ಬಾದಮಿ ಅಮವಾಸ್ಯೆ: ಚಬನೂರ ಅಮೋಗ ಸಿದ್ದನ ಹೇಳಿಕೆ

– ಚಂದ್ರಗೌಡ ಕುಲಕರ‍್ಣಿ.

(ಅಮೋಗ ಸಿದ್ದನ ಗುಡಿ)

ಕನ್ನಡ ನಾಡಿನ ಹಾಲುಮತ ಪರಂಪರೆಯಲ್ಲಿ ಮೂರು ಹರಿವುಗಳಿವೆ. ಶಾಂತ ಒಡೆಯರು, ಮಂಕ ಒಡೆಯರು ಮತ್ತು ಅಮೋಗ ಒಡೆಯರು. ಈ ಮೂರು ಹರಿವುಗಳ ಮೂಲ ವಿಜಯಪುರ ಜಿಲ್ಲೆ. ವಿಜಯಪುರ ತಾಲೂಕಿನ ಅರಕೇರಿ (ಮಮ್ಮಟಗುಡ್ಡ) ಅಮೋಗಿ ಸಿದ್ದನ ಸಾದನಾ ತಾಣ. ಈ ಪರಂಪರೆ ಅರಕೇರಿ, ಬೀವರಗಿ, ಬಂಡಾರಕವಟೆ, ಕಲ್ಲೂರ, ಕುಂಚನೂರ, ತೆರೆವಾಡ, ಕರಾಜಗಿ, ಉಮದಿ ಮುಂತಾದ ಊರುಗಳ ಜೊತೆ ಚಬನೂರ ಸಹ ಅಮೋಗಿ ಸಿದ್ದನ ಆಚರಣೆಯಿಂದ ಪ್ರಸಿದ್ದಿ ಪಡೆದಿದೆ.

ಪೌರಾಣಿಕ ಹಿನ್ನೆಲೆ :

  • ಪಾರ‍್ವತಿ ತನ್ನ ಬೆವರಿನಿಂದ ರೂಪಿಸಿದ ಬಾಲಕ ಶಿವನಿಗೆ ಮನೆ ಒಳಗೆ ಬಿಡದಿದ್ದಾಗ ಶಿವ ಬಾಲಕನ ರುಂಡವನ್ನು ಕತ್ತರಿಸಿದ, ರುಂಡ ಕಂಟಿಯ ಬುಡದಲ್ಲಿ ಬಿತ್ತು. ಅದನ್ನು ಕುರುಬರವ ಪೂಜಿಸಿದ. ಪಾರ‍್ವತಿಯ ಬೇಡಿಕೆಯಂತೆ ರುಂಡಕ್ಕೆ ಜೇವ ಕೊಟ್ಟ. ಅವನೇ ಬೆಳೆದು ಅನೇಕ ಸಾದನೆಗಳನ್ನು ಮಾಡಿ ಸಿದ್ದನಾದ. ಆಮೋಗ ಸಿದ್ದನಾದ. ಹೀಗೆ ಅಮೋಗ ಸಿದ್ದ ಹೆಸರು ಬಂತು.
  • ಶಿವ ಕುರುಬರ ಹಾಲಿನ ಗಡಿಗೆಯಲ್ಲಿ ಲಿಂಗವಿಟ್ಟ. ಆ ಲಿಂಗವೇ ಬೆಳೆದು ಸಿದ್ದನಾದ.

ಇತ್ತೀಚಿನ ಸಂಶೋದನೆ ಅಮೋಗ ಸಿದ್ದ 16ನೆಯ ಶತಮಾನದಲ್ಲಿ ಬದುಕಿದ್ದ ಎಂದು ಹೇಳುತ್ತದೆ. ಈ ಆಚರಣೆಯಲ್ಲಿ ಆದಿಮ ಕಾಲದ ಕೆಲ ಪಳೆಯುಳಿಕೆಗಳು ಹರಿದು ಬಂದಿರುವುದು ಗೊತ್ತಾಗುತ್ತದೆ.

ಹೇಳಿಕೆ :

ಬಸವನ ಬಾಗೇವಾಡಿ ತಾಲೂಕಿನ ಚಬನೂರಿನಲ್ಲಿ ಪ್ರತಿ ವರ‍್ಶ ಬಾದಮಿ ಅಮವಾಸ್ಯೆಯಂದು ನಸುಕಿನ 4.30 ರ ವೇಳೆಗೆ ನಡೆಯುವ ಹೇಳಿಕೆ ರೈತರಿಗೆ ಆ ವರ‍್ಶದ ಆಗುವಿಕೆಯನ್ನು ಸಾರುತ್ತದೆ. ಮುಕವಾಡ ದರಿಸಿದ ಒಡೆಯ ಡೊಳ್ಳಿನ ಮೇಲೆ ಹತ್ತಿದ ಗಳಿಗೆಯಲ್ಲಿ ಇಡೀ ಜನಸಮೂಹ ನಿಶ್ಯಬ್ದ ವಾಗುತ್ತದೆ.

ನೊರೆ ಹಾಲಿನಂತ ಮನಸಿದ್ದವಗ ಬೆಳ್ಳಿತೊಟ್ಟಾಲದಾಗ ತೂಗಿನಲೆ,
ಮುಂಗಾರಿ ಮುತ್ತಾಗಿ ಹೋಯಿತದ,
ಹಿಂಗಾರಿ 99 ಪೈಸಾ ಕೊಟ್ಟಿನಲೆ. ( 2006)

ಆಡುವ ಕಂದನ್ನ ಕಡ್ಯಾಕ ಮಾಡಿನಲೆ ನೀವು ಬಲು ಎಚ್ಚರ,
ಮುಂಗಾರಿ ಮುತ್ತಾಗಿ ಹೋಯಿತದ, 
ಹಿಂಗಾರಿ ತುತ್ತ ಸಂದಿ ಹುಡುಕ್ಯಾರಲೆ. (1990)

ಈ ಹೇಳಿಕೆಗಳಲ್ಲಿ ಮೂರು ಅಂಶಗಳಿವೆ.

  • ಲೋಕದ ಜನರಿಗೆ ಕೊಡುವ ಎಚ್ಚರಿಕೆ.
  • ಮುಂಗಾರಿ ಮಳೆ-ಬೆಳೆ ಬಗೆಗೆ.
  • ಹಿಂಗಾರಿ ಮಳೆ-ಬೆಳೆ ಬಗೆಗೆ.

1. ಹಾಲಿನಂತಹ ಮನಸಿದ್ದವ ಸುಕವಾಗಿ ಬಾಳುವನು. ಮುಂಗಾರಿ ಮುತ್ತಿನಂತೆ ಬೆಳೆಯುತ್ತದೆ. ಹಿಂಗಾರಿ ಮಳೆ-ಬೆಳೆ 99 ಪೈಸೆ.

2. ಆಡುವ ಮಕ್ಕಳಿಗೆ ಬರುವ ರೋಗವನ್ನು ದೂರ ಮಾಡಿರುವೆ. ಎಚ್ಚರದ ನಡೆ ಅಗತ್ಯ. ಮುಂಗಾರಿ ಬೆಳೆ ಮುತ್ತಿನ ಹಾಗೆ ಹುಲುಸಾಗುತ್ತದೆ. ಬೆಳೆಗೆ ಮುತ್ತಿನ ಬೆಲೆ. ಹಿಂಗಾರಿ ತುತ್ತು ಕೂಳಿಗೂ ಸಂದಿ ಸಂದಿ ಹುಡುಕ ಬೇಕಾಗುತ್ತದೆ.

ಒಮ್ಮೊಮ್ಮೆ ಈ ಹೇಳಿಕೆಗಳಿಗೆ ಮತ್ತೊಂದು ರೀತಿಯ ಅರ‍್ತವನ್ನೂ ಹೇಳಲಾಗುತ್ತದೆ. ಒಗಟು ಬೆಡಗುಗಳಿಂದ ಕೂಡಿದ ಈ ಹೇಳಿಕೆಗಳಿಗೆ ಸಾಹಿತ್ಯದ ಸೊಗಸು, ಸೊಗಡು ಇರುತ್ತದೆ.

ಅಲೆಮಾರಿಯಾದ ಕುರಿ ಸಾಕುವ ಈ ಜನ ವರುಶಕ್ಕೊಮ್ಮೆ ಸೇರಿ ಅಮೋಗಿ ಸಿದ್ದನ ಪೂಜಿಸುವ, ಹರಕೆ ತೀರಿಸುವ, ಪ್ರಸಾದ ಹಂಚುವ ಆಚರಣೆ ಬಹಳ ಪುರಾತನ ಎನಿಸುತ್ತದೆ.

ಸುಂಕದ ಜೋಳವನ್ನೆ ಕುಟ್ಟಿ ಕಟಾಂಬಲಿಯನ್ನು ಹೊಸ ಹರವಿಗಳಲ್ಲಿಯೆ (ದೊಡ್ಡ ಮಡಿಕೆ) ತಯಾರಿಸುವುದು, ಅಡವಿಯಲ್ಲಿ ಸಿಗುವ ದನಗಳ ಶಗಣಿಯ ಕುಳ್ಳುಗಳನ್ನೆ ಉರುವಲಾಗಿ ಬಳಸುವುದು, ಕೈ ಚಕ್ಕಳಿ ಜೊತೆ ಈರುಳ್ಳಿ ಕೊಡುವುದು, ಕೈಯಳಿಯೇ ಪ್ರಸಾದ ಹಂಚುವುದು ಮುಂತಾದ ನಮ್ಮ ಆದಿಮ ಕಾಲದ ಪಳೆಯುಳಿಕೆಗಳಾಗಿವೆ. ಅಮೋಗ ಸಿದ್ದ 16 ನೆಯ ಶತಮಾನದವನಾದರೂ ಈ ಜಾತ್ರೆಗಳಲ್ಲಿಯ ಆಚರಣೆ, ಬಳಸುವ ವಸ್ತುಗಳು ಬಹು ಪುರಾತನವಾದ ನೆಲೆ ಪಡೆದಿವೆಯೆಂಬುದು ಮನದಟ್ಟಾಗುತ್ತದೆ.

ಹೋಮದ ಕಂಬಳಿ ಬೀಸಿ ಮಳೆ ತರಿಸುವ ಸಿದ್ದಿ ಅಮೋಗ ಸಿದ್ದನಿಗೆ ಇತ್ತಂತೆ. ಹಾಲುಮತದ ಒಡೆಯನಾದ ಸಿದ್ದನಿಗೆ ಕುರಿಗಳ ಉಣ್ಣೆಯಿಂದ ಮಾಡಿದ ಕಂಬಳಿಯೆ ಗದ್ದುಗೆ, ಹಾಸಿಗೆ, ಹೊದಿಕೆ, ಉಡುಪು ಮತ್ತು ಅಮರ ಮಡಿ ವಸ್ತ್ರ. ಕುರಿಕಾಯಲು ಬೇಕಾದ ಬದಿಗೆಯೆ ಉದಾತ್ತೀಕರಣಗೊಂಡು ನೇಮದ ಬೆತ್ತವಾಗುತ್ತದೆ. ಹೂ ತರಲು ಹೋಗುವ ವ್ಯಕ್ತಿ ದಾರಿಯಲ್ಲಿ ಕಂಡ, ಪಡೆದ ವಸ್ತುಗಳು ಹೇಳಿಕೆಗೆ ಆದಾರವಾಗುತ್ತವೆ. ಕೆಲೆವೊಮ್ಮೆ ರೂಪಕಗಳೂ ಆಗುತ್ತವೆ.

ಈ ಪೌರಾಣಿಕ ಹಿನ್ನೆಲೆಯಲ್ಲಿ ಬರುವ ಕತೆ ಗಣಪತಿ ಪರಂಪರೆಯ ಜೊತೆ ಮತ್ತೊಂದು ಪರಂಪರೆ ತೋಂಡಿ ( ಮೌಕಿಕ ) ರೂಪದಲ್ಲಿ ಬೆಳೆದು ಬಂದ ಹೊಸ ಸಂಗತಿಯನ್ನು ಹೇಳುತ್ತದೆ. ಗಣಪತಿ ಕತೆಯಲ್ಲಿ ತುಂಡಾದ ರುಂಡ ಏನಾಯಿತು ಎಂಬುದಕ್ಕೆ ಉತ್ತರವಿಲ್ಲ. ಆದರೆ ಈ ಕತೆಯಲ್ಲಿ ನಮಗೆ ಉತ್ತರ ದೊರೆಯುತ್ತದೆ.

ಹೀಗೆ ಇನ್ನೂ ಅನೇಕ ಆದಿಮ ಬದುಕಿನ ಬೀಜಗಳನ್ನು ತನ್ನಲ್ಲಿ ಹುದುಗಿಸಿಕೊಂಡ ಈ ಪರಂಪರೆ ಒಂದು ಹೊಸ ನೋಟವನ್ನೇ ನೀಡುತ್ತದೆ. ಜನಪದ ಜೀವನದ ಅನೇಕ ಮಜಲುಗಳು ನಮ್ಮ ಆಚರಣೆಯಲ್ಲಿವೆ. ಇವುಗಳನ್ನು ಇನ್ನೂ ಜೀವಂತವಾಗಿರಿಸಿಕೊಂಡ ನಮ್ಮ ಜನಪದರನ್ನು ಅಬಿನಂದಿಸಲೇಬೇಕು.

(ಚಿತ್ರ ಸೆಲೆ: ಬರಹಗಾರರ ಆಯ್ಕೆ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sahebagouda says:

    ಅಮೋಗ ಸಿದ್ಧನನ್ನು ಅಮೋಘರೀತಿ ಪರಿಚಯಿಸಿದ್ದಿರಿ ಸರ್.ಹಲವಾರು ವಿಷಯಗಳು ಈ ಲೇಖನದಿಂದ ತಿಳಿಯಿತು ಸರ್.
    ನಮ್ಮ ದೊಡ್ಡಮ್ಮನ ಊರು ಚಬನೂರ ಸರ್. ನಾನು ಸಣ್ಣವನಿದ್ದಾಗ ಒಂದ ಸಲೆ ಜಾತ್ರಿಗಿ ಹೋಗಿ ಅಂಬಲಿ ಉಂಡ ನೆನಪೈತ್ರಿ ಸರ್.

ಅನಿಸಿಕೆ ಬರೆಯಿರಿ:

Enable Notifications