ನಗೆಬರಹ: ‘ತೂಕಾಯಣ’

– ಡಾ|| ಅಶೋಕ ಪಾಟೀಲ.


ಇನ್ನೇನು ಇನ್ನೂ ತುಸು ದಿನದಲ್ಲೇ ಪೂರ‍್ತಿ ಕ್ವಿಂಟಲ್ ತೂಗೋದು ಗ್ಯಾರಂಟಿಯಾಗೋಯ್ತು. ಎದೆಯಲ್ಲಿ ಡವಡವ ಶುರುವಾಯ್ತು. ಆಗಲೇ ಸೋಮಾರಿತನವೆಂಬುದು ಮೈಮನವನ್ನು ಮುದ್ದೆಮಾಡಿ ಬಿಸಾಕಿತ್ತು. ವಾಕಿಂಗು, ಜಾಗಿಂಗು, ವ್ಯಾಯಾಮ, ಆಟೋಟಗಳೆಲ್ಲ ಯಾವುದೋ ಹೋದ ಜನ್ಮದಲ್ಲಿ ಮಾಡಿದ್ದೆನೇನೋ ಎಂಬಶ್ಟರ ಮಟ್ಟಿಗೆ ಮರೆತೋಗಿದ್ವು. ಎಲ್ಲರ ಜೊತೆ ಹರಟುವಾಗ ತೂಕದ ಮಾತಂತೂ ಎಲ್ಲಿಂದಲೋ ತಪ್ಪದೇ ನುಸುಳಿ ಮುಜುಗರವನ್ನುಂಟುಮಾಡುತ್ತಿತ್ತು. ಮಟ್ಟಸವಾದ ಹುಡುಗಿಯರ ಜೊತೆ ಮಾತಾಡುವಾಗಲೂ ಅದೆಂತದೋ ಸಂಕೋಚ ಒಳಗಿಂದಲೇ ಹಣಿಕಿ ಹಾಕಿ ನಾಚಿಸುತ್ತಿತ್ತು. ಮೊದಲಿಂದಲೂ ಗುಂಡಗಿದ್ದರೆ ಆ ಮಾತು ಬೇರೆ. ಆದ್ರೆ, ಒಮ್ಮಿಂದೊಮ್ಮೆಲೇ ಮೈಯ ತೂಕ ನಿಮ್ಮ ವ್ಯಕ್ತಿತ್ವದ ತೂಕವನ್ನೂ ಮೀರಿ ಬೆಳೆದಾಗ, ನೀವು ತೂಕದ ವ್ಯಕ್ತಿಗಳಾಗದೇ ಆ ‘ತೂಕ’ದ ಆಸಾಮಿಗಳಾಗಿಬಿಡುತ್ತೀರಿ.

ಒಮ್ಮೆ ಸಣ್ಣಗೆ ಕಾಲು ನೋವು ಶುರುವಾಯ್ತು. ವೈದ್ಯರ ಹತ್ತಿರ ಹೋದಾಗ ಅದಕ್ಕೆ ‘ಗೌಟಿ ಆರ‍್ತ್ರೈಟಿಸ್’ ಅಂತ ಹೆಸರಿಟ್ಟು ಹೆದರಿಸಿದ್ರು. ತೂಕ ಹೆಚ್ಚಿದ್ದರ ಬಗ್ಗೆ ಗದರಿಸಿದ್ರೂ ಕೂಡ. ನೀವು ತೂಕ ಕಡಿಮೆ ಮಾಡಿಕೊಳ್ಳದಿದ್ರೆ ಮುಂದೆ ಇಂತ ತೊಡಕುಗಳು ಕಾಯಮ್ ಆಗುತ್ತವೆ, ನನ್ನ ಬೇಟಿ ಪದೇ ಪದೇ ಆಗುತ್ತದೆ ಅಂತ ಹೇಳಿ ಮನದೊಳಗೆ ದೆವ್ವವನ್ನು ಹೋಗಿಸಿಬಿಟ್ರು ನೋಡಿ, ಎಲ್ಲಿಂದಲೋ ಇದ್ದ ಸೋಮಾರಿತನ ಅಲುಗಾಡಿ ಬಿಟ್ಟಿತು. ಮನಸ್ಸು ಗಟ್ಟಿಯಾಯ್ತು. ಏನಾದರೂ ಮಾಡಿ ಮೊದಲು ಇದರ ಬಗ್ಗೆ ಗಮನ ವಹಿಸಿದರಾಯ್ತು ಅಂತ ಶುರುವಾಯ್ತು ನೋಡಿ ತೂಕ ಕಡಿಮೆ ಮಾಡೋ ಹುಕಿ.

ಮೊದಲು ಬೆಳಗ್ಗೆ ಬೇಗ ಎದ್ದೇಳೋ ರೂಡಿ ಮಾಡ್ಕೋಬೇಕು. ಎದ್ದು ನಿಚ್ಚಳವಾದರೆ ಸುಮ್ಮನೆ ಅಂತೂ ಕೂಡಲ್ಲ. ಮನೆಯಿಂದ ಹೊರಬಿದ್ದು ಏನಾದರೊಂದು ಮಾಡೇ ಮಾಡುತ್ತೇನೆ ಅನ್ನೋ ಉಮೇದಿಯಿಂದ ಅಲಾರಾಂ ಗೆ ಕೆಲಸ ಶುರುವಾಯ್ತು. ಬೆಳಗ್ಗೆ ಸುಕಕರ ನಿದ್ದೆಯಿಂದ ಏಳೋ ಶಾಪ ಪೂರ‍್ವಜನ್ಮದಲ್ಲೇ ಆಗಿರುತ್ತದೆ. ಅದರ ವಿಮೋಚನೆ ಈ ಜನ್ಮದಲ್ಲಿ ಬೇಗ ಏಳುವುದರ ಮೂಲಕ ಆಗುತ್ತದೆ. ಸಮಸ್ಯೆಯೆಂದರೆ ಬೆಳಗ್ಗೆ ಅಶ್ಟು ಬೇಗ ಏಳಬೇಕಂದ್ರೆ ಸ್ವಲ್ಪವಾದ್ರೂ ಅಂದರೆ ‘6’ ತಾಸು ನಿದ್ದೆ ಆಗಬೇಕಲ್ಲ? ಆಗ ಅದು ರಾತ್ರಿ ಮಲಗೋ ವ್ಯವಹಾರವನ್ನು ಹಿಡಿತದಲ್ಲಿಡಲು ಪ್ರಾರಂಬಿಸುತ್ತದೆ. ಮುಂಜಾವಲ್ಲಿ ಏಳಲೇಬೇಕಂದ್ರೆ ರಾತ್ರಿ ಬೇಗ ಹಾಸಿಗೆ ಸೇರಬೇಕು. ಆಗ ರಾತ್ರಿಯ ವ್ಯವಹಾರಗಳಿಗೆ ಕತ್ತರಿ ಬೀಳೋಕೆ ಶುರು. 12 ರ ಒಳಗಡೆ ಕಣ್ಣು ಮುಚ್ಚದ ನಾನು 10 ಕ್ಕೆ ಕಣ್ಣು ಒತ್ತಿಕೊಂಡು ಮಲಗಬೇಕಾದ ಅನಿವಾರ‍್ಯತೆ. ಕಶ್ಟ ಕಶ್ಟ. ಎಲ್ಲ ತೀರ‍್ತ ಪ್ರಸಾದಗಳಿಗೂ ತಿಲಾಂಜಲಿ ಕೊಡಲೇಬೇಕಲ್ಲ. ಯಾಕಂದ್ರೆ ಅವು ಅಶ್ಟು ಬೇಗ ಮುಗಿಯೋ ಕೆಲಸಗಳಲ್ಲ ನೋಡಿ. ಆದಶ್ಟು ಇಂತ ವಿಶೇಶ ಕಾರ‍್ಯಕ್ರಮಗಳನ್ನು ರದ್ದುಗೊಳಿಸಿ ಬೇಗ ಮನೆ ಸೇರೋ ಹೊಸ ಕಾರ‍್ಯಕ್ರಮವು ಪ್ರಾರಂಬವಾಯಿತೆನ್ನಿ.

ಗೆಳೆಯರಿಗೆ ನನ್ನ ರಾತ್ರಿಯ ಆಬ್ಸೆನ್ಸಿ ಮೊದಮೊದಲು ಕಿರಿಕಿರಿಯಾಯ್ತು, ನಂತರ ರೂಡಿಯಾಯ್ತು, ಸ್ವಲ್ಪ ದಿನದ ನಂತರ ಸಹ್ಯವಾಯ್ತು. ಇದು ಕೂಡ ಮೈಯ ತೂಕ ಕಳೆದುಕೊಳ್ಳೋಕೆ ಪೂರಕವೇ ಆಯ್ತು. ಬೆಳಗ್ಗೆ ಎದ್ದು ವಾಕಿಂಗ್ ಪ್ರಾರಂಬವಾಯ್ತು. ಬರ‍್ತಾ ಬರ‍್ತಾ ವಾಕಿಂಗ್ ಜಾಗಿಂಗ್ ಆಯ್ತು, ಜಾಗಿಂಗ್ ಮುಂದುವರೆದು ವ್ಯಾಯಾಮಗಳು ಜೊತೆಯಾದವು. ಇನ್ನಶ್ಟು ಮನಸ್ಸು ಗಟ್ಟಿಯಾಗಿ ಜಿಮ್ ಗಾಗಿ ತುಡಿಯಿತು, ಮಿಡಿಯಿತು. ಸರಿ, ಜಿಮ್ ಕೂಡ ಸೇರಿಯಾಯ್ತು. ಜಿಮ್ ನಲ್ಲಿ ನನಗೆ ವಿಶೇಶ ವಿಚಿತ್ರ ಅನುಬವಗಳಾದ್ವು. ಒಬ್ಬ ಆಂಟಿಯಂತೂ ಎಶ್ಟರ ಮಟ್ಟಿಗೆ ರೆಗ್ಯುಲರ್ ಮತ್ತು ಕಮಿಟೆಡ್ ಆಗಿದ್ದರೆಂದರೆ ಅವರು ಗ್ರುಹಿಣಿಯಂತ ಅನಿಸ್ತಾನೇ ಇರ‍್ಲಿಲ್ಲ. ಅವರ ಮುಂದೆ ನಾನು ಸಪ್ಪೆ ಅನಿಸೋಕೆ ಶುರುವಾಯ್ತು. ಇರಲಿ ಅವರೂ ಕೋಚ್ ತರ ಸ್ಪೂರ‍್ತಿಯಾದರೆನ್ನಿ.

ನಮ್ಮ ಮನಸ್ಸು ನಮ್ಮ ದೇಹ ಸುಸ್ತಾಗೋದನ್ನ ಸಹಿಸಲ್ಲ, ಅದು ಯಾವತ್ತೂ ವಿಶ್ರಾಂತಿಯನ್ನು ಬೇಡುತ್ತದೆ. ಒಟ್ಟಿನಲ್ಲಿ ಅದರ ದೇಹಕ್ಕೆ ಏನೂ ಆಗಬಾರದು ಅಶ್ಟೇ. ವಾಕಿಂಗ್ ಜಾಗಿಂಗನ್ನು ಮನಸು ಸಹಿಸಿಕೊಳ್ಳುತ್ತೆ, ಯಾಕಂದ್ರೆ ಅಲ್ಲಿ ಅಶ್ಟೊಂದು ಶ್ರಮ ದೇಹಕ್ಕಾಗಲ್ಲ. ಗಾಳಿಯಲ್ಲಿ ಆರಾಮಾಗಿ ತಿರುಗಾಡೋದ್ರಿಂದ ಮನಸ್ಸಿಗೂ ಮುದವಾಗುತ್ತೆ, ಮನಸ್ಸು ಕುಶಿಗೊಳ್ಳುತ್ತೆ. ಅರೇ ಈ ಮನುಶ್ಯ ನನ್ನ ದೇಹಕ್ಕೆ ಏನೇನೂ ತೊಂದರೆ ಮಾಡೋದಿಲ್ಲವಲ್ಲ ಅಂತ ಒಳಗೊಳಗೆ ಸಂತಸಪಡುತ್ತೆ.

ಆದ್ರೆ ಜಿಮ್, ಗರಡಿ ಮನೆಗಳಲ್ಲಿ ಹೀಗಾಗಲ್ವೇ! ಅಲ್ಲಿನ ಕೋಚ್ ಗಳು ನಿಮಗೆ ಗಂಟುಬೀಳುತ್ತಾರೆ. ವಿರಾಮವನ್ನು ಮನಸು ಸಹಿಸಿದ್ರೂ, ಕೋಚ್ ಸಹಿಸಲ್ಲ. ನಿಮ್ಮ ಬೆನ್ನ ಹಿಂದೆಯೇ ಚೆಂಡೊಂದನ್ನು ಹಿಡಿದುಕೊಂಡು ನಿಂತಿರ‍್ತಾನೆ. ವ್ಯಾಯಾಮ ಆದಕೂಡಲೇ ಬಾರವಾದ ಚೆಂಡನ್ನೋ, ಮತ್ತೊಂದನ್ನೋ ಕೊಟ್ಟು 20 ಸಾರಿ, 30 ಸರ‍್ತಿ ಎತ್ತಿ ಅಂತ ಆರ‍್ಡರ್ ಮಾಡಿ ನಾವು ಸಂಕಟ ಪಡೋದನ್ನ ಎಂಜಾಯ್ ಮಾಡ್ತಾನೆ. ದೇಹ ದಣಿಯುವಂತೆ ನಾನಾ ನಮೂನೆಯ ವ್ಯಾಯಾಮಗಳನ್ನು ಕಲಿಸಿಕೊಟ್ಟು ಎದುರಿಗೆ ನಿಂತು ಎಣಿಕೆ ಮಾಡುತ್ತಾ ಮಾಡು ಅಂತ ಗಂಟುಬಿದ್ದಾಗ ದೇಹ ಒದ್ದಾಡಿಹೋಗುತ್ತದೆ. ಆರಾಮಾಗಿ ಮಲಗಿದ್ದ ಮಾಂಸಪೇಶಿಗಳು ಎದ್ದು ಕುಂತು ಕಿರುಚಲಾರಂಬಿಸುತ್ತವೆ. ಕೆಲವು ಮಾಂಸಪೇಶಿಗಳು ಮೊದಲ ಬಾರಿಗೆ ಕೆಲಸ ಮಾಡಲು ಅಣಿಯಾಗುತ್ತವೆ. ಮನಸ್ಸು ‘ಇನ್ನು ಸಾಕು’ ಎನ್ನೋ ಮಂತ್ರವನ್ನು ಪದೇ ಪದೇ ಜಪಿಸಿ ಎಚ್ಚರಿಸುತ್ತದೆ. ಪಾಪ, ಅದರ ದೇಹಕ್ಕೆ ಏನೂ ಆಗಬಾರದಲ್ಲವೇ?. ಆದಶ್ಟು ಎಲ್ಲ ಮಾಂಸಪೇಶಿಗಳನ್ನೂ, ಸ್ನಾಯುಗಳನ್ನು ಕೆಲಸ ಮಾಡಿ ದಣಿಸೋದೇ ಗರಡಿ ಮನೆಯ ಮೂಲಮಂತ್ರ. ಎಶ್ಟು ದಣಿಯುತ್ತಿರೋ ಅಶ್ಟು ದೇಹವನ್ನು ಹುರಿಗೊಳಿಸುತ್ತೀರಿ ಅಂತಾನೇ ಅರ‍್ತ.

ಜಿಮ್ ನಲ್ಲಿ ಬೆವರು ಹರಿದು ನ್ಯಾಪಕಿನ್, ಹಾಕಿಕೊಂಡ ಬಟ್ಟೆಗಳೆಲ್ಲ ತೋದು ತಪ್ಪಡಿಯಾದಾಗ ಕೊಬ್ಬೆಲ್ಲ ನೀರಾಗಿ ಹರಿಯಿತಲ್ಲ ಎಂಬ ಅತೀವ ಸಂತೋಶವೊಂದು ಮನಸ್ಸಿಗೆ ಬಂದುಹೋಗುತ್ತದೆ. ಮನಸ್ಸು ನೋಡಿ ಎಶ್ಟು ಕಳ್ಳಾಟ ಆಡುತ್ತದೆ, ಮೊದಲು ಬೇಡ ಅನ್ನುತ್ತೆ, ಅದರ ಮಾತಿಗೆ ತಪ್ಪಿ ಶ್ರಮಪಟ್ಟು ದೇಹವನ್ನು ದಣಿಸಿದಾಗ ಸಂತಸ ಪಡೋದು ಅದೇ!! ವಿಚಿತ್ರ. ಹೆಂಡತಿ ತರಾ  – ಅರ‍್ತ ಮಾಡಿಕೊಳ್ಳೋಕೆ ಆಗಲ್ಲ, ಬೈಯೋದು ಅವಳೇ, ಪ್ರೀತಿ ಮಾಡೋದೂ ಅವಳೇ!

ದೇಹದಂಡನೆ ಜೊತೆಗೆ ಡಯಟ್ ನಲ್ಲಿ ತೀರಾ ಶಿಸ್ತನ್ನು ತರಬೇಕಾಯ್ತು. ಮನೆಯಲ್ಲಿ ತಿಂದುಂಡು ಕೊಬ್ಬಿದ ಮದಗಜನನ್ನಾಗಿಸಿದ ವದನೆಯರಿಗೆ ಡಯಟ್ ಸಲುವಾಗಿ ಎಳ್ಳಶ್ಟೂ ಬೆಂಬಲ ಕೊಡಲಿಲ್ಲ. ಸೊಪ್ಪು ಗಡ್ಡೆ ತರಕಾರಿ ಮಾತ್ರ ತಿನಿಸಲು ಹೆಂಡತಿ, ಅವ್ವನ ಮನಸ್ಸು ಸುತಾರಾಮ್ ಒಪ್ಪಲಿಲ್ಲ. ಪೈಪೋಟಿಗೆ ಬಿದ್ದವರಂತೆ ‘ಅದೇನೂ ಆಗಲ್ಲ ತಿಂದುಬಿಡು’, ‘ಇವತ್ತೊಂದಿನ ತಿಂದ್ರೆ ಏನೂ ಆಗಲ್ಲ, ಯಾವ ನನ್ನ ಮಗ ಹಾಗೇ ಹೇಳಿದ್ದು’, ‘ಇದಕ್ಕೆಲ್ಲ ತೂಕ ಹೆಚ್ಚಾಗೋದಿಲ್ಲ, ಹೀಗೆ ಎಲ್ಲ ಬಿಡ್ತಾ ಹೋದ್ರೆ ನಿಶ್ಯಕ್ತಿಯಾಗಿ ತಲೆ ತಿರುಗಿ ಬೀಳ್ತಿ’, ‘ಮೈಯಲ್ಲೆಲ್ಲ ಗಾಳಿ ತುಂಬ್ಕೊಂಡು ಇನ್ನಶ್ಟು ದಪ್ಪ ಆಗ್ತಿ ನೋಡು!’, ‘ಯಾವ ಮುಟ್ಟಾಳ ಇವನ್ನೆಲ್ಲ ಹೇಳಿ ತಲೆಕೆಡಿಸಿದ್ನೋ?’(ಅವ್ವ ಅಂತಿದ್ದು), ‘ಯಾವಾಕಿ ನಿಮ್ಮನ್ನ ಇಶ್ಟೆಲ್ಲಾ ಮಾಡಿ ತೆಳ್ಳಗಾಗು ಅಂತ ಹೇಳಿ ತಲಿ ಕೆಡಸಕತ್ತ್ಯಾಳ?’ ಅಂತ ಹೆಂಡತಿ ತಲೆಕೆಡಿಸಿಕೊಂಡಳು.

ಇಬ್ಬರೂ ತರೇವಾರಿ ಹೇಳಿಕೆಗಳನ್ನು, ವೇದಾಂತಗಳನ್ನು ಪದೇ ಪದೇ ಹೇಳಿ ತಲೆ ಕೆಡಿಸುತ್ತಿದ್ದರು. ವರ‍್ಶಗಟ್ಟಲೇ ಓದಿ ಸೈನ್ಸ್ ಡಿಗ್ರಿ ಪಡೆದ ಮೇದಾವಿಗಳಂತೆ ಆಹಾರ ಪದಾರ‍್ತಗಳ ಬಗ್ಗೆ ಉಪನ್ಯಾಸ ಶುರುವಿಟ್ಟುಕೊಳ್ಳುತ್ತಿದ್ದರು. ನನ್ನ ಮಗ ಎಲ್ಲಿ ಉಪವಾಸ ವನವಾಸ ಮಾಡಿ ಸತ್ತೇ ಹೋಗ್ತಾನೇನೋ ಅಂತ ಹೆದರಿ ನನ್ನವ್ವ ಊರಿಗೆ ಹೋಗೋದೇ ಬಿಟ್ಟು ಗಟ್ಟಿಯಾಗಿ ಜಾಂಡಾ ಊರಿ ಸೊಸೆಯ ಜೊತೆ ‘ಹೇಗಾದರೂ ಮಾಡಿ ವ್ರುತಬಂಗ ಮಾಡೋ’ ಒನ್ ಪಾಯಿಂಟ್ ಪ್ರೋಗ್ರಾಂ ಗೆ ಅಣಿಯಾದಳು. ನನ್ನ ಜಿಮ್ ಸಹವಾಸ ಕೆಲ ದಿನಗಳಲ್ಲೇ ಒಂದು ಹಂತಕ್ಕೆ ಬಂತು. ಹಾಗೂ ಹೀಗೂ ಒದ್ದಾಡಿ ಹೊಂದಿಕೊಂಡೆ. ಒಳ ಮನಸ್ಸು ಎಶ್ಟೇ ಸಾಕೆನಿಸಿದರೂ ಬಿಟ್ಟುಬಿಡದೇ ಜಿಮ್ ಗೆ ರೆಗ್ಯುಲರ್ ಆದೆ.

ವಾರದಲ್ಲಿ ಎರಡು ದಿನ ಕೇವಲ ‘ಜೇನುತುಪ್ಪದ ನೀರಿ’ನೊಂದಿಗೆ ಉಪವಾಸ ಮಾಡೋಕೆ ಶುರುವಿಟ್ಟೆ. ನನ್ನಾಕೆ ಹಾಗೂ ನನ್ನವ್ವ ಇಬ್ಬರೂ ಒದ್ದಾಡಿಹೋದರು. ಅಪ್ಪನೂ ಊರಿಂದ ಬಂದು ವಟವಟ ಪ್ರಾರಂಬಿಸಿ ಮೂವರು ಸುತ್ತಲೂ ಕುಂತು, ನನ್ನ ನಡುವೆ ಹಾಕಿ ಉಪನ್ಯಾಸಗಳ ಸರಣಿಯನ್ನೇ ಬಿಚ್ಚಿಟ್ಟರು. ಉಪನ್ಯಾಸಗಳು ಉಪವಾಸಗಳನ್ನಂತೂ ಬಿಡಿಸಲಿಲ್ಲ. ಮಗಳೂ ಅವರೊಡನೆ ದನಿಗೂಡಿಸಿ ‘ಎಲ್ಲ ತಿಂದು ಗಟ್ಟಿಯಾಗಿರಬೇಕು ಪಪ್ಪ’ ಅಂತ ಶುರುವಿಟ್ಟಳು. ಓಡಿಹೋಗಬೇಕು ಅನಿಸ್ತು. ಆದರೂ ಓಡಿ ಎಲ್ಲಿಗೆ ಹೋಗಬೇಕು. ಏನಾದರೂ ತಿನ್ನೋಕೆ ಗೂಡಿಗೆ ಬರಬೇಕಲ್ಲ?, ಇರಲಿ ಅಂತ ಎಲ್ಲ ಸಹಿಸಿಕೊಂಡೆ.

ದಿನಗಳು ಉರುಳಿದವು. ದೇಹ ಹದಕ್ಕೆ ಬರತೊಡಗಿತು. ಹುಡುಕಾಡಿ ಸುತ್ತ ಹತ್ತು ಹೋಟಲುಗಳನ್ನು ಅಲೆದು ಹುಡುಹುಡುಕಿ ಕುರುಕುಲುಗಳನ್ನು ಮನಪೂರ‍್ತಿ ತಿನ್ನುತ್ತಿದ್ದುದು ನಾನೇನಾ? ಎಂದು ನಾನೇ ಆಚ್ಚರಿ ಪಡುವಶ್ಟರ ಮಟ್ಟಿಗೆ ಬದಲಾವಣೆ ಆಯಿತು. ಸಿಹಿಗಳನ್ನು, ಬೇಕರಿ ಐಟಮ್ಮುಗಳನ್ನು, ತುಪ್ಪ, ಹಾಲು, ಮುಕ್ಯವಾಗಿ ಪ್ರೀತಿಯ ಚಿಕನ್ನು ಎಲ್ಲದಕ್ಕೂ ಅನಿವಾರ‍್ಯವಾಗಿ ಡೈವೋರ‍್ಸು ನೀಡಬೇಕಾಯ್ತು. ಮನೆಯಲ್ಲಿ ‘ಇರ‍್ಲಿ ತಗೋ ಏನಾಗಲ್ಲ’ ಅನ್ನೋ ಮಾತುಗಳೂ ಮರೆಯಾದವು. ಅವರೂ ಸಾಕಾಗಿ ಕೈಬಿಟ್ಟರು.

ಜಿಮ್ ನಲ್ಲಿ ದಣಿಯುವಾಗ ಇನ್ನು ಸಾಕು ಅಂತ ನೂರು ಬಾರಿ ಅನಿಸಿದರೂ ಯಾವುದೋ ಹಟಕ್ಕೆ ಬಿದ್ದೋರ ತರ ಸಾಕುಮಾಡಲಿಲ್ಲ. ಕಳ್ಳ ಮನಸು ಪದೇ ಪದೇ ಕೆಣಕಿ ಸೋತಿತು. ಕೆಲವೊಮ್ಮೆ ಮಾತ್ರ ಗೆದ್ದಿರುತ್ತಿತ್ತು. ದಿನವೂ ಇಡ್ಲಿ ವಡೆಯಿಂದ ಪ್ರಾರಂಬವಾಗುತ್ತಿದ್ದ ನನ್ನ ಉಪಹಾರ ಸಂಹಾರವಾಗೋಯ್ತು. ಬೇಯಿಸಿದ ಮೊಟ್ಟೆಯ ಬಿಳಿ ಮತ್ತು ಎಣ್ಣೆರಹಿತ ಚಪಾತಿಗಳು ಮಾತ್ರ ಹೊಟ್ಟೆ ತುಂಬಿಸುತ್ತಿದ್ದವು. ಇನ್ನೂ ಹೊಟ್ಟೆ ತುಂಬದಿದ್ದರೆ ಹೊಟ್ಟೆಯನ್ನು ಸೌತೆಕಾಯಿ ಮತ್ತು ಗಜ್ಜರಿಗಳಿಂದ ಮಾತ್ರ ತುಂಬಬೇಕಾಗಿತ್ತು.

ಅಂತೂ ಇಂತೂ ಒಂದು ಹಂತಕ್ಕೆ ಬಂತು. ಸರಿಯಾಗಿ ತಿಂಗಳಿಗೆ 3 ಕೆಜಿಯಂತೆ 3 ತಿಂಗಳಿಗೆ ಸುಮಾರು 10 ಕೆಜಿಯಶ್ಟು ಕಡಿಮೆ ತೂಗಿದೆ. ಮನೆಯಲ್ಲಿ ಈ ವಿಸ್ಮಯಕ್ಕೆ ತಲೆದೂಗಿದರು. ‘ಅಲೇ ಹೌದಲ್ಲಾ? ಇನ್ನು ಸಾಕಪ್ಪ, ಬರೀ ಕುತ್ತಿಗೇನೆ ಕಾಣುತ್ತಿದೆ ನೋಡು, ಸಾಕಿನ್ನು’ ಅಂತ ಹೊಸ ವರಾತ ತಗೆದರು. ನಾನಿನ್ನೂ 10 ಕೆಜಿ ಕಡಿಮೆಯಾಗಬೇಕಿತ್ತು. ಆದರೆ ಇದನ್ನು ಹೇಳಿದರೆ ಎದೆ ಹೊಡೆದುಕೊಂಡಾರೆಂದು ಹೆದರಿ ‘ಆಯಿತು ಇನ್ನೂ ಸ್ವಲ್ಪ ದಿನಾ ಮಾತ್ರ’ ಅಂತೇಳಿ ಸಮಜಾಯಿಸಿದೆ.

ಕೆಲವರು ಮಾತ್ರ ಈ ಬದಲಾವಣೆ ಗುರುತಿಸಿ ಸ್ವಲ್ಪ ಸೊರಗೀಯಲ್ಲ ಅಂತ ಅಂದಾಗ ಅತೀವ ಆನಂದ ಅನುಬವಕ್ಕೆ ಬರುತ್ತಿತ್ತು. ಆದರೆ ಬಹುತೇಕರು ದಿನವೂ ನನ್ನ ನೋಡುತ್ತಿದ್ದರಿಂದ ಅಶ್ಟೇನೂ ಬದಲಾವಣೆಯನ್ನು ಗಮನಿಸಲಿಲ್ಲ. ಅವರೂ ಏನನ್ನೂ ಹೇಳಲಿಲ್ಲಎಂಬ ಹಳಹಳಿ ಮನದಲ್ಲೇ ಉಳಿಯುತ್ತಿತ್ತು. ಯಾರು ಹೇಳಲಿ ಬಿಡಲಿ, ನನ್ನ ಡಿಜಿಟಲ್ ತೂಕದ ಮಶಿನ್ ಅಂತೂ ಸುಳ್ಳು ಹೇಳೋಕೆ ಸಾದ್ಯವಿಲ್ಲವಲ್ಲ ಅಂತ ಸಮಾದಾನ ಪಟ್ಟುಕೊಳ್ಳುತ್ತಿದ್ದೆ. ಅದರ ಮೇಲೂ ಅನುಮಾನ ಬಂದು ಬೇರೆ ಮಶಿನ್ ಜೊತೆ ಕ್ರಾಸ್ ಚೆಕ್ ಮಾಡಿಕೊಂಡು ನಿಟ್ಟುಸಿರು ಬಿಡುತ್ತಿದ್ದೆ. ಯಾವಾಗ ಹಳೆಯ ಪೋಟೋಗಳ ಜೊತೆ ಹೋಲಿಕೆ ಮಾಡೋಕೆ ಶುರು ಮಾಡಿದೆನೋ ಇನ್ನೂ ಆಸಕ್ತಿ ಹೆಚ್ಚಾಯಿತು. ಇನ್ನೂ ಹೆಚ್ಚುಹೆಚ್ಚಾಗಿ ಡಯಟ್ ಗೆ ಅಂಟಿಕೊಂಡೆ. ಪರಿಣಾಮವೂ ಸಿಗುತ್ತಾ ಹೋಯಿತು.

ಕೊನೆಗೂ ಆ ದಿನ ಬಂತು. ಸತತ 6 ತಿಂಗಳ ನಂತರ ನನ್ನ ತೂಕ ಸರಿಸುಮಾರು 15 ಕೆಜಿಯಶ್ಟು ಕಡಿಮೆಗೊಂಡು ದೇಹ ಮಟ್ಟಸವಾಗಿ, ಮನಸು ಗಟ್ಟಿಯಾಗಿ ಎಲ್ಲವೂ ತಹಬದಿಗೆ ಬಂದಿತ್ತು. ಮನೆಯಲ್ಲಿ ಎಲ್ಲರೂ ಒಳಗೊಳಗೆ ಕುಶಿಯಾಗಿದ್ದರೂ ತೋರಿಸಿಕೊಡುತ್ತಿರಲಿಲ್ಲ. ನನ್ನಾಕೆಯ ಗಮನ ನನಗಿಂತ ಪದೇ ಪದೇ ನನ್ನ ಮೊಬೈಲ್ ಕಡೆಗೆ ಜಾಸ್ತಿ ಹರಿಯತೊಡಗಿತು. ನಾನು ಯಾವ ಪೋಟೋವನ್ನ ಯಾರಿಗೆ ಕಳಿಸಿ ‘ಹೇಗಿದ್ದೆ ಹೇಗಾದೆ ನೋಡು’ ಅಂತ ಪ್ರಶ್ನಿಸಿದೇನೆ? ಅವರೇನು ಉತ್ತರಿಸಿದ್ದಾರೆ? ಅನ್ನೋದನ್ನ ತಿಳ್ಕೊಳ್ಳೋದೇ ಅವಳಿಗೆ ಡಿಟೆಕ್ಟಿವ್ ಕೆಲಸವಾಗೋಯ್ತು. ಪದೇ ಪದೇ ಬೈಯ್ದು ಕೊನೆಗೆ ಅವಳೂ ಸುಮ್ಮನಾದಳು.

ಹೀಗೆ ಕುಳಿತಿದ್ದಾಗ ಪೋನಿನಲ್ಲಿ ಸಣ್ಣದೊಂದು ಬೀಪ್ ಸೌಂಡ್ ಬಂತು. ಮೇಸೆಜನ್ನು ಮುದ್ದಾದ ಗೆಳತಿಯೊಬ್ಬಳು ಕಳಿಸಿದ್ದಳು, ‘ಮೊದಲಿಗಿಂತಲೂ ತೂಕ ಕಡಿಮೆಯಾಗಿ ಸ್ಲಿಮ್ ಆಗೇ ಕಾಣ್ತಿದಿಯಾ ನಿಜ, ಆದರೆ ಆಗಿನ ನಿನ್ನ ಚಾರ‍್ಮ್ ಬೇರೆನೇ ಇತ್ತು. ಈಗ ಸಪ್ಪೆಯಾಗಿ ಕಾಣ್ತಿದೀಯಾ. ಬೇಜಾರು ಮಾಡ್ಕೋಬೇಡ ಆಯ್ತಾ?’. ಏನಂತ ರಿಪ್ಲೆ ಮಾಡಬೇಕೋ ಗೊತ್ತಾಗಲಿಲ್ಲ. ಇನ್ನು ಒಂದು ಕೇಜಿ ತಾನಾಗೇ ಕಡಿಮೆಯಾದಂತಾಯಿತು!

(ಚಿತ್ರಸೆಲೆ: dailymail.co.uk )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ತುಂಬಾ ಚೆನ್ನಾಗಿದೆ ಬರಹ. ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ.

ಅನಿಸಿಕೆ ಬರೆಯಿರಿ: