“ಅಳಿಲಿಗೊಂದು ಅಳಿಲುಸೇವೆ”

– ಐಶ್ವರ‍್ಯ ಎಸ್.

ಅಳಿಲು, squirrel

ಸಣ್ಣವಳಿದ್ದಾಗ ಅಜ್ಜಿ ಮನೆಯಲ್ಲಿ ಅಡಿಕೆಮರ ಹತ್ತುವ ಅಳಿಲು ನೋಡಲು ಅಂಗಳದಿಂದ ಓಡಿ ಬರುತ್ತಿದ್ದ ನೆನಪು. ಅದಾಗಿ ವರುಶಗಳಿಂದ ಅಳಿಲು ನೋಡಲು ಸಿಕ್ಕೇ ಇರಲಿಲ್ಲ. ಮೊನ್ನೆ ಬೇಸಿಗೆಯ ಒಂದು ಮದ್ಯಾಹ್ನ ಒಂದು ಅಳಿಲು ಮನೆಯ ಮುಂದೆ ಇದ್ದ ತೆಂಗಿನ ಮರದಿಂದ ಬಿದ್ದ ಎಳತು ಕಾಯಿಯನ್ನು ತನ್ನ ಎರಡೂ ಕೈಯಲ್ಲಿ ಬಾಚಿ ಬಾಯಲ್ಲಿ ಇಟ್ಟುಕೊಂಡು, ನಾನು ನೋಡಿದೆನೆಂದು ತಿಳಿದು, ಓಡಿ ಮತ್ತೆ ಮರ ಹತ್ತುವುದು ಕಾಣಿಸಿತು. ಈ ಅಳಿಲುಗಳ ಆಹಾರವೇನಿರಬಹುದು, ಅವುಗಳಿಗೆ ದಿನಾಲೂ ತಿನ್ನಲು ಏನಾದರೂ ಸಿಗುತ್ತದೆಯಾ, ಸಿಗದಿದ್ದರೆ ಅವು ಏನು ಮಾಡುತ್ತವೆ ಎಂದೆನಿಸಿತು. ಅಳಿಲುಗಳು ಇಲಿಯ ಜಾತಿಯವು, ಇಲಿಗೆ ಏನು ಆಹಾರವೋ ಅವೇ ಇವುಗಳಿಗೂ ಸಹ ಎಂಬ ಯೋಚನೆ ಬಂದರೂ, ಹೀಗೆ ಒಮ್ಮೆ ನೋಡೋಣ ಎಂದು ಇಂಟರ‍್ನೆಟ್ನಲ್ಲಿ ಹುಡುಕಿದೆ.

ಈ ಅಳಿಲುಗಳು ಒಣಗಿದ ಬೇಳೆ-ಕಾಳುಗಳನ್ನು ತಿನ್ನುವುದರಲ್ಲಿ ನಿಸ್ಸೀಮರು. ಬಾಯಲ್ಲಿ ಒಂದು ಹಿಡಿ ತುಂಬಿಕೊಂಡು ಕಟಕಟ ಅಗಿಯುತ್ತಾ ಅತ್ತಿತ್ತ ನೋಡಿ ಓಡಿ ಹೋಗುವುದು ಇವುಗಳ ಕೆಲಸ. ನನ್ನ ಅಮ್ಮ ಪ್ರಾಣಿಗಳನ್ನು ಉಪಚರಿಸುವುದನ್ನೇ ನೋಡಿ ಬೆಳೆದ ನನಗೂ ಅದರ ಒಂದು ಪಾಲು ಬಂದಿತ್ತೇನೋ. ತಕ್ಶಣ ಅಡಿಗೆಮನೆಯಿಂದ ಒಂದು ಹಿಡಿ ಅಕ್ಕಿ ತಂದು ಒಂದು ಸಣ್ಣ ಮಣ್ಣಿನ ಪಾತ್ರೆಯಲ್ಲಿಟ್ಟು ಆ ತೆಂಗಿನಮರದ ಪಕ್ಕದಲ್ಲಿದ್ದ ನಿಂಬೆಹಣ್ಣಿನ ಗಿಡದ ಮೇಲೆ ಇಟ್ಟೆ. ನನಗೆ ಎಲ್ಲೋ ಒಂದು ಕಡೆ ಹೆದರಿಕೆ. ನಮ್ಮ ಹಾವಳಿಗೆ ಹೆದರಿ, ಬರುವುದೊಂದು ಅಳಿಲೂ ಕೂಡ ಮತ್ತೆ ಬಾರದಿದ್ದರೆ ಎಂದು. ಆದರೆ ಅಲ್ಲಿ ಆಗಿದ್ದೇ ಬೇರೆ! ಕರಟ, Karata

ಬೆಳಗಾಗುವುದರಲ್ಲಿ ಅಕ್ಕಿಯ ಒಂದು ಕಾಳು ಸಹಿತ ಬಿಡದೆ ಎಲ್ಲಾ ತಿಂದು ಮುಗಿಸಿಬಿಟ್ಟಿತ್ತು ಅಳಿಲು. ಹಾಗೆಯೇ ಇನ್ನೊಂದು ಹಿಡಿ ಇಟ್ಟೆ. ಈ ಅಳಿಲು ತನ್ನ ಸಂಗಡಿಗನನ್ನೂ ಕರೆದುಕೊಂಡು ಬಂತು. ಆ ಒಂದು ಹಿಡಿ ತಿನ್ನುವುದಕ್ಕೆ ಇಬ್ಬರ ಜಗಳ ಬೇರೆ! ಅವಕ್ಕೆ ಬಾಯಾರಿಕೆಯಾದರೆ ನೀರು ಎಲ್ಲಿ ಕುಡಿಯುತ್ತವೆ ಎಂದು ಅಮ್ಮನ ಚಿಂತೆ. ಅಕ್ಕಿಯ ಪಾತ್ರೆ ಪಕ್ಕ ನೀರಿನ ಪಾತ್ರೆಯೂ ಬಂತು! ನಿಂಬೆಹಣ್ಣಿನ ಗಿಡವಾಗಿದ್ದರಿಂದ ಗಿಡ ತುಂಬಾ ಹಬ್ಬಿಕೊಂಡು ಎಲ್ಲಾ ಕಡೆ ಮುಳ್ಳಿನಿಂದ ತುಂಬಿಹೋಗಿತ್ತು. ಅಳಿಲುಗಳಿಗೆ ಹೋಗಲು ಬರಲು ತೊಂದರೆಯಾಗಬಾರದೆಂದು ಗಿಡವನ್ನು ಅಲ್ಲಲ್ಲಿ ಕತ್ತರಿಸಿದೆ. ಎರಡು ಅಳಿಲು ಬರುತ್ತಿದ್ದ ಕಾರಣಕ್ಕೋ ಅತವಾ ತೂಕ ಕಡಿಮೆ ಇದ್ದದ್ದಕ್ಕೋ ಪ್ರತಿದಿನ ಆ ಎರಡೂ ಪಾತ್ರೆಯನ್ನು ಬೀಳಿಸಿ ಹೋಗುತ್ತಿದ್ದವು. ಗಿಡಗಳ ನಡುವೆ ಪಾತ್ರೆ ಹುಡುಕುವುದು ಇನ್ನೊಂದು ಕೆಲಸವಾಗಿಬಿಟ್ಟಿತ್ತು.

ದಿನ ಕಳೆದಂತೆ ಆ ಅಕ್ಕಿಯನ್ನು ತಿನ್ನಲು, ಚಿಕ್ಕ ಚಿಕ್ಕ ಹಕ್ಕಿಗಳು ಸಹ ಬರತೊಡಗಿದವು. ಪಾತ್ರೆ ಚಿಕ್ಕದಾಯ್ತು, ದೊಡ್ಡದೊಂದು ಕರಟ ಬಂತು. ಒಟ್ಟಿನಲ್ಲಿ ಅಂಗಳ ಬ್ರುಂದಾವನವಾಯ್ತು.

ಒಂದು ದಿನ ಅಜ್ಜಿ ಒಳ್ಳೆಯ ಬಿಸಿಲು ನೋಡಿ, ಅಕ್ಕಿ ಸಂಡಿಗೆ ಹಾಕಿದ್ದರು. 30 x 10 ರಂತೆ ಸಾಲಿನಲ್ಲಿ ಇಟ್ಟ ಸಂಡಿಗೆ ಬಿಸಿಲಿಗೆ ಒಣಗುವುದರಲ್ಲಿ ಅಂಚಿನಲ್ಲಿದ್ದ 6 ಸಂಡಿಗೆ ಮಾಯವಾಗಿದ್ದವು! ಇದು ಅಳಿಲಿನದ್ದೇ ಕೆಲಸ ಎಂದು ತಿಳಿಯಿತು. ಜೀರಿಗೆ – ಓಮದ ಪರಿಮಳಕ್ಕೆ ಬಂದಿರಬಹುದು ಎಂದು ಸುಮ್ಮನಾದರೆ, ಮಾರನೇ ದಿನ ಇಟ್ಟ ಬೆಳ್ಳುಳ್ಳಿ ಈರುಳ್ಳಿ ಸಂಡಿಗೆ ಸಹ ತಿಂದು ಹೋಗಿದ್ದವು. “ಸಂಡಿಗೆಯ ರುಚಿ ಹಿಡಿದಿದೆ, ಇನ್ನು ಬಿಡುತ್ತವೆಯಾ” ಎಂದರು ಅಜ್ಜಿ. ಅಂತೂ ಇಂತೂ ನಮ್ಮನೆಯಿಂದ ಅಳಿಲುಗಳ ಪರಿವಾರಕ್ಕೆ ದಿನಾಲೂ ಊಟದ ವ್ಯವಸ್ತೆ!

ಇದಾಗಿ ಸುಮಾರು ದಿನ ನಾನು ಮತ್ತು ಅಮ್ಮ ಊರಿಗೆ ಹೋಗಬೇಕಾಗಿ ಬಂತು. ಅಳಿಲುಗಳು ಎಲ್ಲಿ ಏನು ತಿನ್ನುತ್ತಿದೆಯೋ ಏನೋ ಎಂದು ಎಣಿಸುತ್ತಿದ್ದೆವು. ಮೊನ್ನೆ ನಾವು ವಾಪಸ್ಸಾಗಿದ್ದು ನೋಡಿ, “ನಾವು ಇನ್ನೂ ಇಲ್ಲೇ ಇದ್ದೇವೆ” ಎಂದು ಒಮ್ಮೆ ಮುಕ ತೋರಿಸಿ ಹೋದವು!

ಬಾರತಕ್ಕೂ ಲಂಕೆಗೂ ಮಹಾಸೇತುವೆ ಕಟ್ಟುವ ಮಹತ್ಕಾರ‍್ಯದಲ್ಲಿ, ತನ್ನ ಕೈಲಾದಶ್ಟು ಮರಳು ಹೊರುವ ಸಣ್ಣ ಕೆಲಸ ಮಾಡಿ, ಶ್ರೀರಾಮನಿಂದ ಶಬಾಶ್ ಎನಿಸಿಕೊಂಡ ಅಳಿಲುಗಳಿಗೆ ನಮ್ಮದೊಂದು ಸಣ್ಣ ಅಳಿಲುಸೇವೆ 🙂

( ಚಿತ್ರ ಸೆಲೆ: wiki & ಬರಹಗಾರರ ಆಯ್ಕೆ )

1 ಅನಿಸಿಕೆ

  1. ಅಳಿಲಿಗೆ ಅಳಿಲು ಸೇವೆ ಮಾಡಿ ಅಳಿಲಿನ ಎಂದರೆ ಶ್ರೀ ರಾಮನ ಕೃಪೆಗೆ ಪತ್ರರಾಗುವಿರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.