ಬಿಡುಗಡೆಯ ಹೊಸ್ತಿಲಲ್ಲಿ ಹೊಸ ಟಾಟಾ ಹೆಕ್ಸಾ

– ಜಯತೀರ‍್ತ ನಾಡಗವ್ಡ.

car_2

ಟಾಟಾದ ಹೊಸದೊಂದು ಬಂಡಿ ಇಶ್ಟರಲ್ಲೇ ಬಿಡುಗಡೆಗೊಳ್ಳಲಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಬಿಡುಗಡೆಗೊಳ್ಳಬಹುದು ಎನ್ನಲಾಗಿದ್ದ ಟಾಟಾ ಹೆಕ್ಸಾ (HEXA) ಬಂಡಿ, ಬಿಡುಗಡೆಯ ಹೊಸ್ತಿಲಲ್ಲಿದೆ. ಕ್ರಾಸೋವರ್ ಆಟೋಟದ ಬಳಕೆ (Crossover SUV) ಬಂಡಿಗಳಲ್ಲಿಯೂ ತನ್ನ ಅಚ್ಚೊತ್ತುವ ಹಂಬಲದೊಂದಿಗೆ ಟಾಟಾ ಕೂಟದವರು ಹೊಸದಾದ ಹೆಕ್ಸಾ ಬಂಡಿಯನ್ನು ಅಣಿಗೊಳಿಸಿದ್ದಾರೆ. ಈ ವರುಶದ ಮೊದಲಲ್ಲಿ ಹೊರತಂದ ಟಿಯಾಗೊ(Tiago) ಬಂಡಿಗೆ ಬಾರೀ ಬೇಡಿಕೆ ಬಂದಿದ್ದು ಟಾಟಾ ಕೂಟಕ್ಕೆ ಹುರುಪು ಮೂಡಿಸಿದೆ.  ಹೊಸ ಹೆಕ್ಸಾ ಬಂಡಿಯ ಈಡುಗಾರಿಕೆ (Design), ಇತರೆ ಬಂಡಿಗಳೊಂದಿಗೆ ಹೋಲಿಸಿದಾಗ  ಹೇಗೆ ಬೇರೆಯಾಗಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಬಿಣಿಗೆ ಮತ್ತು ಸಾಗಣಿ (Engine and Transmission):

4 ಉರುಳೆಗಳ 2.2 ಲೀಟರ್ ನ ಡೀಸೆಲ್ ಬಿಣಿಗೆ ಹೆಕ್ಸಾಗೆ 156 ಕುದುರೆಬಲದ ಕಸುವು ನೀಡಲಿದೆ. ಈ ಬಿಣಿಗೆ 3ವಿವಿದ ಸಾಗಣಿಗಳ ಆಯ್ಕೆಯಲ್ಲಿ ಸಿಗಲಿದೆ. 5 -ವೇಗದ ಓಡಿಸುಗನ ಹಿಡಿತದ ಸಾಗಣಿಯ (5-Speed Manual Transmission) 320 ನ್ಯೂಟನ್ ಮೀಟರ್ ತಿರುಗುಬಲ ಉಂಟು ಮಾಡಿದರೆ, 6-ವೇಗದ ಓಡಿಸುಗನ/ತನ್ನಿಡಿತದ ಸಾಗಣಿಗಳಿಗೆ 400 ನ್ಯೂಟನ್ ಮೀಟರ್ ತಿರುಗುಬಲ ನೀಡುವಂತೆ ಮಾಡಲಾಗಿದೆ.

1

ಮೈಮಾಟ:

3-4 ವರುಶಗಳ ಹಿಂದೆ ಅರಿಯಾ(Aria) ಎಂಬ ಹಲಬಳಕೆಯ ಬಂಡಿ ಹೊರತಂದು ಟಾಟಾ ಕೈಸುಟ್ಟುಕೊಂಡಿತ್ತು. ಹೊಸ ಹೆಕ್ಸಾ ಬಂಡಿ ಅರಿಯಾ ಬಂಡಿಯನ್ನೇ ಆದಾರವಾಗಿರಿಸಿ ಅಣಿಗೊಳಿಸಿದ್ದರೂ, ಹಿಂದಿನ ತಪ್ಪುಗಳು ಮರುಕಳಿಸದಂತೆ ಈಡುಗಾರಿಕೆಯಲ್ಲಿ ಸಾಕಶ್ಟು ಎಚ್ಚರವಹಿಸಲಾಗಿದೆ. ಅಗಲವಾದ ಮುಂದೀಪಗಳು(Head lights), ದೊಡ್ಡದಾದ ಮುನ್ಕಂಬಿ ತೆರೆ (Front Grill),  ಚಿಪ್ಪಿನಂತೆ ಚಪ್ಪಟೆಯಾದ ಬಿಣಿಗವಸು(Bonnet) ಹೆಕ್ಸಾ ಬಂಡಿಗಾಗೇ ಹೇಳಿ ಮಾಡಿಸಿದಂತಿವೆ. ಹೆಚ್ಚಾಗಿ, ದುಬಾರಿ ಆಟೋಟದ ಬಂಡಿಯಲ್ಲಿ ಕಾಣಸಿಗುವ ಎರಡು ಹೊಗೆಗೊಳವೆಗಳು (Exhaust pipe), 19 ಇಂಚಿನ ದೊಡ್ಡದಾದ ಗಾಲಿಗಳು ಹೆಕ್ಸಾದ ದಿಟ್ಟ ನೋಟಕ್ಕೆ ಪುರಾವೆಯಂತಿವೆ. 200 ಮಿಲಿಮೀಟರ್ ನೆಲತೆರವು (Ground clearance), 4.8 ಮೀಟರ್ ಉದ್ದ 1.9 ಮೀಟರ್ ಅಗಲವಾದ ಹೆಕ್ಸಾ ಬಂಡಿ ಎದುರಾಳಿಗಳಾದ ಎಕ್ಸ್‌ಯುವಿ 5ಒಒ ಮತ್ತು ಟೋಯೊಟಾ ಇನ್ನೋವಾಗಳನ್ನು ಮೀರಿಸಿದೆ.

2

ಹೊರಗಿನಿಂದ ಪೊಗದಸ್ತಾಗಿ ಕಾಣುವ ಹೆಕ್ಸಾ ಬಂಡಿ, ಒಳಗಿನಿಂದ ಅಂದವಾಗಿದೆ. ಓಡಿಸುಗನೆಡೆಯ ಹಿಂಬದಿ ಸಾಲಿನ ಕುಳಿರಗಾಳಿಯ ಕಿಂಡಿಗಳು (AC Vents) ದೊಡ್ಡದಾಗಿದ್ದು, ಹಿಂಬಾಗದ ಪಯಣಿಗರಿಗೆ ತಂಗಾಳಿ ಸೂಸಲಿವೆ. ಜೆಬಿಎಲ್(JBL) ಕೂಟದ ಹಾಡುಗಾರಿಕೆ ಪೆಟ್ಟಿಗೆ (Music System), ಹಾಡು ಕೇಳುವವರಿಗೆ ಮುದ ನೀಡುವುದು ಕಚಿತ, ಇದಕ್ಕೊಂದು ರಿಮೋಟ್ ಕಂಟ್ರೋಲ್ ಕೂಡ ನೀಡಲಾಗಿದೆ. ಇಂತ ದೊಡ್ಡ ಬಂಡಿಗೆ 5 ಇಂಚಿನ ಸೋಕು ತೆರೆ (Touch Screen) ಅಳವಡಿಸಿದ್ದು ಮಾತ್ರ ತೀರ ಚಿಕ್ಕದೆನಿಸುತ್ತದೆ. ಸುಯ್ಯ್ ಅಂಕೆ ಏರ‍್ಪಾಟು (Cruise Control), ತಂತಾನೇ ಕೆಲಸ ಮಾಡುವ ಒರೆಸುಕಗಳು(Automatic Wipers) ಇದರಲ್ಲಿರಲಿವೆ.

6 ಮತ್ತು 7 ಮಂದಿ ಕೂರುವ ಎರಡು ಆಯ್ಕೆಗಳಲ್ಲಿ ಸಿಗಲಿರುವ ಹೆಕ್ಸಾ ಬಂಡಿಯಲ್ಲಿ ಸಾಕಶ್ಟು ಜಾಗವಿದೆ. ಮದ್ಯದ ಕೂರುಮಣೆ, ಹಿಂಬಾಗದ ಕೂರುಮಣೆಗಳಲ್ಲಿ ಹೆಚ್ಚಿನ ಜಾಗ ಒದಗಿಸಿಕೊಡಲಾಗಿದ್ದು, ದೂರದ ಪಯಣಗಳಿಗೆ ಯಾವುದೇ ಕಿರಿಕಿರಿಯಾಗದು. ಹಿಂಬದಿಯ ಕೂರುಮಣೆಯನ್ನು ಬಳಸಿಕೊಳ್ಳದೇ ಇರುವವರು ಅದನ್ನು ಮಡಚಿಟ್ಟು, ಸರಕು ಚಾಚನ್ನು ಹೆಚ್ಚಿಸಬಹುದಾಗಿದೆ. 2 ಸರಕುಗೂಡುಗಳು (glove box), ಬಾಗಿಲ ಬಳಿ ಕಪ್/ ಬಾಟಲ್ ಇಡಲು ಸೇರುವೆಗಳನ್ನು (Cup/bottle holders) ಒದಗಿಸಲಾಗಿದೆ. ಇಂದಿನ ಹೆಚ್ಚಿನ ಬಂಡಿಗಳಲ್ಲಿ ಕಂಡುಬರುವ, ಅಲೆಯುಲಿಗೆಂದೇ(Mobile) ಬೇರೆಯದೇ ಆದ ಸರಕುಗೂಡು ನೀಡಲಾಗಿಲ್ಲ.

ಬಂಡಿಯಲ್ಲಿ ಪಯಣಿಸುವವರ ಕಾಪಿಗಾಗಿ ಹೆಚ್ಚಿನ ಏರ‍್ಪಾಟುಗಳನ್ನು ಅಳವಡಿಸಿದ್ದಾರೆ. ಗುದ್ದಾಟ ಮುಂತಾದ ಅವಗಡಗಳಿಂದ ಕಾಪಾಡಲು 6 ಗಾಳಿ ಚೀಲಗಳು (Air Bags), ಸಿಲುಕಿನ ತಡೆತದ ಏರ‍್ಪಾಟು (Anti-Lock Braking System) ನೀಡಿದ್ದಾರೆ.  ಕದಲ್ಗಾಪಿನ ಏರ‍್ಪಾಟು (Immobilizer) ಬಂಡಿ ಕಳ್ಳರಿಂದ ಬದ್ರತೆ ಒದಗಿಸಿದರೆ, ಹಿಂಬದಿಯ ತಿಟ್ಟಕ (Reverse Camera) ಬಂಡಿ ನಿಲುಗಡೆಗೆ ನೆರವಾಗಲಿದೆ. ಗುಡ್ಡ-ಬೆಟ್ಟಗಳನ್ನೇರುವಾಗ ನೆರವು ಒದಗಿಸುವ ಏರ‍್ಪಾಟು (Hill Assistance System) ಕೂಡ ಇದರಲ್ಲಿರಲಿದೆ.

5 ಬಣ್ಣಗಳ ಆಯ್ಕೆಗಳಲ್ಲಿ ಹೆಕ್ಸಾ ಬಂಡಿ ಕೊಳ್ಳುಗರಿಗೆ ಸಿಗಲಿದೆ. ಬಿಳಿ, ನೀಲಿ, ಕಂದು, ಬೆಳ್ಳಿ, ಬೂದು ಬಣ್ಣ ಇವೆ 5 ಬಣ್ಣಗಳು.

ಪಯ್ಪೋಟಿ: ಟಾಟಾದ ಹೊಸ ಹೆಕ್ಸಾ, ಮಹೀಂದ್ರಾ ಕೂಟದವರ ಎಕ್ಸ್‌ಯುವಿ 5ಒಒ ಮತ್ತು ಟೋಯೊಟಾ ಬಂಡಿಗಳಿಗೆ ಸೆಡ್ಡು ಹೊಡೆಯಲಿದೆ ಎಂಬ ಮಾತುಕೇಳಿ ಬಂದಿವೆ. ಇನ್ನೊಂದು ತಿಳಿಯದಿರುವ ವಿಶಯವೆಂದರೆ ಹೆಕ್ಸಾ ಬಂಡಿ ಆಟೋಟದ ಬಳಕೆಯ ಬಂಡಿಯೋ (SUV) ಇಲ್ಲವೇ ಹಲಬಳಕೆಯ ಬಂಡಿಗಳ (MPV) ಸಾಲಿಗೆ ಸೇರಲಿದೆಯೋ ಎನ್ನುವುದು.  ಈ ಗುಟ್ಟು ಇನ್ನೂ ರಟ್ಟಾಗದೇ ಬಿಡುಗಡೆಗೆ ಇನ್ನಶ್ಟೂ ಕುತೂಹಲ ಕೆರಳಿಸಿದೆ. ಪಯ್ಪೋಟಿ ಬಂಡಿಗಳ ಹೋಲಿಕೆಯಲ್ಲಿ ಹೆಕ್ಸಾ ಹೇಗಿರಲಿದೆ ಎಂಬುದು ಕೆಳಗಿನ ಪಟ್ಟಿಯಲ್ಲಿ ನೋಡಬಹುದು.

3

4

ಮಯ್ಲಿಯೋಟ ಮತ್ತು ಬೆಲೆ:

ಒಯ್ಯಾಟದ ದಟ್ಟಣೆಯಿಂದ (Traffic Jams) ಕೂಡಿರುವ ದೊಡ್ಡ ಊರುಗಳಲ್ಲಿ ಪ್ರತಿ ಲೀಟರ್‌ಗೆ 12 ಮತ್ತು ಹೆದ್ದಾರಿಗಳಲ್ಲಿ 15 ಕಿ.ಮೀ. ಮಯ್ಲಿಯೋಟ ನೀಡುವುದಂತೆ. ಈ ವರುಶದ ಕೊನೆಯಲ್ಲಿ ಇಲ್ಲವೇ ಹೊಸ ವರುಶದ ಮೊದಲ ವಾರದಲ್ಲಿ ಹೆಕ್ಸಾ ಮಾರಾಟಕ್ಕೆ ಅಣಿಗೊಳ್ಳುತ್ತಿದೆ. ಟಾಟಾ ಕೂಟ ಬಂಡಿಯ ಬೆಲೆಯನ್ನು ಹೊರಹಾಕಿಲ್ಲವಾದರೂ, ತಾನೋಡ ಕಯ್ಗಾರಿಕೆಯ ಪಂಡಿತರು ಹೇಳುವಂತೆ 12 ರಿಂದ 18 ಲಕ್ಶ ರೂಪಾಯಿಗಳಿರಬಹುದೆನ್ನಲಾಗಿದೆ. ಟಾಟಾ ಮೋಟಾರ‍್ಸ್ ಮಳಿಗೆಗಳಲ್ಲಿ ಮುಂಗಡ ಕಾದಿರಿಸುವಿಕೆ ಆಗಲೇ ಶುರುವಾಗಿದೆ.

 

(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com, hexa.tatamotors.com, carblogindia.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks