“ದಿ ವಾಲ್” – 146 ಇಂಚಿನ ದೊಡ್ಡ ಟಿವಿ!

– ರತೀಶ ರತ್ನಾಕರ.

ಹೌದು, 146 ಇಂಚಿನ ಟಿವಿ! ಟಿವಿ ಮಾರುಕಟ್ಟೆಯಲ್ಲಿ ಇದು ಹೊಸ ಅಲೆಯನ್ನು ಹುಟ್ಟುಹಾಕಲಿದೆ. ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿ ಇಂತಹದ್ದೊಂದು ದೊಡ್ಡ ಹೆಜ್ಜೆಯನ್ನಿಟ್ಟಿದೆ. ‍2018 ಜನವರಿಯ ಮೊದಲವಾರ, ಅಮೇರಿಕಾದಲ್ಲಿ ನಡೆದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ(CES) ಕಂಡುಬಂದ ಸ್ಯಾಮ್ಸಂಗ್ ಕಂಪನಿಯ ಈ ಹೊಸ ಟಿವಿ ಎಲ್ಲರನ್ನು ಬೆರಗಾಗಿಸಿದೆ.

ಸುಮಾರು 10 ಅಡಿ ಅಗಲ ಹಾಗೂ 6 ಅಡಿ ಎತ್ತರವಿರುವ, ಮನೆಯ ಒಂದು ಗೋಡೆಯಶ್ಟು ದೊಡ್ಡದಾದ ಟಿವಿಗೆ “ದಿ ವಾಲ್” ಎಂದು ಹೆಸರಿಟ್ಟಿದ್ದಾರೆ.

ಒಳ್ಳೆಯ ನೋಟ ಹಾಗೂ ಗುಣಮಟ್ಟದ ಮೂಲಕ ಎಲ್ಇಡಿ ಟಿವಿಗಳು ಮಂದಿಮೆಚ್ಚುಗೆಯನ್ನು ಗಳಿಸುತ್ತಿರುವ ಈ ಹೊತ್ತಿನಲ್ಲಿ ಎಲ್ಸಿಡಿ ಟಿವಿಗಳು ಮರೆಯಾಗುತ್ತಿವೆ. ಇನ್ನು ಎಲ್ಇಡಿ ಟಿವಿಗಳನ್ನು ಬದಿಗೊತ್ತಲು ಒಎಲ್ಇಡಿ (Organic Light Emitting Diode) ಟಿವಿಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಹೊಸತನವನ್ನು ಮೈಗೂಡಿಸಿಕೊಂಡು ಗಾಜಿನ ಟಿವಿಗಳೂ ಬರಲಿವೆ. ಇವೆಲ್ಲಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ದಿ-ವಾಲ್ ‘ಮೈಕ್ರೋ ಎಲ್ಇಡಿ'(mLED) ಎಂಬ ಹೊಸ ಚಳಕವನ್ನು ಬಳಸಿಕೊಂಡಿದೆ.

ಇದು ಎಲ್ಇಡಿ ಟಿವಿಯಲ್ಲ ಮೈಕ್ರೋಎಲ್ಇಡಿ ಟಿವಿ!

ಎಲ್ಇಡಿಗಳು ಬೆಳಕನ್ನು ಹೊರಸೂಸುವ ಸಣ್ಣ ಸಣ್ಣ ಹರಳುಗಳು. ಇಂತಹ ಎಲ್ಇಡಿಗಳನ್ನು ಒತ್ತೊತ್ತಾಗಿ ಜೋಡಿಸಿ ತೆಳುಪದರವನ್ನು ಮಾಡಿ ಟಿವಿ ತೆರೆಯನ್ನು ಮಾಡಿರುತ್ತಾರೆ. ಈ ತೆರೆಗೆ ಮಿಂಚನ್ನು ಹರಿಸಿದಾಗ ಎಲ್ಇಡಿಗಳು ಬಣ್ಣದ ಬೆಳಕನ್ನು ಹೊರಸೂಸಿ ಚಿತ್ರವನ್ನು ತೋರಿಸುತ್ತವೆ. ಚಿತ್ರಕ್ಕೆ ತಕ್ಕಂತೆ ಒಂದೊಂದು ಎಲ್ಇಡಿಯಿಂದಲೂ ಬೇರೆ ಬೇರೆ ಬಣ್ಣದ ಬೆಳಕು ಹೊರಬರುವುದು. ಈ ಬಣ್ಣಗಳು ಕಣ್ಣಿಗೆ ಚೆನ್ನಾಗಿ ಕಾಣಲೆಂದು ಎಲ್ಇಡಿ ತೆರೆಯೊಂದಿಗೆ ಬಣ್ಣ ಸೋಸುಕವನ್ನು(color filter) ಬಳಸಿರುತ್ತಾರೆ.

ಇನ್ನು ಒಎಲ್ಇಡಿಗಳಲ್ಲಿ ಇರುವ ಹರಳುಗಳನ್ನು ಆರ‍್ಗಾನಿಕ್(ಪಾಲಿಮರ್‍ನಂತವು) ವಸ್ತುವಿನಿಂದ ಮಾಡಿರಲಾಗುತ್ತದೆ. ಇದು ಹೊರಸೂಸುವ ಬೆಳಕಿನ ಗುಣಮಟ್ಟ ಹಾಗೂ ಹರಳಿನ ಬಾಳಿಕೆ ಸಾಮಾನ್ಯ ಎಲ್ಇಡಿಗಿಂತ ಹೆಚ್ಚಾಗಿರುತ್ತದೆ. ಆದರೆ ಮೈಕ್ರೋ-ಎಲ್‍ಇಡಿ ಟಿವಿಯಲ್ಲಿ ಇನಾರ‍್ಗನಿಕ್ ವಸ್ತುವಾದ ಗ್ಯಾಲಿಯಂ ನೈಟ್ರೈಡ್ನಿಂದ(GaN) ಮಾಡಿದ ಕಡುಚಿಕ್ಕ ಎಲ್ಇಡಿ ಹರಳುಗಳನ್ನು ಬಳಸಲಾಗಿರುತ್ತದೆ. ಇವು ಒಎಲ್ಇಡಿ ಹರಳುಗಳಿಗಿಂತ ತುಂಬಾ ಚಿಕ್ಕದಾಗಿರುತ್ತವೆ. ಅಲ್ಲದೇ ಒಎಲ್ಇಡಿಗಳು ವರುಶ ಕಳೆದಂತೆ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ, ಹಾಗೂ ಬೆಳಗಲು ಹೆಚ್ಚು ಮಿಂಚನ್ನು ಪಡೆದುಕೊಳ್ಳುತ್ತವೆ. ಮೈಕ್ರೋ ಎಲ್ಇಡಿಯು ಇನಾರ‍್ಗನಿಕ್ ವಸ್ತುಗಳಾದ್ದರಿಂದ ಹೆಚ್ಚುಕಾಲ ತಮ್ಮ ಹೊಳಪನ್ನು ಕಾಯ್ದುಕೊಳ್ಳುತ್ತವೆ ಹಾಗೂ ಕಡಿಮೆ ಮಿಂಚನ್ನು ಬಳಸಿಕೊಂಡು ಒಎಲ್ಇಡಿಗಿಂತ ಹೆಚ್ಚು ಹೊಳಪಿನ ಬೆಳಕನ್ನು ಹೊರಸೂಸುತ್ತವೆ.

ಸ್ಯಾಮ್ಸಂಗ್ ದಿ ವಾಲ್ ಟಿವಿ

ಮೈಕ್ರೋಎಲ್ಇಡಿ ಪರದೆಯಲ್ಲಿ ಕಾಣುವ ಬಣ್ಣಗಳ ನಡುವಿನ ಬೇರ‍್ಮೆ(contrast) ತುಂಬಾ ಚೆನ್ನಾಗಿರುತ್ತದೆ. ಹಾಗೂ ಹರಳುಗಳು ಬೇರೆ ಬೇರೆ ಬಣ್ಣಗಳಿಗೆ ಬದಲಾಗಲು ತೆಗೆದುಕೊಳ್ಳುವ ಹೊತ್ತು (response time) ಕೂಡ ತುಂಬಾ ಕಡಿಮೆ ಇರುತ್ತದೆ, ಇವೆಲ್ಲವೂ ಒಳ್ಳೆಯ ಗುಣಮಟ್ಟದ ಚಿತ್ರವನ್ನು ತೋರಿಸಲು ನೆರವಾಗುತ್ತವೆ. ಕಡುಚಿಕ್ಕ ಹರಳುಗಳಿಂದ ಮಾಡಿರುವ ಪರದೆಯಾದ್ದರಿಂದ ಕೆಲವು ಬಾರಿ ಬಣ್ಣಸೋಸುಕವೂ ಬೇಕಾಗಿರುವುದಿಲ್ಲ. ಇಂತಹ ಹೊಸ ಚಳಕ ‘ದಿ ವಾಲ್’ನ ಮೂಲಕ ದೊರೆಯಲಿದೆ.

ಬೇಕಾದ ಅಳತೆಯಲ್ಲಿ ‘ದಿ ವಾಲ್’ ಸಿಗಲಿದೆ!

ಹೌದು, ಮನೆಯ ಗೋಡೆ ಎಶ್ಟು ದೊಡ್ಡದಿದೆ ಎಂಬುದರ ಮೇಲೆ ನಿಮಗೆ ಬೇಕಾದ ಅಳತೆಯ ‘ದಿ ವಾಲ್’ ಸಿಗಲಿದೆ. ಗೋಡೆಯನ್ನು ಹೇಗೆ ಚಿಕ್ಕಚಿಕ್ಕ ಇಟ್ಟಿಗೆಯಲ್ಲಿ ಕಟ್ಟುವರೋ ಹಾಗೆಯೇ ಸ್ಯಾಮ್ಸಂಗ್ ಕಂಪನಿಯವರು ಈ ಟಿವಿಯ ತೆರೆಯನ್ನು ಹಲವು ಚಿಕ್ಕ ಚಿಕ್ಕ ಪಟ್ಟಿಗಳನ್ನು (modular) ಬಳಸಿ ಮಾಡಲಿದ್ದರೆ. ಒಂದೊಂದು ಪಟ್ಟಿಯನ್ನೂ ಮೈಕ್ರೋಎಲ್ಇಡಿಗಳಿಂದ ಮಾಡಲಾಗಿರುತ್ತದೆ. ಮನೆಯ ಒಂದು ಸಾಮಾನ್ಯ ಗೋಡೆಗೆ 146 ಇಂಚಿನ ಪರದೆ ಸರಿಹೊಂದುವುದರಿಂದ ಅದನ್ನು ಮೊದಲು ಹೊರತಂದಿದ್ದಾರೆ. ಚಿಕ್ಕ ಟಿವಿ ಬೇಕಾದರೆ ಕೆಲವು ಪಟ್ಟಿಗಳನ್ನು ತೆಗೆದು ಚಿಕ್ಕತೆರೆ, ದೊಡ್ಡದಾಗ ಬೇಕಾದರೆ ಪಟ್ಟಿಗಳನ್ನು ಸೇರಿಸಿ ದೊಡ್ಡತೆರೆ, ಹೀಗೆ ಬೇಕಾದ ಅಳತೆಯ ಟಿವಿಯನ್ನು ಕೊಂಡುಕೊಳ್ಳುವ ಆಯ್ಕೆ ಇರಲಿದೆ. ಟಿವಿಯ ತೆರೆಯನ್ನು ಎಶ್ಟು ಇಂಚಿನ ತನಕ ದೊಡ್ಡದಾಗಿಸಬಹುದು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.

146 ಇಂಚಿನ ಟಿವಿ 4K ಚುಕ್ಕಿದಟ್ಟಣೆಯೊಂದಿಗೆ(resolution) ಹೊರಬರಲಿದೆ. 2018ರ ಕೊನೆಯಲ್ಲಿ ಕೊಳ್ಳುಗರಿಗೆ ದಿ ವಾಲ್ ಸಿಗಲಿದೆ ಎಂದು ಸ್ಯಾಮ್ಸಂಗ್ ಹೇಳಿದೆ. ಇದರ ಬೆಲೆ ಇನ್ನೂ ನಿಗದಿಯಾಗಿಲ್ಲ.

(ಮಾಹಿತಿ ಸೆಲೆ:  news.samsung.fom, cnet.com, arstechnica.com, wiki )
(ಚಿತ್ರ ಸೆಲೆ: news.samsung.fom, expertreveiws.co.uk)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.