‘ಇಲ್ಹಾ ಡ ಕ್ವಿಮಾಡ ಗ್ರಾಂಡೇ’ ಎಂಬ ಹಾವಿನ ದ್ವೀಪ

– ಕೆ.ವಿ.ಶಶಿದರ.

ವಾಸ್ತವವಾಗಿ ಇನ್ನೂ ಮಾನವನಿಂದ ಮುಟ್ಟಲು ಅಸಾದ್ಯವಾದ ದ್ವೀಪ ಇಲ್ಹಾ ಡ ಕ್ವಿಮಾಡ ಗ್ರಾಂಡೇ. ಇದು ವಿಶ್ವದಾದ್ಯಂತ ಹೆಸರುವಾಸಿಯಾಗಿರುವುದು ಹಾವಿನ ದ್ವೀಪವೆಂದು. ಬ್ರೆಜಿಲ್‍ನ ಸಾವೋ ಪೌಲೋದಿಂದ ಕೇವಲ 21 ಕಿಲೋಮೀಟರ್ ದೂರದಲ್ಲಿರುವ ದ್ವೀಪ ಇದು.

110 ಎಕರೆಗಳಶ್ಟು ವಿಸ್ತೀರ‍್ಣ ಹೊಂದಿರುವ ಈ ದ್ವೀಪ 4,30,000 ಕ್ಕೂ ಹೆಚ್ಚಿನ ವಿಶಪೂರಿತ ಹಾವುಗಳ ಮನೆಯಾಗಿದೆ. ಈ ದ್ವೀಪದ ಗಾತ್ರಕ್ಕೆ ಹೋಲಿಸಿದರೆ ವಿಶಯುಕ್ತ ಹಾವಿನ ಸಂಕ್ಯೆ ಅತ್ಯಾದಿಕ. ಪ್ರತಿ ಚದರ ಮೀಟರ್‍ಗೆ ಕನಿಶ್ಟ ಒಂದರಂತೆ. ಯಾರಾದರೂ ಈ ದ್ವೀಪದ ಒಳ ಹೊಕ್ಕು ಉಳಿಯಬೇಕಾದರೆ ಅವರ ಪ್ರತಿ ಹೆಜ್ಜೆಯೂ ಸಾವಿನ ಸಮೀಪದಲ್ಲಿರುತ್ತೆ. ಹಾವಿನ ಹೆಡೆಯ ಮೇಲೆಯೇ ಹೆಜ್ಜೆ ಇಡಬೇಕಾಗಬಹುದು, ಮಹಾವಿಶ್ಣುವಿನಂತೆ ಹಾವಿನ ಪಲ್ಲಂಗದ ಮೇಲೇ ಮಲಗಬೇಕಾಗಬಹುದು!

ಇಲ್ಹಾ ಡ ಕ್ವಿಮಾಡ ಗ್ರಾಂಡೇ ದ್ವೀಪವು ಮೊದಲು ಮುಕ್ಯ ಬೂಬಾಗದೊಂದಿಗೆ ಸಂಪರ‍್ಕ ಹೊಂದಿತ್ತಂತೆ. ಸಮುದ್ರ ಮಟ್ಟ ಏರುಮುಕವಾದ ಹಿನ್ನಲೆಯಲ್ಲಿ ಈ ಬಾಗವು ಮುಕ್ಯ ಬೂಬಾಗದಿಂದ ಸಂಪರ‍್ಕ ಕಡಿದುಕೊಂಡು ಪ್ರತ್ಯೇಕ ದ್ವೀಪವಾಯಿತು. ಹೊಸಹೊಸ ಜಾತಿಯ ಸರ‍್ಪಗಳ ವಿಕಸನಕ್ಕೆ ಈ ದ್ವೀಪ ನಾಂದಿಯಾಯಿತು ಎನ್ನಲಾಗಿದೆ. ಈ ದ್ವೀಪದಲ್ಲಿರುವ ಹಾವುಗಳಲ್ಲಿ ಹೆಚ್ಚಿನವು ವಿಶಪೂರಿತ. 2000 ದಿಂದ 4000 ಜಾತಿಯ ಹಾವುಗಳನ್ನು ಈ ದ್ವೀಪದಲ್ಲಿ ಗುರುತಿಸಲಾಗಿದೆ. ಗೋಲ್ಡನ್ ಲ್ಯಾನ್ಸ್ ಹೆಡ್ ಎಂದು ಸಾಮಾನ್ಯವಾಗಿ ಗುರುತಿಸಲ್ಪಡುವ ಬತ್ರೋಪ್ಸ್ ಇಸ್ನಸುಲಾರಿಸ್ ಎಂಬ ಜಾತಿಯ ಹಾವಿನ ವಿಶ ಅತಿಗೋರ. ಈ ಹಾವಿನ ಗರಿಶ್ಟ ಉದ್ದ ಅಂದಾಜು ನಾಲ್ಕು ಅಡಿ. ಗೋಲ್ಡನ್ ಲ್ಯಾನ್ಸ್ ಹೆಡ್‍ನ ಸಂಕ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣ ವಿನಾಶದ ಅಂಚಿನಲ್ಲಿರುವ ಹಾವಿನ ಜಾತಿಯೆಂದು ಇದನ್ನು ಕಾಪಾಡಲಾಗುತ್ತಿದೆ.

ಬೂಮಿಯ ಮೇಲೆ ಇರುವ ಹಾವುಗಳಲ್ಲಿ ಗೋಲ್ಡನ್ ಲ್ಯಾನ್ಸ್ ಹೆಡ್ ಅತ್ಯಂತ ವಿಶಕಾರಿ ಹಾವು. ಇಲ್ಹಾ ಡ ಕ್ವಿಮಾಡ ಗ್ರಾಂಡೇ ದ್ವೀಪದಲ್ಲಿರುವ ಈ ಹಾವಿನ ವಿಶ ಮುಕ್ಯ ಬೂಬಾಗದಲ್ಲಿರುವ ಇದೇ ಜಾತಿಯ ಹಾವಿನ ವಿಶಕ್ಕಿಂತ ಬಿನ್ನ. ಹಾವಿನ ತಜ್ನರ ಅಬಿಪ್ರಾಯದಂತೆ ಇದರ ವಿಶ ನಾಲ್ಕೈದು ಪಟ್ಟು ಹೆಚ್ಚಿದೆ. ಈ ಬಯಂಕರ ಮಾರಣಾಂತಿಕ ವಿಶವು ದೇಹವನ್ನು ಹೊಕ್ಕಲ್ಲಿ ಚರ‍್ಮ ಮತ್ತು ಮಾಂಸವನ್ನು ಕರಗಿಸಿಬಿಡುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ.

ಬ್ರೆಜಿಲ್‍ನಲ್ಲಿ ಅನೇಕ ನೋಡುವಂತಹ ಜಾಗಗಳಿವೆ. ರಿಯೋ, ಸಾವೋ ಪೌಲೋ ಮುಂತಾದ ನಗರಗಳಲ್ಲಿ ಆಯೋಜಿಸಲ್ಪಡುವ ಸಾಂಪ್ರಾದಾಯಿಕ ಉತ್ಸವಗಳು ಜಗತ್ತಿನಾದ್ಯಂತ ತನ್ನದೇ ಆದ ಚಾಪನ್ನು ಮೂಡಿಸಿದೆ. ಇವುಗಳನ್ನು ನೋಡಲು ಜನ ಮುಗಿಬೀಳುತ್ತಾರೆ. ಇಲ್ಹಾ ಡ ಕ್ವಿಮಾಡ ಗ್ರಾಂಡೇ ದ್ವೀಪ ಕೂಡ ಬಹಳ ಸುಂದರವಾದ ಸುತ್ತಾಟದ ಜಾಗ. ಆದರೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಕಾಣಸಿಗುವ ಮಾರಣಾಂತಿಕ ಹಾವುಗಳಿಂದ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಸಾರ‍್ವಜನಿಕರ ಹಿತ ದ್ರುಶ್ಟಿಯಿಂದ ಬ್ರೆಜಿಲ್ ಸರ‍್ಕಾರವು ಈ ದ್ವೀಪಕ್ಕೆ ಮಂದಿ ಹೋಗುವುದನ್ನು ತಡೆಹಿಡಿದಿದೆ.

ಈ ದ್ವೀಪದಲ್ಲಿರುವ ಸ್ವಯಂಚಾಲಿತ ಲೈಟ್ ಹೌಸನ್ನು ನೌಕಾಪಡೆಯು ನೋಡಿಕೊಳ್ಳುವುದು. ಹಾಗಾಗಿ ನಿರ‍್ವಹಣಾ ಸಿಬ್ಬಂದಿಗೆ ಹಾಗೂ ಪರಿಸರದ ಏರ‍್ಪಾಟನ್ನು ಅದ್ಯಯನ ಮಾಡುವ ಸಂಶೋದಕರಿಗೆ ಸರ‍್ಕಾರ ವಿಶೇಶ ಪರವಾನಗಿಯನ್ನು ನೀಡುತ್ತದೆ. ಅವರುಗಳಿಗೆ ಮಾತ್ರ ಈ ದ್ವೀಪದೊಳಗೆ ಹೋಗಲು ಅನುಮತಿ ಇದೆ.

(ಮಾಹಿತಿ ಸೆಲೆ: smithsonianmag.com, atlasobscura.com, dailymail.co.uk, wiki)
(ಚಿತ್ರ ಸೆಲೆ:  smithsonianmag.comamusingplanet.com, wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: