೆಯದನ್ನು ಇನ್ನಿಬ್ಬರೊಂದಿಗೆ ಹಂಚಿಕೊಂಡಿದ್ದರು. ಯಾರೊಂದಿಗೂ ಹಂಚದೇ ಎರಡು ಪ್ರಶಸ್ತಿಗಳನ್ನು ಕೊಟ್ಟಿದ್ದು ಲೀನಸ್ ಪಾಲಿಂಗ್(Linus Pauling) ಅವರೊಬ್ಬರಿಗೆ ಮಾತ್ರ!
ನೋಬೆಲ್ ಬೇಡವೆಂದವರೂ ಇದ್ದಾರೆ!
ಇಲ್ಲಿಯವರೆಗೆ ನೋಬೆಲ್ ಪ್ರಶಸ್ತಿ ಬೇಡವೆಂದವರು ಇಬ್ಬರು. 1964ರಲ್ಲಿ ಮೊದಲ ಬಾರಿ ಪ್ರೆಂಚ್ ತತ್ವಜ್ನಾನಿ ಜೀನ್-ಪಾಲ್ ಸಾರ್‍ತ್ರೆ(Jean-Paul Sartre) ನೋಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.ಇವರ ಬಗ್ಗೆ ಇನ್ನೊಂದು ವಿಶೇಶ ಎಂದರೆ ಇವರಿಗೆ ಸಂದ ಎಲ್ಲಾ ಅದಿಕ್ರುತ ಬಿರುದುಗಳನ್ನೂ ಇವರು ತಿರಸ್ಕರಿಸಿದ್ದರು.
1939ರಲ್ಲಿ ಜರ್‍ಮನಿಯ ಮೂವರನ್ನು ಪ್ರಶಸ್ತಿ ಪಡೆಯದಂತೆ ಹಿಟ್ಲರ್ ತಡೆದಿದ್ದನು. ಬಳಿಕ ಅವರು ಬಿರುದು ತೆಗೆದುಕೊಂಡರೂ ಪ್ರಶಸ್ತಿಯ ದುಡ್ಡನ್ನು ಮಾತ್ರ ಪಡೆಯಲಿಲ್ಲ.
ಜೈಲಿನಿಂದ ಪ್ರಶಸ್ತಿ ಪಡೆದವರು!
ಮೂವರು ನೋಬೆಲ್ ಪುರಸ್ಕ್ರುತರು ಜೈಲಿನಲ್ಲಿದ್ದುಕೊಂಡೇ ಪ್ರಶಸ್ತಿ ಪಡೆದಿದ್ದಾರೆ. ಇಲ್ಲಿ ಇನ್ನೊಂದು ಕುತೂಹಲದ ವಿಶಯ ಎಂದರೆ ಈ ಮೂವರೂ ಪ್ರಶಸ್ತಿ ಪಡೆದದ್ದು ಶಾಂತಿಗಾಗಿ. ಜರ್‍ಮನ್ ಶಾಂತಿದೂತ ಮತ್ತು ಪತ್ರಕರ್‍ತ ಕಾರ್‍ಲ್ ವಾನ್ ಓಸೆಟ್‍ಸ್ಕಯ್(Carl von Ossietzky), ಮ್ಯಾನ್‍ಮಾರ್‍ನ ರಾಜಕಾರಣಿ ಆಂಗ್ ಸಾನ್ ಸೂ ಕಿ(Aung San Suu Kyi) ಮತ್ತು ಚೀನಾದ ಮಾನವ ಹಕ್ಕುಗಳ ಹೋರಾಟಗಾರ ಲ್ಯೂ ಶಿಯಾಬೋ(Liu Xiaobo) – ಇವರೇ ಜೈಲಿನಲ್ಲಿದ್ದುಕೊಂಡೇ ನೋಬೆಲ್ ಪಡೆದವರು.
ನೋಬೆಲ್ ಕುಟುಂಬಗಳು
ಎರಡು ನೋಬೆಲ್ ಪಡೆದ ಮೊದಲ ವ್ಯಕ್ತಿ ಮೇರಿ ಕ್ಯೂರಿ ಅವರ ಗಂಡ ಪಿಯರಿ ಕ್ಯೂರಿ(Pierre Curie) ಅವರೂ ನೋಬೆಲ್ ವಿಜೇತರು. ಅತೀ ಹೆಚ್ಚು ನೋಬೆಲ್ ಪಡೆದ ಕುಟುಂಬ ಇವರದೇ. ಇವರಲ್ಲದೇ ಇನ್ನೂ 4 ದಂಪತಿಗಳು ನೋಬೆಲ್ ಪಡೆದಿದ್ದಾರೆ.
(ಮಾಹಿತಿ ಮತ್ತು ಚಿತ್ರ ಸೆಲೆ: nobelprize.org, ವಿಕಿಪೀಡಿಯ)
ಇತ್ತೀಚಿನ ಅನಿಸಿಕೆಗಳು