ನೆನಪಿನ ಹನಿಗಳು

– ರತೀಶ ರತ್ನಾಕರ.

water-drops-on-a-leaf_1920x1080

(1)
ಎಂದೂ ಸೇರದ ಹಳಿಗಳ ಮೇಲೆ ಸಾಗುವ
ಹಳೆ ಉಗಿಬಂಡಿಯಲಿ ಹೋಗಲೇಬಾರದು
ಅಲ್ಲಿ, ಬರೀ ಹಳೆ ನೆನಪುಗಳ ನೂಕುನುಗ್ಗಲು

(2)
ವಾರದ ಮಳೆಗೆ ನೆನೆದು ಮುದ್ದೆಯಾದ ನಾಯಿಗೆ
ಹಿತ್ತಲ ಬಚ್ಚಲ ಒಲೆಯ ಬೆಚ್ಚನೆಯ ಬೂದಿ ದಕ್ಕಿದೆ
ನಿನ್ನ ನೆನಪುಗಳಿಂದೊದ್ದೆಯಾದ ಒಳಗು
ಕಣ್ಣೀರಿಟ್ಟು ಊಳಿಡುತಿದೆ

(3)
ಹಳೆಯದ್ದನ್ನೆಲ್ಲಾ ಹೂತು ಎದೆ ಕಲ್ಲಾಗಿಸಿಕೊಂಡಿರುವೆ
ಅದ ಕೊರೆಯದಿರು ನೆನಪೆ
ಒತ್ತಡಕೆ ಮಣಿದು ಕಣ್ಣೀರು ಚಿಮ್ಮೀತು

(4)
ಕೊಳಕ್ಕೆ ಬಿದ್ದ ಕಲ್ಲಿನದೇ ನೆಮ್ಮದಿ
ಬುಳುಕ್ ಎಂದು ಮುಳುಗಿ ತಳಸೇರಿ ಮಲಗುವುದು!
ತಿಳಿಯಾಗಿದ್ದ ನೀರಿನದೇ ಗೋಳು
ನಿಲ್ಲದ ಅಲೆಯೆದ್ದು ಒಳಗು ಮರುಗುವುದು

(5)
ಹಿಂದೆ ಆದದ್ದನ್ನು ಎಂದಿಗೂ ಹೋಗಿ ಅಳಿಸಲಾಗದು
ಹೆಚ್ಚೆಂದೆರೆ ಇಂದು ಅದ ನೆನೆದು ಬಿಕ್ಕಿ ಅಳಬಹುದು

(ಚಿತ್ರಸೆಲೆ: best-wallpaper.net)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: