ಮನಸಾರೆ ಜೀವಿಸುವವರಿಗೆ – ಪೋರ‍್ಡ್ ಪ್ರೀ ಸ್ಟೈಲ್

– ಜಯತೀರ‍್ತ ನಾಡಗವ್ಡ.

ಹೊಸ ಕಾರು ಬಿಡುಗಡೆ ಮಾಡುತ್ತ ಮಾರುಕಟ್ಟೆಯಲ್ಲಿ ಹಲಬಗೆಯ ಕಾರು ತರುವ ಪೋಟಿಯಲ್ಲಿ, ಪೋರ‍್ಡ್ ಕೂಟ ಯಾವತ್ತೂ ಹಿಂದೆ ಬಿದ್ದಿಲ್ಲ. ಇದೀಗ ಹೊಸ ಪ್ರೀ ಸ್ಟೈಲ್(Freestyle) ಬಂಡಿ ಬಿಡುಗಡೆ ಮಾಡಲಾಗಿದೆ. ಪ್ರೀ ಸ್ಟೈಲ್ ಬಂಡಿ ಹೆಚ್ಚುತ್ತಿರುವ ಕ್ರಾಸೋವರ್ ಬಂಡಿಗಳ ಸಾಲಿಗೆ ಸೇರುತ್ತದೆ. ಪ್ರೀ ಸ್ಟೈಲ್ ಏನೆಲ್ಲ ಹೊತ್ತು ಮಾರುಕಟ್ಟೆಗೆ ಬಂದಿದೆ ನೋಡೋಣ ಬನ್ನಿ.

ಪೋರ‍್ಡ್‌ನವರು ತಮ್ಮ ಪಿಗೊ ಬಂಡಿಯನ್ನು ಚೂರು ಬದಲಾವಣೆಗೊಳಿಸಿ, ಹೆಚ್ಚು ಆಟೋಟದ ಬಂಡಿಯಂತ ಈಡುಗಾರಿಕೆ(Design) ಮಾಡಿದ ಬಂಡಿಯೇ ಪ್ರೀ ಸ್ಟೈಲ್. ಪೋರ‍್ಡ್ ನವರು ಇದಕ್ಕೆ ಕಾಂಪ್ಯಾಕ್ಟ್ ಯುಟಿಲಿಟಿ ವೆಹಿಕಲ್ ಎಂಬ ಹಣೆಪಟ್ಟಿಯನ್ನು ಅಂಟಿಸಿರುವುದು ಮಾರುಕಟ್ಟೆಯಲ್ಲಿ ಸಾಕಶ್ಟು ಸುದ್ದಿ ಮಾಡಿದೆ.

ಬಂಡಿ ಮತ್ತು ಸಾಗಣಿ(Engine and Transmission)

ಪ್ರೀ ಸ್ಟೈಲ್ ಬಂಡಿಗೆಂದೇ ಹೊಸದಾದ ಪೆಟ್ರೋಲ್ ಬಿಣಿಗೆ ಅಣಿಮಾಡಲಾಗಿದೆ. 1.2ಲೀಟರ್ ಅಳತೆಯ 3 ಉರುಳೆಗಳ ಹೊಸ ಪೆಟ್ರೋಲ್ ಬಿಣಿಗೆ 96 ಕುದುರೆಬಲದ ಕಸುವು ನೀಡುವ ಜಟ್ಟಿ ಮಲ್ಲ. ಇದಕ್ಕೆ 5-ವೇಗದ ಓಡಿಸುಗನ ಹಿಡಿತದ ಸಾಗಣಿ(5-Speed Manual Transmission) ಜೊತೆಗಾರ. ಎಕೊ ಸ್ಪೋರ‍್ಟ್, ಸ್ಪೈರ್ ಗಳಲ್ಲಿರುವ 1.5 ಲೀಟರ್ ಅಳತೆಯ ಡೀಸೆಲ್ ಬಿಣಿಗೆಯನ್ನು, ಎರವಲು ಪಡೆದು ಇದರಲ್ಲಿ ಜೋಡಿಸಲಾಗಿದೆ. ಇದರ ಸಾಗಣಿಯೂ ಕೂಡ 5-ವೇಗದ ಓಡಿಸುಗನ ಹಿಡಿತದ್ದು. ಮಯ್ಲಿಯೋಟದ(Mileage) ವಿಶಯದಲ್ಲಿ ಪ್ರೀ ಸ್ಟೈಲ್ ಬೇರೆ ಬಂಡಿಗಳಿಗಿಂತ ಹಿಂದೆ ಬಿದ್ದಿಲ್ಲ. ಪೆಟ್ರೋಲ್ ಬಂಡಿ ಬರ‍್ಜರಿ 19 ಕಿ.ಮೀ. ಪ್ರತಿ ಲೀಟರ್ ಓಡಿದರೆ, ಡೀಸೆಲ್ ಬಂಡಿಯ ಮಯ್ಲಿಯೋಟ 24.4 ಕಿ.ಮೀ.ಪ್ರತಿ ಲೀಟರಿಗೆ.

ಮೈಮಾಟ

ಪ್ರೀ ಸ್ಟೈಲ್ ಬಂಡಿ ಕ್ರಾಸ್-ಹಾಚ್(Cross-Hatch) ನಂತೆ ತೋರುವ ಸಾಕಶ್ಟು ವಿಶೇಶತೆಗಳು ಎದ್ದು ಕಾಣುತ್ತವೆ. 190 ಮಿಲಿಮೀಟರ್‌ನಶ್ಟಿರುವ ನೆಲತೆರವು(Ground Clearance) ಅವುಗಳಲ್ಲಿ ಎದ್ದು ಕಾಣುವ ವಿಶೇಶತೆ. ಬಂಡಿಯ ಹಿಂದೆ-ಮುಂದೆ ಅಳವಡಿಸಿರುವ ಉಜ್ಜುತಟ್ಟೆಗಳು(Scuff Plates), ಗಾಲಿ ಕಮಾನಿನ ಸುತ್ತಲೂ ಹೊದಿಕೆ(Wheel Arches Cladding), ಇವೆಲ್ಲವೂ ಪ್ರೀ ಸ್ಟೈಲ್‌ಗೆ ಆಟೋಟದ ನೋಟ ಒದಗಿಸಿವೆ. ಆರುಬದಿಯಾಕಾರದಂತಿರುವ ಜೇನುಗೂಡಿನ ಮುನ್ಕಂಬಿ ತೆರೆ(Hexagonal Honey Comb Front Grill), ಇಂಗ್ಲಿಶ್‌ನ C ಆಕಾರದ ಮಂಜಿನ ದೀಪಗಳು, ಅಚ್ಚುಕಟ್ಟಾದ ಈಡುಗಾರಿಕೆಯ ಪುರಾವೆ. ಹಿಂಬದಿಯ ದೀಪಗಳ ಜೋಡಣೆಯಲ್ಲಿನ ಬೇರ‍್ಮೆ, ಪಿಗೊ ಮತ್ತು ಪ್ರೀ ಸ್ಟೈಲ್ಬಂಡಿಗಳ ನಡುವೆ ಎದ್ದು ಕಾಣುವ ಪ್ರಮುಕ ಬೇರ‍್ಮೆ ಕೂಡ.

ಓಡಿಸುಗನೆಡೆ(Driver Cabin), ಪೋರ‍್ಡ್ ಪಿಗೊದಲ್ಲಿರುವಂತೆ ಕಂಡರೂ, ಪ್ರೀ ಸ್ಟೈಲ್ ನಲ್ಲಿ ಸಾಕಶ್ಟು ಬದಲಾವಣೆ ಕಂಡಿದೆ. ಒಳಮೈ, ಚಾಕಲೇಟ್-ಕಪ್ಪು ಬಣ್ಣದಿಂದ ಕೂಡಿದ್ದರೆ, ನಡುಬಾಗದ ಕಟ್ಟೆಯನ್ನು(Centre Console) ಹೊಸದಾಗಿಸಲಾಗಿದೆ. 6.5 ಇಂಚು ಸೋಕುತೆರೆಯ(Touchscreen) ತಿಳಿನಲಿ ಏರ‍್ಪಾಟು(Infotainment) ಕೊಳ್ಳುಗರ ಗಮನಸೆಳೆಯುತ್ತದೆ. ಈ ತಿಳಿನಲಿ ಏರ‍್ಪಾಟು ಪೋರ‍್ಡ್‌ನವರ ಹೊಸ ಸಿಂಕ್3(Sync3) ನಡೆಸೇರ‍್ಪಾಟನ್ನು(OS) ಹೊಂದಿದೆ. ಇದರಿಂದ ಸೋಕುತೆರೆಯ ಕೆಲಸ ಬಲು ಚುರುಕಾಗಿದೆ. ನಿಮ್ಮ ಚುಟಿಯೂಲಿಯ(Smartphone) ಬ್ಲೂಟೂತ್, ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್‌ಪ್ಲೇ ಮೂಲಕ ಇದರೊಂದಿಗೆ ಹೊಂದಿಸಿಕೊಳ್ಳಬಹುದು. ಎರಡು USB ಕಿಂಡಿಗಳು, ಚೂಟಿಯುಲಿಗೆ ಹುರುಪು ತುಂಬಲು ಚಾರ‍್ಜಿಂಗ್ ಕಿಂಡಿಯನ್ನು ಕೊಡಮಾಡಲಾಗಿದೆ. ಬಂಡಿಯಲ್ಲಿ ಜಾಗಕ್ಕೆ ಯಾವುದೇ ಕೊರತೆಯಿಲ್ಲ. ಮುಂಬಾಗಿಲ ಬದಿಗಳಲ್ಲಿ ಬಾಟಲಿ ಸೇರುವೆಗಳು(Bottle Holders), ಓಡಿಸುಗನ ಪಕ್ಕದಲ್ಲಿ ಎರಡು ಕಪ್ ಸೇರುವೆಗಳು(Cup holders), ಹಿಂಬದಿಯ ಬಾಗಿಲಲ್ಲೂ ಬಾಟಲ್ ಸೇರುವೆ ಕಂಡು ಬರುತ್ತವೆ. ಓಡಿಸುಗ ಮತ್ತು ಅವರ ಜೊತೆ ಪಯಣಿಗರಿಗೆ ಕಾಲು ಚಾಚಲು ತಕ್ಕುದಾದ ಜಾಗವನ್ನು ಬಂಡಿಯಲ್ಲಿ ಒದಗಿಸಿ ಕೊಡಲಾಗಿದೆ. ಪಿಗೊದಲ್ಲಿರುವಶ್ಟೇ, 257 ಲೀಟರ್‌ಗಳ ಸರಕುಚಾಚಿಕೆ ಪ್ರೀ ಸ್ಟೈಲ್ ನಲ್ಲೂ ಇದೆ. ಓಡಿಸುಗ ಚೂಟಿಯುಲಿಗಳನ್ನು ಬದ್ರವಾಗಿಡಲೂ ಬೇರೆಯಾದ ಸೇರುವೆ ನೀಡಲಾಗಿದೆ.

ಪ್ರೀ ಸ್ಟೈಲ್ ಬಂಡಿ ಹಲವಾರು ಕಾಪಿನ ವಿಶೇಶತೆಗಳನ್ನು ಹೊಂದುವ ಮೂಲಕ, ಪಯಣಿಗರಿಗೆ ಬದ್ರತೆಯನ್ನು ನೀಡಲಿದೆ. ಸಿಲುಕದ ತಡೆತದ ಏರ‍್ಪಾಟು(ABS), 2 ಗಾಳಿ ಚೀಲಗಳು(Air Bags) ಬಂಡಿಯ ಎಲ್ಲ ಮಾದರಿಗಳಲ್ಲೂ ಸಿಗಲಿವೆ. ಅದರಂತೆ ಗುಡ್ಡ ಮುಂತಾದ ಏರುಪ್ರದೇಶಗಳಲ್ಲಿ ಬಂಡಿ ಉರುಳದಂತೆ ತಡೆಯಲು ವಿಶೇಶವಾದ ಉರುಳು ತಡೆತದ ಏರ‍್ಪಾಟನ್ನು(Active Rollover Protection) ಅಳವಡಿಸಿದ್ದಾರೆ. ಮೇಲ್ಮಟ್ಟದ ಮಾದರಿಗಳಿಗೆ 6 ಗಾಳಿಚೀಲಗಳು, ಓಡಿಸುಗ ತಿಗುರಿ(Steering wheel) ಮೇಲೆ ಹಿಡಿತ ತಪ್ಪಿದಾಗ ಬಂಡಿಯು ಅಡ್ಡಾದಿಡ್ಡಿ ತಿರುಗುವುದನ್ನ ತಡೆಯಬಲ್ಲ ಏರ‍್ಪಾಟುಗಳೆಲ್ಲವೂ ಪ್ರೀ ಸ್ಟೈಲ್‌ನಲ್ಲಿರಲಿವೆ. ಬಂಡಿಯಲ್ಲಿ ಹಾಡುಗಾರಿಕೆ ಪೆಟ್ಟಿಗೆಯ(Music System) ದನಿ ಮಟ್ಟ ಮಿತಿಮೀರಿ, ಓಡಿಸುಗ ಮತ್ತು ಇತರರ ಕಿವಿ ಮಂದಗೊಳಿಸದಂತ, ದನಿ ಮಟ್ಟವನ್ನು ಹಿಡಿತದಲ್ಲಿಡುವ ಏರ‍್ಪಾಟನ್ನು ಒದಗಿಸಿ, ಪಯಣಿಗರ ಕಾಪಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ತಂತಾನೇ ಹೊತ್ತಿಕೊಳ್ಳಬಲ್ಲ ಮುಂದೀಪಗಳು(Automatic Headlamps), ಗಾಳಿಪಾಡು ಹಿಡಿತದಲ್ಲಿಡುವ ಏರ‍್ಪಾಟು (Auto Climate Control), ನಿಲುಗಡೆಗೆ ಹಿಂಬದಿಯ ತಿಟ್ಟಕ(Reverse Parking Camera) ಮತ್ತು ತನ್ನಿಂದ ತಾನೇ ಕೆಲಸ ಮಾಡಬಲ್ಲ ಒರೆಸುಕಗಳು(Automatic Wipers) ಇವುಗಳು ಬಂಡಿಯ ಇತರೆ ಪರಿಚೆಗಳು. ಇದಲ್ಲದೇ, ಪಿಗೊ ಬಂಡಿಯಲ್ಲಿರುವ ಹೆಚ್ಚಿನ ವಿಶೇಶತೆಗಳು ಪ್ರೀ ಸ್ಟೈಲ್‌ನಲ್ಲೂ ಕಾಣಸಿಗುತ್ತವೆ.

ಪಯ್ಪೋಟಿ ಮತ್ತು ಹೋಲಿಕೆ

ಹ್ಯುಂಡಾಯ್ ಆಕ್ಟೀವ್ ಐ-20 ಮತ್ತು ಹೋಂಡಾದ ಡಬ್ಲ್ಯೂಆರ್‌ವಿ, ಇವುಗಳಿಗೆ ಪ್ರೀ ಸ್ಟೈಲ್ ಎದುರಾಳಿ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ, ಮೂರು ಬಂಡಿಗಳ ಹೋಲಿಕೆಯ ಇಣುಕು ನೋಟ ಹೀಗಿದೆ. ಮೊದಲಿಗೆ ಬಿಣಿಗೆ ಮತ್ತು ಸಾಗಣಿಯ ಹೋಲಿಕೆ, ಮೂರು ಬಿಣಿಗೆಗಳು ಒಂದೇ ಗಾತ್ರದ್ದಾಗಿದ್ದರೂ, ಐ-20 ಮತ್ತು ಡಬ್ಲ್ಯೂಆರ್‌ವಿಗಳು 4 ಉರುಳೆಗಳನ್ನು ಹೊಂದಿದ್ದರೆ, ಪ್ರೀ ಸ್ಟೈಲ್‌ನ ಬಿಣಿಗೆ ಬರೀ 3 ಉರುಳೆಗಳದ್ದು. ಇಶ್ಟಿದ್ದರೂ, ಕಸುವು ಮತ್ತು ತಿರುಗುಬಲಗಳಲ್ಲಿ ಪ್ರೀ ಸ್ಟೈಲ್ ತಾನೇ ದೊರೆ ಎಂದು ತೋರಿಸಿದೆ. 3 ಬಂಡಿಗಳ ಸಾಗಣಿಯೂ ಹೆಚ್ಚು ಕಡಿಮೆ ಅದೇ ಆಗಿದ್ದು, ಐ-20ಯ ಡೀಸೆಲ್ ಮಾದರಿಗಳಿಗೆ ಮಾತ್ರ 6-ವೇಗದ ಸಾಗಣಿ ಅಳವಡಿಸಿದ್ದಾರೆ. ಪ್ರೀ ಸ್ಟೈಲ್ ಡೀಸೆಲ್ ಬಂಡಿಯ ಮಯ್ಲಿಯೋಟ, ಡಬ್ಲ್ಯೂಆರ್‌ವಿಗಿಂತ 1 ಕಿ.ಮೀ ಯಶ್ಟು ಕಡಿಮೆಯೆನ್ನುವುದು ಬಿಟ್ಟರೆ, ಪೆಟ್ರೋಲ್ ಬಂಡಿಯ ಮಯ್ಲಿಯೋಟದಲ್ಲಿ ಉಳಿದೆರಡು ಬಂಡಿಗಳನ್ನು ಹಿಂದಿಕ್ಕಿದೆ.

ಎರಡನೇಯದಾಗಿ ಆಯಗಳ ಹೋಲಿಕೆಯಲ್ಲಿ ಪ್ರೀ ಸ್ಟೈಲ್, ಐ-20 ಮತ್ತು ಡಬ್ಲ್ಯೂಆರ್‌ವಿಗಳಿಗಿಂತ ಕಿರಿದೆನಿಸುತ್ತದೆ. ಅಗಲ ಮತ್ತು ನೆಲತೆರವುಗಳ ಆಯಗಳಲ್ಲಿ ಮಾತ್ರ ಪ್ರೀ ಸ್ಟೈಲ್ ಇತರೆ ಬಂಡಿಗಳ ಮಟ್ಟದಲ್ಲಿದೆ. ಆಯದಲ್ಲಿ ಕಿರಿದಾಗಿದ್ದರಿಂದ ತೂಕದಲ್ಲೂ ಈ ಬಂಡಿ ಹಗುರವಾಗಿದೆ.

ಬೆಲೆ

ಸುಮಾರು 5 ಲಕ್ಶ ರೂ.ಗಳಿಂದ 7.9 ಲಕ್ಶ ರೂ.ಗಳವರೆಗಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ ಪ್ರೀ ಸ್ಟೈಲ್. ಐ-20, ಆರಂಬಿಕ 7 ಲಕ್ಶಗಳಿಂದ 10 ಲಕ್ಶ ರೂ.ಗಳ ಬೆಲೆ ಹೊಂದಿದೆ, ಅದೇ ಹೋಂಡಾ ಡಬ್ಲ್ಯೂಆರ್‌ವಿ ಸುಮಾರು 8 ರಿಂದ 10 ಲಕ್ಶ ರೂಪಾಯಿಗಳಿಗೆ ದೊರೆಯುತ್ತಿದೆ. ಪ್ರೀ ಸ್ಟೈಲ್ ಬಂಡಿಯ ಬಗೆ ಬಗೆಯ ಮಾದರಿಗಳ ಬೆಲೆ ಪಟ್ಟಿ ಈ ಕೆಳಗಿನಂತಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: autocarindia.comford.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ashok kr says:

    ಉತ್ತಮ ಮಾಹಿತಿಯುಳ್ಳ ಬರಹ

  2. Shruthi H M says:

    ಉತ್ತಮ ಮಾಹಿತಿ ?

  3. Jayateerth Nadagouda says:

    ನನ್ನಿ(ದನ್ಯವಾದ) ಅಶೋಕ ಮತ್ತು ಶ್ರುತಿಯವರೇ.

ಅನಿಸಿಕೆ ಬರೆಯಿರಿ: