ಚಿಣ್ಣರ ಅಚ್ಚುಮೆಚ್ಚಿನ ಡೋರೆಮಾನ್
ಕಾರ್ಟೂನುಗಳೆಂದರೆ ಯಾರಿಗೆ ತಾನೆ ಇಶ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿಗಂತೂ ಕಾರ್ಟೂನುಗಳೆಂದರೆ ಅಚ್ಚುಮೆಚ್ಚು. ನೋಡಲು ಪುಟ್ಟ ಗೊಂಬೆಗಳಂತಿರುವ ಚೆಂದದ ಕಾರ್ಟೂನು ಪಾತ್ರಗಳು ಕಂಡರೆ ಚಿಣ್ಣರಿಗೆ ಪ್ರಾಣ. ಕಾರ್ಟೂನು ಪಾತ್ರಗಳು ನಮ್ಮ ಸಂಗಡವಿದ್ದರೆ ಎಶ್ಟು ಚೆನ್ನಾಗಿರುತ್ತದೆ ಎನ್ನುವುದು ಹಲವು ಚಿಣ್ಣರ ಕನಸು. ಇಂತಹ ಹಲವಾರು ಕಾರ್ಟೂನು ಪಾತ್ರಗಳಲ್ಲಿ ಡೋರೆಮಾನ್ ರೋಬೋಟ್ ಕೂಡ ಒಂದು. ಇಂತಹ ರೋಬೋಟ್ ಗೆಳೆಯ ಒಬ್ಬ ನಮ್ಮ ಸಂಗಡ ಇರಲಿ ಎಂದು ಬಯಸುವ ಚಿಣ್ಣರಿದ್ದಾರೆ. ಇದಕ್ಕೆ ಕಾರಣ ಡೋರೆಮಾನ್ ಮಾಡುವ ಸಹಾಯ ಮತ್ತು ಅವನ ಬಳಿ ಇರುವ ಬಗೆ ಬಗೆಯ ಗ್ಯಾಜೆಟ್ಸ್.
ಟಿವಿಯಲ್ಲಿ ಡೋರೆಮಾನ್ ಶೋ ಬಂದರೆ ಸಾಕು, ಮಾಡುವ ಎಲ್ಲ ಕೆಲಸವನ್ನು ಬದಿಗಿಟ್ಟು ಕುಳಿತು ಬಿಡುತ್ತಿದ್ದೆವು. ನೀಲಿ ಬಣ್ಣದ ಡೋರೆಮಾನ್, ಕಿವಿಯಿಲ್ಲದ ಬೆಕ್ಕಿನಂತಹ ಅಪರೂಪದ ರೋಬೋಟ್. ಡುಮ್ಮು ಹೊಟ್ಟೆಯ ಮೇಲೆ ಪುಟ್ಟ ಕಿಸೆಯನ್ನಿಟ್ಟುಕೊಂಡು, ಕಿಸೆಯಿಂದ ತರ ತರಹದ ಗ್ಯಾಜೆಟ್ ಹೊರ ತಗೆಯುವ ಈ ಬೆಕ್ಕಿಗೆ ಇಲಿ ಕಂಡರೆ ಅಂಜಿಕೆ. ಡೋರೆಮಾನ್ನ ನೆಚ್ಚಿನ ಗೆಳೆಯ ನೋಬಿತಾ, ಯಾವಾಗಲೂ ತೊಂದರೆಯೊಳಗೆ ಸಿಲುಕಿಕೊಂಡು ಡೋರೆಮಾನ್ನ ಹತ್ತಿರ ಸಹಾಯಕ್ಕಾಗಿ ಓಡೋಡಿ ಬರುವನು. ನೋಬಿತಾ ಮತ್ತೆ ಯಾವ ಹೊಸ ತೊಂದರೆಗೆ ಒಳಗಾಗುತ್ತಾನೋ? ಇವನನ್ನು ಕಾಪಾಡಲು ಡೋರೆಮಾನ್ ಯಾವ ಹೊಸ ಗ್ಯಾಜೆಟ್ ಹೊರತೆಗೆಯುತ್ತಾನೋ, ಅದನ್ನು ನೋಬಿತಾ ಸರಿಯಾಗಿ ಬಳುಸುತ್ತಾನೋ ಇಲ್ಲವೋ ಎನ್ನುವ ತಳಮಳ ಇರುತ್ತಿತ್ತು. ಸಿಜುಕಾ, ಜಿಯಾನ್, ಸುನಿಯೊ ನೋಬಿತಾನ ಗೆಳೆಯರು. 22ನೇ ಶತಮಾನದಲ್ಲಿ ಹುಟ್ಟಿ ಹಿಂದಕ್ಕೆ ಅಂದರೆ 21ನೇ ಶತಮಾನಕ್ಕೆ ಬಂದ ಡೋರೆಮಾನ್ ಹೊಸ ಬಗೆಯ ತರ-ತರಹದ ಗ್ಯಾಜೆಟ್ಗಳನ್ನು ತನ್ನ ಕಾಲದಿಂದ ತಗೆದುಕೊಂಡು ಬಂದಿದ್ದ. ಒಮ್ಮೆ ನೋಡಿದ ಡೋರೆಮಾನ್ ಎಪಿಸೋಡುಗಳನ್ನೇ ಮತ್ತೆ ಮತ್ತೆ ನೋಡಿದರೂ ಬೇಜಾರಾಗದು.
ಜಗತ್ತಿನಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ನಗಿಸುವ ಚಿತ್ರಸರಣಿಗಳಲ್ಲಿ ಡೋರೆಮಾನ್ ಕೂಡ ಒಂದು
ಪುಜಿಕೊ ಪುಜಿಯೊ ಅವರಿಂದ ರಚನೆಯಾದ ಡೋರೆಮಾನ್ ಸರಣಿ 1969ರಲ್ಲಿ ನಗಿಸುವ ಚಿತ್ರಗಳಾಗಿ ಜಪಾನಿನ 6 ಬೇರೆ ಬೇರೆ ಮ್ಯಾಗಜೀನ್ಗಳಲ್ಲಿ ಅಚ್ಚಾಗುತ್ತಿತ್ತು. ಇದುವರೆಗೆ ಸುಮಾರು 1,345 ಡೋರೆಮಾನ್ ಕತೆಗಳು ಟಿವಿ ಪರದೆಯ ಮೇಲೆ ತೆರೆಕಂಡು, ಹೆಚ್ಚು ಮೆಚ್ಚುಗೆ ಪಡೆದು ಚಿಣ್ಣರ ಮನದ ಮಾತಾಗಿವೆ. ಡೋರೆಮಾನ್ ಸರಣಿಯನ್ನು ಹುಟ್ಟುಹಾಕಿದ ಪುಜಿಕೊ ಪುಜಿಯೊ ಅವರ ಹುಟ್ಟೂರಾದ ಜಪಾನಿನ ಟೊಯಾಮಾದಲ್ಲಿರುವ ತಕಾಒಕೊ ಸೆಂಟ್ರಲ್ ಲೈಬ್ರರಿಯಲ್ಲಿ ಡೋರೆಮಾನ್ ಸರಣಿಯ ಎಲ್ಲ ಕಡತಗಳನ್ನು ಒಟ್ಟುಗೂಡಿಸಿ ಇಡಲಾಗಿದೆ. ಅಮೆಜಾನ್ ಕಿಂಡಲ್ನಲ್ಲಿ ಮೊದಲಬಾರಿಗೆ ಡೋರೆಮಾನ್ ನಗಿಸುವ ಚಿತ್ರಗಳ ಸರಣಿಯನ್ನು ಜುಲೈ 2013ರಲ್ಲಿ ಡಿಜಿಟಲ್ ರೂಪದಲ್ಲಿ ಬಿಡುಗಡೆ ಮಾಡಲಾಯಿತು. 2015 ರ ತನಕ ಒಟ್ಟು 100 ಮಿಲಿಯನ್ಗೆ ಮೀರಿದ ಪ್ರತಿಗಳು ಮಾರಾಟವಾಗಿದ್ದು, ಜಗತ್ತಿನಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ನಗಿಸುವ ಚಿತ್ರಸರಣಿಗಳಲ್ಲಿ ಡೋರೆಮಾನ್ ಕೂಡ ಒಂದು.
ಟೋಕಿಯೋನಲ್ಲೊಂದು ಡೋರೆಮಾನ್ ಮ್ಯೂಜಿಯಂ
ಜಗತ್ತಿನ ಎಲ್ಲ ಚಿಣ್ಣರಿಗೂ ಡೋರೆಮಾನ್ ಎಂದರೆ ಅಚ್ಚುಮೆಚ್ಚು. ನೀಲಿ ಬಣ್ಣದ ಬೆಕ್ಕನ್ನು ನೋಡಲು ಚಿಣ್ಣರಂತೂ ತುಂಬಾ ಇಶ್ಟ ಪಡುತ್ತಾರೆ. ಜಪಾನಿನ ಟೊಕಿಯೊ ನಗರದಲ್ಲಿ ಡೋರೆಮಾನ್ ನೋಡುಗರಿಗಾಗಿ ಅಂತಲೇ ಡೋರೆಮಾನ್ ಮ್ಯೂಜಿಯಂ ಒಂದಿದೆ. ಚಿಣ್ಣರ ಮೆಚ್ಚಿನ ಡೋರೆಮಾನ್ ಈ ಮ್ಯೂಜಿಯಂನ ಎಲ್ಲ ದಿಕ್ಕಿನಲ್ಲೂ ಕಾಣಸಿಗುವನು. ಡೋರೆಮಾನ್ ಅಲ್ಲದೇ ನೋಬಿತಾ, ಜಿಯಾನ್ ಮತ್ತು ಡೋರೆಮಾನ್ ಶೋನಲ್ಲಿರುವ ಹಲವು ಪಾತ್ರದ ಚಿತ್ರಗಳು ಮತ್ತು ಗೊಂಬೆಗಳನ್ನು ಕಂಡು ಸಂತಸ ಪಡಬಹುದು. ಡೋರೆಮಾನ್ ನಗಿಸುವ ಚಿತ್ರಗಳನ್ನು ಹುಟ್ಟುಹಾಕಿದ ಪುಜಿಕೊ ಪುಜಿಯೊ ಅವರಿಗೆ ದೊರೆತ ಉಡುಗೊರೆ ಮತ್ತು ಪ್ರಶಸ್ತಿಗಳನ್ನು ಕೂಡ ಈ ಮ್ಯೂಜಿಯಂನಲ್ಲಿ ನೋಡಬಹುದು.
ಡೋರೆಮಾನ್ನ ‘-100’ನೆಯ ಹುಟ್ಟುಹಬ್ಬ
ತನ್ನ ಗೆಳೆಯ ನೋಬಿತಾ ಸಹಾಯಕ್ಕಾಗಿ 22 ನೇ ಶತಮಾನದಿಂದ 21ನೇ ಸೆಂಚುರಿಗೆ ಬಂದ ಡೋರೆಮಾನ್ ಹುಟ್ಟಿದ್ದು 3 ಸೆಪ್ಟಂಬರ 2112ರಲ್ಲಿ. ತಾನಿರುವ ಹೊತ್ತಿನಿಂದ ಹಿಂದಿನ ಹೊತ್ತಿಗೆ ಸಾಗುವ ಗ್ಯಾಜೆಟ್ಗಳನ್ನು ಮತ್ತು ಮನುಶ್ಯನೊಬ್ಬನೇ ಗಾಳಿಯಲ್ಲಿ ಹಾರಾಡಬಲ್ಲ ಬಂಡಿಗಳನ್ನು ಮುಂದಿನ ಪೀಳಿಗೆಯವರು ಕಂಡುಹಿಡಿಯುವರು ಎಂಬ ವಿಶಯಗಳನ್ನು ಡೋರೆಮಾನ್ ಶೋ ತೋರಿಸಿಕೊಡುತ್ತದೆ. 2012 ರಲ್ಲಿ ಟೋಕಿಯೊದಲ್ಲಿರುವ ಡೋರೆಮಾನ್ ಮ್ಯೂಜಿಯಂನಲ್ಲಿ ಡೋರೆಮಾನ್ನ ‘-100’ ನೆಯ ಹುಟ್ಟುಹಬ್ಬವನ್ನು ಆಚರಿಸಲಾಯಿತು
(ಮಾಹಿತಿ ಮತ್ತು ಚಿತ್ರ ಸೆಲೆ: wikipedia,wheninmanila.com, otakumode.com, vizitrip.com)
ಇತ್ತೀಚಿನ ಅನಿಸಿಕೆಗಳು