ಟರ‍್ಕಿಯ ಅಲಂಕಾರಿಕ ಹಕ್ಕಿಮನೆಗಳು

– ಕೆ.ವಿ.ಶಶಿದರ.

ಟರ‍್ಕಿಯ ಹಕ್ಕಿಮನೆಗಳು Bird house

ಟರ‍್ಕಿಯ ಸಮಾಜ ಎಲ್ಲಾ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತದೆ. ವಿಶೇಶವಾಗಿ ಹಕ್ಕಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಪಕ್ಶಿಗಳು ಅವರಗೆ ಅದ್ರುಶ್ಟ ತರುವ ದೇವತೆಗಳಂತೆ. ಅದರಲ್ಲೂ ಟರ‍್ಕಿಯನ್‍ರಿಗೆ ಗರಿಗಳನ್ನು ಹೊಂದಿರುವ ಹಕ್ಕಿಗಳನ್ನು ಕಂಡರೆ ಹೇಳಲಾಗದಂತಹ ಪ್ರೀತಿ.

ಪ್ರಕ್ರುತಿ ವೈಪರಿತ್ಯದಿಂದ ಹಕ್ಕಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು ಹೆಣಗಾಡುತ್ತಿವೆ. ಗುಬ್ಬಚ್ಚಿಗಳಿಗೆ, ಪಾರಿವಾಳಗಳಿಗೆ ತಾವು ಬದುಕಲು ಹಾಗೂ ಮರಿಗಳನ್ನು ಸಾಕಲು ಬೇಕಿರುವ ಪುಟ್ಟ ಪುಟ್ಟ ಮನೆಗಳನ್ನು ಕಟ್ಟಿ ಕೊಟ್ಟಿರುವುದೇ ಅವರಿಗೆ ಅವುಗಳ ಮೇಲಿನ ಪ್ರೀತಿಗೆ ಸಾಕ್ಶಿ. ಹಕ್ಕಿ ಮನೆಗಳನ್ನು ಟರ‍್ಕಿಯ ಮಸೀದಿಗಳಲ್ಲಿ, ಮದ್ರಸಾಗಳಲ್ಲಿ, ಗ್ರಂತಾಲಯಗಳಲ್ಲಿ, ಮನೆಗಳಲ್ಲಿ, ಸಮಾದಿಗಳಲ್ಲಿ, ಸೇತುವೆಗಳಲ್ಲಿ ಹಾಗೂ ಅರಮನೆಗಳಲ್ಲಿ ಕಾಣಬಹುದು. ಕಟ್ಟಡದ ಮುಂಬಾಗದಲ್ಲಿ ಹಕ್ಕಿ ಮನೆಗಳಿದ್ದರೆ ಶುಬವೆನ್ನುವುದು ಅವರ ನಂಬಿಕೆ.

ಹಕ್ಕಿ ಮನೆಗಳನ್ನು ಕಟ್ಟುವುದರಿಂದ ಎರಡು ಉಪಯೋಗಗಳಿವೆ

ಒಂದು, ಪರಿಸರದ ದ್ರುಶ್ಟಿಕೋನ. ಹಕ್ಕಿಗಳಿಗೆ ತಮ್ಮ ವಾಸಕ್ಕೆ ತಾವೇ ಗೂಡು ಕಟ್ಟುವ ಯೋಚನೆಯಿರುವುದಿಲ್ಲ. ಗೂಡು ಕಟ್ಟಲು ಬೇಕಿರುವ ಕಸ ಕಡ್ಡಿಗಳನ್ನು ಅಲ್ಲಿಂದ ಇಲ್ಲಿಂದ ಹೆಕ್ಕಿ ತರುವ ಗೋಜಿಲ್ಲ. ಹಕ್ಕಿಗಳಿಗೆ ಮನೆಯನ್ನು ಕಟ್ಟಿ ನೀಡುವುದರಿಂದ ಎಲ್ಲೆಂದರಲ್ಲಿ ಹಿಚಿಕೆ ಹಾಕುವುದನ್ನು ಕೊಂಚ ಮಟ್ಟಿಗೆ ತಡೆಗಟ್ಟಲು ಸಾದ್ಯ. ಆವರಣದ ಸ್ವಚ್ಚತೆಯ ದ್ರುಶ್ಟಿಯಿಂದ ಇದು ಬಹಳ ಸಹಕಾರಿ.

ಎರಡನೆಯದು ದಾರ‍್ಮಿಕ ದ್ರುಶ್ಟಿಕೋನ. ಹಕ್ಕಿ ಮನೆ ಕಟ್ಟಿದವರಿಗೆ ಬವಿಶ್ಯತ್ತಿನಲ್ಲಿ ತಾವು ಮಾಡುವ ಎಲ್ಲಾ ಕೆಲಸಗಳು ಅಡೆತಡೆಗಳಿಲ್ಲದೆ ನೆರವೇರುವುದೆಂಬ ಬರವಸೆ ಟರ‍್ಕಿಯರಿಗೆ.

ಓಟ್ಟೋವಾನ್‍ನ 15ನೇ ಶತಮಾನದ ಯುಗದಲ್ಲಿ ಹಕ್ಕಿಮನೆಗಳನ್ನು ಕಟ್ಟುವುದು ಸೌಂದರ‍್ಯ ಶಾಸ್ತ್ರದ ಒಂದು ಪ್ರಮುಕ ಅಂಶವಾಗಿತ್ತು. ಈ ಯುಗದಲ್ಲಿ ಕಟ್ಟಲಾದ ಹಲವು ಹಕ್ಕಿಮನೆಗಳು ಎರಡು ಮೂರು ಅಂತಸ್ತುಗಳ ಅರಮನೆಯಂತೆ ವಿಜ್ರುಂಬಿಸುತ್ತಿದ್ದವು. ಬಹುಮುಕ ಕೆತ್ತನೆಯ ರೈಲಿಂಗುಗಳು, ವಿಸ್ತಾರವಾದ ಬಾಗಿಲು ಮತ್ತು ಕಿಟಕಿಗಳು, ಹೊರ ಚಾಚಿಕೊಂಡಿರುವ ಬಾಲ್ಕನಿಗಳು, ಸುಂದರ ಮೇಲ್ಚಾವಣಿಗಳು ಗುಮ್ಮಟಗಳು ಈ ಹಕ್ಕಿ ಮನೆಗಳಲ್ಲಿ ಕಾಣಬಹುದು. ಇವು ಅಂದಿನ ವಾಸ್ತು ಶಿಲ್ಪದ ವಿವರ ಮತ್ತು ಶೈಲಿಯನ್ನೇ ಹೆಚ್ಚಾಗಿ ಪ್ರತಿಬಿಂಬಿಸುವಂತಿದೆ.

ಹಕ್ಕಿಮನೆಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು

ಮೊದಲನೆಯದು ಕಟ್ಟಡದ ಮುಂಬಾಗದಲ್ಲಿರುವುದು. ಒಂದೇ ಬೆಳಕಿನಕಿಂಡಿ ಇಲ್ಲವೇ ಅಕ್ಕ ಪಕ್ಕದ ಬಾಗಗಳಲ್ಲಿ ಬೇರೆ ಬೇರೆ ಬೆಳಕಿನಕಿಂಡಿಗಳನ್ನು ಹೊಂದಿದ್ದು ಹಕ್ಕಿಗಳ ಓಡಾಟಕ್ಕೆ ಅನುವು ಮಾಡಿಕೊಟ್ಟ ವಿನ್ಯಾಸಗಳು ಹಾಗೂ ಹೊರಕ್ಕೆ ಚಾಚದಂತೆ ಒಳ ಬಾಗದಲ್ಲಿರುವ ರಚನೆಗಳು. ಇಂತಹ ರಚನೆ ಹಾಗೂ ವಿನ್ಯಾಸದ ಹಕ್ಕಿಮನೆಗಳಿಗೆ ಸುಲೈಮಾನ್ ಮಸೀದಿ, ಹೊಸ ಮಸೀದಿ (ಯೇನಿ ಕ್ಯಾಮಿ), ಮತ್ತು ಇಸ್ತಾಂಬುಲ್‍ನಲ್ಲಿರುವ ಬೈಯುಕೆ ಸೆಕ್ಮನ್ ಸೇತುವೆಯನ್ನು ಉದಾಹರಣೆಯಾಗಿ ಹೆಸರಿಸಬಹುದು.

ಎರಡನೆಯದು ಮನೆಯ ಕಟ್ಟಡದ ಮೇಲ್ಬಾಗದಲ್ಲಿ ಮುಂದಕ್ಕೆ ಚಾಚಿಕೊಂಡಿರುವಂತಹ ವಿನ್ಯಾಸದ ಹಕ್ಕಿಮನೆಗಳು. ಬಹುತೇಕ ಇವುಗಳು 18ನೇ ಶತಮಾನದಲ್ಲಿ ಕಟ್ಟಿರುವಂತವು. ಇವು ಅರಮನೆಗಳನ್ನು ಅಲಂಕಾರಿಕ ಮಂಟಪಗಳನ್ನು ನೆನೆಪಿಸುವ ಸೊಗಸಾದ ಸುಂದರ ವಾಸಸ್ತಾನಗಳಾಗಿವೆ. ಇವುಗಳಲ್ಲಿ ಆಹಾರಕ್ಕಾಗಿ ಪ್ರತ್ಯೇಕ ಸ್ತಳ ಮತ್ತು ನೀರಿನ ಪುಟ್ಟ ಪುಟ್ಟ ತೊಟ್ಟಿಗಳನ್ನೂ ಪಾರಿವಾಳ ಮತ್ತು ಗುಬ್ಬಚ್ಚಿಗಳ ಸ್ನಾನಕ್ಕಾಗಿ ಹಾಗೂ ಬಾಯರಿಕೆಯನ್ನು ತಣಿಸುವ ಸಲುವಾಗಿ ಕಟ್ಟಿದ್ದಾರೆ.

ಹಾರಿ ಬಂದಾಗ ಇಳಿಯಲು ಹಾಗೂ ಹಾರುವ ಮುನ್ನ ವೇಗ ಪಡೆಯಲು ಬೇಕಿರುವ ಓಡುಹಾದಿಗಳನ್ನೂ ಸಹ ಕೆಲವೊಂದು ನಿರ‍್ಮಾಣದಲ್ಲಿ ಕಾಣಬಹುದು. ಹಕ್ಕಿಗಳು ತಮ್ಮ ಊಟವನ್ನು ಅರಸಲು ಬಾಲ್ಕನಿಯಲ್ಲಿ ಕುಳಿತು ನೋಡುವ ಏರ‍್ಪಾಟು ಸಹ ಕೆಲವೊಂದು ಹಕ್ಕಿಮನೆಗಳಲ್ಲಿವೆ. ಸೂಕ್ಶ್ಮ ಕೆಲಸದ ಸುಂದರ ಹಕ್ಕಿಮನೆಗಳಿಗೆ ಉದಾಹರಣೆಯಾಗಿ ಉಸ್ಕುದಾರ್‍ನಲ್ಲಿರುವ ಯೆನಿ ವ್ಯಾಲಿಡೆ, ಅಯಜ್ಮಾ ಮತ್ತು ಸೆಲಿಮಿಯೆ ಮಸೀದಿಗಳನ್ನು ಹೆಸರಿಸಬಹುದು. ಟಾಕ್ಪಪಿ ಅರಮನೆಯ ಡಾರ‍್ಪೆನ್ ಒಳಾಂಗಣ ಅಂಗಣದ ಕಟ್ಟಡದಲ್ಲೂ ಈ ವಿನ್ಯಾಸದ ಹಕ್ಕಿಮನೆಗಳಿವೆ.

ಅನಟೊಲಿಯಾದ ಹಕ್ಕಿಮನೆಗಳು ಆರಂಬದಲ್ಲಿನ ಮಾದರಿಗಳು. 13ನೇ ಶತಮಾನದಶ್ಟು ಹಿಂದಿನವು. ಶಿವಾಸ್‍ನಲ್ಲಿನ ಸಿಪೈಯೆ ಮದ್ರಸಾ (1217-1218), ಕೋನ್ಯದ ಸ್ಲೆಂಡರ್ ಮಿನಾರೆಟ್ ಮದ್ರಸಾ (1260-1265) ಮತ್ತು ಕೇಯ್‍ಸರಿಯಲ್ಲಿನ ಕುಟ್ಲು ಹ್ಯಾಟೂನ್ ಟೂಂಬ್ (1305) ದಾಕಲಾತಿಗಳಿರುವ ಅತ್ಯಂತ ಹಳೆಯ ಹಕ್ಕಿಮನೆಗಳು. ಮೊದ ಮೊದಲು ಕಟ್ಟಲಾದ ಹಕ್ಕಿಮನೆಗಳು ತುಂಬಾ ಸರಳವಾಗಿದ್ದವು. ಅಲಂಕಾರಿಕ ಹಾಗೂ ಆಡಂಬರದ ಹಕ್ಕಿ ಆಶ್ರಯ ತಾಣಗಳ ನಿರ‍್ಮಾಣದ ಪ್ರವ್ರುತ್ತಿ ಪ್ರಾರಂಬವಾಗಿದ್ದು 18ನೇ ಶತಮಾನದ ಮೊದಲಿಗೆ.

ಆಯಜ್ಮಾ ಮಸೀದಿಯ (1760-1761) ಗೋಡೆಯಲ್ಲೇ ಕಟ್ಟಲಾದ ಹಕ್ಕಿಮನೆಯಂತೆ ಯೇನಿ ಪ್ಯಾಲಿಡ್ ಮಸೀದಿಯಲ್ಲೂ (1708-1710), ಡಾರ‍್ಪೇನ್ ಐ ಅಮೈರ್ (1727) ಮತ್ತು ಸೆಲಿಮೆಯಿ ಮಸೀದಿಗಳಲ್ಲಿನ ಹಕ್ಕಿಮನೆಗಳು ನಿರ‍್ಮಾಣವಾದವು. ಅಪರೂಪದ ಹಕ್ಕಿಮನೆಗಳಿಗೆ ಇವು ಉದಾರಣೆಗಳಾಗಿವೆ.

ಹಕ್ಕಿ ಮನೆಗಳು ರಕ್ಕೆ ಗರಿಗಳನ್ನು ಹೊಂದಿರುವ ಪ್ರೀತಿಯ ಸ್ನೇಹಿತರಿಗೆ ಮನುಶ್ಯ ನೀಡಿರುವ ವಿನಮ್ರ ಕೊಡುಗೆ. ಅತ್ಯಂತ ಹಳೆಯ ಹಾಗೂ ಅತ್ಯಂತ ಪ್ರಮುಕ ಅಬಿವ್ಯಕ್ತಿಗಳಲ್ಲಿ ಇದು ಒಂದಾಗಿದೆ.

(ಮಾಹಿತಿ ಸೆಲೆ: designer-daily.com, dailysabah.com, islamic-arts.org, ekrembugraekinci.com)
(ಚಿತ್ರ ಸೆಲೆ: wiki/birdhouse)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.