ನಗುವ ಮಾರಲು ಹೊರಟೆ

 ಗೌಡಪ್ಪಗೌಡ ಪಾಟೀಲ್.

ನಗುವ ಮಾರಲು
ಹೊರಟೆ ಊರೂರು
ಇಲ್ಲವಲ್ಲ ಕೊಳ್ಳಲು
ಯಾರೂ ತಯಾರು

ದುಡಿಯೋರು ಕುಡಿಯೋರು
ಓದೋರು ಬರೆಯೋರು
ತುಟಿಬಿಚ್ಚಿ ನಗಲು
ಇವರಿಗ್ಯಾಕೋ ಬೇಜಾರು

ಮನಬಿಚ್ಚಿ ನಗಲು
ಕಾರಣ ನೂರಾರು
ಆದರೂನು ಹುಸಿಗಾಂಬೀರ‍್ಯ
ಮನದುಂಬಿ ನಗಲಾರರು

ಕೊಳ್ಳಲು ಬೇಕಿಲ್ಲ
ಹಣದ ಕಂತೆ ಹಲವಾರು
ಕಾರಣ ಸಿಕ್ಕಿಲ್ಲ
ಇಲ್ಲವಲ್ಲ ಕೊಳ್ಳೋರು

ಸಹಜದ ಬದುಕಿಲ್ಲ
ಎಲ್ಲರೂ ಡಾಂಬಿಕರು
ನೆಮ್ಮದಿಗೆ ಬೆಲೆಯಿಲ್ಲ
ದುಡ್ಡಿಗೇನೆ ಜೋರು

ಬದುಕಿಗೆ ಜತೆಬಟ್ಟೆ
ಎರ‍್ಡೊತ್ತು ಊಟ ತಲೆಮೇಲೆ ಸೂರು
ಹೊತ್ತೊಯ್ಯಲು ಏನಿಲ್ಲ
ನಿಂತಾಗ ಜೀವಿತದ ಉಸಿರು

ಕ್ಶಣಕ್ಶಣ ಸಿಗುವದು
ನಗಲು ಕಾರಣ ಸಹಸ್ರಾರು
ಹುಡುಕದೇ ಸಿಡುಕಿ
ಸಂತಸವ ದೂರ ನೂಕುವರು

ನಗುವೊಳಗೆ ಅಳುವ
ಮುಚ್ಚಿದಾಗ ಗುರುತಿಸರಾರು
ಹಣದಮಲಿನಲಿ ಅಡಗಿದ
ನೋವಿನ ಕಂಬನಿ ಕಂಡವರಾರು

ನಗುವೊಂದಿರೆ ಸರ‍್ವವೂ
ನಗುವಿರದಿರೆ ಶೇಶವು
ನಗುವಿದ್ದೊಡೆ ಪ್ರಾರಂಬ
ನಗುವಿಲ್ಲ ಎಂದರದೆ ಕೊನೆಯು

ನಗುತ ನಗಿಸುತ ನಗುವಿನೊಳಗೆ
ಮಗುವಾಗುತ ನಲಿಯುತಿರೆ
ಹಂಚುತಲಿರೆ ಸಂತಸವ ಬದುಕಿನೊಳಗೆ
ಮಾರುವ ಕಾರಣವಿಲ್ಲ ಒಂದಾಗಿ ನಗುತಲಿರೆ

(ಚಿತ್ರ ಸೆಲೆ: houseofwards.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.