ಮಲೆನಾಡಲಿ ಮಿಂದೆದ್ದೆ…

ಬಿ.ಎಸ್. ಮಂಜಪ್ಪ ಬೆಳಗೂರು.

charmadi-kodekallu-ballekallu-trek-chikmagalur

ಎಸೆಸ್ಸೆಲ್ಸಿಯಲ್ಲಿ ಪಸ್ಟ್ ಕ್ಲಾಸಿನಲ್ಲಿ ಪಾಸಾದ ನನಗೆ ಪಿಯುಸಿಗೆ ಯಾವ ಕಾಂಬಿನೇಶನ್ ತೆಗೆದುಕೊಳ್ಳಬೇಕೆಂಬುದಾಗಲೀ, ಮುಂದೆ ಮೇಶ್ಟ್ರೋ, ಎಂಜಿನಿಯರ‍್ರೋ ಏನಾಗಬೇಕೆಂಬ ಗೊತ್ತು ಗುರಿಯಾಗಲೀ ಇರಲಿಲ್ಲ. ಸೆಕೆಂಡ್ ಕ್ಲಾಸಿನಲ್ಲಿ ಪಾಸಾದ ನಾನೇ ಸೈನ್ಸ್ ತಗೊಂಡಿದ್ದೀನಿ, ನೀನ್ಯಾಕೆ ಹೆದರುತ್ತೀಯಾ ಎಂದು ನಮ್ಮ ಹೈಸ್ಕೂಲಿನಲ್ಲೆ ಓದಿ ಕಾಲೇಜು ಸೇರಿದ್ದ ಲೋಕಿ ಹೇಳಿದಾಗಲೂ ಗಂಬೀರವಾಗಿ ಪರಿಗಣಿಸದಿದ್ದ ನಾನು, “ಓದುವುದಿದ್ದರೆ ಸೈನ್ಸೇ ಓದು, ಇಲ್ಲಾಂದ್ರೆ ಯಾವ್ದಾದ್ರೂ ಕೆಲಸ ಮಾಡು” ಅಂತ ಆಗಿನ ಕಾಲಕ್ಕೇ ಲೋಯರ್ ಸೆಕೆಂಡರಿ ಓದಿ ಪಾಸಾಗಿದ್ದ, ಈಗ ಲಕ್ವ ಹೊಡೆದು ಯಾವಾಗಲೂ ಪಡಸಾಲೆಯ ಕುರ‍್ಚಿಯಲ್ಲೆ ಪ್ರತಿಶ್ಟಾಪಿತನಾಗಿದ್ದ ಅಜ್ಜ ಗುಟುರು ಹಾಕಿದಾಗಲೇ, ಸೈನ್ಸೇ ಓದೋಣ ಅಂತ ತೀರ‍್ಮಾನಿಸಿದ್ದೆ.

karvalo-700x700-imad7ztcrj6ttajqಕಾಲೇಜಿಗೆ ಹೋಗಲು ಶುರು ಮಾಡಿದ ಸ್ವಲ್ಪ ದಿನದಲ್ಲೆ ಜೂಆಲಜಿ ಕ್ಲಾಸು ತಗೊಂಡಿದ್ದ ಬಯಾಲಜಿ ಲೆಕ್ಚರರು “ಕರ‍್ವಾಲೋ ಪುಸ್ತಕವನ್ನು ಯಾರ‍್ಯಾರು ಓದಿದ್ದೀರಿ ಕೈಎತ್ತಿ” ಅಂದಾಗ, ಅಲ್ಲಿಯವರೆಗೂ ಕರ‍್ವಾಲೋ ಶಬ್ದವನ್ನೇ ಕೇಳಿರದ ನನಗೆ ‘ಈ ಕರ‍್ವಾಲೋ ಎನ್ನುವುದು ಯಾವುದಾದರೂ ಪ್ರಾಣಿಯ ಅತವಾ ಸಸ್ಯದ ಹೆಸರೇ’ ಎಂಬ ಹುಳ ಹತ್ತಿ ತಲೆ ಕೆರೆದುಕೊಳ್ಳುವಂತಾಗಿತ್ತು. ಹೈಸ್ಕೂಲಿನಲ್ಲಿ ಕೇವಲ ಕನ್ನಡ ಸಬ್ಜೆಕ್ಟಿನಲ್ಲಿ ಮಾತ್ರ ಕವಿಗಳು ಮತ್ತು ಅವರು ಬರೆದ ಪುಸ್ತಕಗಳಿಗೆ ಬೆಲೆ. ಏಕೆಂದರೆ ಪ್ರತಿ ಪರೀಕ್ಶೆಯಲ್ಲಿ ನಾಲ್ಕು ಮಾರ‍್ಕುಗಳಿಗೆ ಕವಿ-ಕಾವ್ಯ ಪರಿಚಯ ಇದ್ದೇ ಇರುತ್ತಿತ್ತು. ಆದರೆ ಅಲ್ಲಿ ಇದ್ದಿದ್ದು ಕುವೆಂಪು, ಕಾರಂತರು, ಅಡಿಗರು, ಬೇಂದ್ರೆ ಮುಂತಾದ ಪ್ರಕ್ಯಾತರ ಜೊತೆಗೆ ತಕ್ಶಣಕ್ಕೆ ಹೆಸರು ನೆನಪಿಗೆ ಬಾರದವರು, ಅವರು ಬರೆದ ಒಂದೆರಡು ಪುಸ್ತಕಗಳು, ಅವುಗಳಿಂದ ಆರಿಸಿದ ಪದ್ಯಗಳು, ಪಾಟಗಳು, ಕವಿಗಳ ಕಾವ್ಯನಾಮ, ಅವರ ಊರು ಇತ್ಯಾದಿ ಇತ್ಯೋಪರಿಗಳು ತಕ್ಕಶ್ಟು ನೆನಪಿದ್ದವು. ಹತ್ತನೇ ಕ್ಲಾಸಿನಲ್ಲಿ ಅಲೆಮಾರಿಯ ಅಂಡಮಾನ್ ಪಾಟ ಇತ್ತಾದರೂ ಪರೀಕ್ಶೆಯ ಪ್ರಾಮುಕ್ಯದ ದ್ರುಶ್ಟಿಯಿಂದಲೋ, ಅತವಾ ಪ್ರಸಿದ್ದಿಯ ದ್ರುಶ್ಟಿಯಿಂದಲೋ ತೇಜಸ್ವಿಯವರ ಬಗ್ಗೆ ಅಶ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಮೊದಲಾಗಿ ನಮ್ಮ ಕನ್ನಡ ಮೇಶ್ಟ್ರಿಗೆ ಪಂಪ, ರನ್ನ, ಹರಿಹರ, ರಾಗವಾಂಕ, ಕುವೆಂಪು ಅವರ ಹಳಗನ್ನಡಗಳು ಪ್ರಿಯವಾದ್ದರಿಂದ ಅರ‍್ಜುನ ಬೀಮರ ಸಾಹಸ ವರ‍್ಣನೆಗಳು, ರಾಮ ಹರಿಶ್ಚಂದ್ರರು, ಬಾರತ ರಾಮಾಯಣಗಳು ಮಲೆನಾಡಿನ ಮಳೆಗಾಲದ ಪ್ರವಾಹವಾಗಿ ಹರಿಯುತ್ತಿದ್ದವು. ನವೋದಯ ಪಟ್ಯದ ಪಾಟ ಮಾಡುವಾಗಲೂ ಒಮ್ಮೊಮ್ಮೆ ಪುರಾಣಗಳಿಗೆ ಲಿಂಕು ಸಿಕ್ಕಿ ಪುರಾಣಗಳ ಅಡ್ಡಮಳೆಯೂ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗಾಗಿಯೇ ನಮಗೆಲ್ಲಾ ನವೋದಯೋತ್ತರ ಕವಿಕಾವ್ಯಗಳ ಪರಿಚಯ ಅಶ್ಟಕ್ಕಶ್ಟೆ. ಇಡೀ ಕ್ಲಾಸಿಗೆ ಕರ‍್ವಾಲೋ ಓದಿಕೊಂಡಿದ್ದ ಪುಣ್ಯಾತ್ಮ ಇದ್ದಿದ್ದು ವಿಶ್ವಾಸ ಅನ್ನೋ ನವೋದಯ ವಿದ್ಯಾಲಯದಿಂದ ಬಂದಿದ್ದ ಒಬ್ಬೇ ಒಬ್ಬ ಮಾತ್ರ. ಅವನನ್ನು ನಿಲ್ಲಿಸಿ ‘ಆ ಪುಸ್ತಕ ಯಾವುದರ ಬಗ್ಗೆ ಇದೆ’ ಎಂದು ಕೇಳಿಬಿಟ್ಟರು. ಅವನು ಒಮ್ಮೆ ತಡವರಿಸಿ, ಒಮ್ಮೆ ಯೋಚಿಸಿ ‘ಓತಿಕ್ಯಾತ’ ಅಂತ ಹೇಳಿದ ಅಂತ ಕಾಣುತ್ತೆ. ಆ ಲೆಕ್ಚರರು ಅವನನ್ನೂ ಸೇರಿಸಿ ಕ್ಲಾಸಿನಲ್ಲಿರುವವರೆಲ್ಲರೂ ಪರಮ ಅಜ್ನಾನಿಗಳೆಂಬಂತೆ ತಾತ್ಸಾರದ ನೋಟ ಬೀರಿ ‘ವಿಜ್ನಾನದ ವಿದ್ಯಾರ‍್ತಿಗಳು ಮೊಟ್ಟ ಮೊದಲು ಓದಬೇಕಾಗಿರುವ ಪುಸ್ತಕ ಕರ‍್ವಾಲೋ, ಸಾದ್ಯವಾದರೆ ಎಲ್ಲರೂ ಓದಿ’ ಎಂದು ಅಪ್ಪಣೆ ಕೊಡಿಸಿದ್ದರು.

ನಿದಾನವಾಗಿ ದಿನಗಳು ಕಳೆದಂತೆ ಮ್ಯಾತ್ಸಿನ ಪ್ರಾಬ್ಲಮ್ಮುಗಳು, ಪಿಸಿಕ್ಸಿನ ಡೆರಿವೇಶನ್ನುಗಳು, ಕೆಮಿಸ್ಟ್ರಿಯ ಈಕ್ವೇಶನ್ನುಗಳು, ಬಯಾಲಜಿಯ ಡಯಾಗ್ರಮ್ಮುಗಳಲ್ಲಿ ನಾವು ಮುಳುಗಿದೆವೆನ್ನುವುದಕ್ಕಿಂತ ಅವೇ ನಮ್ಮನ್ನು ಮುಳುಗಿಸಿದವೆನ್ನುವುದೇ ಸರಿ. ಆದರೆ ಬರಬರುತ್ತಾ ಈ ಲೆಕ್ಚರರುಗಳು ಕೇವಲ ಮೇಶ್ಟ್ರಂತಲ್ಲದೇ ವಿಜ್ನಾನಿಗಳೆನಿಸಲಿಕ್ಕೆ ಶುರುವಾಯಿತು. ಮ್ಯಾತ್ಸಿನ ಲೆಕ್ಚರರಂತೂ ಬಸ್ಮಾಸುರ. ಬಲಗೈಯಲ್ಲಿ ಸೀಮೆಸುಣ್ಣ, ಎಡಗೈಯಲ್ಲಿ ಡಸ್ಟರು. ಸೀಮೆಸುಣ್ಣಕ್ಕೂ, ಡಸ್ಟರಿಗೂ ಯಾವಾಗಲೂ ರೇಸು. ಒಮ್ಮೊಮ್ಮೆ ಡಸ್ಟರು ಸೀಮೆಸುಣ್ಣವನ್ನು ಹಿಂದಿಕ್ಕಿ ಅವರೇನು ಅಳಿಸಿದರೆನ್ನುವುದು ಹಿಂದಿನ ಬೆಂಚಿನಲ್ಲಿದ್ದ ನಮ್ಮನ್ನು ಕಕ್ಕಾಬಿಕ್ಕಿಯಾಗಿಸುತ್ತಿತ್ತು. ಪೀರಿಯಡ್ಡು ಮುಗಿದ ಮೇಲೆ ಬೋರ‍್ಡಿನ ಮುಂದೆ ಸೀಮೆಸುಣ್ಣದ ಬೂದಿಯ ಬಸ್ಮದ ರಾಶಿ (ಅದಕ್ಕೇ ಬಸ್ಮಾಸುರನೆಂದಿದ್ದು). ಬೆಲ್ಲು ಬಾರಿಸಿದ ತಕ್ಶಣ ಸ್ಟಾಪ್ ರೂಮಿನ ಕಡೆಗೆ ಓಡುತ್ತಿದ್ದ ಅವರನ್ನು ಕೆಲವರಂತೂ ಅಟ್ಟಿಸಿಕೊಂಡು ಹೋಗಿ ಡೌಟುಗಳನ್ನು ಕೇಳಿ ಪರಿಹರಿಸಿಕೊಂಡು ದನ್ಯತಾ ಬಾವದಿಂದ ಬೀಗಿಕೊಂಡು ಬರುತ್ತಿದ್ದರು.

ಕೊನೆಗೆ ಒಂದು ಮೇಶ್ಟ್ರು ಕೆಲಸ ಸಿಗುವಶ್ಟು ಓದಿಕೊಂಡು, ಮಲೆನಾಡಿನ ಕಾಡಿನೊಳಗಿನ ಶಾಲೆಯೊಂದಕ್ಕೆ ಮೇಶ್ಟ್ರಾಗಿ ಹೋದಾಗಲೇ ಪರಿಸರದ ಅಗಾದತೆ, ಗೌಪ್ಯತೆ, ನಿಗೂಡತೆ, ರೌದ್ರತೆಗಳೂ ನಮ್ಮ ಕ್ಶುದ್ರತೆಗಳೂ ಅರಿವಿಗೆ ಬರಲಾರಂಬಿಸಿದ್ದು. ಚಿಕ್ಕಮಗಳೂರಿನಿಂದ ನೌಕರಿಯ ಆದೇಶ ಹಿಡಿದುಕೊಂಡು ಬೆಳಿಗ್ಗೆ ಹೊರಟು ಬಸ್ಸಿನಲ್ಲಿದ್ದವರನ್ನು, ಸಿಕ್ಕಿದವರನ್ನೆಲ್ಲಾ ದಾರಿ ಕೇಳಿಕೊಂಡು ಕಾಡಿನ ಗರ‍್ಬದಲ್ಲಿದ್ದ ಶಾಲೆ ಮುಟ್ಟಿದಾಗ ಅದಾಗಲೇ ಎಂದೂ ಕಾಣದ ಕಗ್ಗತ್ತಲು ಆವರಿಸಿತ್ತು. ಕತ್ತೆತ್ತಿದರೆ ಚುಕ್ಕಿಗಳು ಪೇಲವವಾಗಿ ಕಾಣುತ್ತಿದ್ದವಾದರೂ ಮೊದಲ ಬಾರಿಗೆ ಹಾರರ್ ಪಿಚ್ಚರಿನ ಪರದೆ ಸೀಳಿಕೊಂಡು ಒಳಗೆ ಬಂದಿರುವಂತ ಅನುಬವ ಆಗುತ್ತಿತ್ತು. ರಾತ್ರಿ ಮಲಗಿದಾಗಲಂತೂ ಆ ಮೌನದಾಚೆ ಎಲ್ಲೆಲ್ಲೋ ಒಂದೊಂದು ಜೀರುಂಡೆಗಳು ಆಗೊಮ್ಮೆ ಈಗೊಮ್ಮೆ ನನಗೆ ಜೀವ ಇರುವುದನ್ನು ನೆನಪಿಸುತ್ತಿದ್ದವು. ಆ ಮೌನವನ್ನು ಹೇಳಲು ಬೂಮಿಯ ಮೇಲಿನ ಯಾವ ಬಾಶೆಯೂ ಸೋಲಬಹುದು ಬಿಡಿ. ಅದರ ಪರಿಣಾಮವೇ ಬೆಳಿಗ್ಗೆ ನನ್ನನ್ನು ಬಿಡಲು ಬಂದಿದ್ದ ಸ್ನೇಹಿತ ತಿಂಡಿಯನ್ನೂ ತಿನ್ನದೆ ಬೇಗನೆ ಮುಕ ತೊಳೆದು ಹೊರಟು ನಿಂತಿದ್ದು. ಇದು ನನಗೆ ಅರ‍್ತವಾದರೂ ನೌಕರಿ ಅನಿವಾರ‍್ಯವಾಗಿದ್ದ ನಾನು ಇದಾವುದನ್ನು ತೋರಿಸದೆ ಅವನನ್ನು ಬಸ್ಸಿಗೆ ಕಳುಹಿಸಿದ್ದೆ.

malenaduನೌಕರಿಗೆ ಸೇರಿದ ಮೊದಮೊದಲಿನ ಕಶ್ಟಗಳು ತೆಳುವಾಗುವ ಹೊತ್ತಿಗೆ ಸ್ಕೂಲಿನ ಲೈಬ್ರರಿಯಲ್ಲಿ ಸಿಕ್ಕಿದ್ದು ತೇಜಸ್ವಿಯವರ “ಪರಿಸರದ ಕತೆ”. ನಾನು ಜೀವನದಲ್ಲಿ ಮೊದಲು ಪೂರ‍್ತಿ ಓದಿದ ಪುಸ್ತಕ. ಆ ಪುಸ್ತಕವನ್ನು ಶಾಲೆಯಲ್ಲಿ, ರೂಮಿನಲ್ಲಿ ತಿರುತಿರುಗಿ ಓದಿದ ಒಂದೆರಡು ದಿನಗಳಲ್ಲಿ ನನ್ನ ಜೊತೆಗೆ ವಸಂತನೂ ತೇಜಸ್ವಿಯ ಅಬಿಮಾನಿಯಾಗಿಬಿಟ್ಟಿದ್ದ. ಮನೆಯ ಅಗತ್ಯತೆಗಳನ್ನೆಲ್ಲಾ ಪೂರೈಸಿ ಪುಸ್ತಕಗಳನ್ನು ಕೊಂಡು ಓದಲು ಅನುಕೂಲವಿಲ್ಲದ ನಾನು, ಮೊದಲ ಸಂಬಳ ಪಡೆಯುವ ಹೊತ್ತಿಗೆ ಪ್ರತಿ ತಿಂಗಳು ಸಂಬಳ ಬಿಡಿಸಲು ಬ್ಯಾಂಕಿಗೆ ಹೋಗುವಾಗ ತೇಜಸ್ವಿಯ ಒಂದಾದರೂ ಪುಸ್ತಕ ಕರೀದಿಸಬೇಕೆಂದು ವಸಂತನ ಎದುರಿಗೆ ತೀರ‍್ಮಾನಿಸಿದ್ದೆ. ಆದರೆ ವಸಂತ ಅದಕ್ಕೂ ಮುಂಚೆಯೇ ತೇಜಸ್ವಿ ಅಬಿಮಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿಬಿಟ್ಟಿದ್ದ. ಜೊತೆಯಲ್ಲಿ ಮೊದಮೊದಲ ತಿಂಗಳುಗಳಲ್ಲಿ ಚಿಕ್ಕಮಗಳೂರಿನ ಎಂ.ಜಿ.ರೋಡಿನ ತುದಿಯಲ್ಲಿದ್ದ ಅಂಗಡಿಯಲ್ಲಿ ಇಬ್ಬರೂ ಕಾಂಪಿಟೇಶನ್ನಿನ ಮೇಲೆ ಎರಡೆರಡು ಪುಸ್ತಕಗಳನ್ನು ಕರೀದಿಸಿದ್ದೂ ಉಂಟು.

ಇಂತಹ ಮೇಲಾಟದಲ್ಲಿ ವಸಂತನ ಕೈಯೇ ಮೇಲಾಗುತ್ತಿತ್ತು. ತಾಲೋಕು ಮಟ್ಟದ ಸಾಹಿತ್ಯ ಸಮ್ಮೇಳನಗಳಿಗೆಲ್ಲಾ ಹೋಗಿ ತೇಜಸ್ವಿಯವರ ಕಾದಂಬರಿಗಳನ್ನೆಲ್ಲಾ ದಂಡಿಯಾಗಿ ತಂದು ಓದುವಂತೆ ಮಾಡಿದ್ದ. “ಜುಗಾರಿ ಕ್ರಾಸ್” ಕಾದಂಬರಿಯನ್ನು ರಾತ್ರಿ ಅವನು ಓದುವವರೆಗೂ ಕಾದು ಅವನು ಮುಗಿಸಿದ ಮೇಲೆ ಸರಿರಾತ್ರಿ ಕಳೆಯುವವರೆಗೂ ಎರಡು ಸಲ ಓದಿ ಮುಗಿಸಿಯೇ ಮಲಗಿದ್ದೆ. ಈ ಓದುವ ಹುಚ್ಚು ಹತ್ತಿ ಪುಸ್ತಕಗಳನ್ನು ತರುತ್ತಲೇ, ಓದುತ್ತಲೇ ಕಾಲ ಕಳೆಯುತ್ತಿತ್ತು. ಒಮ್ಮೊಮ್ಮೆ ರೂಮಿನ ಕಪಾಟಿನಲ್ಲಿದ್ದ ಪುಸ್ತಕಗಳನ್ನೆಲ್ಲಾ ನೋಡಿಕೊಂಡು ಅಲಂಕಾರ ಮಾಡಿಕೊಂಡ ಮದುವಣಗಿತ್ತಿಯ ತಂಗಿಯಂತೆ ಸಂಬ್ರಮಿಸಿದ್ದೂ ಉಂಟು. ಇದರ ಜೊತೆಯಲ್ಲಿಯೇ ಶಂಕರಗಟ್ಟದಲ್ಲಿ ಬಿಎಸ್ಸಿಗೆ ಕರೆಸ್ಪಾಂಡೆನ್ಸ್ ಕೋರ‍್ಸ್ ಕಟ್ಟಿಕೊಂಡು ಓದಿದ ಮೇಲೆ ಅದೂ ಮುಗಿಯಿತು.

ಪ್ರಕ್ರುತಿದೇವಿಯ ಗರ‍್ಬದೊಳಗಿದ್ದ ನಾವು ಬೈಕಿನಲ್ಲಿ ಹೊರನಾಡಿಗೆ, ಬಾಳೆಹೊನ್ನೂರಿಗೆ, ಮಲ್ಲಂದೂರಿಗೆ ಬೈಕಿನಲ್ಲಿ ಸುತ್ತಿಕೊಂಡು ಹೋಗುತ್ತಿದ್ದೆವು. ದಾರಿಯಂಚಿನ ಕಾಪಿ ತೋಟಗಳ ಸಿಲ್ವರ್ ಮರಗಳ ನೆರಳನ್ನು ದಾಟಿ ಕಾಡು ಎದುರಾಗುತ್ತಲೇ ಮೈಯೊಳಗೆ ಪುಳಕದ ಕರೆಂಟು ಹರಿಯುತ್ತಿತ್ತು. ಮಳೆಗಾಲ ಕಳೆದ ಮೇಲಿನ ನವೆಂಬರ್ ತಿಂಗಳಿನಲ್ಲಿ ಮಲೆನಾಡಿನಲ್ಲಿ ಸುತ್ತುವುದೇ ಅಪ್ಯಾಯಮಾನ. ಕಾಪಿ ತೋಟ ದಾಟಿ ಕಾಡು ಸಿಗುತ್ತಲೇ ಸಣ್ಣ ಚಳಿಯಿಂದ ಕೂದಲು ಮೆಲ್ಲಗೆ ನೆಟ್ಟಗಾಗುತ್ತಿದ್ದವು. ದಾರಿಯಲ್ಲಿ ಕಾಣಿಸುವ ನಮಗೆ ಹೆಸರು ಗೊತ್ತಿದ್ದ ಸಾಗುವಾನಿ, ಬೀಟೆ ಮರಗಳು, ಹೆಸರು ಗೊತ್ತಿಲ್ಲದ ಮುಗಿಲೆತ್ತರದ ಮರಗಳು, ಅವುಗಳ ಕಂಕುಳಲ್ಲಿಯೇ ಜಾಗ ಮಾಡಿಕೊಂಡು ಬೇರು ಬಿಟ್ಟಿದ್ದ ಸಣ್ಣ ಗಿಡಗಳು, ಆ ಕಡೆ ಈಕಡೆಯ ಎತ್ತರದ ಬೆಟ್ಟಗಳ ಮೇಲೆ ಬಿಸಿಲಿಗೆ ಕಂಗೊಳಿಸುತ್ತಿದ್ದ ಮದ್ಯೆ ಮದ್ಯೆ ಕೆಂಪು, ಕಂದು ಎಲೆಗಳಿದ್ದ ಅಗಾದ ಹಸಿರಿನ ರಾಶಿ, ಆ ಹಸಿರಿನ ಸಮುದ್ರದ ಮದ್ಯದ ಆಳದ ಒಳಗೆಲ್ಲೋ ಸಣ್ಣ ತೋಡಾಗಿ ಜನ್ಮ ತಾಳಿ ಅಂತದೇ ಗಾತ್ರದ ಮಿತ್ರರೊಂದಿಗೆ ಸಂಗಮವಾಗಿ, ಜರಿಯಾಗಿ ಹರಿದು ರಸ್ತೆಯಲ್ಲಿ ಹೋಗುವ ನಮಗೆ ಇಣುಕುತ್ತಿದ್ದ ಹೊಳೆಗಳೂ, ಅದಕ್ಕಿಂತ ದೊಡ್ಡದಾಗಿದ್ದ, ಸೇತುವೆಯನ್ನು ಕಟ್ಟಿಸಿಕೊಂಡು ಸ್ವಲ್ಪ ದಾರ‍್ಶ್ಟ್ಯದಿಂದಲೇ ಹರಿಯುತ್ತಿದ್ದ ಹಳ್ಳಗಳು, ಒಮ್ಮೊಮ್ಮೆ ರಸ್ತೆಗೆ ತಾಕುವಂತೆ ಬಾಗಿರುವ ಬಿದಿರು ಮೆಳೆಗಳು, ಅವುಗಳ ಸ್ವಲ್ಪ ಪಕ್ಕದಲ್ಲಿ ವಯಸ್ಸಾಗಿ, ಒಣಗಿ, ಬುಡಮೇಲಾಗಿರುವ, ಪ್ರತಿ ಮಳೆಗಾಲದಲ್ಲೂ ತೊಯ್ದು ಕಪ್ಪಾಗುತ್ತಾ ಬಂದಿರುವ ಪೇರಿಸಿಟ್ಟಂತಿರುವ ಆ ಮೆಳೆಗಳ ಪೂರ‍್ವಜರ ಶವಗಳು ಇವನ್ನೆಲ್ಲ ಸವಿದು ಸವಿದು ಅನುಬವಿಸುತ್ತಿರುವ ನಾವೇ ಪುಣ್ಯವಂತರೆಂದು ಬಹಿರಂಗವಾಗಿಯೇ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೆವು.

shankar-falls

ಮಲೆನಾಡೆಂದರೆ ಸೌಂದರ‍್ಯದ ಸುಪ್ಪತ್ತಿಗೆಯೆಂದು ಅಂದುಕೊಂಡೀರಿ. ಅಲ್ಲಿ ಟೂರಿಗೆ ಹೋಗಿ ಅಡ್ಡಾಡಿಕೊಂಡು ಬಂದು, ಮಲೆನಾಡು ಸುಂದರ ಅನ್ನುವವರು ಒಂದಾರು ತಿಂಗಳ ಮಳೆಗಾಲವನ್ನು ಮಲೆನಾಡಿನಲ್ಲಿ ಕಳೆದರೆ ಗೊತ್ತಾದೀತು ಅದರ ರೌದ್ರತೆ. ಅದರಲ್ಲೂ ಅಲ್ಲೇ ನೌಕರಿ ಹಿಡಿದಿದ್ದ ನಮ್ಮ ಪಜೀತಿ ಹೇಳಬೇಕೆ? ಮಲೆನಾಡಿನ ಹಳ್ಳಿಗಳಲ್ಲಿ ಬಾಡಿಗೆ ಮನೆಗಳು ಸಿಗುವುದೇ ಕಶ್ಟ. ಸಿಕ್ಕಿದ ಹಳೆಯ ಮನೆಯ ಜಂತುಗಳಿಗೆ ಗೆದ್ದಲುಗಳು, ಕೆಲವೊಮ್ಮೆ ಊಟಕ್ಕೆ ಕೂತಾಗ ತಟ್ಟೆಯ ಒಳಗೇ ಬೀಳುತ್ತಿದ್ದ ಅವುಗಳ ಮನೆಯ ಅವಶೇಶಗಳು, ಯಾವಾಗ ಬೇಕೆಂದರಲ್ಲಿ ಯಾವ್ಯಾವುದೋ ಮೂಲೆಯಲ್ಲಿ ಏಳುವ ಇರುವೆಗಳ ಸೈನ್ಯಗಳು, (ಮದುವೆಯಾಗಿರದಿದ್ದ ನಮ್ಮ ರೂಮಿನ ನೈರ‍್ಮಲ್ಯವೂ ಅಶ್ಟಕ್ಕಶ್ಟೆ ಎನ್ನಿ) ಬಾಗಿಲು ತೆರೆದೇ ಬಿಟ್ಟರೆ ಎಲ್ಲಿ ಹಾವುಗಳು ಒಳಗೆ ಸೇರುವವೋ ಎನ್ನುವ ಆತಂಕ, ಮಳೆಗಾಲದಲ್ಲಂತೂ ಮುಕವನ್ನು ಹೊರಗೆ ತೋರಗಡಲು ಬಿಡದೆ ಸುರಿಯುವ ಕುಂಬ ದ್ರೋಣ ಬೀಶ್ಮ ಕರ‍್ಣಾರ‍್ಜುನ ಮಳೆ, ಮಳೆಗಾಲದಲ್ಲಿ ಓಡಾಡಲು ದೂರದ ಸುತ್ತು ದಾರಿ(ಮಳೆಗಾಲದಲ್ಲಿ ಶಾರ‍್ಟ್ ಕಟ್ಟುಗಳೆಲ್ಲಾ ಸಮುದ್ರಗಳಾಗಿರುತ್ತವೆ), ಚತ್ರಿ ಹಿಡಿದು ರೈನುಕೋಟು ದರಿಸಿ ಹೋದರೂ ಶರ‍್ಟಿನ ಜೊತೆಗೆ ಒಳಗಿನ ಬನಿಯನ್ನೂ ಗ್ಯಾರಂಟಿಯಾಗಿ ಒದ್ದೆಯಾಗುವ ಬಾದೆ, ಗದ್ದೆಯ ಬದುಗಳಲ್ಲಿ ಜಾರಿ ಬಿದ್ದು ಅಂಡು ಕೆಸರಾಗಿ ಎರಡು ತಿಂಗಳ ಬೇಸಿಗೆ ರಜೆಯನ್ನು ಮಲೆನಾಡಿಗೆ ಯಾಕಾದರೂ ಮಳೆಗಾಲದಲ್ಲಿ ಕೊಡಬಾರದೆ ಎಂದೆನಿಸುತ್ತಿತ್ತು.

ಜೋರಾಗಿ ಬೀಸುವ ಗಾಳಿಗೆ ಕಿರಗುಡುವ ಮನೆಯ ಮುಂದಿನ ಮರಗಳು ಸರಿರಾತ್ರಿ ಎಶ್ಟು ಹೊತ್ತಿಗೆ ಮನೆಯ ಮೇಲೆ ಬೀಳುವವೋ ಅನ್ನುವ ಆತಂಕದಲ್ಲಿ ಕಳೆಯುತ್ತಿದ್ದ ರಾತ್ರಿಗಳು, ಶೀತಕ್ಕೆ ಬಲುಬೇಗ ಸರಗಟ್ಟುತ್ತಿದ್ದ ಅಕ್ಕಿ ಬೇಳೆಗಳು, ಮಲೆನಾಡಿನ ಮೂಲೆಯ ಆ ಅಂಗಡಿಗಳಿಗೆ ಹೋದರೋ ಆ ಕಪ್ಪು ಡಬ್ಬಿಗಳಲ್ಲಿರುತ್ತಿದ್ದ ಇಶ್ಟಿಶ್ಟೇ ದಿನಸಿಗಳು, ಆ ಚಳಿಗೆ ಜೋರಾಗಿ ಹಸಿಯುತ್ತಿದ್ದ, ಉಂಡು ಎಶ್ಟೋ ದಿನವಾಯಿತೆನ್ನುವಂತಾಡುತ್ತಿದ್ದ ನಮ್ಮ ಹೊಟ್ಟೆ, ಮನೆಯಿಂದ ಇತ್ತಿತ್ತಲಾಗಿ ಹೊರಬಂದಿದುದರಿಂದ ನಮ್ಮ ಅರ‍್ದಂಬರ‍್ದ ಪಾಕವಿದ್ಯೆಯ ಯಡವಟ್ಟುಗಳಿಂದ ಎಶ್ಟು ಬೇಗ ಈ ಮಲೆನಾಡಿನಿಂದ ಪಾರಾಗುವೆವೋ ಅನಿಸುತ್ತಿತ್ತು.

ಅದಾದ ಮೇಲೆ ಬೇರೆ ಡಿಪಾರ‍್ಟಮೆಂಟಿನ ಬಿಡುವಿಲ್ಲದ ನೌಕರಿ ಸೇರಿ ಪುಸ್ತಕ ಕೊಳ್ಳಲೂ ಸಮಯ ಹೊಂದಿಸಿಕೊಳ್ಳಲಾಗದೆ, ತಂದಿರುವ ಪುಸ್ತಕಗಳನ್ನು ಓದಲೂ ಆಗದೆ ಹೊಸ ಹೊಸತರಂತಿರುವ ಪುಸ್ತಕಗಳನ್ನು ಒಮ್ಮೊಮ್ಮೆ ವ್ಯತೆಯಿಂದ ನೋಡಿ ಕೆಲಸಕ್ಕೆ ಹೊರಡಲೇ ಬೇಸರಿಸುತ್ತದೆ. ಈ ಟ್ರಾಪಿಕ್ಕಿನಲ್ಲಿ ಅಬ್ಬರಿಸುವ ಹಾರ‍್ನುಗಳು, ಬಿರುಬೇಸಿಗೆಯ ಮರುಬೂಮಿಯಂತ ಪೇಟಿಗರ ಮುಕಗಳು. ತತ್ ಎಲ್ಲಾದರೂ ದೂರ ಹೋಗಿ ಬರೋಣವೆನಿಸಿದರೂ ರಜೆಯ ಪ್ರಾಬ್ಲಮ್ಮು, ಮಾಡಬೇಕಿರುವ ಕೆಲಸಗಳ ನೆನಪಾಗಿ ನಿಟ್ಟುಸಿರೊಂದು ಬಂದಿತು. ಆಮೇಲೆ ಈ ಎಲ್ಲ ಅನುಬವಗಳೂ ನನ್ನಂತಹ ಜನರ ಒಂದೇ ಜನರೇಶನ್ನಿಗೆ ಆಗಿ ಮುಗಿಯುತ್ತದೋ ಅನ್ನಿಸಿ ಮಗನ ಮುಕ ನೋಡಿದೆ. ಮೊಬೈಲಿನ ಗೇಮಿನೊಳಗೆ ಮುಕ ಇಟ್ಟುಕೊಂಡಿದ್ದವನನ್ನು ನೋಡಿ ಮನಸಿನಲ್ಲಿ ಅದೆಂತದೋ ಹಮ್ಮಿನದೋ, ಬಿಗುಮಾನದ್ದೋ ನಗು ಬಂತು.

(ಚಿತ್ರ ಸೆಲೆ: panoramio.com, karnataka.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: