ಕುಂಬಳಕಾಯಿ ಪಾಯಸ
ಅಮ್ಮ ಮಾಡಿದ ಕುಂಬಳಕಾಯಿ ಪಾಯಸವನ್ನು ತಿನ್ನುವಾಗ ನನಗನ್ನಿಸಿದ್ದು, ನಾನೊಬ್ಬನೇ ಈ ಸವಿಯನ್ನು ಸವಿದರೆ ಹೇಗೆ? ಸಿಹಿ ಸವಿಯಲು ಬಯಸುವ ಇತರರಿಗೂ ಈ ಸಿಹಿಯ ಬಗ್ಗೆ ತಿಳಿಸಬೇಕೆನ್ನಿಸಿತು :). ಹಾಗಾಗಿ ಅಮ್ಮನ ಬಳಿ ಈ ಸಿಹಿ ಮಾಡುವ ಬಗೆಯನ್ನು ಕೇಳಿಕೊಂಡು ಅದನ್ನು ಬರಹಕ್ಕೆ ಇಳಿಸಲು ತೊಡಗಿದೆ. ಬನ್ನಿ, ಕುಂಬಳಕಾಯಿ ಪಾಯಸವನ್ನು ಮಾಡುವ ಬಗೆಯನ್ನು ನೋಡೋಣ:
ಬೇಕಾಗುವ ಅಡಕಗಳು :
1. ಒಂದು ಚಿಕ್ಕ ಕುಂಬಳಕಾಯಿ
2. ಬೆಲ್ಲ (ಕುಂಬಳಕಾಯಿಯ ಅಳತೆಗೆ ತಕ್ಕಂತೆ)
3. ತೆಂಗಿನಕಾಯಿ ತುರಿ (ಒಂದು ಚಿಕ್ಕ ಬಟ್ಟಲಿನಶ್ಟು)
4. ಏಲಕ್ಕಿ (4-5)
5. ತುಪ್ಪದಲ್ಲಿ ಹುರಿದ ದ್ರಾಕ್ಶಿ-ಗೋಡಂಬಿ (ಬೇಕಿದ್ದರೆ ಹಾಕಬಹುದು)
ಮಾಡುವ ಬಗೆ:
1. ಮೊದಲಿಗೆ ಕುಂಬಳಕಾಯಿಯನ್ನು ಸಣ್ಣ ತುಣುಕುಗಳಾಗಿ ಹೆಚ್ಚಿಕೊಳ್ಳಿ. ನಂತರ ನೀರಿನಲ್ಲಿ ಬೇಯಿಸಿಕೊಳ್ಳಿ.
2. ಇನ್ನೊಂದೆಡೆ, ಬೆಲ್ಲವನ್ನು ಕರಗಿಸಿ ಪಾಕ ಬರುವಂತೆ ಕೊಂಚ ಕುದಿಸಿ.
3. ಬೆಲ್ಲದ ಪಾಕಕ್ಕೆ ಬೇಯಿಸಿಟ್ಟುಕೊಂಡಿರುವ ಕುಂಬಳಕಾಯಿಯ ತುಣುಕನ್ನು ಬೆರೆಸಿ.
4. ತೆಂಗಿನಕಾಯಿ ತುರಿ ಮತ್ತು ಏಲಕ್ಕಿಯನ್ನು ಬೆರೆಸಿ ಕೊಂಚ ಬೇಯಿಸಿ, ಸೌಟಿನಿಂದ ತಿರುಗಿಸಿ.
5. ತುಪ್ಪದಲ್ಲಿ ಹುರಿದ ದ್ರಾಕ್ಶಿ-ಗೋಡಂಬಿಯನ್ನು ಬೆರೆಸಿ.
ಅಲ್ಲಿಗೆ, ಸವಿಯಾದ ಕುಂಬಳಕಾಯಿ ಪಾಯಸ ಸವಿಯಲು ನಿಮ್ಮ ಮುಂದೆ ಅಣಿಯಾಗಿರುತ್ತದೆ.
ಇತ್ತೀಚಿನ ಅನಿಸಿಕೆಗಳು