ರಾಯಚೂರು ನಗರದ ಸುತ್ತಾಟದ ಜಾಗಗಳು

– ನಾಗರಾಜ್ ಬದ್ರಾ.

ಸಾಮ್ರಾಟ್ ಅಶೋಕ ಚಕ್ರವರ‍್ತಿಯ ಕಾಲದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ರಾಯಚೂರು ಜಿಲ್ಲೆಯು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈ ತಾಣಗಳು ಈಗ ಜಿಲ್ಲೆಯ ಪ್ರವಾಸಿ ತಾಣಗಳಾಗಿ ರೂಪಗೊಂಡಿವೆ.

ರಾಯಚೂರು ನಗರದ ಕೋಟೆ

pic-1

ಕೋಟೆಯ ಗೋಡೆ ಮೇಲಿನ ಕಲ್ಬರಹದ ಪ್ರಕಾರ ಇದನ್ನು ಕ್ರಿ.ಶ. 1294 ರಲ್ಲಿ ವಾರಂಗಲ್ಲಿನ ಕಾಕತೀಯ ರಾಣಿ ರುದ್ರಮ್ಮಾ ದೇವಿಯ ಸೇನಾದಿಪತಿ ಗೋರಿ ಗಂಗಯ್ಯ ರೆಡ್ಡಿಯು ಕಟ್ಟಿದನು ಎಂದು ತಿಳಿದು ಬರುತ್ತದೆ. ಈ ಕೋಟೆಯನ್ನು 88 ಮೀಟರ್ ಎತ್ತರದ ಬೆಟ್ಟದ ಮೇಲೆ ಕಟ್ಟಲಾಗಿದ್ದು. ಇದರ ಗೋಡೆಗಳನ್ನು ಸಿಮೆಂಟ್ ಅತವಾ ಯಾವುದೇ ಗಟ್ಟಿಗೊಳಿಸುವ ವಸ್ತುವಿನ ನೆರವಿಲ್ಲದೇ, ಚೆನ್ನಾಗಿ ಸಿಂಗರಿಸಿದ ದೊಡ್ಡದಾದ ಚೌಕಾಕಾರದ ಕಲ್ಲುಗಳನ್ನು ಉಪಯೋಗಿಸಿ ಕಟ್ಟಲಾಗಿದೆ.

pic-3ರಾಯಚೂರು ಕೋಟೆಯಲ್ಲಿರುವ 41 ಮೀಟರ್ ಉದ್ದದ ದೊಡ್ಡ ಕಲ್ಲುಚಪ್ಪಡಿಯು ನೋಡುಗರ ಕಣ್ಣನ್ನು ಸೆಳೆಯುತ್ತದೆ. ಈ ಚಪ್ಪಡಿಯು ಹಲವಾರು ದಾಕಲೆಗಳನ್ನು ಹಾಗೂ ದೊಡ್ಡ ಚಪ್ಪಡಿಗಳನ್ನು ಕೋಣದ ಬಂಡಿಗಳ ನೆರವಿನಿಂದ ಬೆಟ್ಟದ ಮೇಲೆ ಸಾಗಿಸುವ ದ್ರುಶ್ಯವನ್ನು ಹೊಂದಿದೆ. ಕೋಟೆಯ ಹೊರ ರಚನೆಯು ಪಶ್ಚಿಮದಲ್ಲಿ ಮೆಕ್ಕಾ, ಉತ್ತರದಲ್ಲಿ ನವರಂಗಿ, ಪೂರ‍್ವದಲ್ಲಿ ಕಟಿ, ದಕ್ಶಿಣದಲ್ಲಿ ಕಂದಕ ಮತ್ತು ಆಗ್ನೇಯದಲ್ಲಿ ದೋದಿ ಎಂಬ ಐದು ಹೆಬ್ಬಾಗಿಲುಗಳನ್ನು ಹೊಂದಿದೆ. ಹಾಗೆಯೇ ಒಳಗೋಡೆಯು ಎರಡು ಹೆಬ್ಬಾಗಿಲುಗಳನ್ನು ಹೊಂದಿದ್ದು, ಒಂದು ಸೈಲಾನೀ ಹೆಬ್ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದು, ಇನ್ನೊಂದು ಸಿಕಂದರಿ ಹೆಬ್ಬಾಗಿಲು ಪೂರ‍್ವ ದಿಕ್ಕಿನಲ್ಲಿದೆ.

ಈ ಕೋಟೆಯು ಪರ‍್ಶಿಯನ್ ಮತ್ತು ಅರೇಬಿಕ್ ನುಡಿಯಲ್ಲಿರುವ ಕಲ್ಬರಹಗಳಿಗೆ ಜನಪ್ರಿಯವಾಗಿದೆ. ಹಾಗೆಯೇ ಈ ಕೋಟೆಯ ಆವರಣದಲ್ಲಿ ಪುರಾತನ ದೇವಾಲಯಗಳ ಅವಶೇಶಗಳು ಕೂಡ ಸಿಕ್ಕಿವೆ. ಕೋಟೆಯ ಒಳಗಡೆ ಹಲವಾರು ಗಮನಾರ‍್ಹ ಪುರಾತತ್ವ ಮಸೀದಿಗಳು ಹಾಗೂ ಹಳೆಯ ಕಟ್ಟಡಗಳಿವೆ.

ಮಾವಿನ ಕರೆ (ಆಮ್ ತಲಾಬ)

pic-4

ಮಾವಿನ ಕೆರೆಯು ಹಲವಾರು ದಶಕಗಳ ಇತಿಹಾಸವನ್ನು ಹೊಂದಿದೆ. ವಾರಂಗಲ್ಲಿನ ಕಾಕತೀಯ ರಾಣಿ ರುದ್ರಮ್ಮಾ ದೇವಿಯ ಕಾಲದಲ್ಲಿ ಸಾಮಾನ್ಯ ಜನರ ಉಪಯೋಗಕ್ಕೆ ಈ ಕೆರೆಯನ್ನು ಕಟ್ಟಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಈ ಕೆರೆಯು ರಾಯಚೂರು ನಗರ ಹ್ರುದಯ ಬಾಗದಲ್ಲಿದ್ದು, ಸುಮಾರು 150 ಎಕರೆ ಪ್ರದೇಶವನ್ನು ಒಳಗೊಂಡಿದೆ.

ಏಕ ಮೀನಾರ ಮಸೀದಿ

pic-5ಇದು ರಾಯಚೂರು ನಗರದಲ್ಲಿ ನೆಲೆಗೊಂಡಿರುವ ಪರ‍್ಶಿಯನ್ ಶೈಲಿಯಲ್ಲಿ ಕಟ್ಟಿದ ಒಂದು ಗಮನಾರ‍್ಹ ಮಸೀದಿ. ಈ ಮಸೀದಿಯು ಎರಡು ಅಂತಸ್ತಿನ, 20 ಮೀ. ಎತ್ತರದ ಗೋಪುರವನ್ನು ಒಳಗೊಂಡಿದೆ. ಇದರ ಮೇಲ್ತುದಿಯನ್ನು ಹತ್ತಲು ಮೆಟ್ಟಿಲುಗಳಿದ್ದು ಇಲ್ಲಿಂದ ರಾಯಚೂರು ನಗರದ ಒಂದು ಸಮಗ್ರ ನೋಟವನ್ನು ಆನಂದಿಸಬಹುದು.

ಮಾರ‍್ಕಂಡೇಶ್ವರ ದೇವಾಲಯ

pic-6

ಈ ದೇವಾಲಯವು ರಾಯಚೂರು ನಗರದಿಂದ ಸುಮಾರು 21 ಕಿಲೋ ಮೀಟರ್ ದೂರದಲ್ಲಿರುವ ಕಲ್ಲೂರು ಊರಿನಲ್ಲಿದೆ. ಈ ಊರಿನಲ್ಲಿ ಒಟ್ಟು ಆರು ದೇವಾಲಯಗಳಿದ್ದು, ಅದರಲ್ಲಿ ಮಾರ‍್ಕಂಡೇಶ್ವರ ದೇವಾಲಯ ತುಂಬಾ ಹಳೆಯ ದೇವಾಲಯವೆಂದು ತೋರುತ್ತದೆ. ಈ ದೇವಾಲಯವನ್ನು ಕಲ್ಲೂರು ಹಳ್ಳಿಯಲ್ಲಿರುವ ಬೆಟ್ಟದ ಮೇಲೆ ಕಟ್ಟಲಾಗಿದ್ದು, ಸುಂದರವಾಗಿ ಕೆತ್ತಿದ ಇಲ್ಲಿನ ಕಂಬಗಳು ನೋಡುಗರ ಕಣ್ಣನ್ನು ಸೆಳೆಯುತ್ತವೆ.

ಇಲ್ಲಿಗೆ ವಿಜಯನಗರ ಸಾಮ್ರಾಜ್ಯದ ದೊರೆ ಕ್ರುಶ್ಣದೇವರಾಯ ಅವರು ಕುಟುಂಬದ ಜೊತೆಯಲ್ಲಿ ಬಂದು ಪೂಜೆ ಸಲ್ಲಿಸುತ್ತಿದ್ದರು. ಅವರು ಈ ದೇವಾಲಯವನ್ನು ಒಂದು ಪವಿತ್ರ ಮತ್ತು ಪುಣ್ಯ ಸ್ತಳವೆಂದು ನಂಬಿದ್ದರು, ಆದ್ದರಿಂದಲೇ ಅವರು ಇಲ್ಲಿ ಬೇಟಿನೀಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುತ್ತಿರಲಿಲ್ಲ ಎಂದು ಇತಿಹಾಸ ಹೇಳುತ್ತದೆ. ದೇವಾಲಯದ ಸಬಾಂಗಣವು ಸುಂದರ ಕೆತ್ತನೆಗಳಿರುವ, ಹೊಳಪಿರುವ, ಕಪ್ಪುಬಣ್ಣದ ಕಲ್ಲಿನ ಕಂಬಗಳನ್ನು ಹೊಂದಿದ್ದು, ಎದುರಿಗೆ ಕಲ್ಲಿನ ಬಸವಣ್ಣನ ಮೂರ‍್ತಿ ಹಾಗೂ ಒಂದು ಗರುಡಗಂಬವಿದೆ. ಹಿಂಬದಿಯಲ್ಲಿ ಗಣೇಶ ಮತ್ತು ಸರ‍್ಪಗಳ ಕಲ್ಲಿನ ಮೂರ‍್ತಿಗಳಿವೆ.

ಇತರೆ ಪುರಾತನ ದೇವಾಲಯಗಳಂತೆ ಇದು ಸಂಪೂರ‍್ಣವಾಗಿ ಕಲ್ಲಿನಿಂದ ಕಟ್ಟಿರುವ ದೇವಾಲಯವಲ್ಲ. ಈ ದೇವಾಲಯವನ್ನು ಕಲ್ಲಿನ ರಚನೆಯಂತೆ ಇರುವ ಇಟ್ಟಿಗೆ ಮತ್ತು ಗಾರೆಗಳಿಂದ ಕಟ್ಟಲಾಗಿದೆ. ದೇವಾಲಯದ ಮೇಲ್ತುದಿಯ ನಾಲ್ಕು ಮೂಲೆಗಳಲ್ಲಿ ಒಂದೊಂದು ಸ್ತಂಬಗೋಪುರಗಳಿವೆ.

ಕಲ್ಲೂರು ಮಹಾಲಕ್ಶ್ಮಿ ದೇವಾಲಯ

pic-7

ಕಲ್ಲೂರಿನಲ್ಲಿರುವ ಇನ್ನೊಂದು ಪ್ರಸಿದ್ದ ದೇವಾಲಯವಿದು. ವೆಂಕಟೇಶ್ವರನು ಆತನನ್ನು ನಂಬಿ ನಡೆದುಕೊಳ್ಳುವ ಬಕ್ತರ ಬೇಡಿಕೆಗಳನ್ನು ಈಡೇರಿಸುವನು, ಹಾಗೂ ಆತನ ಹೆಂಡತಿ ಲಕ್ಶ್ಮಿ ದೇವಿಯು ಬಕ್ತರಿಗೆ ಸಿರಿ ಸಂಪತ್ತನ್ನು ನೀಡುವಳು ಎಂಬ ನಂಬಿಕೆಯಿದೆ. ತಾಯಿ ಲಕ್ಶ್ಮಿ ದೇವಿಯು ಮಹಾರಾಶ್ಟ್ರದ ಶ್ರೀಕ್ಶೇತ್ರ ಕೊಲ್ಲಾಪುರದಲ್ಲಿ ನೆಲೆಸಿದ್ದರೆ, ವೆಂಕಟೇಶ್ವರನು ಆಂದ್ರಪ್ರದೇಶದ ತಿರುಪತಿಯ ತಿರುಮಲದಲ್ಲಿ ನೆಲೆಸಿದ್ದಾನೆ. ಇವರಿಬ್ಬರೂ ಒಂದೇ ಜಾಗದಲ್ಲಿ ನೆಲೆಸಿರುವುದು ತುಂಬಾ ಅಪರೂಪವಾಗಿದೆ. ಆದರೆ ರಾಯಚೂರು ಜಿಲ್ಲೆಯ ಶ್ರೀಕ್ಶೇತ್ರ ಕಲ್ಲೂರಿನಲ್ಲಿ ಈ ಇಬ್ಬರೂ ಒಂದೇ ಕಡೆಯಲ್ಲಿ ನೆಲೆಸಿದ್ದಾರೆ. ಈ ಪವಿತ್ರ ದೇವಾಲಯವು ಕಲ್ಲೂರು ಮಹಾಲಕ್ಶಿ ದೇವಾಲಯವೆಂದು ಪ್ರಸಿದ್ದವಾಗಿದೆ. ನಮ್ಮ ನಾಡಿನ ಬೇರೆ ಬೇರೆ ಬಾಗಗಳಿಂದ ಹಾಗೂ ಹೊರ ನಾಡುಗಳಿಂದ ಸಹಸ್ರಾರು ಬಕ್ತರು ಪ್ರತಿದಿನವು ದೇವಿಯ ದರ‍್ಶನಕ್ಕೆ ಇಲ್ಲಿಗೆ ಬರುತ್ತಾರೆ.

ಸಾಣೆ ಕಲ್ಲಿನಲ್ಲಿ ಮೂಡಿದ ಲಕ್ಶ್ಮಿ ದೇವಿಯು ಕೊಲ್ಲಾಪುರದಲ್ಲಿ ನೆಲೆಸಿರುವ ಮಹಾಲಕ್ಶ್ಮಿಯ ಅವತಾರವೆ ಆಗಿದ್ದಾಳೆ ಎಂದು ಬಕ್ತರು ಹೇಳುತ್ತಾರೆ. ಇಲ್ಲಿನ ಲಕ್ಶ್ಮಿ ದೇವಿಯ ಮೂರ‍್ತಿಯು ನೋಡುಗರ ಮನಸೆಳೆಯುವುದಲ್ಲದೇ, ಅತ್ಯಂತ ಶಕ್ತಿಶಾಲಿಯೂ ಕೂಡ ಆಗಿದೆ. ಕಲ್ಲೂರು ಮಹಾಲಕ್ಶ್ಮಿಯು ನಂಬಿದ ಬಕ್ತರ ಸಕಲ ಬೇಡಿಕೆಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ದೇವಾಲಯಕ್ಕೆ ಸಹಸ್ರಾರು ಬಕ್ತರು ಬರುತ್ತಾರೆ. ಇಲ್ಲಿ ಬಕ್ತರು ತಮ್ಮ ಹರಕೆಯನ್ನು ಹೊರಲು ‘ತೆಂಗಿನಕಾಯಿ ಕಟ್ಟಿಸುವುದು’ ಎನ್ನುವ ಒಂದು ವಿಶೇಶವಾದ ಆಚರಣೆಯನ್ನು ಅನುಸರಿಸುತ್ತಾರೆ. ಅಂದರೆ ಇಲ್ಲಿಗೆ ಬಂದ ಬಕ್ತರು ತಮ್ಮ ಬಯಕೆಯನ್ನು ಮನಸ್ಸಿನಲ್ಲಿ ಸಂಕಲ್ಪಿಸಿ ಮಹಾಲಕ್ಶ್ಮಿದೇವಿಗೆ ಕೈ ಮುಗಿದು ತೆಂಗಿನಕಾಯಿಗಳನ್ನು ಅರ‍್ಚಕರಿಗೆ ಒಪ್ಪಿಸುತ್ತಾರೆ. ಸಾಮಾನ್ಯವಾಗಿ ಹರಕೆಗೆ ಎರಡು ತೆಂಗಿನಕಾಯಿಗಳನ್ನೇ ಬಳಸುವುದು ರೂಡಿಯಲ್ಲಿದೆ. ಅನಂತರ ಅರ‍್ಚಕರು ಈ ತೆಂಗಿನಕಾಯಿಗಳನ್ನು ಬಕ್ತರ ಪರವಾಗಿ ದೇವಾಲಯದ ಚಾವಣಿಯಲ್ಲಿ ಅಲ್ಲಲ್ಲಿ ಹೊಡೆದ ಮೊಳೆಗಳಿಗೆ ದಾರಗಳಿಂದ ಕಟ್ಟಿ ನೆತ್ತು ಹಾಕುತ್ತಾರೆ. ಬಯಕೆ ಈಡೇರಿದ ಮೇಲೆ ಬಕ್ತರು ಮತ್ತೆ ದೇವಾಲಯಕ್ಕೆ ಬಂದು ತೆಂಗಿನಕಾಯಿಗಳನ್ನು ಇಳಿಸಿ ಹೋಗುತ್ತಾರೆ.

(ಮಾಹಿತಿ ಸೆಲೆ: wikipedia.orgraichur.nic.inkarnataka.comkarnatakatravel.blogspot.inkannada.nativeplanet.comthehindu.com, raichuronline.in, )

(ಚಿತ್ರ ಸೆಲೆ: raichur.nic.inkarnataka.comkarnatakatravel.blogspot.inkannada.nativeplanet.comyoutube.com)Categories: ನಾಡು

ಟ್ಯಾಗ್ ಗಳು:, , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s