ಬೆರಗಾಗಿಸುವ ‘ಕೋರಲ್ ಕ್ಯಾಸೆಲ್’ ಕಲ್ಲಿನಕೋಟೆ!

– ಕೆ.ವಿ.ಶಶಿದರ.

ಕಲ್ಲಿನ ಕೋಟೆ

ನಾನು ಪಿರಮಿಡ್‍ಗಳ ನಿರ‍್ಮಾಣದ ಹಿಂದಿರುವ ರಹಸ್ಯವನ್ನು ಕಂಡು ಹಿಡಿದಿದ್ದೇನೆ. ಪ್ರಾಚೀನ ಈಜಿಪ್ಟರು, ಪೆರುವಿನ ಮತ್ತು ಏಶಿಯಾದ ದೊಡ್ಡ ದೊಡ್ಡ ಕಟ್ಟಡಗಳ ನಿರ‍್ಮಾಣಗಾರರು, ಯಂತ್ರೋಪಕರಣಗಳ ಸಹಾಯವಿಲ್ಲದೆ ಅತಿ ಸರಳ ಉಪಕರಣಗಳೊಂದಿಗೆ ಟನ್‍ಗಟ್ಟಲೆ ತೂಕದ ಬಾರೀ ಗಾತ್ರದ ಕಲ್ಲುಬಂಡೆಗಳನ್ನು ಅನಾಮತ್ತಾಗಿ ಎತ್ತಿ, ಎಲ್ಲಿ ಬೇಕೆಂದರಲ್ಲಿ ಹೇಗೆ ಕೂರಿಸುತ್ತಿದ್ದರು ಎಂಬುದನ್ನು ನಾನು ಕಂಡುಕೊಂಡಿದ್ದೇನೆ.

– ಎಂದು ಎಡ್ವರ‍್ಡ್ ಲೀಡ್ಸ್ ಕಲ್ನಿನ್ ಹೇಳುತ್ತಿದ್ದನಂತೆ.

ಅವನ ಮಾತನ್ನು ಕೇಳಿದವರೆಲ್ಲಾ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾನೆ ಎಂದೇ ಬಾವಿಸಿ ಅದಕ್ಕೆ ಮಹತ್ವವನ್ನೇ ಕೊಟ್ಟಿರಲಿಲ್ಲ. ಆದರೆ ಆತನೇ ತನ್ನ ಕೈಯಾರೆ ಕಟ್ಟಿದ ಪ್ಲೋರಿಡಾ ಬಳಿ ಹೋಮ್‍ಸ್ಟಡ್‍ನಲ್ಲಿರುವ ಕೋರಲ್ ಕ್ಯಾಸೆಲ್ ಅನ್ನು ಕಣ್ಣಾರೆ ಕಂಡವರಾರೂ ಅವನ ಮಾತನ್ನು ಅಲ್ಲೆಗೆಳೆಯಲಾಗಲಿಲ್ಲ. ಏಕೆಂದರೆ ಆತ ಯಾವುದೇ ಯಂತ್ರೋಪಕರಣಗಳ ನೆರವಿಲ್ಲದೆ ಕೋರಲ್ ಕ್ಯಾಸೆಲ್ ಎಂಬ ದೊಡ್ಡ ಸಂಕೀರ‍್ಣದ ನಿರ‍್ಮಾಣ ಮಾಡಿದ್ದು. ಅದರಲ್ಲಿ ಆತ ಬಳಸಿದ್ದು ಬಗೆಬಗೆಯ ತೂಕದ ಕಲ್ಲುಬಂಡೆಗಳನ್ನು. ಕೆಲವೊಂದು ಕಲ್ಲುಬಂಡೆ 30 ಟನ್‍ಗಳಶ್ಟು ಬಾರೀ ಗಾತ್ರದ್ದು ಎಂಬುದೊಂದು ವಿಶೇಶ.

ಯಾರೀ ಎಡ್ವರ‍್ಡ್ ಲೀಡ್ಸ್ ಕಲ್ನಿನ್? ಅವನ ನಿರ‍್ಮಾಣದ ಕೋರಲ್ ಕ್ಯಾಸೆಲ್ ಸಂಕೀರ‍್ಣ ಎಲ್ಲಿದೆ?

ಎಡ್ವರ‍್ಡ್ ಲೀಡ್ಸ್ ಕಲ್ನಿನ್ ಒಬ್ಬ ವಲಸೆಗಾರ. ಲ್ಯಾಟ್ವೇನಿಯನ್ ಪ್ರಜೆಯಾದ ಈತ ಬಂದು ನೆಲಸಿದ್ದು ಅಮೇರಿಕಾದ ಪ್ಲೋರಿಡಾದಲ್ಲಿ. ಕೇವಲ 5 ಅಡಿ ಎತ್ತರವಿದ್ದ ಈತ ಕ್ಶಯರೋಗದಿಂದ ಬಳಲುತ್ತಿದ್ದ ಕಾರಣ ಸಣ್ಣಗಾಗಿಹೋಗಿದ್ದ. ಈತನ ತೂಕ ಕೇವಲ 40 ಪೌಂಡ್ ಮಾತ್ರ ಇತ್ತು. ತುಂಬಾ ವಯಸ್ಸಾದವನಂತೆ ಕಾಣುತ್ತಿದ್ದ ಈತ ಕಡು ಬಡವನಾಗಿದ್ದ. ಕುಬ್ಜತನ, ಕ್ಶಯ ರೋಗ ಹಾಗೂ ಬಡತನದ ಕಾರಣಗಳಿಂದ ಆತನ ಪ್ರಿಯತಮೆ ಅವನನ್ನು ತಿರಸ್ಕರಿಸಿದ್ದಳು.

1920ರಲ್ಲಿ ಅಮೇರಿಕಾಗೆ ವಲಸೆ ಬಂದಾಗ ಲೀಡ್ಸ್ ಕಲ್ನಿನ್‍ಗೆ ಕೇವಲ 34 ವರ‍್ಶ ವಯಸ್ಸು. ಪ್ರೇಯಸಿಯಿಂದ ತಿರಸ್ಕ್ರುತನಾದ್ದರಿಂದ ಅವನ ಸಾಮಾಜಿಕ ಜೀವನ ನಿಶ್ಕ್ರಿಯವಾಗಿತ್ತು. ಅದರಲ್ಲಿ ಯಾವುದೇ ಸತ್ವವಿಲ್ಲವೆಂದೇ ಅವನು ಬಾವಿಸಿದ್ದ. ಅದರಿಂದ ತನ್ನ ಮುಕವನ್ನು ಬೇರಡೆಗೆ ತಿರುಗಿಸಿದ್ದ. ಜೊತೆಗೆ ಬೆನ್ನು ಹತ್ತಿದ್ದ ಕ್ಶಯ ರೋಗ. ಅದು ಹೆಚ್ಚಾಗದಂತೆ ತಡೆಗಟ್ಟುವುದು ಅವಶ್ಯಕವಾಗಿತ್ತು ಅವನಿಗೆ. ಹಾಗಾಗಿ ಆತ ಆಯ್ಕೆ ಮಾಡಿಕೊಂಡಿದ್ದು ಪ್ಲೋರಿಡಾವನ್ನು.

ಪಿರಿಮಿಡ್ಡುಗಳ ಹಾಗೂ ದೈತ್ಯ ಕಟ್ಟಡಗಳ ನಿರ‍್ಮಾಣದ ಹಿಂದಿರುವ ರಹಸ್ಯದ ಬಗ್ಗೆ ತಾನು ಕಂಡುಕೊಂಡಿದ್ದ ಸತ್ಯವನ್ನು ಕ್ರುತಿಗಿಳಿಸಲು ಹಾಗೂ ತಾನು ಅದರ ಬಗ್ಗೆ ಆಡಿದ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಉಳಿದ ಜೀವನವನ್ನು ಸಂಪೂರ‍್ಣವಾಗಿ ವಿನಿಯೋಗಿಸಿದ. ಹದಿನಾರು ವರ‍್ಶಗಳ ಕಾಲ ಸತತ ಪರಿಶ್ರಮದ ಪಲವೇ ಕೋರಲ್ ಕ್ಯಾಸೆಲ್ ಎಂಬ ಮೇರು ಕಲಾಕ್ರುತಿ.

ಕೋರಲ್ ಕ್ಯಾಸೆಲ್

ವಾಹನಗಳ ಬಿಡಿಬಾಗಗಳಿಂದ ತಯಾರಿಸಲಾದ ಪುಟ್ಟ ಪುಟ್ಟ ಉಪಕರಣಗಳನ್ನು ಮಾತ್ರ ತನ್ನ ಕನಸಿನ ನಿರ‍್ಮಾಣ ಕಾರ‍್ಯದಲ್ಲಿ ಉಪಯೋಗಿಸಿದ. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ತನ್ನ ಪೂರ‍್ವ ನಿರ‍್ದಾರಿತ ವಿನ್ಯಾಸಕ್ಕೆ ಅನುಗುಣವಾಗಿ ತಯಾರಿಸಿಕೊಂಡ. ತನ್ನೆಲ್ಲಾ ಕೆಲಸ ಕಾರ‍್ಯಗಳನ್ನು ಆತ ಮಾಡುತ್ತಿದ್ದದು ರಾತ್ರಿ ಹೊತ್ತಿನ ದೀಪದ ಬೆಳಕಿನಲ್ಲಿ. ಸಂಸ್ಕರಿಸಿದ ದೊಡ್ಡ ಕಲ್ಲು ಬಂಡೆಗಳನ್ನು ಅದ್ಬುತ ನಿಕರತೆಯೊಂದಿಗೆ ಒಂದರ ಮೇಲೊಂದನ್ನು ಕೂಡಿಸಿರುವುದರ ಹಿಂದೆ ಅಡಗಿರುವ ಅವನ ಕೌಶಲ್ಯ ಅನನ್ಯ. ಪಿರಮಿಡ್ಡುಗಳ ನಿರ‍್ಮಾಣದ ಹಿಂದೆ ಹುದುಗಿರುವಶ್ಟೇ ಕೌತುಕ.

ಕೋರಲ್ ಕ್ಯಾಸಲ್ ಅನ್ನು ಕಟ್ಟಲು ಒಟ್ಟು 1000 ಟನ್‍ಗೂ ಅದಿಕ ತೂಕದ ಕಲ್ಲು ಬಂಡೆಗಳನ್ನು ಬಳಸಿದ್ದು, 100 ಟನ್‍ಗೂ ಹೆಚ್ಚು ತೂಕದ ಕಲ್ಲು ಬಂಡೆಗಳನ್ನು ಪೀಟೋಪಕರಣಗಳು ಹಾಗೂ ಇತರೆ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗಿದೆ!

ಪ್ಲೋರಿಡಾದ ಲೀಡ್ಸ್ ಕಲ್ನಿನ್‍ನ ಈ ದೊಡ್ಡ ಕೋರಲ್ ಸಂಕೀರ‍್ಣದ ಬಳಿಯಲ್ಲೇ ಕಾರ‍್ಕಾನೆಯೊಂದು ತಲೆಯೆತ್ತಲು ಪ್ರಾರಂಬಿಸಿದಾಗ, ತನ್ನ ಗೌಪ್ಯತೆಗೆ ಹಾಗೂ ಏಕಾಂತತೆಗೆ ಬಂಗ ಬರುತ್ತದೆಂಬ ಬಾವನೆ ಅವನದಾಗಿತ್ತು. ಅದಕ್ಕಾಗಿ ತನ್ನ ಕೋರಲ್ ಕ್ಯಾಸೆಲ್ ಸಂಕೀರ‍್ಣವನ್ನು ಪ್ಲೋರಿಡಾದಿಂದ 16 ಕಿಲೋಮೀಟರ್ ದೂರದಲ್ಲಿನ ಹೋಮ್‍ಸ್ಟಡ್‍‍ಗೆ ಸ್ತಳಾಂತರಿಸಲು ತೀರ‍್ಮಾನಿಸಿದ. ಹಲವು ಸಂಶೋದಕರ ಪ್ರಕಾರ ಗೌಪ್ಯತೆ ಮತ್ತು ಏಕಾಂತತೆಯ ಬಂಗವೊಂದೇ ಸ್ತಳಾಂತರಕ್ಕೆ ಮೂಲ ಕಾರಣವಲ್ಲ. ಬದಲಿಗೆ ಹೊಸ ಸ್ತಳದಲ್ಲಿನ ನೈಸರ‍್ಗಿಕ ಹಾಗೂ ಅಯಸ್ಕಾಂತೀಯ ಶಕ್ತಿಯನ್ನು ಬಳಸಿಕೊಳ್ಳುವ ಉದ್ದೇಶವೇ ಪ್ರಮುಕವಾಗಿತ್ತು ಎಂಬುದು ಅವರ ಅಬಿಪ್ರಾಯ. ಅದೇನೆ ಇರಲಿ ಆತ ಸ್ತಳಾಂತರಿಸಿದ ವಿದಾನ ಮಾತ್ರ ಅದ್ವಿತೀಯ ಹಾಗೂ ಅಪೂರ‍್ವ.

ಪ್ಲೋರಿಡಾದಿಂದ ಹೋಮ್‍ಸ್ಟಡ್‍‍ಗೆ ಸ್ತಳಾಂತರಿಸುವ ಕಾರ‍್ಯವನ್ನೂ ಆತ ಕೈಗೊಂಡಿದ್ದು ದಟ್ಟ ಕತ್ತಲಿನಲ್ಲಿ. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಹೊತ್ತೊಯ್ಯುತ್ತಿದ್ದ ವಾಹನಗಳನ್ನು ಕಂಡವರಿದ್ದಾರೆ. ಆದರೆ ದೊಡ್ಡ ಗಾತ್ರದ ಕಲ್ಲುಬಂಡೆಗಳನ್ನು ವಾಹನಕ್ಕೆ ಏರಿಸಿದ್ದಾದರೂ ಹೇಗೆ ಎಂಬುದನ್ನು ಮಾತ್ರ ಕಂಡವರಿಲ್ಲ. ಅದು ನಿಗೂಡವಾಗಿಯೇ ಉಳಿದಿದೆ. ಸ್ತಳಾಂತರಿಸುವ ಸಮಯದಲ್ಲಿ ಆತ ಪ್ರತಿಯೊಂದು ಕಲ್ಲು ಬಂಡೆಯನ್ನೂ ನಿಕರವಾಗಿ ಗುರುತಿಸಿದ್ದ. ಗುರುತಿಸಿದ್ದ ರೀತಿಯಲ್ಲೇ ಹೊಸ ಸ್ತಳದಲ್ಲಿ ಜೋಡಣೆ ಸಹ ಮಾಡಿದ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಕ್ಯ ಅಂಶವೆಂದರೆ ಆತ ಎಲ್ಲೂ ಎರಡು ಬಂಡೆಗಳನ್ನು ಗಾರೆಯಾನ್ನಾಗಲಿ ಅತವಾ ಸಿಮೆಂಟನ್ನಾಗಲಿ ಬಳಸದೇ ಜೋಡಣೆ ಮಾಡಿದ್ದ ಎಂಬುದು.

1000 ಟನ್‍ಗೂ ಹೆಚ್ಚು ಕಲ್ಲು ಬಂಡೆಗಳನ್ನು ಪ್ಲೋರಿಡಾ ಸಂಕೀರ‍್ಣದಿಂದ ತುಣುಕು ತುಣುಕುಗಳನ್ನಾಗಿ ಕಳಚಿ, ಹೊಸ ಜಾಗಕ್ಕೆ ಸಾಗಿಸಿ, ಮತ್ತೆ ಅವುಗಳನ್ನು ಅದೇ ರೀತಿಯಲ್ಲಿ ಜೋಡಣೆ ಮಾಡುವ ಕೆಲಸಕ್ಕೆ ಆತ ತೆಗೆದುಕೊಂಡಿದ್ದು ಒಂದು ತಿಂಗಳಿಗಿಂತಲೂ ಕಡಿಮೆ ಹೊತ್ತು!

ಲೀಡ್ಸ್ ಕಲ್ನಿನ್ ತನ್ನ ಕೆಲಸದಲ್ಲಿ ಎಶ್ಟು ಪರಿಣತಿ ಹೊಂದಿದ್ದ ಎಂದರೆ ಕೋರಲ್ ಕ್ಯಾಸೆಲ್‍ಗೆ ಅಳವಡಿಸಿದ್ದ ಸ್ವಿಂಗ್ ಗೇಟನ್ನು ಬೆರಳ ತುದಿಯಿಂದ ತಿರುಗಿಸುವಶ್ಟು ಸಮತೋಲನದಲ್ಲಿ ನಿರ‍್ಮಿಸಿದ್ದ. ಕೋರಲ್ ಕ್ಯಾಸೆಲ್‍ನಲ್ಲಿ ಕೆಲವಡೆ ಮೂರು ಮೀಟರ್ ಎತ್ತರದ ಗೋಡೆಗಳನ್ನು ನಿರ‍್ಮಿಸಿದ್ದ. ಬೆಡ್ ರೂಂನಲ್ಲಿ ಮಕ್ಕಳಿಗಾಗಿ ಎರಡು ಹಾಸಿಗೆಗಳು, ಉಯ್ಯಾಲೆ, ಪ್ಲೋರಿಡಾ ರಾಜ್ಯದ ವಿನ್ಯಾಸದ ಟೇಬಲ್, ಒಕಿಚೋಬೆ ಸರೋವರದ ಬಾಹ್ಯ ರೇಕೆಯನ್ನು ಒಳಗೊಂಡಿರುವ ಒಂದು ಸಿಂಕ್ ನಿರ‍್ಮಿಸಿದ್ದ. ಈ ಕ್ಯಾಸೆಲ್‍ನಲ್ಲಿ ವಿದ್ಯುತ್, ಪೈಪು, ಕೇಬಲ್‍ಗಳಾಗಲಿ ಇರಲಿಲ್ಲವೆಂಬುದು ವಿಶೇಶ.

ಲೀಡ್ಸ್ ಕಲ್ನಿನ್ ತನ್ನ ಮನಸ್ಸನ್ನು ಸ್ತಿಮಿತದಲ್ಲಿ ಇಟ್ಟುಕೊಳ್ಳಲು ಕೊನೆಯವರೆಗೂ ಶ್ರಮದಾಯಕ ಜೀವನವನ್ನು ನಡೆಸಿದ. ತನ್ನ ಊಟದಲ್ಲೂ ಅಬ್ಬರವಿರಲಿಲ್ಲ. ಆತನ ಸಾವಿನ ನಂತರ ಹಲವಾರು ಮಾಲೀಕರನ್ನು ಕೋರಲ್ ಕ್ಯಾಸೆಲ್ ಕಂಡರೂ ಸಹ ತನ್ನತನವನ್ನು ಉಳಿಸಿಕೊಂಡಿರುವ ಇದು ಇಂದಿಗೂ ಆಕರ‍್ಶಣೆಯ ಕೇಂದ್ರ ಬಿಂದುವಾಗೇ ಮುಂದುವರೆದಿದೆ. ಪ್ರತಿ ವರ‍್ಶ 65000ಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಎಡತಾಕುವುದುಂಟು. ಇಲ್ಲಿನ ದೊಡ್ಡ ಕಲ್ಲುಬಂಡೆಗಳ ಜೋಡಣೆಯ ಪರಿಯನ್ನು ಕಂಡು ಬೆರೆಗಾದ ಮಂದಿಗೆ ಲೆಕ್ಕವಿಲ್ಲ. ಲೀಡ್ಸ್ ಕಲ್ನಿಲ್‍ನ ಇತಿಹಾಸವನ್ನು ತಿಳಿದ ಮಂದಿ ಆತನ ಸಂಶೋದನೆ ಏನು? ಕಂಡುಕೊಂಡ ಸತ್ಯ ಯಾವುದು? ಯಾವ ಚಳಕವನ್ನು ಬಳಸಿ ಇದನ್ನು ಕಟ್ಟಿದ್ದಾನೆ ಎಂದು ಅಚ್ಚರಿಪಟ್ಟಿದ್ದುಂಟು.

(ಮಾಹಿತಿ ಸೆಲೆ: unusualplaces.orgmentalfloss.com, wiki, livescience.com)

(ಚಿತ್ರ ಸೆಲೆ: wiki, pixabay )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: