ಮತ್ತೆ ಬಂತು ಚಿಗುರು ಹೊತ್ತ ವಸಂತ

 ಪ್ರವೀಣ್  ದೇಶಪಾಂಡೆ.

ಮತ್ತೊಂದು
ಚಿಗುರು ಹಬ್ಬ
ವಸಂತ ಬಂತು
ಇಣುಕಿ,

ಹೊರಗೆ ಏನಾಗಿದೆ?
ಒಳಗೆ ಏನಾಗಿದ್ದೀ
ಮಾರ‍್ಚ ಎಂಡಿಗೆ
ಕಳೆದುಳಿಯಿತೆಲ್ಲ
ಆಯವ್ಯಯ,

ನಲ್ವತ್ತರ ವಯಸ್ಸೂ
ರಿಸೈಕಲ್ಡ್
ಆದ ಹರೆಯ
ಜೀವನದ ಬೊಡ್ಡೆ

ಎಲೆಗಳೆಲ್ಲ
ಕಹಿ ಬೇವು
ಬಿಡುವ ಕೊನೆಯ
ಕಾಕಪಲ, ಸಾವು.

ಮನದ ಸಕ್ಕರೆಗೆ ಮುತ್ತಿವೆ
ಬಾವಗಳ ಇರುವೆ
ಮದುರತೆಯ
ಹುಡುಕುತಿವೆ.

ಸುಮ್ಮನಿರಲಾರದೆ
ಇರುವೆ ಬಿಟ್ಟುಕೊಳ್ಳುವುದೇ
ಜೀವನವೆ?

ಸಿಹಿಗೆ ಅಪ್ಪಿಕೆ,
ಕಹಿಗೆ ಲೊಚಗುಟ್ಟುವಿಕೆಯೆ
ಜಗದ ಸಹಜ
ಪ್ರತಿಕ್ರಿಯೆ.

ಹೆಂಗಿತ್ತೋ ನಿನ್ನೆ
ಹೆಂಗದೋ ಬರುವ
ನಾಳಿನ ದಿನ

ನಿನ್ನೆ ನಾಳೆಯ
ಮಿಕ್ಕಿ ಇಂದು
ನಮ್ಮದೇ ಜೀವನ

ಕಾಲದ ಹೋಮಕುಂಡದಲಿ
‘ದಿನ’ ಸತತ
ಹವನ
ಸುಮ್ಮನೇ ಬಂತು
ಚಿಗುರು ಹೊತ್ತ ವಸಂತ.

ಕೇಳಿತೇ,
ಎಶ್ಟು ಒಣಗಿದ್ದೀ ಅಂತ?
ಒಣವೇನು, ಚಿಗುರೇನು?
ಅಲ್ಲಿಲ್ಲು ಬದುಕಿದೆ

ಒಣವೇನು, ಚಿಗುರೇನು?
ಬದುಕಲೇ ಬೇಕಿದೆ.
ಎಲ್ಲ ಎಲ್ಲೆಯ ಮೀರಿ
ಎಲ್ಲವನು ಒಪ್ಪಿಕೊಳ್ಳಲೆ?
ಸಂತನಂತೆ,

ಇಲ್ಲಾ
ಯತಾಸ್ತಿತಿಯ
ಕಾಯ್ದುಕೊಳ್ಳಲು
ಹೆಣಗಲೆ?
ಶ್ರೀ ಸಾಮಾನ್ಯನಂತೆ?

ಕಸುವುಳ್ಳ ಸಹಜತೆ
ವಸಂತ ಬಂದಾಗ ಚಿಗುರು
ಒಣಗಿದಾಗಲೂ
ಒಳಗೊಣಗದಿರಲಿ
ಚಿಗುರುವ ಪೊಗರು.

ಅದು ಎಲ್ಲ ಹೊತ್ತು
ಪೊರೆವ ಬೇರು.

(ಚಿತ್ರ ಸೆಲೆ: theapopkavoice.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: