ಬದುಕು ಚದುರಂಗ

– ಈಶ್ವರ ಹಡಪದ.

ಒಂಟಿತನ, loneliness

( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ  ಪಡೆದ ಕತೆ )

ಹುಣ್ಣಿಮೆಯ ಶುಬ್ರತೆಯನ್ನ ಸೇರಬೇಕೆನ್ನುವಂತೆ ಆಗಸದ ಎತ್ತರಕ್ಕೆ ಚಿಮುತ್ತಿರುವ ಕಡಲ ಅಲೆಗಳು. ಅದೇ ಸಮುದ್ರದ ಅಂಚಿನಲ್ಲಿ ತನ್ನ ಪ್ರೇಯಸಿಯು ಇನ್ನೇನು ಕೆಲವೇ ಕ್ಶಣದಲ್ಲಿ ಬರುವಳು ಎಂದು ಅವಳಿಗಿಂತ ಸ್ವಲ್ಪ ಬೇಗನೆ ಬಂದು, ಪ್ರತೀ ಬಾರಿಯೂ ಅವಳು ಹೇಳುತ್ತಿದ್ದ ಮಾತು ‘ಲೋ ಏನೋ ಪ್ರತಿ ದಿನ ತಡವಾಗಿ ಬರ‍್ತಿಯಾ’ ಅನ್ನೋದನ್ನ, ಇವತ್ತು ಅವಳಿಗೆ ತಾನು ಹೇಳಬೇಕೆಂದು ಕಾಯುತ್ತ ಕುಳಿತಿರುವ ಗಗನ್.

************************************

ಹಾವಾಡಿಗ ತನ್ನ ಪುಂಗಿಯನ್ನ ಹಾವಿನ ಸುತ್ತ, ಸುತ್ತುತ್ತ ನುಡಿಸುವ ಹಾಗೆ ಹದ್ದೊಂದು ರಾಕ್ಶಸ ಕಡಲ ಅಲೆಗಳ ಮದ್ಯ ಸಿಲುಕಿಹಾಕಿಕೊಂಡ ಸಣ್ಣ ಹಡಗಿನಲ್ಲಿ ಹಿಡಿದಿಟ್ಟಿರುವ ಮೀನುಗಳನ್ನ ಸುತ್ತುತಿತ್ತು. ಹೇಗಾದರೂ ಮಾಡಿ ಆ ಹಡಗಿನ ಚಾಲಕನ ಕಣ್ತಪ್ಪಿಸಿ ಆ ಮೀನುಗಳನ್ನ ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ಹೋಗಬೇಕು ಎಂದು ಹೂಂಚುಹಾಕುತ್ತಿತ್ತು. ಇನ್ನೊಂದೆಡೆ ಈ ರಾಕ್ಶಸ ಅಲೆಗಳಿಗೆ ತನ್ನ ಹಡಗಿನ ಪಟ(sail) ಹರಿದು ಹೋಗಬಹುದೇನೋ ಎನ್ನುವ ಬಯದಲ್ಲಿ ಹಡಗಿನ ಚಾಲಕ ಪೊನ್ನಯ್ಯ. ಪೊನ್ನಯ್ಯನಿಗೆ ಒಳಗೊಳಗೆ ಅದೇನೋ ನಡುಕ. ಕಳೆದ ಎಶ್ಟೋ ವರ‍್ಶದಿಂದ ತಾನು ಮೀನನ್ನ ಹಿಡಿಯಲು ಬಳಸುತ್ತಿದ್ದ ಈ ಹಡಗು, ಅದರಲ್ಲೂ ಮುಕ್ಯವಾಗಿ ಅದರ ಪಟ, ಅದೆಂತದೆ ಬಿರುಗಾಳಿಗೂ ನಡುಗದೆ ಅಶ್ವಮೇದ ಕುದುರೆಯಂತೆ ಮುನ್ನುಗ್ಗುತ್ತಿತ್ತು. ಅದೇಕೋ ಇಂದು ತನ್ನ ಸೋಲನ್ನು ಒಪ್ಪಿಕೂಂಡು ಸಮುದ್ರದ ಬಾಯಿಗೆ ಆಹಾರವಾಗುವುದು ಎಂಬಂತೆ ಪೊನ್ನಯ್ಯನ ನಿಯಂತ್ರಣಕ್ಕೆ ಸಿಗದಾಗಿತ್ತು. ಹಡಗನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದ ಪೊನ್ನಯ್ಯನಿಗೆ ಪ್ರತಿಕ್ಶಣ ಪಟ ಬಂದು ಅವನ ಮುಕಕ್ಕೆ ಬಡಿದಾಗ ‘ನನ್ನನ್ನ ಕ್ಶಮಿಸಿ ಬಿಡು ನಾನಿನ್ನು ಬರುವೆ’ ಎಂದು ಪಟ ತನಗೆ ಹೇಳುತ್ತಿದೆ ಎಂದು ಪೊನ್ನಯ್ಯನಿಗೆ ಅನಿಸುತ್ತಿತ್ತು.

ಅದೇ ದಿನ, ಸಂಜೆಯಲಿ ಸರಕಾರಿ ಆಸ್ಪತ್ರೆಯ ಶವಾಗಾರದ ಮುಂದೆ ಒಂದೇ ಸಮನೆ ಬಿಕ್ಕಿಸಿ ಬಿಕ್ಕಿಸಿ ಅಳುತ್ತ ತನ್ನ ಮಗನ ಮುಕ ನೋಡಲು ಅಲ್ಲಿದ್ದ ಕಾವಲುಗಾರನಿಗೆ ಕೇಳಿದಳು ನಾಗಮ್ಮ. ಆದರೆ ಆ ಕಾವಲುಗಾರ ‘ಸ್ವಲ್ಪ ಇರಬೇ. ಡಾಕ್ಟರ್ ಹೆಣ ಪರೀಕ್ಶೆ ಮಾಡಿ ನಿನಗ ಕೊಡ್ತಾರ’ ಅಂತ ಹೇಳಿದ. ಈ ಮಾತುಗಳನ್ನ ಕೇಳಲು ಆ ತಾಯಿಯು, ಆ ದೇವರು ಅನ್ನುವವನು ಇದ್ದರೆ ಅವನಿಗೂ ಕೇಳಿಸುವಂತೆ ಒಂದೇ ಸಮನೆ, ಅಳಲು ಶುರುಮಾಡಿದಳು.

************************************

ಗಗನ್ ಹಲವು ಬಾರಿ ತನ್ನ ಪ್ರೇಯಸಿ ಸುಚಿತ್ರಾಗೆ ಕರೆ ಮಾಡಿದಾಗಲೂ. ಪ್ರತಿ ಸಲ ಮೊಬೈಲಲ್ಲಿ ಬರುತ್ತಿದ್ದುದು ಆ ಒಂದೇ ದನಿ, ‘ನೀವು ಕರೆಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಅತವಾ ಸ್ವಿಚ್ ಆಪ್ ಮಾಡಿದ್ದಾರೆ’ ಎಂದು. ಆ ದನಿಯು ಯಾರದೆಂದು ತಿಳಿಯದಿದ್ದರೂ ಅದಕ್ಕೆ ಗಗನ್ ಬಾಯಿ ತುಂಬ ಬೈದು, ತನ್ನ ಜೇಬಿನಲ್ಲಿ ಇಟ್ಟಿದ್ದ ಇಯರ್ ಪೋನ್ ನನ್ನು ಮೊಬೈಲ್ ಬಾಯಿಗೆ ಸೇರಿಸಿ ತನ್ನ ಇಶ್ಟವಾದ ಹಾಡಾದ ‘ಮುಂಜಾನೆ ಮಂಜಲ್ಲಿ ಮುಸ್ಸಂಜೆ ತಿಳಿ ತಂಪಲ್ಲಿ ಓ ಒಲವೇ ನೀನೆಲ್ಲಿ’ ಹಾಡನ್ನ ಕೇಳುತ್ತಾ ಕಡಲ ನೀರಿನ ಅಲೆಗಳಲ್ಲಿ ತನ್ನ ಮನಸನ್ನು ಲೀನಮಾಡುವಂತೆ ಮೈ ಮರೆತು, ಹಾಗೇ ತನ್ನ ಚಿತ್ತವನ್ನ ಸುಮಾರು ಒಂದು ವರ‍್ಶದ ಹಿಂದೆ ಕರೆದೊಯ್ದ.

ಗಗನ್ ಶ್ರೀಮಂತ ಕುಟುಂಬದ ಹುಡುಗ. ತಂದೆ ಬಾರತ ಸೇನೆಯ ಉನ್ನತ ಹುದ್ದೆಯಲ್ಲಿ ಇದ್ದರು. ಹೀಗಾಗಿ ಗಗನ್ ತಾಯಿ ಅವರ ಜೊತೆಯಲ್ಲೇ ನೆಲೆಸಿದ್ದರು. ಗಗನ್ ತನ್ನ ವಿದ್ಯಾಬ್ಯಾಸದ ಸಲುವಾಗಿ ಅಜ್ಜ ಅಜ್ಜಿಯ ಜೊತೆ ಉಡುಪಿಯಲ್ಲಿಯೇ ಉಳಿದಿದ್ದ. ಗಗನ್ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ, ಬೇಜವಾಬ್ದಾರಿಯಾಗಿ ಇರಲಿಲ್ಲ. ತನ್ನ ತಂದೆಯಿಂದ ತುಂಬಾ ಶಿಸ್ತನ್ನು ಕಲಿತಿದ್ದ. ಗಗನ್ ಕಾಲೇಜಿನಲ್ಲಿ ತನ್ನ ಕೊನೆಯ ವರ‍್ಶದ ಕಂಪ್ಯೂಟರ್ ಸೈನ್ಸ್ ಇಂಜಿನೀರಿಂಗ್ ಓದುತ್ತಿದ್ದ. ಅದೊಂದು ದಿನ ಕಾಲೇಜು ಮುಗಿಸಿಕೊಂಡು ಮನೆಗೆ ತನ್ನ ಬೈಕಲ್ಲಿ ಬರುತ್ತಿದ್ದಾಗ ಅಂದು ಅವನ ಕಾಲೇಜು ಮುಂದಿನ ರಸ್ತೆಯಲ್ಲಿ ಸುಮಾರು ಅರ‍್ದ ಕಿಲೋಮೀಟರ್ ವರೆಗು ಟ್ರಾಪಿಕ್ ಜಾಮ್ ಆಗೋಗಿತ್ತು . ಅದ್ಯಾವುದೊ ಒಂದು ಸಂಗಟನೆ ಅದ್ಯಾರದೋ ವಿರುದ್ದ ಗೋಶಣೆಯನ್ನ ಕೂಗುತ್ತ ರಸ್ತೆಯಲ್ಲಿ ಹೊರಟಿದ್ದೇ ಈ ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾಗಿತ್ತು. ಅದು ಹೇಗೊ ಗಗನ್ ಅರ‍್ದ ಕಿಲೋಮೀಟರ್ ದಾಟಿಕೊಂಡು ಬಂದರೆ ಮುಂದೆ ಬರುವ ಆ ಊರಿನ ಪ್ರಮುಕ ವ್ರುತ್ತದ ಹತ್ತಿರ ಬರುತ್ತಿದಂತೆ ಟ್ರಾಪಿಕ್ ದೀಪ ಎನ್ನುವ ನಿಯಮಾಸುರ ತನ್ನ ಕೆಂಪು ಕಣ್ಣನ್ನ ತೋರಿಸಿದ್ದ. ಗಗನ್ ಮತ್ತೆ ಸಿಗ್ನಲ್ ನಲ್ಲಿ ಸಿಲುಕಿಕೂಂಡ. ಆದ್ರೆ ಈ ಬಾರಿ ಅವನ ಬೈಕ್ ಮುಂದೆ ಬರೀ ಒಂದು ಸ್ಕೂಟಿ ನಿಂತಿತ್ತು. ಅದರ ಅಕ್ಕ ಪಕ್ಕ ಕಾರ್ ಮತ್ತೆ ಬೇರೆ ಬೈಕ್ ಇದ್ದರೂ ಗಗನ್ ಗೆ ತನ್ನ ಮುಂದೆ ಬರೀ ಸ್ಕೂಟಿ ಇದ್ದುದನ್ನು ನೋಡಿ ‘ಒಂದೇ ಸ್ಕೂಟಿ ತಾನೇ ನನ್ನ ಮುಂದೆ. ಸಿಗ್ನಲ್ ಬಿಟ್ಟ ತಕ್ಶಣ ಬೇಗನೇ ಸಿಗ್ನಲ್ ದಾಟಿಕೂಂಡು ಹೋಗಬಹುದು’ ಅಂತ ಮನಸಲ್ಲಿ ಅಂದುಕೂಂಡ.

ಅಶ್ಟೊತ್ತಿಗೆ ಗಗನ್ ಹಿಂದೆ ಒಂದು ಕಾರ್ ರಬಸವಾಗಿ ಬಂದು ಒಂದೇ ಗಳಿಗೆಯೆಲ್ಲಿ ರಪ್ ಎಂದು ನಿಂತಿತು. ಒಂದು ವೇಳೆ ಆ ಕಾರಿನ ಬ್ರೇಕ್ ಒತ್ತಲು ಒಂದು ಕ್ಶಣ ತಡವಾಗಿದ್ದರೂ, ಗಗನ್ ಕಾರ್ ಚಕ್ರಕ್ಕೆ ಪೂಜೆಯ ನಿಂಬೆಹಣ್ಣು ಆಗಿರುತಿದ್ದ. ಇದನ್ನ ಗಮನಿಸಿದ ಗಗನ್, ಬೈಕ್ ಮೇಲಿಂದಾನೆ ತನ್ನ ಕತ್ತನ್ನ ತಿರುಗಿಸಿ ಒಂದು ಸಾರಿ ಆ ಕಾರ್ ಚಾಲಕನನ್ನ ದುರುಗುಟ್ಟಿದ. ಆದ್ರೆ ಆ ಕಾರ್ ಚಾಲಕ ಯಾರೋ ಒಬ್ಬ ಆಗರ‍್ಬ ಶ್ರೀಮಂತನ ಮಗನಂತೆ ಇದ್ದ ಅವನು ಗಗನ್ ನೋಟಕ್ಕೆ ಕ್ಯಾರೆ ಎನ್ನದೇ ತನ್ನ ಕಾರಿನಲ್ಲಿ ಸ್ಪೀಕರ್ ನ ದನಿಯನ್ನು ಜಾಸ್ತಿಮಾಡಿ ಕುಳಿತಲ್ಲೇ ತನ್ನ ಕತ್ತನ್ನ ಹಿಂದೆ ಮುಂದೆ ಅಲ್ಲಾಡಿಸಿ ಕುಣಿತಾ ಇದ್ದ. ಇತ್ತ ಗಗನ್ ನಿಯಮಾಸುರ ನನ್ನ ನೋಡಿದಾಗ ಅವನ ಕಣ್ಣುಗಳು ಇನ್ನು ಕೆಂಪಾಗೆ ಇದ್ದವು. ಅವತ್ತು ಟ್ರಾಪಿಕ್ ಜಾಸ್ತಿ ಇದ್ದಿದ್ದರಿಂದ ಕಾಯುವುದನ್ನು 150 ಸೆಕೆಂಡುಗಳಿಗೆ ಏರಿಸಲಾಗಿತ್ತು. ಹಾಗೆ ಗಗನ್ ತನ್ನ ಮುಂದೆ ಇದ್ದ ಸ್ಕೂಟಿ ನೋಡಿದಾಗ ಅದರ ಮೇಲೆ ಬಿಳಿಬಣ್ಣದ ಕೋಟನ್ನ ಹಾಕಿಕೂಂಡ ಸುಮಾರು ಇಪತ್ತೆರೆಡು ವರ‍್ಶದ ಯುವತಿ ಇದ್ದಳು. ನೋಡುತ್ತಿದಂತೆ ಯಾರು ಬೇಕಾದರೂ ಹೇಳಬಹುದು ಅವಳು ಒಬ್ಬ ಡಾಕ್ಟರ್ ಅತವಾ ಡಾಕ್ಟರ್ ಆಗೋಕೆ ಓದುತ್ತಿರುವ ಯುವತಿ ಎಂದು. ಗಗನ್ ಇಶ್ಟು ಗಮನಿಸುತ್ತಿದಂತೆ ನಿಯಮಾಸುರ ತನ್ನ ಕೋಪವನ್ನ ಕಡಿಮೆ ಮಾಡಿಕೊಂಡು ವಾಹನ ಚಾಲಕರಿಗೆ ಹಸಿರು ನಿಶಾನೆ ತೋರಿದ. ಗಗನ್ ಆಗ್ಲೇ ಬೈಕ್ ಸ್ಟಾರ‍್ಟ್ ಮಾಡುತ್ತಿದ್ದಂತೆ, ಅವನ ಹಿಂದಿನ ಕಾರ್ ಚಾಲಕ ಗಗನ್ ಗೆ ಹೋಗು ಎನ್ನುವಂತೆ ಹಾರ‍್ನ್ ಮಾಡಲು ಶುರು ಮಾಡಿದ. ಅದಕ್ಕೆ ಉತ್ತರ ಎಂಬಂತೆ ಗಗನ್ ತನ್ನ ಮುಂದಿರುವ ಸ್ಕೂಟಿಗೆ ಹಾರ‍್ನ್ ಮಾಡಿದ. ಆದ್ರೆ ಆ ಮುಂದಿನ ಸ್ಕೂಟಿಯ ಯುವತಿ ಅದನ್ನ ಸ್ಟಾರ‍್ಟ್ ಮಾಡಲು ಹೆಣಗಾಡುತ್ತಿದ್ದಳು. ಆದ್ರೆ ಗಗನ್ ಹಿಂದಿನ ಕಾರಿನವನು ಒಂದೇ ಸಮನೆ ಹಾರ‍್ನ್ ಮಾಡುತ್ತಿದ್ದುದ್ದರಿಂದ ಗಗನ್ ಕೂಡ ಹಾರ‍್ನ್ ಮಾಡುವುದನ್ನ ಮುಂದುವರಿಸಿದ. ಈ ಹಾರ‍್ನ್ ಗಳಿಗೆ ಪ್ರತ್ಯುತ್ತರ ಎನ್ನುವಂತೆ ಸ್ಕೂಟಿ ಸ್ಟಾರ‍್ಟ್ ಆಗದೇ ಇದ್ದಾಗ, ಕೆಳಗಿಳಿದು ಕಿಕ್ ಸ್ಟಾರ‍್ಟ್ ಮಾಡೋಣವೆಂದರೆ ಪಕ್ಕದಲ್ಲಿ ವಾಹನಗಳು ಇದದ್ದನ್ನ ನೋಡಿ ಆ ಯುವತಿ ತನ್ನ ಸ್ಕೂಟಿ ವಿರುದ್ದ ಸೋತಂತೆ ಮುಕಮಾಡಿದಳು. ಇದನ್ನ ಕಂಡ ಗಗನ್ ತನ್ನ ಬೈಕ್ ಅನ್ನು ಅದು ಹೆಂಗೋ ಪಕ್ಕಕ್ಕೆ ತಂದು ನಿಲ್ಲಿಸಿ ಇಳಿದು ಆ ಯುವತಿಗೆ ಸಹಾಯ ಮಾಡಲು ಹೊರಟನು. ಇದನ್ನೆಲ್ಲ ನೋಡುತ್ತಾ ಇದ್ದರು ಆ ಕಾರ್ ಚಾಲಕ ಹಾರ‍್ನ್ ಮಾಡುತ್ತಲೇ ಇದ್ದ. ಗಗನ್ ಆ ಸ್ಕೂಟಿ ಹತ್ರ ಬಂದು ಆ ಯುವತಿಗೆ ‘ಇಪ್ ಯು ಡೋಂಟ್ ಮೈಂಡ್, ಒಂದು ನಿಮಿಶ ಈ ಕಡೆ ಬನ್ನಿ. ನಾನು ಸ್ಕೂಟಿನ ಪಕ್ಕಕ್ಕೆ ಹಾಕ್ತೀನಿ ‘ಎಂದ. ಆ ಯುವತಿ ಕಣ್ಣಲ್ಲೆ ‘ಸರಿ’ ಎಂದು ಸಂದೇಶ ಕೊಟ್ಟಳು. ಗಗನ್ ಸ್ಕೂಟೀನ ರಸ್ತೆ ಪಕ್ಕಕ್ಕೆ ತಂದು ನಿಲ್ಲಿಸಿದ.

ಗಗನ್ ಆ ಯುವತಿಯನ್ನು ನೋಡಿದಾಗ ಅವಳ ಮುಕದಲ್ಲಿ ಗಾಬರಿ ಮನೆ ಮಾಡಿತ್ತು. ಆಗ ಗಗನ್ ‘ಡೋಂಟ್ ವರಿ. ನಾನು ಅದನ್ನ ಸ್ಟಾರ‍್ಟ್ ಮಾಡ್ತೀನಿ’ ಎಂದು ಸ್ಕೂಟಿಗೆ ಕಿಕ್ ಹೊಡೆದ ತಕ್ಶಣ, ಗುಡ್ ಗುಡ್ ಎಂದು ಶುರು ಆದಂತೆ ಆಗಿ, ಮತ್ತೆ ತನ್ನ ಹಟಕ್ಕೆ ಬಿತ್ತು. ಗಗನ್ ಮತ್ತೆ ಎಶ್ಟೋ ಸರಿ ಕಿಕ್ ಸ್ಟಾರ‍್ಟ್ ಮಾಡಿದ್ರು ಸ್ಟಾರ‍್ಟ್ ಆಗ್ಲೇ ಇಲ್ಲ. ಆಗ ಗಗನ್ ಅಸಹಾಯಕನಂತೆ ಆ ಯುವತಿಯ ಮುಕ ನೋಡಿದಾಗ ಅವಳ ಕಣ್ಣುಗಳಲ್ಲಿ ಜಲದಾರೆ. ಅದನ್ನು ಅರಿತ ಗಗನ್ ‘ಇದು ಯಾಕೋ ಸ್ಟಾರ‍್ಟ್ ಆಗ್ತಿಲ್ಲ, ಇಲ್ಲೇ ಪಕ್ಕ ಯಾವುದಾದರೂ ಗ್ಯಾರೇಜಲ್ಲಿ ತೋರಿಸೋಣ ನಡೀರಿ ನಾನೇ ತಳ್ಕೂಂಡು ಬರ‍್ತೀನಿ’ ಎಂದ. ಆಗ ಆ ಯುವತಿ ಮುಗ್ದತೆಯಿಂದ ‘ಅಯ್ಯೋ ನಿಮ್ಮ ಬೈಕ್ ನನಗೆ ಒಡಿಸೋಕೆ ಬರಲ್ಲ. ಅದನ್ನ ನಾನು ಹೆಂಗೆ ತರಲಿ’ ಎಂದಳು. ಆ ಮಾತಿಗೆ ಗಗನ್ ಮುಗುಳುನಗೆ ಬೀರಿ ‘ಅಯ್ಯೋ..! ನೀವು ನನ್ನ ಬೈಕ್ ತನ್ನಿ ಅಂತ ನಾನು ಹೇಳಿಲ್ಲ. ಇದನ್ನ ಇಲ್ಲೇ ಪಕ್ಕದ ಟಿ ಅಂಗಡಿಯ ಹತ್ರ ಪಾರ‍್ಕ್ ಮಾಡ್ತೀನಿ ಇರಿ’ ಎಂದು ಹೇಳಿ ರಸ್ತೆಯ ಪಕ್ಕದಲ್ಲೇ ಇದ್ದ ಒಂದ್ ಟೀ ಅಂಗಡಿಯ ಹತ್ರ ಹೋಗಿ ‘ಅಣ್ಣ ಹತ್ತು ನಿಮಿಶ ಬೈಕ್ ಇಲ್ಲೇ ಪಾರ‍್ಕ್ ಮಾಡ್ತೀನಿ’ ಎಂದು ಹೇಳಿ ಬೈಕ್ ಪಾರ‍್ಕ್ ಮಾಡಿ ಸ್ಕೂಟಿ ಹತ್ರ ಹೊರಟ. ಆಗ ಆ ಯುವತಿ ‘ತ್ಯಾಂಕ್ ಯು ಪಾರ್ ದಿ ಹೆಲ್ಪ್’ ಎಂದಳು. ಗಗನ್ ಮನಸಿನ ಪಕ್ಶಿ ಅದೇಕೊ ಗೊತ್ತಿಲ್ಲ ತುಂಬ ಕುಶಿಯಿಂದ ಕುಣಿತ ಇತ್ತು. ಅದೆಶ್ಟೋ ಹುಡುಗೀರ ಹತ್ರ ಮಾತಾಡಿದ್ದರೂ ಈ ತರ ಆಗದೇ ಇದ್ದ ಗಗನ್ ಗೆ ಈ ಹುಡುಗಿಯ ಮುಗ್ದವಾದ ಕಣ್ಣೋಟಗಳು ಮೋಡಿ ಮಾಡಿದ್ದವು.

ಗಗನ್ ಸ್ಕೂಟಿ ತಳ್ಳೋಕೆ ಶುರುಮಾಡಿದ. ಅವಳು ಅವನನ್ನ ಅನುಸರಿಸಿದಳು. ಗ್ಯಾರೇಜು ಬರೋಕೆ ಇನ್ನು ಹತ್ತು ನಿಮಿಶ ಆಗುತ್ತೆ ಅಂತ ಗಗನ್ ಅವಳೊಂದಿಗೆ ಮಾತಾಡಲು ಸಿದ್ದನಾದ. ‘ನನ್ನ ಹೆಸರು ಗಗನ್’.ಅವಳು ತನ್ನ ಕಣ್ ರೆಪ್ಪೆ ಮಿಟುಕಿಸಿ ಸರಿ ಎಂದು ಸನ್ನೆ ಮಾಡಿದಳು. ಅವಳು ತನ್ನ ಹೆಸರು ಹೇಳುವಳು ಎಂದು ನಿರೀಕ್ಶಿಸಿದ್ದ ಗಗನ್ ಗೆ ನಿರಾಸೆ ಆಯಿತು. ಅವಳು ಅಪರಿಚಿತನಿಗೆ ತನ್ನ ಹೆಸರನ್ನ ಹೇಳಬಾರದು ಅಂದುಕೊಂಡಿದ್ದಳು ಅನಿಸುತ್ತೆ. ಅವಳ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ಆದ್ರೆ ಗಗನ್ ಅವಳ ಕಣ್ಣ ಸಂಬಾಶೆಣೆಗೆ ಮರುಳಾಗಿದ್ದ. ‘ ಪ್ರೀತಿ ಅನ್ನೋದು ಪ್ರತಮ ನೋಟದಲ್ಲಿ ಶುರುವಾಗೋದು’ ಅಂತ ಅವನಿಗೆ ಅನಿಸುತ್ತಿತ್ತು. ಇಬ್ಬರು ಏನು ಮಾತಾಡಲಿಲ್ಲ ಆದ್ರೆ ಸ್ಕೂಟಿ ಮಾತ್ರ ರಸ್ತೆಯಲ್ಲಿರುವ ತಗ್ಗುಗಳಲ್ಲಿ ಹೋಗುವಾಗ ‘ಕಿರಾ ಕಿರಾ’ ಎಂದು ಜಾಸ್ತಿನೇ ಮಾತಾಡ್ತಾ ಇತ್ತು. ಅಶ್ಟೊತ್ತಿಗೆ ಆಗ್ಲೇ ಗ್ಯಾರೇಜ್ ಹತ್ತಿರ ಬಂದಿದ್ರು. ಗಗನ್ ಗ್ಯಾರೇಜಿನವನಿಗೆ, ‘ಸ್ವಲ್ಪ ಗಾಡಿ ಚೆಕ್ ಮಾಡಿ, ಸ್ಟಾರ‍್ಟ್ ಆಗ್ತಾನೆ ಇಲ್ಲ’ ಎಂದ. ಗ್ಯಾರೇಜಿನವನು ಬಂದು ಸ್ಕೂಟಿಯನ್ನ ನೋಡಿ. ಏನೋ ಯೋಚನೆ ಮಾಡಿದಂಗೆ ಮಾಡಿ ’15 ನಿಮಿಶ ಬಿಟ್ಟು ಬನ್ನಿ ಸರ‍್” ಎಂದ. ಗಗನ್ ಆ ಯುವತಿ ಮುಕ ನೋಡಿದ ಅವಳು ‘ಓಕೆ’ ಎಂದಳು. ಆಗ ಗಗನ್ ಅವಳಿಗೆ ‘ಬನ್ನಿ ಇಲ್ಲೇ ಪಕ್ಕದ ಹೋಟೆಲ್ ಅಲ್ಲಿ ಟೀ ಕುಡಿದು ಬರೋಣ. ಅಶ್ಟರಲ್ಲಿ ಅವ್ನು ರಿಪೇರಿ ಮಾಡಿರುತ್ತಾನೆ’ ಎಂದ. ‘ಸರಿ,ಬನ್ನಿ ಹೋಗೋಣ’ ಎಂದು ಪ್ರತ್ಯುತ್ತರ ಬಂತು. ಗಗನ್ ಅಲ್ಲೇ ಪಕ್ಕದ ಹೋಟೆಲ್ ಗೆ ಅವಳನ್ನ ಕರೆದೊಯ್ದ. ಎರಡು ಟೀ ಯನ್ನು ಆರ‍್ಡರ್ ಮಾಡಿ ಸುಮ್ಮನೆ ಕುಳಿತ.

ಗಗನ್ ಮತ್ತೊಮ್ಮೆ ಮಾತು ಶುರುಮಾಡಲು ‘ನಿಮ್ಮ ಹೆಸರು’ ಎಂದು ಆ ಯುವತಿಗೆ ಕೇಳಿದ. ಏನನ್ನೋ ಯೋಚಿಸುತ್ತಿದ್ದ ಆ ಯುವತಿ ವಾಸ್ತವಕ್ಕೆ ಬಂದು ‘ಸುಚಿತ್ರಾ’ ಎಂದು ಹೇಳಿ ಸುಮ್ಮನಾದಳು. ಮತ್ತೆ ಮಾತುಗಳು ಅಲ್ಲೇ ನಿಲ್ಲುತ್ತವೆ ಎಂದು ತಿಳಿದು ತನ್ನ ಬಗ್ಗೆ, ತನ್ನ ತಂದೆಯ ಬಗ್ಗೆ ಗಗನ್ ಹೇಳಿದ. ಆಗ ಸುಚಿತ್ರಾ ಒಂದು ಮುಗುಳುನಗೆ ಬೀರಿದಳು. ಬಹುಶಹ ನನ್ನ ಬಗ್ಗೆ ತಿಳಿದ ಮೇಲೆಯೇ ತನ್ನ ಬಗ್ಗೆ ಸುಳಿವು ನೀಡುವಳೆಂದು ಗಗನ್ ಅಂದುಕೊಂಡಿದ್ದು ನಿಜವಾಯಿತು. ಗಗನ್ ತನ್ನ ಬಗ್ಗೆ ಹೇಳಿದ ನಂತರ ಆ ಯುವತಿ ಮಾತಾಡಲು ಶುರುಮಾಡಿದಳು. ‘ನಾನು ಕೊನೆಯ ವರ‍್ಶದ ಎಂ ಬಿ ಬಿ ಎಸ್ ಸ್ಟೂಡೆಂಟ್. ಇವತ್ತು ನನ್ನ ಅಪ್ಪ ಅಮ್ಮ, ಸಂಬಂದಿಕರ ಊರಿಗೆ ಹೋಗಿದ್ರು. ಅದು ನನ್ನ ಹೊಸ ಸ್ಕೂಟಿ. ನನಗೆ ಸರಿಯಾಗಿ ಓಡಿಸೋಕೆ ಬರ‍್ದೇ ಇದ್ರೂ ಇವತ್ತು ಅಪ್ಪ ಅಮ್ಮ ಇರದಿದ್ದರಿಂದ ನಾನೇ ಕಾಲೇಜಿಗೆ ತಗೂಂಡು ಬಂದಿದ್ದೆ. ಬೆಳಿಗ್ಗೆ ಯಾರೋ ಕಾಲೇಜು ಪಾರ‍್ಕಿಂಗ್ ನಲ್ಲಿ ನನ್ನ ಸ್ಕೂಟಿಗೆ ತಮ್ಮ ಬೈಕ್ ಗುದ್ದಿದ್ದರು. ಅದನ್ನ ನಾನು ನೋಡದೆ ಹಾಗೆ ಸ್ಕೂಟಿ ತಂದದಕ್ಕೆ ಹಿಂಗೆಲ್ಲ ಆಗಿದ್ದು’ ಎಂದು ಒಂದೇ ಉಸಿರಿನಲ್ಲಿ ಎಲ್ಲ ವಿಶಯ ಹೇಳಿದಳು. ಗಗನ್ ಗೆ ಆಶ್ಚರ‍್ಯವಾಯಿತು. ಇಶ್ಟೊತ್ತು ಮಾತಾಡದೇ ಇದ್ದ ಹುಡುಗಿ ಇಶ್ಟೊಂದೆಲ್ಲಾ ಹೇಳಿಬಿಟ್ಟಳಲ್ಲ ಅಂತ. ‘ತ್ಯಾಂಕ್ಸ್ ಪಾರ್ ದಿ ಹೆಲ್ಪ್. ನಂಗೆ ಏನು ಮಾಡೋದು ಅಂತ ಗೊತ್ತಿಲ್ದೆ ಇರುವಾಗ ಬಂದು ಸಹಾಯ ಮಾಡಿದಕ್ಕೆ’ ಎಂದಳು ಸುಚಿತ್ರಾ. ಇಬ್ಬರು ಟೀ ಕುಡಿದು ಗ್ಯಾರೇಜ್ ಗೆ ಹೋದಾಗ, ಅವಳ ಸ್ಕೂಟಿ ರಿಪೇರಿ ಆಗಿತ್ತು. ಸುಚಿತ್ರಾ ಗಗನ್ ಗೆ ಬೈ ಎಂದಳು. ಆದ್ರೆ ಗಗನ್ ಮಾತ್ರ ಅವಳ ಪ್ರೀತಿಯಲ್ಲಿ ಬಿದ್ದಿದ್ದ. ‘ಹೇಗಾದ್ರು ಮಾಡಿ ಅವಳ ಮೊಬೈಲ್ ನಂಬರ್ ಕೇಳು’ ಅಂತ ಹೇಳಿತು ಮನಸು. ‘ಆದ್ರೆ ಸಹಾಯ ಮಾಡಿದ ಅಂತ ಅದನ್ನೇ ಲಾಬವಾಗಿ ತಗೊಳ್ತಿದಾನೆ ಅಂತ ಅವಳು ಅಂದುಕೊಂಡ್ರೆ’ ಅಂತ ಬುದ್ದಿ ಅವನಿಗೆ ಹೇಳಿತು. ಇವನ ಸ್ತಿತಿಯನ್ನ ಕಂಡ ಸುಚಿತ್ರಾ ಮತ್ತೆ ಆ ಮುದ್ದಾದ ಮುಗುಳುನಗೆ ಬೀರಿ, ‘ಮತ್ತೆ ನನ್ನ ಗಾಡಿ ರಸ್ತೆಯಲಿ ನಿಂತ್ರೆ ನಿಮನ್ನ ಎಲ್ಲಿ ಅಂತ ಹುಡುಕೋದು’ ಅಂತ ಅಂದಾಗ, ‘ನಿಮ್ಮ ನಂಬರ್ ಹೇಳಿ ಒಂದ್ ಮಿಸ್ ಕಾಲ್ ಕೊಡ್ತೀನಿ’ ಅಂತ ಗಗನ್ ತನ್ನ ಮೊಬೈಲ್ ಆಚೆ ತೆಗೆದ. ಇಬ್ಬರ ಮೊಬೈಲ್ ನಂಬರ್ ವಿನಿಮಯ ಮಾಡಿಕೂಂಡ ಮೇಲೆ ‘ಬೈ’ ಅಂತ ಹೇಳಿ ಹೂರಟು ಹೋದರು.

ಇಶ್ಟು ಯೋಚಿಸುವಶ್ಟರಲ್ಲಿ ತಾನು ಕೇಳುತಿದ್ದ ಹಾಡು ಮುಗಿದಾಗ ಗಗನ್ ವಾಸ್ತವಕ್ಕೆ ಮರುಳಿದ. ಆ ತಂಪಾದ ಕಡಲ ಅಲೆಗಳು ಅವನನ್ನ ನೆನಪಿನ ಮಾರುಕಟ್ಟೆಗೆ ಕರೆದೊಯ್ದದ್ದು ನೋಡಿ ಅವನಿಗೆ ಆಶ್ಚರ‍್ಯವಾಯಿತು. ಅಂದು ವಿನಿಮಯ ಮಾಡಿಕೂಂಡಿದ್ದ ನಂಬರ್ ನಿಂದ ಅವರ ಪರಿಚಯ ಸ್ನೇಹವಾಗಿ, ಪ್ರೇಮವಾಗಿ ಬದಲಾಗಿತ್ತು. ಮತ್ತೆ ಗಗನ್ ಸುಚಿತ್ರಾಗೆ ಕರೆ ಮಾಡಿದಾಗ, ಮತ್ತೆ ಅದೇ ದನಿ – ‘ನೀವು ಕರೆಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಅತವಾ ಸ್ವಿಚ್ ಆಪ್ ಮಾಡಿದ್ದಾರೆ’

************************************

ಇತ್ತ ಸಮುದ್ರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಪೊನ್ನಯ್ಯ, ತನ್ನ ಹಡಗಿನ ಪಟ ಹರಿದು ಹೋಗಿ ತಾನು ದೇವರ ಪಾದ ಸೇರುವುದು ಕಚಿತ ಅಂತ ತಿಳಿದು ಒಂದೇ ಕ್ಶಣದಲ್ಲಿ ತನ್ನ ಬದುಕಿನ ಹಿಂದಿನ ಗಟನೆಗಳನ್ನೆಲ್ಲಾ ನೆನಪಿಸಿಕೂಂಡ. ಪೊನ್ನಯ್ಯ ಬೆಳೆದದ್ದೆಲ್ಲ ಚಿಕಪ್ಪನ ಮನೆಯೆಲ್ಲಿ. ತನ್ನ ತಂದೆ ತಾಯಿ ಕಾಲವಾದದ್ದು ಯಾವಾಗ ಅಂತ ಅವನ ನೆನಪಿನಲ್ಲೇ ಇರಲಿಲ್ಲ. ಚಿಕ್ಕಪ್ಪನೇ ಬೆಳೆಸಿ, ದೊಡ್ಡವನನ್ನಾಗಿ ಮಾಡಿ, ಮುಂದೆ ನಾಗಮ್ಮನನ್ನ ಅವನಿಗೆ ಮದುವೆ ಮಾಡಿಕೊಟ್ಟು ಅವನ ಬದುಕನ್ನು ಒಂದು ದಾರಿಗೆ ತಂದಿದ್ದ. ಪೊನ್ನಯ್ಯ ಶ್ರಮಜೀವಿ. ಕಡಲ ತಾಯಿಯನ್ನೇ ನಂಬಿ ಬದುಕಿದವ. ಮೀನು ಮಾರುವುದೇ ಅವನ ವ್ಯಾಪಾರ. ಬಡತನ, ಅವನ ಹೆಂಡತಿ ನಾಗಮ್ಮನಿಗಿಂತ ಮೊದಲೇ ಅವನ ಸಂಗಾತಿ. ಪಿತ್ರಾರ‍್ಜಿತ ಅಂತ ಬಂದದ್ದು ಮಾತ್ರ ಏನೂ ಇಲ್ಲ. ಬಡತನ ಇದ್ದರೂ ಗಂಡ ಹೆಂಡತಿಯರ ನಡುವೆ ಯಾವುದೇ ಬಿನ್ನಾಬಿಪ್ರಾಯಗಳು ಇರಲಿಲ್ಲ. ಮದುವೆಯಾಗಿ ಎರಡು ವರ‍್ಶದ ಮೇಲೆ ಪೊನ್ನಯ್ಯನಿಗೆ ಒಬ್ಬ ಮಗ ಹುಟ್ಟಿದ. ಅವನ ಮೇಲೆ ಅವರಿಗೆ ದೇವರು ಸಂತಾನ ನೀಡಲೇ ಇಲ್ಲ. ಹುಟ್ಟಿದ ಮಗನಿಗೆ ದೀರಜ್ ಎಂದು ಹೆಸರಿಟ್ಟಿದ್ದ. ಆ ದಂಪತಿಗಳಿಗೆ ಅವರ ಮಗನನ್ನ ಚೆನ್ನಾಗಿ ಓದಿಸಿ ಸಮಾಜದಲ್ಲಿ ಒಳ್ಳೆ ಮನುಶ್ಯನನ್ನಾಗಿ ಮಾಡಬೇಕು ಎಂಬ ಕನಸು. ಆದ್ರೆ ದೀರಜ್ ಆದದ್ದು ಮಾತ್ರ ಪುಡಿ ರೌಡಿ. ಹೆತ್ತವರೆಂದರೆ ಕಿಂಚಿತ್ತೂ ಗೌರವ ಇರಲಿಲ್ಲ ಅವನಲ್ಲಿ. ಅವನು ಮನೆಯ ಬಿಟ್ಟು ಹೋಗಿ ಸುಮಾರು ತಿಂಗಳುಗಳೇ ಆಗಿದ್ದವು. ಆ ಊರಿನ ಶಾಸಕನ ಮನೆಯೇ ಅವನ ಬಿಡಾರ. ಆ ಎಂ ಎಲ್ ಎ ನ ಚೇಲಾ ಆಗಿದ್ದ. ಎಂ ಎಲ್ ಎ ಹೇಳಿದ್ರೆ ಯಾರನ್ನ ಬೇಕಾದರೂ ಕೊಲೆ ಮಾಡೋಕೂ ಹೆದರುತ್ತಿರಲಿಲ್ಲ. ಇದೇ ನೋವಲ್ಲೇ ನಾಗಮ್ಮ, ಪೊನ್ನಯ್ಯ ದಿನಾಲು ಕಣ್ಣೀರಿಡುತಿದ್ದರು. ಪೊನ್ನಯ್ಯ ಆ ಕಡಲಿನ ಅಲೆಗಳಲ್ಲಿ ಸಾಯೋಕೆ ಹೆದರುವನಲ್ಲ. ಆದ್ರೆ,ನಾಗಮ್ಮನನ್ನ ಒಂಟಿಯಾಗಿ ಬಿಟ್ಟು ಹೋದ್ರೆ, ಹೊರಗಿನ ಜಗತ್ತಿನ ಜ್ನಾನವಿಲ್ಲದವಳು ಹೇಗೆ ಬದುಕುವಳು ಎಂಬ ಕೊರಗಲ್ಲಿ, ‘ದೇವರೇ ಹೇಗಾದರೂ ಮಾಡಿ ಬದುಕಿಸು’ ಎಂದು ಮೊರೆಯಿಟ್ಟ.

************************************

ಇತ್ತ ನಾಗಮ್ಮ ತನ್ನ ಮಗನ ಶವಕ್ಕೋಸ್ಕರ ಸರಕಾರೀ ಆಸ್ಪತ್ರೆಯ ಮುಂದೆ ಕಾಯುತ್ತ ಕುಳಿತಿದ್ದಾಳೆ. ಆದ್ರೆ ಅವಳಿಗೆ ತನ್ನ ಮಗ ದೀರಜ್ ಸಾವಿನ ಬಗ್ಗೆ ಬೋರಯ್ಯ ತಂದ ಸುದ್ದಿಯೇ ಇನ್ನು ಕಿವಿಯಲ್ಲಿ ಗುನುಗುತಿತ್ತು. ಬೋರಯ್ಯ ಅವರದ್ದೇ ಊರಿನವನು. ಅವನಿಗೆ ಯಾರೋ, ಜೋರಾಗಿ ಬೈಕ್ ಓಡಿಸುತ್ತಿದ್ದ ನಾಗಮ್ಮನ ಮಗನಿಗೂ, ಒಂದು ಯುವತಿಯ ಸ್ಕೂಟಿಗೂ ಅಪಗಾತವಾಗಿ, ನಾಗಮ್ಮನ ಮಗ ದೀರಜ್ ಸ್ತಳದಲ್ಲೇ ಮ್ರುತಪಟ್ಟಿದ್ದಾನೆ ಎಂದು ಹೇಳಿದ್ದನ್ನ ಬಂದು ನಾಗಮ್ಮನಿಗೆ ಹೇಳಿದ್ದ. ನಾಗಮ್ಮನಿಗೆ ಆಕಾಶವೇ ಕಳಚಿ ಬಿದ್ದಂತಾಗಿ ಅಳಲು ಶುರುಮಾಡಿದಳು. ಸಾಲದ್ದಕ್ಕೆ ಪೊನ್ನಯ್ಯ ಬೇರೆ ಮನೆಯಲ್ಲಿ ಇರಲಿಲ್ಲ. ಮೀನು ಹಿಡಿಯಲು ಕಡಲಿಗೆ ಇಳಿದಿದ್ದ. ಏನು ಮಾಡೋದು ಅಂತ ತಿಳಿಯದೆ ಆಸ್ಪತ್ರೆಯ ಮುಂದೆ ಬಂದು ಕುಳಿತು ತನ್ನ ಮಗನ ಶವಕ್ಕಾಗಿ ಅಳುತ್ತಾ ಕೊತಿದ್ದಳು ನಾಗಮ್ಮ. ತನ್ನ ಮಗನಿಗೆ ಆಕ್ಸಿಡೆಂಟ್ ಮಾಡಿದ ಆ ಯುವತಿಗೆ, ಮತ್ತು ತನ್ನ ಮಗನಿಗೆ ಬೈಕ್ ಕರೀದಿ ಮಾಡಿಕೊಟ್ಟಿದ್ದ ಎಂ ಎಲ್ ಎ ಗೆ ಹಿಡಿ ಶಾಪ ಹಾಕಿದಳು. ಕಿರಿ ವಯಸ್ಸಿನ ಹುಡುಗರಿಗೆ ಬೈಕ್ ಕೊಟ್ರೆ ಸುಮ್ನೆ ಇರ‍್ತಾರಾ, ಇದೆಲ್ಲಾ ಆಗಿದ್ದು ಆ ಬೈಕ್ ಇಂದಾನೆ ಎಂದು ಪದೇ ಪದೇ ಮನಸಿನಲ್ಲಿ ಬಯ್ಯುತ್ತಿದ್ದಳು.

************************************

ಒಂದು ದೊಡ್ಡ ಅಲೆಯೊಂದು ಬಂದು ಪೊನ್ನಯ್ಯನ ಹಡಗಿಗೆ ಅಪ್ಪಳಿಸಿತು. ‘ಬಿಟ್ಟಿದ್ರೆ ನಾನಾದ್ರು ಆ ಮೀನುಗಳನ್ನ ತಿನ್ನುತಿದ್ದೆ. ಈಗ ಅವು ಮತ್ತೆ ಕಡಲ ಮಡಿಲಿಗೆ ಹೋದವು’ ಎಂದು ಸುತ್ತುತ್ತಿದ್ದ ಹದ್ದು ಪೊನ್ನಯ್ಯನಿಗೆ ಹಿಡಿ ಶಾಪ ಹಾಕಿ ಹಾರಿಹೋಯಿತು. ಪೊನ್ನಯ್ಯ ಅಲೆಯಲ್ಲಿ ಸಿಲುಕಿದ. ಅಲೆಗಳು ಪೊನ್ನಯ್ಯನನ್ನ ತಂದು ಕಡಲ ಕಿನಾರೆಗೆ ಎಸೆದಾಗ ಅವನು ಪ್ರಗ್ನಾಹೀನನಾಗಿದ್ದ. ಅದ್ರುಶ್ಟವಶಾತ್ ಪ್ರಾಣ ಪಕ್ಶಿಯನ್ನ ಎದೆಯಲ್ಲಿ ಇನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದ. ಗಗನ್ ಸುಚಿತ್ರಾಗಾಗಿ ಕಾದು ಕಾದು ಕೊನೆಗೆ ಅವಳ ಮನೆಯಲ್ಲೇ ನೋಡಿಕೂಂಡು ಹೋಗುವ ಅಂತ, ತೀರದಲ್ಲಿ ನಡೆಯುತ್ತಾ ತನ್ನ ಬೈಕ್ ಹತ್ತಿರ ಹೋಗುತ್ತಿದ್ದಾಗ ಯಾರೋ ಆ ಮಬ್ಬಲ್ಲಿ ಕರೆದಂತಾಯಿತು. ಗಗನ್ ಆ ದನಿಯನ್ನೇ ಹಿಂಬಾಲಿಸಿ ಹೊರಟಾಗ ಅಲ್ಲಿ ಬಸಯ್ಯ ಅನ್ನುವನೊಬ್ಬ, ದಡಕ್ಕೆ ಬಂದು ಬಿದ್ದಿದ್ದ ಪೊನ್ನಯ್ಯನ ದೇಹವನ್ನು ಆಚೆ ಎಳೆಯಲು ಪ್ರಯತ್ನ ಪಡುತ್ತಿದ್ದ. ಒಬ್ಬನಿಗೇ ಅದು ಸಾದ್ಯವಾಗದಿದ್ದಾಗ ಗಗನ್ ನನ್ನ ನೆರವಿಗಾಗಿ ಕರೆದಿದ್ದ. ಗಗನ್ ಮತ್ತು ಬಸಯ್ಯ ಸೇರಿ ಪೊನ್ನಯ್ಯನನ್ನು ಸರಕಾರೀ ಆಸ್ಪತ್ರೆಗೆ ಕರೆದೊಯ್ದರು. ಡಾಕ್ಟರ್ ಪೊನ್ನಯ್ಯನ ದೇಹವನ್ನು ಪರೀಕ್ಶಿಸಿ, ಹೆದರಬೇಕಿಲ್ಲ ಎಂದಾಗ, ಗಗನ್ ‘ನಾನು ಹೊರಡುವೆ’ ಎಂದು ಬಸಯ್ಯನಿಗೆ ಹೇಳಿ ಹೊರಟ. ಬಸಯ್ಯ ‘ಇರಿ ಆ ಪೊನ್ನಯ್ಯನ ಮಗನಿಗೆ ಕಾಲ್ ಮಾಡಿದ್ದೆ, ಇನ್ನೇನು ಬರುವನು ಮಾತಾಡಿಸಿಕೊಂಡು ಹೋಗಿ’ ಎಂದು ಹೇಳಿ ಆಚೆ ಇರುವ ಟೀ ಅಂಗಡಿಗೆ ಕರೆದುಕೂಂಡು ಹೋದ. ಗಗನ್ ಮತ್ತೆ ಬಸಯ್ಯ ಆಚೆ ಬಂದಾಗ ಅಲ್ಲೇ ಲೈಟ್ ಹತ್ತಿದ್ದ ಒಂದು ಕೋಣೆಯ ಹೊರಗೆ ಪೊನ್ನಯ್ಯನ ಹೆಂಡತಿ ನಾಗಮ್ಮ ಅಳುತ್ತ ಇರುವುದನ್ನು ನೋಡಿದ ಬಸಯ್ಯ. ‘ಅರೆ ಇವಳು ನಮ್ಮ ಪೊನ್ನಯ್ಯನ ಹೆಂಡತಿ ನಾಗಮ್ಮ ಇಲ್ಲಿ ಯಾಕೆ ಅಳುತ್ತಾ ಕುಳಿತಿದ್ದಾಳೆ ‘ ಅಂತ ಅವಳು ಅಳುವಿನ ಕಾರಣ ಕೇಳಲು ನಾಗಮ್ಮನ ಬಳಿ, ಬಸಯ್ಯ ಮತ್ತು ಗಗನ್ ಹೋದರು.

ನಾಗಮ್ಮ, ಬಸಯ್ಯ ಬರುತ್ತಿದದ್ದನ್ನು ಕಂಡು ಜೋರಾಗಿ ಅಳುತ್ತ ‘ಬಸಯ್ಯ, ನಮ್ಮ ದೀರಜ್ ನಮ್ಮನ್ನು ಬಿಟ್ಟು ಹೊರಟೋದಾ’ ಎಂದಳು. ಇದನ್ನ ಕೇಳಿದ ಗಗನ್ ಮತ್ತೆ ಬಸಯ್ಯನಿಗೆ ಆಶ್ಚರ‍್ಯ. ‘ಈಗ ತಾನೇ ಅವನ ಜೊತೆ ಬಸಯ್ಯ ಮಾತಾಡಿದಾನೆ, ಅದು ಹೇಗೆ ಇವನು ಸತ್ತೋದ’ ಅಂತ ಗಗನ್ ಎಂದಾಗ ನಾಗಮ್ಮನಿಗೆ ದಿಗಿಲಾಯಿತು. ಒಂದು ಗಂಟೆ ಹಿಂದೆ ಬೋರಯ್ಯ ಬಂದು, ‘ನಿನ್ನ ಮಗ ಬೈಕ್ ಮತ್ತು ಒಂದು ಸ್ಕೂಟಿ ಮದ್ಯೆ ಆದ ಆಕ್ಸಿಡೆಂಟ್ ನಲ್ಲಿ ಸ್ತಳದಲ್ಲೇ ಸತ್ತುಹೋದ’ ಎಂದು ಹೇಳಿದ್ದನ್ನು ನಾಗಮ್ಮ ಹೇಳಿದಳು. ಆಗ ಬಸಯ್ಯ ‘ಇಲ್ಲ ನಿನ್ನ ಮಗನಿಗೆ ಏನೂ ಆಗಿಲ್ಲ. ಇರು ಅವನೇ ಇಲ್ಲೇ ಬರ‍್ತಿದಾನೆ. ಮತ್ತೆ ನಿನ್ನ ಗಂಡ ಪೊನ್ನಯ್ಯ ಕಡಲಲ್ಲಿ ಸಿಲುಕಿ ಮೂರ‍್ಚೆ ಹೋಗಿ ದಡದಲ್ಲಿ ಬಿದ್ದಿದ್ದ. ಅವನನ್ನ ತರಲು ಇವರೇ ಸಹಾಯ ಮಾಡಿದ್ದು’ ಎಂದ ಗಗನ್ ಕಡೆ ಕೈ ತೋರಿಸಿದ. ಆದ್ರೆ ಗಗನ್ ಮಾತ್ರ ಯಾವುದೋ ಕೆಟ್ಟ ಕನಸಿನಲ್ಲಿ ಕಳೆದು ಹೋದವನಂತೆ ನಿಂತಿದ್ದ. ಅವನಿಗೆ ನಾಗಮ್ಮ ಹೇಳಿದ ಸ್ಕೂಟಿ ಆಕ್ಸಿಡೆಂಟ್ ಮತ್ತು ಸುಮಾರು ಒಂದು ಗಂಟೆ ಇಂದ ಸುಚಿತ್ರಾಳ ಮೊಬೈಲಿಗೆ ಕರೆ ಹೋಗದೇ ಇದ್ದದ್ದನ್ನು ತಾಳೆ ಹಾಕಿ ಅವನಿಗೆ ಮಾತೇ ಬರದಾಗಿತ್ತು. ನಾಗಮ್ಮ ಗಗನ್ ಗೆ ದನ್ಯವಾದ ಹೇಳಿ ಪೊನ್ನಯ್ಯ ಇರುವ ಕೋಣೆಗೆ ಹೋದಳು.

************************************

ಮರಣೋತ್ತರ ಪರೀಕ್ಶೆ ಮಾಡಿ ಆಚೆ ಬಂದ ಡಾಕ್ಟರ್ ‘ನೀವು ಈಗ ಹೋಗಿ ನೋಡಬಹುದು’ ಎಂದಾಗ ಗಗನ್ ಪ್ರತಿಯೊಂದು ಹೆಜ್ಜೆಗೂ, ‘ದೇವರೇ ಇದು ಸುಚಿತ್ರಾ ಆಗದೇ ಇರಲಿ’ ಎಂದು ಬೇಡಿಕೊಳ್ಳುತ್ತಾ ಒಳಗೆ ಹೋದನು. ಆದರೆ ಅಲ್ಲಿ ಅವನಿಗೆ ಕಂಡದ್ದು ಸುಚಿತ್ರಾಳ ಶವ. ಅದನ್ನ ಕಂಡ ಗಗನ್ ಒಂದೇ ಸಮನೆ ಅಳಲು ಶುರು ಮಾಡಿದನು. ನಾಗಮ್ಮ ಅದು ತನ್ನ ಮಗನದು ಅಲ್ಲ ಎಂದು ನಿರಾಳವಾದರೂ ಗಗನ್ ಅಳುತ್ತಿದ್ದುದನ್ನು ನೋಡಿ, ‘ಯಾರು ಇವಳು?’ ಎಂದು ಕೇಳಿದಳು. ‘ಇವಳು ನಾನು ಮದುವೆ ಆಗಬೇಕಂತಿದ್ದ ಹುಡುಗಿ. ಇವಳನ್ನ ಬೇಟಿ ಮಾಡುವ ಸಲವಾಗಿಯೇ ಇಂದು ನಾನು ದಡದ ಹತ್ರ ಕುಳಿತದ್ದು. ಆದ್ರೆ ಇವಳಿಗೆ ಪೋನ್ ಹೋಗ್ತಾನೆ ಇರ‍್ಲಿಲ್ಲ’ ಅಂತ ಗಗನ್ ಎಂದಾಗ ಇಬ್ಬರ ಕಣ್ಣಲ್ಲಿ ನೀರು ತುಂಬಿಕೂಂಡಿತ್ತು. ಅಶ್ಟರಲ್ಲಿ ಬಸಯ್ಯನಿಗೆ ಕರೆಮಾಡಿದ ದೀರಜ್ ‘ನಾನು ಇಲ್ಲಿ ಆಸ್ಪತ್ರೆಯ ಹತ್ತಿರ ಇದ್ದೀನಿ. ನಾನು ತುಂಬಾ ಹೊತ್ತು ಇಲ್ಲಿ ಇರಬಾರದೆಂದು ಎಂ ಎಲ್ ಎ ಹೇಳಿದ್ದಾರೆ. ಎಲ್ಲಿದ್ದೀಯ ನೀನು’ ಎಂದು ಕೇಳಿದ. ಆಗ ಬಸಯ್ಯ ತಾನು ಶವಾಗಾರದಲ್ಲಿ ಇರುವುದಾಗಿ ಹೇಳಿದಾಗ, ‘ನನ್ನ ತಂದೆ ತಿರಿಹೋದರೇ’ ಎಂದು ಕೇಳಿದ. ಅದಕ್ಕೆ ಪ್ರತಿಯಾಗಿ ಬಸಯ್ಯ ‘ಇಲ್ಲ,ಇಲ್ಲಿ ಬಾ ನಿಂಗೆ ಹೇಳ್ತೀನಿ’ ಎಂದು ಕರೆದು ಶವಾಗಾರದ ಬಾಗಿಲಿಗೆ ಹೋಗಿ ನಿಂತ. ಅಲ್ಲಿಗೆ ಬಂದ ದೀರಜ್ ಗೆ ‘ನಿನ್ನ ತಂದೆ ಬದುಕಲು ಕಾರಣನಾದ ಆ ಹುಡುಗನ ಹುಡುಗಿಗೆ ಯಾರೋ ಆಕ್ಸಿಡೆಂಟ್ ಮಾಡಿದ್ದಾರೆ, ಅವಳು ಸ್ತಳದಲ್ಲೇ ಸತ್ತೋಗಿದಾಳೆ’ ಎಂದು ಹೇಳಿ ಅವನನ್ನ ಒಳಗೆ ಕರೆದೊಯ್ದ.

ಆಗ ಅಲ್ಲಿ ಸುಚಿತ್ರಾಳ ಶವ ನೋಡಿ ದೀರಜ್ ಅಲ್ಲೇ ಕುಸಿದ. ‘ನಾನೇ ಅವಳಿಗೆ ಆಕ್ಸಿಡೆಂಟ್ ಮಾಡಿದ್ದು. ಅವಳು ರಸ್ತೆಯಲ್ಲಿ ರಕ್ತದ ಮಡುವಲ್ಲಿ ಬಿದ್ದು ಸಹಾಯ ಕೇಳುತ್ತಿದ್ದರೂ, ನಾನು ಅವಳನ್ನ ಅಲ್ಲೇ ಬಿಟ್ಟು ಬೈಕ್ ತಗೆದುಕೊಂಡು ಓಡಿ ಹೋದೆ. ಆದ್ರೆ ಆಕೆಯ ಮದುವೆಯಾಗಬೇಕೆಂದುಕೊಂಡಿದ್ದ ಹುಡುಗ ನನ್ನ ಅಪ್ಪನನ್ನ ಸಾವಿನಿಂದ ಬದುಕಿಸಿದ’ ಎಂದು ಕಣ್ಣೀರಿಡತೊಡಗಿದ.

( ಚಿತ್ರ ಸೆಲೆ : opening.download )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Kiran G says:

    ??????????

ಅನಿಸಿಕೆ ಬರೆಯಿರಿ: