ಅರೂಬಾದಲ್ಲೊಂದು ಕತ್ತೆಗಳ ಆಶ್ರಯ ತಾಣ!

– ಕೆ.ವಿ.ಶಶಿದರ.

ಹುಲಿ, ಸಿಂಹ, ಆನೆಯಂತಹ ಪ್ರಾಣಿಗಳ ಸಂತತಿ ಇಳಿಯುತ್ತಿರುವುದನ್ನು ತಡೆಗಟ್ಟಲು ವಿಶ್ವದ ಉದ್ದಗಲಕ್ಕೂ ಅಬಯಾರಣ್ಯ ಹಾಗೂ ಪಕ್ಶಿ ಸಂಕುಲಗಳನ್ನು ಕಾಪಾಡಲು ಪಕ್ಶಿದಾಮ ಹಬ್ಬಿರುವ ಬಗ್ಗೆ ಕೇಳಿದ್ದೇವೆ. ಹಸು, ಎಮ್ಮೆ, ಕತ್ತೆ, ಕುದುರೆ, ನಾಯಿ, ಹಂದಿ, ಕೋಳಿಗಳು ಸಾಕುಪ್ರಾಣಿಗಳಾದ ಕಾರಣ ಜನಸಾಮಾನ್ಯರೊಂದಿಗೆ ಬೆರೆತು ಸಹಬಾಳ್ವೆ ನಡೆಸುತ್ತಿವೆ. ಇಂತಹ ಸಾಕುಪ್ರಾಣಿಗಳಲ್ಲಿ ಒಂದಾದ ಕತ್ತೆಗೂ ಆಶ್ರಯ ತಾಣವೊಂದು (Sanctuary) ಮೀಸಲಾಗಿದೆ ಎಂದರೆ ಸೋಜಿಗವಲ್ಲವೆ? ಹೌದು ದಕ್ಶಿಣ ಕೆರೆಬಿಯನ್ ಸಮುದ್ರದಲ್ಲಿನ ನೆದರ್‍ಲ್ಯಾಂಡ್ ಸಾಮ್ರಾಜ್ಯದ ಒಂದು ಬಾಗವಾದ ಅರೂಬಾ ದ್ವೀಪದಲ್ಲಿ ಕತ್ತೆಗಳಿಗಾಗಿಯೇ ಆಶ್ರಯ ತಾಣವೊಂದು ತಲೆಯೆತ್ತಿದೆ.

ಕಲೋನಿಯಲ್ ಯುಗದಲ್ಲಿ ಕತ್ತೆಗಳು ಅರೂಬಾ ದ್ವೀಪವನ್ನು ಪ್ರವೇಶಿಸಿದವು. ಅರೂಬಾದ ಸ್ತಳೀಯರು ಕತ್ತೆಗಳನ್ನು ‘ಬುರಿಕೊ’ ಎನ್ನುತ್ತಾರೆ. ಕಳೆದ 500 ವರ‍್ಶಗಳ ಕಾಲ ಕತ್ತೆಗಳು ಬಾರ ಹೊರುವ ಕೆಲಸಕ್ಕೆ ಮೀಸಲಾಗಿತ್ತು. ವೈಯುಕ್ತಿಕ ಸಾರಿಗೆಗೆ ಮಾತ್ರವಲ್ಲದೆ ಸರಕು ಸಾಗಾಣಿಕೆಗೂ ಇವುಗಳನ್ನು ಅವಲಂಬಿಸಿದ್ದರು. ಮೊದಮೊದಲ ದಿನಗಳಲ್ಲಿ ಸುಮಾರು 1500 ಕತ್ತೆಗಳು ಆ ದ್ವೀಪದಲ್ಲಿದ್ದವು. ಅಂದಿನ ದಿನದಲ್ಲಿ ಅರೂಬಾದ ಆರ‍್ತಿಕತೆಗೆ ಇವುಗಳ ಕೊಡುಗೆ ಅಪಾರ.

ಅರೂಬಾದಲ್ಲಿ ಕತ್ತೆಗಳ ಆಶ್ರಯ ತಾಣ ಹುಟ್ಟಿದ್ದಾದರೂ ಏಕೆ?

ಸಮಯ ಸಾಗಿದಂತೆ ಸಾರಿಗೆ ಏರ‍್ಪಾಟಿನಲ್ಲಿ ಹೊಸ ಹೊಸ ಅವಿಶ್ಕಾರಗಳಾಗಿ ಬೈಸಿಕಲ್ಲು, ಮೋಟಾರ್ ಬೈಸಿಕಲ್ಲು, ಕಾರು, ವ್ಯಾನುಗಳು ಬುರಿಕೊದ ಜಾಗವನ್ನು ಆಕ್ರಮಿಸಿಕೊಂಡಿತು. ತ್ವರಿತ ಸಾರಿಗೆ ಬಂದ ನಂತರ ಕತ್ತೆಗಳ ಮೇಲಿನ ಅವಲಂಬನೆ ಸಂಪೂರ‍್ಣವಾಗಿ ನಿಂತಿತು. ಮಾನವನ ಕೆಟ್ಟ ಬುದ್ದಿಗೆ ಬಲಿಪಶುವಾದ ಕತ್ತೆಗಳು ಬೀಡಾಡಿಗಳಾದವು. ಕತ್ತೆಗಳ ಮಾಲೀಕರು ಅವುಗಳನ್ನು ಹೇಗೆ ಬೇಕೋ ಹಾಗೆ ಇರಲು ಬಿಟ್ಟು ಬಿಟ್ಟರು. ಗೊತ್ತು ಗುರಿಯಿಲ್ಲದೆ, ದಿನನಿತ್ಯ ಗಾಡಿಗಳನ್ನು ಎಳೆದುಕೊಂಡು ಓಡಾಡುತ್ತಿದ್ದ ದಾರಿಯಲ್ಲೆಲ್ಲಾ ಅಲೆದಾಡಿ, ನೆಲೆಯಾಗಲು ನಿರ‍್ದಿಶ್ಟ ಜಾಗವಿಲ್ಲದೆ ನಿರಾಶ್ರಿತವಾದವು. ಊಟ ಮತ್ತು ನೀರಿನ ಹುಡುಕಾಟಕ್ಕಾಗಿ ಎಲ್ಲಂದರಲ್ಲಿ ತಿರುಗಾಡಿದವು. ಬೀಡಾಡಿಗಳಾದ ಕಾರಣ ಜನರ ಅಪನಿಂದನೆಗೂ ಒಳಗಾದವು. ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಬಲಿಯಾದ ಕತ್ತೆಗಳೆಶ್ಟೋ ಬಲ್ಲವರಿಲ್ಲ.

70ರ ದಶಕದ ಆದಿಯಲ್ಲಿ ಇಡೀ ದ್ವೀಪದಲ್ಲಿ ಇದ್ದದ್ದು ಕೇವಲ 20 ಕತ್ತೆಗಳು ಮಾತ್ರ. ರೋಗರುಜಿನಗಳಿಗೆ ಹಲವಾರು ಕತ್ತೆಗಳು ಹಾಗೂ ಇತರೆ ಪ್ರಾಣಿಗಳು ಬಲಿಯಾಗಿ ಕಣ್ಮರೆಯಾದವು. 80ರ ದಶಕದ ಹೊತ್ತಿಗೆ ಕತ್ತೆಗಳು ಈ ದ್ವೀಪದಲ್ಲಿ ಅಳಿವಿನಂಚಿಗೆ ಬಂದು ನಿಂತವು. ಕತ್ತೆಯ ಬಗ್ಗೆ ಸಹಾನುಬೂತಿ ಹೊಂದಿದ್ದವರು ಸರ‍್ಕಾರದ ಗಮನವನ್ನು ಸೆಳೆಯಲಾಗಿ, ಸರ‍್ಕಾರ ಇದನ್ನು ತೀವ್ರವಾಗಿ ಪರಿಗಣಿಸಿ ಪ್ರಾಣಿಯನ್ನು ಕಾಪಾಡಲು ಕಾನೂನೊಂದನ್ನು ರೂಪಿಸಿತು. ಇದರ ಪರಿಣಾಮವೇ ಕತ್ತೆಗಳಿಗಾಗಿ  ಆಶ್ರಯ ತಾಣ ಇಲ್ಲವೇ ಸಲಹುವ ನೆಲೆಯೊಂದನ್ನು ಸ್ತಾಪಿಸಲು ನೀಲಿನಕ್ಶೆ ತಯಾರಾಗಿದ್ದು.

ಕತ್ತೆಗಳು ಸುರಕ್ಶಿತವಾದ ಪರಿಸರದಲ್ಲಿ ಊಟ ಹಾಗೂ ನೀರಿಗೆ ಅಲೆದಾಡದೆ ನೆಮ್ಮದಿಯ ಜೀವನವನ್ನು ಕಳೆಯಲು ನೆಲೆಯನ್ನು ಹುಟ್ಟುಹಾಕುವ ಪರಿಕಲ್ಪನೆಗೆ ಮೂರ‍್ತರೂಪ ಬಂದಿದ್ದು 1997ರಲ್ಲಿ. ಆಗ ಪ್ರಾರಂಬವಾಗಿದ್ದೇ ಸಂಟಾ ಲೂಸಿಯಾದಲ್ಲಿನ ಕತ್ತೆಗಳ ಆಶ್ರಯ ತಾಣ. ಆಶ್ರಯ ತಾಣದಲ್ಲಿ ಅವುಗಳನ್ನು ಗುರುತಿಸಲು ಪ್ರತ್ಯೇಕ ಚಂದದ ಹೆಸರುಗಳನ್ನು ನೀಡಲಾಗಿದೆ. ಊಟ ನೀರು ಬೇಕಾದಶ್ಟು ದೊರಕುವ ಏರ‍್ಪಾಟಿನ ಜೊತೆಗೆ ಸುರಕ್ಶತೆಗಾಗಿ ವೈದ್ಯಕೀಯ ಆರೈಕೆ ಸಹ ಕಲ್ಪಿಸಲಾಗಿದೆ. ಇಲ್ಲಿನ ಸಿಬ್ಬಂದಿಯ ಅನನ್ಯ ಪ್ರೀತಿಯಿಂದ ಕತ್ತೆಗಳು ನಿರಾತಂಕ ತ್ರುಪ್ತಿಯ ಜೀವನ ಸಾಗಿಸಲು ಸಾದ್ಯವಾಗಿದೆ.

ಕತ್ತೆಗಳೊಂದಿಗೆ ಆಟವಾಡಿಕೊಂಡು ಇಲ್ಲಿ ಹೊತ್ತನ್ನು ಕಳೆಯಬಹುದು!

ನೋಡಲು ಬರುವ ಪ್ರವಾಸಿಗರು ಅರೂಬಾ ಆಶ್ರಯ ತಾಣವನ್ನು ಸಮೀಪಿಸುತ್ತಿದ್ದಂತೆ ಕತ್ತೆಗಳು ತಮ್ಮ ವಿಶಿಶ್ಟವಾದ ಅರಚುವಿಕೆಯ ಮೂಲಕ ಸ್ವಾಗತಿಸುತ್ತವೆ. ಕುತೂಹಲಬರಿತ ಕತ್ತೆಗಳು ಹೊಸಬರಿಗೆ ಶುಬಾಶಯವನ್ನು ಕೋರಲು ಮುನ್ನುಗ್ಗಿ, ಬಲಪ್ರಯೋಗದಿಂದ ಹಿಂಡಿನಿಂದ ಹೊರಬಂದು ಪ್ರವಾಸಿಗರ ಹತ್ತಿರ ಬಂದು ನಿಲ್ಲುತ್ತವೆ. ಕೆಲವೊಂದು ಕತ್ತೆಗಳು ಮುದ್ದು ಮುದ್ದಾಗಿ ಹೊಳೆಯುವ ಬೂದು ಬಣ್ಣದಲ್ಲಿ ಅಲಂಕ್ರುತವಾದಂತೆ ಕಂಡುಬರುವುದರ ಜೊತೆಗೆ, ಅವುಗಳ ನೀಳವಾದ ಸೊಗಸಾದ ಕಿವಿ ನೋಡುಗರ ಗಮನವನ್ನು ಸೆಳೆಯುವುದರಲ್ಲಿ ಸಪಲವಾಗುತ್ತವೆ.

ಸಂಟಾ ಲೂಸಿಯಾ ಆಶ್ರಯ ತಾಣವು ಪ್ರವಾಸಿಗರನ್ನು ಸ್ವಾಗತಿಸಿ ಅವರುಗಳಿಗೆ ಪೂರ‍್ಣ ಮಾಹಿತಿಯನ್ನು ನೀಡುವುದರೊಂದಿಗೆ ಇದರ ಸುತ್ತ ತಿರುಗಾಡಿಕೊಂಡು ಬರಲು ಬೇಕಾದ ಎಲ್ಲಾ ಏರ‍್ಪಾಡನ್ನು ಸಹ ಮಾಡುತ್ತದೆ. ನೋಡುಗರು ಕತ್ತೆಗಳಿಗೆ ಊಟವನ್ನು ನೀಡಲು ಇಲ್ಲಿ ಯಾವುದೇ ಅಬ್ಯಂತರವಿಲ್ಲ.ಇವುಗಳನ್ನು ನೇವರಿಸಿ ಪ್ರೀತಿಯನ್ನು ಸಹ ತೋರಲು ಅವಕಾಶವಿದೆ. ಮುದ್ದಾದ ಕತ್ತೆ ಮರಿಯನ್ನು ದತ್ತು ಪಡೆಯಲು ಬಯಸುವವರಿಗೆ ಇಲ್ಲಿ ಸೂಕ್ತ ವ್ಯವಸ್ತೆ ಮಾಡಲಾಗುವುದು.

ಪ್ರವಾಸಿಗರು ದಣಿವಾರಿಸಿಕೊಳ್ಳಲು ಹಾಗೂ ತಿಂಡಿ ಮತ್ತು ಉಪಹಾರಕ್ಕಾಗಿ ಪ್ರತ್ಯೇಕ ಸ್ತಳ ಇದೆ. ಇಲ್ಲಿ ಸ್ಮಾರಕಗಳ ಅಂಗಡಿಯಿದ್ದು ಅದರಲ್ಲಿ ಕತ್ತೆ ಮತ್ತು ಅದಕ್ಕೆ ಸಂಬಂದಿಸಿದ ವೈವಿದ್ಯಮಯ ವಸ್ತುಗಳು ಮಾರಾಟಕ್ಕಿವೆ. ಅವುಗಳನ್ನು ಕರೀದಿಸಿ ಉಡುಗೊರೆ ರೂಪದಲ್ಲಿ ನೀಡಲು ಸೊಗಸಾಗಿವೆ. ಸಂಟಾ ಲೂಸಿಯಾದಲ್ಲಿ ಬೆಳೆಯುತ್ತಿದ್ದ ಕತ್ತೆಗಳ ಸಂಕ್ಯೆಗೆ ಅಲ್ಲಿನ ಜಾಗವು ಚಿಕ್ಕದಾಗತೊಡಗಿತು. ಅದಕ್ಕಾಗಿ ಕತ್ತೆಗಳ ಆಶ್ರಯ ತಾಣವು ಬ್ರಿಂಗಾಮೋಸಾದಲ್ಲಿ ಹೆಚ್ಚು ವಿಸ್ತಾರವಾದ ಸ್ತಳವನ್ನು ಆಯ್ಕೆ ಮಾಡಿ ಅಲ್ಲಿಗೆ ಸ್ತಳಾಂತರಗೊಂಡಿದೆ. 130 ಕತ್ತೆಗಳು ಬ್ರಿಂಗಾಮೋಸಾದಲ್ಲಿ ಆಶ್ರಯ ಪಡೆದಿವೆ.

ಅರೂಬಾದಲ್ಲಿನ ಜನತೆಗೆ ಕತ್ತೆಯೇ ಅತ್ಯಂತ ದೊಡ್ಡ ಕಾಡು ಪ್ರಾಣಿ ಎಂಬ ನಂಬಿಕೆಯಿದೆ. ಅತ್ಯಂತ ಸಾದು ಹಾಗೂ ಸಾಕುಪ್ರಾಣಿಯಾದ ಇವು ಬೀಡಾಡಿಯಾದರೂ ಅದರಿಂದ ಯಾವುದೇ ಪ್ರಾಣಾಪಾಯ ಇಲ್ಲದೇ ಇರುವುದು ಅರೂಬಾ ಜನತೆಗೆ ನೆಮ್ಮದಿ ತಂದ ವಿಶಯ!

(ಮಾಹಿತಿ ಸೆಲೆ: arubandonkey.orgaruba.comatlasobscura.comcaribya.com)
(ಚಿತ್ರ ಸೆಲೆ: mightymac.org, aruba.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: