ಮರುಬಳಕೆಯಾಗಿ ಮಿನುಗುತ್ತಿರುವ ಹಳೆ ರೈಲ್ವೇ ನಿಲ್ದಾಣಗಳು!

– ಕೆ.ವಿ.ಶಶಿದರ.

ಈಗ್ಗೆ ಐವತ್ತು ವರ‍್ಶಗಳ ಹಿಂದೆ ರೈಲ್ವೆ ಪ್ರಯಾಣ ತುಂಬಾ ಮಂದಿಮೆಚ್ಚುಗೆ ಪಡೆದಿತ್ತು. ಸಮಾಜದ ಎಲ್ಲಾ ಸ್ತರಗಳ ಜನರ ಆಶೋತ್ತರಗಳನ್ನು ಬೇಕು ಬೇಡಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಂಚೂಣಿಯಲ್ಲಿತ್ತು. ಈಗ್ಗೆ ಹತ್ತಿಪ್ಪತ್ತು ವರ‍್ಶಗಳಿಂದೀಚೆಗೆ ಇನ್ನೂ ಹೆಚ್ಚಿನ ಐಶಾರಾಮಿ ಸಾರಿಗೆ ಏರ‍್ಪಾಟುಗಳು ಹುಟ್ಟಿಕೊಂಡ ಬಳಿಕ ರೈಲ್ವೇ ಪ್ರಯಾಣ ಗತಕಾಲದ ಸ್ವರ‍್ಣಯುಗ ಎಂದು ನೆನಪಿಸಿಕೊಳ್ಳ ಬಹುದಾದ ಸ್ತಿತಿ ತಲುಪಿದೆ.

ರೈಲ್ವೇಯಲ್ಲೇ ಬಹು ಆದುನಿಕ ಸೌಲಬ್ಯಗಳು ಜಾರಿಯಾದ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ರೈಲ್ವೇ ನಿಲ್ದಾಣಗಳು ಬದಲಾಗಬೇಕಾದ್ದು ಅನಿವಾರ‍್ಯವಾಯಿತು. ಹಳೆಯ ನಿಲ್ದಾಣಗಳಿದ್ದ ಜಾಗದಲ್ಲಿ ವಿನೂತನ ಹಾಗೂ ಅತ್ಯಂತ ಐಶಾರಾಮಿ ನಿಲ್ದಾಣಗಳು ತಲೆಯೆತ್ತಿದ ಕಾರಣ ಹಳೆಯವು ಅನುಪಯುಕ್ತವಾದವು.

ಹಲವರಿಗೆ ಅದು ಅವಶೇಶವಾದಂತೆ ಕಂಡಲ್ಲಿ ಮತ್ತೆ ಕೆಲವರಿಗೆ ಅದು ಹೊಸ ಪ್ರಯೋಗಕ್ಕೆ ಹೊಸ ಅವಿಶ್ಕಾರಕ್ಕೆ ಸ್ರುಜನಶೀಲ ಮರುಬಳಕೆಗೆ ನಾಂದಿ ಹಾಡಿತು. ವಿಶ್ವದಾದ್ಯಂತ ಹಬ್ಬಿರುವ ರೈಲ್ವೆ ನಿಲ್ದಾಣಗಳಲ್ಲಿ ಅನೇಕಾನೇಕ ಕಮಾನುಗಳು, ಸುರಂಗಗಳು, ಕಾಯುವ ಕೋಣೆಗಳು ಉಪಯೋಗವಿಲ್ಲದೆ ಹಾಳಾಗಿದ್ದನ್ನು ಸ್ರುಜನಶೀಲ ವ್ಯಕಿಗಳು ಕಂಡರು. ಅವುಗಳು ಹೊಸ ಶಕೆಗೆ ಹೊಂದಿಕೊಳ್ಳುವಂತೆ ಮರುಬಳಕೆಗೆ ತಕ್ಕುದಾದ ತಾಣಗಳೆಂದು ತೀರ‍್ಮಾನಿಸಿ ಅಗತ್ಯ ಕ್ರಮಕ್ಕೆ ಮುಂದಾದರು. ಬನ್ನಿ ಹಲವು ಬದಲಾದ ರೈಲ್ವೇ ನಿಲ್ದಾಣಗಳ ಬಗ್ಗೆ ತಿಳಿಯುವ.

ಮ್ಯೂಸಿಯಮ್ ಆದ ‘ಗಾರೆ ಡಿ ಓರ‍್ಸೆ’ ನಿಲ್ದಾಣ – ಪ್ಯಾರೀಸ್

ಗಾರೆ ಡಿ ಓರ‍್ಸೆ

ಪ್ಯಾರೀಸ್‍ನಲ್ಲಿನ ಗಾರೆ ಡಿ ಓರ‍್ಸೆ ನಿಲ್ದಾಣ 20ನೇ ಶತಮಾನದ ಮೊದಲಲ್ಲಿ ವಿದ್ಯುದೀಕರಣಗೊಂಡ ಮೊದಲ ರೈಲು ನಿಲ್ದಾಣ ಎಂಬ ಕ್ಯಾತಿ ಗಳಿಸಿತ್ತು. 1939ರವರೆಗೂ ಲಕ್ಶಾಂತರ ಪ್ರಯಾಣಿಕರು ಪ್ಯಾರೀಸ್‍ನಿಂದ ಒರ್‍ಲಿಯನ್ಸ್‍ಗೆ ಸಂಚರಿಸಲು ಈ ನಿಲ್ದಾಣವನ್ನು ಬಳಸಿದರು. ಟ್ರೈನುಗಳಲ್ಲಿ ಹೊಸ ಹೊಸ ಅವಿಶ್ಕಾರಗಳು ಹೊರ ಬಂದ ಬಳಿಕ ಈ ನಿಲ್ದಾಣ ಅವುಗಳಿಗೆ ಹೊಂದಾಣಿಕೆಯಾಗಲಿಲ್ಲ. ಅದಕ್ಕಾಗಿ ಈ ನಿಲ್ದಾಣವನ್ನು ಒಡೆದು ಹಾಕುವ ವಿಚಾರ ಹಬ್ಬಿತ್ತು.

1970ರ ದಶಕದ ಕೊನೆಯಲ್ಲಿ ಪ್ರೆಂಚ್ ಸರ‍್ಕಾರ ಈ ನಿಲ್ದಾಣವನ್ನು ಮ್ಯೂಸಿಯಮ್ ಆಗಿ ಮಾರ‍್ಪಡಿಸುವ ನಿರ‍್ದಾರವನ್ನು ತೆಗೆದುಕೊಂಡಿತು. ಇಂದು ಪ್ರಪಂಚದಾದ್ಯಂತ ಮ್ಯೂಸಿಯಮ್ ಆಪ್ ಡಿ ಓರ‍್ಸೆ ಎಂದೇ ಇದು ಗುರುತಿಸಲ್ಪಡುತ್ತಿದೆ. ಇದರಲ್ಲಿ ಪ್ರಕ್ಯಾತ ಚಿತ್ರಕಾರರಾದ ವಾನ್ ಗೊಗ್ ಮೊನೆಟ್, ಮಟಿಸ್ಸೆ, ರೆನೊಯರ್ ಮುಂತಾದವರುಗಳು ಶ್ರೇಶ್ಟ ಕಲಾಕ್ರುತಿಗಳು ಹಾಗೂ ಅವರುಗಳ ಕುಂಚದಿಂದ ತಮ್ಮ ಗನತೆಯನ್ನು ಹೆಚ್ಚಿಸಿಕೊಂಡ ಹಳೆಯ ರೈಲ್ವೇ ಕಮಾನುಗಳ ಚಿತ್ರಗಳನ್ನು ಪ್ರದರ‍್ಶನಕ್ಕಿಡಲಾಗಿದೆ.

ಕೆಪೆ – ದ ಡೆಪ್ಟ್ ಪೋರ‍್ಡ್ ಪ್ರಾಜೆಕ್ಟ್ ಲಂಡನ್

ದ ಡೆಪ್ಟ್ ಪೋರ‍್ಡ್

1836ರಲ್ಲಿ ನಿರ‍್ಮಿಸಲಾದ ಡೆಪ್ಟ್ ಪೋರ‍್ಡ್ ಲಂಡನ್ನಿನ ಮೊದಲ ಉಪನಗರ ರೈಲ್ವೇ ನಿಲ್ದಾಣ. ಸರಿ ಸುಮಾರು 90 ವರ‍್ಶಗಳ ಕಾಲ ಕೋಟ್ಯಾಂತರ ಪ್ರಯಾಣಿಕರಿಗೆ ಜೀವ ನಾಡಿಯಾಗಿದ್ದ ಇದನ್ನು 1915 ರಲ್ಲಿ ಮುಚ್ಚಲಾಯಿತು. ಅನೇಕ ವರ‍್ಶಗಳ ಕಾಲ ಉಪಯೋಗವಿಲ್ಲದೆ ಹಾಳಾಗಿದ್ದುದನ್ನು ನಂತರದ ದಿನಗಳಲ್ಲಿ ಕೆಡವಲಾಯಿತು.

2008ರಲ್ಲಿ ಮೂಲ ರೈಲ್ವೇ ನಿಲ್ದಾಣದ ಅಂಗಳದಲ್ಲಿ ಉಳಿದಿದ್ದವುಗಳನ್ನು ಮರುಸ್ತಾಪಿಸಲು ಹಾಗೂ ವಿಕ್ಟೋರಿಯನ್ ಕ್ಯಾರೇಜ್ ರಾಂಪ್ ಅನ್ನು ಹೊಸದಾಗಿಸಲು ಕ್ರಮ ಕೈಗೊಳ್ಳಲಾಯಿತು. ಹಾಲಿ ಈಗ ಇದು ಸಂಪೂರ‍್ಣ ಮಾರ‍್ಪಡಿಸಲಾದ ರೈಲ್ವೇ ಬೋಗಿಯ ಕೆಪೆ. ಡೆಪ್ಟ್ ಪೋರ‍್ಡ್‍ನ ಈ ಪುನರುತ್ತಾನ ಕಾರ‍್ಯಕ್ರಮ 2012ರಲ್ಲಿ ಹೊಸ ಕಟ್ಟಡ ಬರುವವರೆಗೂ ಮುಂದುವರೆಯಿತು. ಮುಂದಿನ ಯೋಜನೆ ಮಾರ‍್ಕೆಟ್, ಶಾಪ್ಸ್, ಗ್ಯಾಲರಿಗಳನ್ನು ಕಟ್ಟುವುದಾಗಿದೆ.

ಶಾಪಿಂಗ್ ಮಾಲ್ – ಕ್ಯುರಿಟಿಬ ಬ್ರಜಿಲ್

ಎಸ್ಟಕಾವ್

ಬ್ರಜಿಲ್‍ನ ಕ್ಯುರಿಟಿಬದ ಎಸ್ಟಕಾವ್ ರೈಲ್ವೇ ನಿಲ್ದಾಣವನ್ನು ಶಾಪಿಂಗ್ ಮಾಲ್ ಆಗಿ ಪರಿವರ‍್ತಿಸಿದ್ದಾರೆ. ಬಹು ವಿಸ್ತಾರವಾದ ಈ ಮಾಲ್‍ನಲ್ಲಿ ಅವಶ್ಯಕತೆಗಿಂತಾ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳು (ಒಟ್ಟಾರೆ 180), ಹತ್ತು ಸಿನೆಮಾ ಪರದೆಗಳು, ಎರಡು ರಂಗಮಂದಿರಗಳು, ಹತ್ತಾರು ಡಜನ್ ತಿನಿಸುಗಳ ಮಳಿಗೆಗಳು ಇವೆ. ಇದು ಸಾಲದೆಂಬಂತೆ ನಾಲ್ಕು ಮ್ಯೂಸಿಯಮ್‍ಗಳು ಇವೆ. ಇದರಲ್ಲಿನ ಒಂದು ಮ್ಯೂಸಿಯಮ್‍ನಲ್ಲಿ ಈ ರೈಲ್ವೇ ನಿಲ್ದಾಣ ಈಗಿನ ಸ್ತಿತಿಗೆ ಬರುವ ಹೆಜ್ಜೆ ಗುರುತಿನ ವಿವಿದ ಚಿತ್ರಗಳಿವೆ.

ಕ್ಯುರಿಟಿಬ ರೈಲು ನಿಲ್ದಾಣ 1883ರಲ್ಲಿ ಪ್ರಾರಂಬವಾಯಿತು. ಇಲ್ಲಿಂದ ಹೊರಡುವ ರೈಲು ಪ್ರಯಾಣ ಪರನಗುವಾವರೆಗೆ ಇತ್ತು. ಈ ಎರಡು ಪಟ್ಟಣಗಳನ್ನು ಸಂಪರ‍್ಕಿಸುವ ಹೆದ್ದಾರಿಯು ಬಂದ ಮೇಲೆ ಸಾರಿಗೆಯ ವೇಗ ಹೆಚ್ಚಾಗಿ ಸಮಯ ಉಳಿತಾಯವಾದ ಕಾರಣ ರೈಲಿನ ಬೇಡಿಕೆ ಕುಗ್ಗತೊಡಗಿತು. ಕ್ರಮೇಣ ಈ ನಿಲ್ದಾಣವನ್ನು ಮುಚ್ಚಲಾಯಿತು.

ಈ ಶಾಪಿಂಗ್ ಮಾಲ್‍ನಲ್ಲಿ ರೈಲ್ವೆಯ ನೆನಪಿನಲ್ಲಿ ಅಂದಿನ ಕಾಲದ ಇಣಕು ನೋಟವನ್ನು ಪರಿಚಯಿಸಲು ಹಬೆಯ ರೈಲ್ವೆ ಇಂಜಿನ್ ಅನ್ನು ಕಾಯಂ ಆಗಿ ಇಡಲಾಗಿದೆ.

ಮಾರ‍್ಕೆಟ್ – ಎಲ್ ಗಾಲ್ಪಾನ್ ಬ್ಯುನೆಸ್ ಏರಿಸ್

ಎಲ್ ಗಾಲ್ಪಾನ್ ಬ್ಯುನೆಸ್ ಏರಿಸ್

ಈ ಸಾವಯವ ಉತ್ಪನ್ನಗಳ ಮಾರುಕಟ್ಟೆ ಸ್ತಾಪಿತವಾಗಿರುವುದು ಚಾಕರಿಟಾದ ಹಳೆಯ ರೈಲ್ವೇ ಗೋದಾಮಿನಲ್ಲಿ. ಮನಸ್ಸಿನಲ್ಲಿ ಕೊಂಚ ಕಲ್ಪನಾ ಶಕ್ತಿಯಿದ್ದಲ್ಲಿ ಎಂತಹ ಅನುಪಯುಕ್ತ ಪ್ರದೇಶವನ್ನು ಅತ್ಯಂತ ಚಟುವಟಿಕೆಯ ವ್ಯಾಪಾರ ಕೇಂದ್ರವನ್ನಾಗಿ ಬದಲಾಯಿಸಿಬಹುದು ಎಂಬುದಕ್ಕೆ ಇದು ಜೀವಂತ ನಿದರ‍್ಶನ.

ಎಲ್ ಗಾಲ್ಪಾನ್ ಸಹಕಾರ ಮಾರುಕಟ್ಟೆಯು ಹೊರನೋಟಕ್ಕೆ ಹಳದಿ ಬಣ್ಣದ ಟಿನ್ ಪರದೆಯ ಹಿಂದೆ ಅವಿತುಕೊಂಡಂತೆ ಕಾಣುವ ಇದರಲ್ಲಿ ಬೇರೆ ಲೋಕವೆ ಅಡಗಿದೆ. ಒಳಗೆ ಕಾಲಿಟ್ಟಲ್ಲಿ ಎಲ್ಲಾ ರೀತಿಯ ವ್ಯಾಪಾರ ವ್ಯವಹಾರಕ್ಕೂ ಕೇಂದ್ರವಾಗಿದ್ದು, ಸ್ತಳೀಯವಾಗಿ ದಕ್ಕುವ ಸಾವಯವ ಪದಾರ‍್ತಗಳು, ಮರುಬಳಕೆಯ ವಸ್ತುಗಳು, ಬ್ರೆಡ್, ನೈಸರ‍್ಗಿಕವಾದ ಜೇನುತುಪ್ಪ, ಸಲ್ಪೈಟ್ ಇಲ್ಲದ ಕಪ್ಪುದ್ರಾಕ್ಶಿ ರಾಶಿ ರಾಶಿ ಸಿಗುತ್ತದೆ. ಇಲ್ಲಿ ಸಾವಯವ ಪದಾರ‍್ತಗಳಿಗೇ ಹೆಚ್ಚು ಬೇಡಿಕೆ.

ಇದರೊಡನೆ ಇಲ್ಲಿ ಯೋಗ ತರಬೇತಿಯ ತರಗತಿಗಳು, ಶಾಶ್ವತ ಕ್ರುಶಿಯ ಕಾರ‍್ಯಾಗಾರಗಳು, ಸಮುದಾಯ ರೆಡಿಯೋಗಳು ಸಾರ‍್ವಜನಿಕರ ಒಳಿತಿಗಾಗಿ ಇಡಲಾಗಿದೆ.

ಇಂತಹ ಇನ್ನೂ ಅನೇಕ ರೈಲ್ವೇ ನಿಲ್ದಾಣಗಳನ್ನು ಸ್ರುಜನಶೀಲವಾಗಿ ಮಾರ‍್ಪಡಿಸಿ ಮರುಬಳಕೆ ಮಾಡುತ್ತಿರುವುದನ್ನು ವಿಶ್ವಾದ್ಯಂತ ನಾವು ಕಾಣಬಹುದು. ಅಂತಹುದರಲ್ಲಿ ಪ್ರಮುಕವಾಗಿ ಮ್ಯೂಸಿಕ್ ಕ್ಲಬ್ ಆಗಿ ಪರಿವರ‍್ತನೆಯಾದ ಪ್ಯಾರೀಸ್‍ನ ಮತ್ತೊಂದು ರೈಲು ನಿಲ್ದಾಣ ಎಲ್ ಪ್ಲೆಚೆ ಡಿಒರ್, ಹ್ಯಾಂಪ್‍ಶೈರ್‍ನ ಮಿಯೊನ್ ವ್ಯಾಲಿ ರೈಲ್ವೇ ನಿಲ್ದಾಣದಲ್ಲಿ ತಲೆಯೆತ್ತಿರುವ ಮನೆ, ಅರ‍್ಜಿಂಟಿನಾದ ಲ ವಯೀಜಾ ಎಸ್ಟಾಸಿಯನ್‍ನಲ್ಲಿನ ಹೋಟೆಲ್‍ಗಳನ್ನು ಹೆಸರಿಸಬಹುದು.

(ಮಾಹಿತಿ ಹಾಗೂ ಚಿತ್ರ ಸೆಲೆ: inhabitat.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: