ಮಾಡಿ ಸವಿಯಿರಿ ಸಿಹಿಯಾದ ಗಿಣ್ಣು

– ಮಲ್ಲೇಶ್ ಬೆಳವಾಡಿ ಗವಿಯಪ್ಪ.

ginnu

“ಗಿಣ್ಣು” ಅಂದೊಡನೆ ನಮಗೆ ತಟ್ಟನೆ ನೆನಪಿಗೆ ಬರುವುದು ಹಸು, ಕರು, ಗಿಣ್ಣಾಲು ಮುಂತಾದವು. ಹಸುವೊಂದು ಕರು ಹಾಕಿದ ನಂತರದ ಕೆಲ ದಿನಗಳು ಅದು ಕೊಡುವ ಹಾಲನ್ನು ಗಿಣ್ಣಾಲು ಎನ್ನುವರು. ಈ ಗಿಣ್ಣಾಲಿನಿಂದ ಮಾಡುವ ಸಿಹಿತಿನಿಸೇ “ಗಿಣ್ಣು”. ಬೇರೆ ಸಿಹಿತಿಂಡಿಗಳಂತೆ ಗಿಣ್ಣನ್ನು ಬೇಕಾದಾಗ ಮಾಡಲು ಆಗುವುದಿಲ್ಲ. ಗಿಣ್ಣನ್ನು ಗಿಣ್ಣಾಲಿನಿಂದ ಮಾಡುವುದರಿಂದ ಮತ್ತು ಈ ಗಿಣ್ಣಾಲು ಹಸುವು ಕರು ಹಾಕಿದ ನಂತರದ ಕೆಲ ದಿನಗಳು ಮಾತ್ರ ಸಿಗುವುದರಿಂದ ಆ ಹೊತ್ತಿನಲ್ಲಿ ಮಾತ್ರ ಗಿಣ್ಣನ್ನು ಮಾಡಬಹುದು. ಹಾಗಾಗಿ ನಿಮಗೆ ಗಿಣ್ಣಾಲೇನಾದರೂ ಸಿಕ್ಕರೆ ತಪ್ಪದೇ ಗಿಣ್ಣನ್ನು ಮಾಡಿ ಸವಿಯಲು ಮರೆಯದಿರಿ. ಮೊನ್ನೆ ನಮ್ಮ ಹಳ್ಳಿಗೆ ಹೋಗಿದ್ದಾಗ ಅಮ್ಮ ಮಾಡಿದ ಗಿಣ್ಣನ್ನು ಸವಿದು, ಅದನ್ನು ಮಾಡುವ ಬಗೆಯನ್ನು ಕೇಳಿಸಿಕೊಂಡು ಬರಹಕ್ಕಿಳಿಸಿದ್ದೇನೆ, ನಿಮಗಾಗಿ.

ಬೇಕಾಗುವ ಅಡಕಗಳು:
1. ಗಿಣ್ಣಾಲು
2. ಬೆಲ್ಲ
3. ಅವಲಕ್ಕಿ
4. ಏಲಕ್ಕಿ (4-5)
5. ತೆಂಗಿನಕಾಯಿ ತುರಿ (ಒಂದು ಚಿಕ್ಕ ಬಟ್ಟಲಿನಶ್ಟು)

ಮಾಡುವ ಬಗೆ:
1. ಮೊದಲಿಗೆ ಗಿಣ್ಣಾಲನ್ನು ಚೆನ್ನಾಗಿ ಕುದಿಸಿ(ಕೊಂಚ ಕಂಪು ಬರುವಂತೆ).
2. ಇನ್ನೊಂದೆಡೆ, ಬೆಲ್ಲವನ್ನು ಕರಗಿಸಿ ಪಾಕ ಬರುವಂತೆ ಕೊಂಚ ಕುದಿಸಿ.
3. ಕುದಿಯುವ ಗಿಣ್ಣಾಲಿಗೆ ಬೆಲ್ಲದ ಪಾಕವನ್ನು ಬೆರೆಸಿ.
4. ಬೆಲ್ಲದ ಪಾಕ ಬೆರೆಸಿದ ಗಿಣ್ಣಾಲಿಗೆ ಅವಲಕ್ಕಿಯನ್ನು ಬೆರೆಸಿ ತಿರುಗಿಸಿ.
5. ಕೊನೆಗೆ ತೆಂಗಿನಕಾಯಿ ತುರಿ ಮತ್ತು ಏಲಕ್ಕಿಯನ್ನು ಬೆರೆಸಿ ಕೊಂಚ ಬೇಯಿಸಿ, ಸೌಟಿನಿಂದ ತಿರುಗಿಸಿ.

ಅಲ್ಲಿಗೆ, ಸಿಹಿಯಾದ ಗಿಣ್ಣು ನಿಮ್ಮ ಮುಂದೆ ಸವಿಯಲು ಅಣಿಯಾಗಿರುತ್ತದೆ. ಅಂದಹಾಗೆ ಗಿಣ್ಣನ್ನು ಇರುಳು ಮಾಡಿಟ್ಟು ಮಾರನೆಯ ದಿನ ತಿನ್ನುವುದೂ ಉಂಟು. ಆಗ ಗಿಣ್ಣು ಹೆಚ್ಚು ಸವಿಯಾಗಿ ಇರುತ್ತದೆ ಎಂದು ಹೀಗೆ ಮಾಡುತ್ತಾರೆ. ಗಿಣ್ಣಾಲು ಸಿಕ್ಕರೆ ನೀವೂ ಒಮ್ಮೆ ಮಾಡಿನೋಡಿ.

(ಚಿತ್ರ ಸೆಲೆ: ಮಲ್ಲೇಶ್ ಬೆಳವಾಡಿ ಗವಿಯಪ್ಪ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks