ಯಾಂತ್ರಿಕ ಬದುಕಿನ ಓಟ, ಎಲ್ಲೂ ನಿಲ್ಲದಾಟ

– ಸುನಿಲ್ ಮಲ್ಲೇನಹಳ್ಳಿ

traffic
ದಿನೇದಿನೇ ಯಾಂತ್ರಿಕವಾಗುತ್ತಿರುವ ಬದುಕಿನೆಡೆಗೆ ‌ತುಸು ಗಮನವನ್ನು ಹರಿಸುತ್ತಾ, ಈ ಯಾಂತ್ರಿಕ‌ವಾದ ಬದುಕಿನಿಂದ; ಜನರಲ್ಲಿ, ಸಮಾಜದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಾಕಶ್ಟು ಬದಲಾವಣೆಗಳನ್ನು ಎಳೆ,ಎಳೆಯಾಗಿ ಅವಲೋಕಿಸುವಾಗ, 20 ವರ‍್ಶಗಳ ಹಿಂದಿನ ಚಿತ್ರಣವು ನನ್ನ ಕಣ್ಮುಂದೆ ಬಂತು. ಜನರ ಜೀವನ‌ ಕ್ರಮವಾಗಲಿ‌ ಹಾಗೂ ಅವರ ಸಮಾಜಮುಕಿ ಚಟುವಟಿಕೆಗಳಾಗಲಿ, ಯಾವುದೇ ತರಾತುರಿ ಇಲ್ಲದೆ ನಿಯಮಿತ ವೇಗದಲ್ಲಿ‌ ಸಾಗುತ್ತಿದ್ದ ಕಾಲವದು. ಇಶ್ಟೇ ಅಲ್ಲದೇ, ಆಗ ಬಹುತೇಕ ಜನರದ್ದು ಯಾಂತ್ರಿಕತೆಯಿರದ, ಒತ್ತಡರಹಿತ ಬದುಕದಾಗಿತ್ತು.

ದಿನಗಳು‌ ಸಾಗಿ ವಾರ; ವಾರಗಳು ಸಾಗಿ ತಿಂಗಳು; ತಿಂಗಳುಗಳು ಸಾಗಿ ವರ‍್ಶ; ಹೀಗೇ ಎಲ್ಲವೂ ರಬಸವಿಲ್ಲದೆ ಕಳೆದುಹೋದ ಅನುಬವೂ ಸಹ ಆಗುತ್ತಿತ್ತು. ಮೇಲಾಗಿ, ಆಗ ದುಡಿಮೆಯೆನ್ನೋದು ಬದುಕಿನೊಂದು ಬಾಗದಂತಿತ್ತೇ ವಿನಹ, ಈಗಿನಂತೆ ದುಡಿಮೆಯೇ ಬದುಕಾಗಿರಲಿಲ್ಲ!

ಹೆಚ್ಚಿನ ಕುಟುಂಬಗಳು ಆರ‍್ತಿಕ ‌‌ಸಂಕಶ್ಟದ ನಿಮಿತ್ತ; ಕಶ್ಟ-ಕಾರ‍್ಪಣ್ಯಗಳನ್ನು, ಹಣದ ಮುಗ್ಗಟ್ಟನ್ನು ಎದುರಿಸುವುದು, ಸಾಲ-ಸೋಲ ಮಾಡುವುದು ಸಾಮಾನ್ಯ ವಿಚಾರಗಳಾಗಿದ್ದ ಸಮಯವದು. ಆರ‍್ತಿಕ ಪರಿಸ್ತಿತಿ ಅದೇನೇ ಇದ್ದರೂ; ಮನೆಗೆ‌ ಆಗಾಗ ಬರುತ್ತಿದ್ದ ನೆಂಟರಿಶ್ಟರು, ಬಂದು-ಬಾಂದವರೊಡನೆ‌ ಇರುತ್ತಿದ್ದ ಒಡನಾಟಕ್ಕಂತೂ ಯಾವ ದಕ್ಕೆಇರುತ್ತಿರಲಿಲ್ಲ! ಹಬ್ಬ, ಜಾತ್ರೆ, ಇನ್ನಿತರ ಆಚರಣೆಗಳಲ್ಲಿ ಒಂದು ಕಡೆ ಸೇರೋದು,  ಪರಸ್ಪರ ಯೋಗಕ್ಶೇಮ, ಕಶ್ಟ-ಸುಕ ವಿಚಾರಿಸೋದು, ಇವೆಲ್ಲವನ್ನೂ ಜನರು ಸಹಜವಾಗಿಯೇ ರೂಡಿಸಿಕೊಂಡಿದ್ದರು.

ಅಲ್ಲದೇ ಆಗ, ಸ್ವಂತಕ್ಕೆ ಮನೆ ಕಟ್ಟಿಸುವುದೆಂದರೆ ತೀರ ಹಗುರವಾದ ವಿಶಯವಾಗಿರದೆ, ಸಂಬಂದಪಟ್ಟ ಕುಟುಂಬದ ಬಹುದೊಡ್ಡ ಸಾದನೆಯಾಗಿರುತ್ತಿತ್ತು. ಕಾರು, ಇನ್ನಿತರ ದುಬಾರಿ‌ ಬೆಲೆಯ ಮೋಟಾರು ‌ವಾಹನಗಳಂತೂ ಯಾರೋ ಸಿರಿವಂತರ ಬಳಿ ಮಾತ್ರವೇ ಇರುತ್ತಿದ್ದವು. ಸರಕಾರೀ ಮತ್ತು ಕಾಸಗಿ ಬಸ್ಸುಗಳೇ ಜನರ ಬಹುದೊಡ್ಡ ಸಾರಿಗೆ ಮಾದ್ಯಮಗಳಾಗಿದ್ದವು. ಪಟ್ಟಣದ ರಸ್ತೆಗಳಲ್ಲಂತೂ ಟ್ರಾಪಿಕ್ ಸಮಸ್ಯೆ ಅನ್ನೋದು ಇರಲಿಲ್ಲ. ಯಾರ ಮನೆಯಲ್ಲಾದರೂ ಸಾವು ನೋವು ಆದಾಗ ನೆಂಟರಿಶ್ಟರು, ಆಪ್ತರು ನೀಡುತ್ತಿದ್ದ ಸಹಾಯ, ಸಹಕಾರ, ಹಾಗೂ ಸಾಂತ್ವನ, ಇವೆಲ್ಲವೂ ಮಾನವ ಸಂಬಂದಗಳನ್ನು ಬಹಳ ಆಳವಾಗಿ ಬೆಸೆಯುತ್ತಿದ್ದವು.

ಆಗೆಲ್ಲ, ಮದುವೆಯಂತಹ ಶುಬ ಸಮಾರಂಬಗಳು ನೆರವೇರುವಲ್ಲಿ, ಕನಿಶ್ಟವೆಂದರೂ ಒಂದು‌ ತಿಂಗಳಿಗೂ ಮುಂಚೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲು ಸಜ್ಜಾಗುತ್ತಿದ್ದರು. ಅದು ಬಟ್ಟೆ-ಬರೆಗಳನ್ನು ಕೊಳ್ಳುವುದು, ವದು-ವರರಿಗೆ ಆಬರಣಗಳನ್ನು ಕರೀದಿಸುವುದು, ಮನೆಗೆ ಸುಣ್ಣ-ಬಣ್ಣ ಬಳಿಸುವುದು, ಆಹ್ವಾನ ಪತ್ರಿಕೆಗಳನ್ನು ಮಾಡಿಸುವುದು, ನೆಂಟರಿಶ್ಟರ ಮನೆ-ಮನೆಗೂ ಹೋಗಿ ಆಹ್ವಾನಿಸುವುದು, ಮದುವೆ ಮನೆಯ ಅಂಗಳದಲ್ಲಿ ಚಪ್ಪರ‌ ಹಾಕುವುದು, ಅಡುಗೆಯವರನ್ನು ಮುಂಗಡವಾಗಿ ಗುರುತು ಮಾಡುವುದು, ಅಡುಗೆಗೆ ಬೇಕಾದ ಸಾಮಾನು-ಪದಾರ‍್ತಗಳನ್ನು ತರುವುದು, ದಿಬ್ಬಣಕ್ಕೆಂದು ವಾಹನವನ್ನು ಬುಕ್ ಮಾಡುವುದು, ದಿಬ್ಬಣದ ಜೊತೆ ಹೊರಡಲು ಊರ ಜನರ ಮನೆ-ಮನೆಗೂ ಹೋಗಿ ಆಮಂತ್ರಣ ನೀಡುವುದು, ಹೀಗೆ ಪ್ರತಿ‌ಯೊಂದು ಕೆಲಸಕ್ಕೂ ಅದರದೇ ಆದ ಸೊಬಗು ಹಾಗೂ ವಿಶಿಶ್ಟತೆಯಿರುತ್ತಿತ್ತು. ಅಲ್ಲದೇ ಜನರು ಕೂಡ ವಹಿಸಿದ ಕೆಲಸವನ್ನು ಬಹಳ ಉತ್ಸುಕತೆಯಿಂದ ಹಾಗೂ ಸಾಂಗಿಕವಾಗಿ ಮಾಡುತ್ತಿದ್ದರು. ಹತ್ತಿರದ ಬಂದು ವರ‍್ಗದವರಂತೂ ಮದುವೆಯ ಕೆಲಸಕಾರ‍್ಯದಲ್ಲಿ ಬಾಗಿಯಾಗಲೆಂದು ವಾರ ಅತವಾ 15 ದಿನಗಳ ಮುಂಚಿತವಾಗಿಯೇ ಹಾಜರಿರುತ್ತಿದ್ದರು.

ಈಗ ಮದುವೆಯ ಬಹುತೇಕ ‌ಕೆಲಸಗಳನ್ನು ಹೊರಗುತ್ತಿಗೆ ‌ಕೊಡುತ್ತಿರುವೆವು.‌‌ ನೆಂಟರಿಶ್ಟರಿಗೆ, ಸ್ನೇಹಿತರಿಗೆ ಅಂಚೆ ಇಲ್ಲವೇ ಇ-ಮೇಲ್ ಮೂಲಕ ಆಹ್ವಾನ ಪತ್ರಿಕೆ ಕಳುಹಿಸುತ್ತೇವೆ. ನೆಂಟರಿಶ್ಟರು ಅಶ್ಟೇ, ಅವಸರದಲ್ಲಿ ಮದುವೆಗೆ ಬರುತ್ತಾರೆ, ಅವಸರದಲ್ಲೇ ಮದುವೆ ಮಂಟಪದಿಂದ ಹೊರಟು ಹೋಗುತ್ತಾರೆ. ಜೊತೆಗೆ ಹಣವೇ ಎಲ್ಲದಕ್ಕೂ ಅವಶ್ಯಯೆನಿಸಿರುವ ಈಗಿನ ದಿನಗಳಲ್ಲಿ, ದುಡಿಮೆಯೇ ಬಾಳಿನ ಬಹುಮುಕ್ಯ ಅಂಶವಾಗಿ, ಹೆಚ್ಚಿನ ಜನರು ಹಣವಂತರೂ, ಸ್ತಿತಿವಂತರೂ ಆಗುವತ್ತ ಗಮನವ ಹರಿಸಿಹರು. ಸ್ವಂತಮನೆ, ‌ಕಾರು ಹಾಗೂ ಇನ್ನಿತರೇ ಐಶಾರಾಮಿ ವಸ್ತುಗಳನ್ನು‌ ಹೊಂದುವುದರಲ್ಲಿ ಆಸಕ್ತರಾಗಿರುವರು. ಇದೇ ಸಮಯದಲ್ಲಿ, ನೆಂಟರಿಶ್ಟರೊಡನೆ ಮಾತುಕತೆ,‌ ಮುಕಾಮುಕಿ ಬೇಟಿ,‌ ಯೋಗಕ್ಶೇಮ ವಿಚಾರಣೆ ಹಾಗೂ ಕಶ್ಟ-ಸುಕದಲ್ಲಿ ಬಾಗಿಯಾಗೋದು, ಈ ಅಂಶಗಳು ಬಹುಪಾಲು ಜನರಿಗೆ ದುಬಾರಿಯಾಗಿವೆ; ಯಾರಿಗೂ ಯಾರೊಬ್ಬರನ್ನೂ ಬೇಟಿಮಾಡಿ ಉಬಯ ‌ಕುಶಲೋಪರಿ‌ ವಿಚಾರಿಸುವಶ್ಟು ಸಮಯ, ತಾಳ್ಮೆ ಇಲ್ಲದಂತೆ ಆಗಿದೆ.

ನಮ್ಮ ‌ಈ‌ ಎಲ್ಲಾ ಬದಲಾವಣೆಗಳಿಗೆ ಕಾರಣವಾದ ಅಂಶಗಳೆಂದರೆ; ಸಾಮಾಜಿಕ ಸ್ತಿತಿಯಲ್ಲಿ ಆಗುತ್ತಿರುವ ತ್ವರಿತ ಬೆಳವಣಿಗೆ ಹಾಗೂ ಬದಲಾವಣೆಗಳು: ಅಂದರೆ ಶಿಕ್ಶಣ, ಮಾಹಿತಿ ತಂತ್ರಜ್ನಾನ, ಉತ್ಪಾದನಾ ಹಾಗೂ ಸಾರ‍್ವಜನಿಕ ಕೈಗಾರಿಕಾ ವಲಯಗಳ ವೇಗವಾದ ಪ್ರಗತಿ, ಅವು ಸ್ರುಶ್ಟಿಸುತ್ತಿರುವ ವಿಪುಲ ಉದ್ಯೋಗಾವಕಾಶಗಳು. ಈ ಕಾರಣವಾಗಿ, ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಬರುತ್ತಿರುವರು, ಅಲ್ಲದೇ ಬಿಡುವಿಲ್ಲದ ದುಡಿಮೆ ಜನರಿಗೆ ಸ್ವತಂತ್ರವಾಗಿ ಬದುಕಲು‌ ಬೇಕಾದ ಶಕ್ತಿ ನೀಡುತ್ತಿವೆ. ಆದರೆ, ಸ್ವತಂತ್ರವಾದ ಬದುಕೆಂದು‌ ತಿಳಿದು ಜನರು ಒಂಟಿತನದ, ಜೊತೆಗೆ ಆಪ್ತರು, ನೆಂಟರಿಶ್ಟರೊಡನೆ ಪರಸ್ಪರ ‌ಒಡನಾಟವಿಲ್ಲದ ಬಾಳನ್ನು‌ ಬಾಳುವಂತಹ ಪರಿಸ್ತಿತಿ ‌ನಿರ‍್ಮಾಣವಾಗಿದೆ.

ಆರ‍್ತಿಕ ಹಾಗೂ ಉದ್ಯೋಗದ ‌ವಿಚಾರವಾಗಿ ಬಂದರೆ,‌ ಇಂತಹದೊಂದು ಬೆಳವಣಿಗೆ ‌ನಮ್ಮ ದೇಶದಲ್ಲಿ ಅತ್ಯಗತ್ಯವಾಗಿ ಬೇಕಿತ್ತು. ಈ ಬೆಳವಣಿಗೆಯಿಂದಾಗಿ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಕ್ಕಮಟ್ಟಿಗೆ ‌ಪರಿಹಾರ ಕಂಡಿದೆ. ಜನರು ಆರ‍್ತಿಕವಾಗಿ ಸಬಲತೆಯನ್ನು ಕಂಡಿದ್ದಾರೆ. ಆದರೆ, ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ; ಈ‌ ಮೊದಲೇ ಹೇಳಿದ ಹಾಗೆ ದುಡಿಮೆಯೇ ನಮ್ಮ ಬಾಳಿನ ಸರ‍್ವವೂ ಅಲ್ಲ.‌ ಅದಕ್ಕಿಂತ ಮುಕ್ಯವಾಗಿ; ಗೆಳೆತನ, ಸಂಬಂದಗಳು ಮತ್ತು ಅವುಗಳನ್ನು ಅಚ್ಚುಕಟ್ಟಾಗಿ ನಿಬಾಯಿಸೋದು ಕೂಡ ನಮ್ಮ ಬದುಕಲ್ಲಿ ಬಹುಮುಕ್ಯ. ಅವುಗಳಲ್ಲಿ ಸಿಗುವ ಪ್ರೀತಿ, ಕಾಳಜಿ, ಮಾರ‍್ಗದರ‍್ಶನ, ಸಹಕಾರ, ಪರಸ್ಪರ ಅನ್ಯೋನ್ಯತೆ, ಇವು ನಮ್ಮ ಬದುಕಿಗೆ ಇನ್ನಿಲ್ಲದ ಅರ‍್ತ ಮತ್ತು ಮೆರುಗನ್ನು ತರುತ್ತವೆ. ಪೇಸ್‌ಬುಕ್‌, ಟ್ವಿಟರ್, ವಾಟ್ಸ್ ಆಪ್‌ಗಳಲ್ಲಿ.. ಮುಂತಾದ ಸಾಮಾಜಿಕ ತಾಣಗಳಲ್ಲಿ‌ ನೂರಾರು ಸ್ನೇಹಿತರುಗಳಿರಬಹುದು ನಮಗೆ. ಆದರೆ, ನಿಜವಾದ ಸ್ನೇಹಿತರು, ಮಾರ‍್ಗದರ‍್ಶಕರು ಬೇರೆಯೇ ಇರುತ್ತಾರೆ. ಬನ್ನಿ ಅವರನ್ನು ಮೊದಲು ಗುರುತಿಸೋಣ.

(ಚಿತ್ರ ಸೆಲೆ: csstoday.net )



Categories: ನಲ್ಬರಹ

Tags: , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s